ಬೆಂಗಳೂರು: ಕೇಂದ್ರೀಯ ಪಠ್ಯಕ್ರಮದ ಸಿಬಿಎಸ್‌ಇ, ಐಸಿಎಸ್‌ಇ 12ನೇ ತರಗತಿ ಫಲಿತಾಂಶ ಪ್ರಕಟಣೆ ವಿಳಂಬವಾಗುತ್ತಿರುವ ಪರಿಣಾಮ ರಾಜ್ಯ ಸಿಇಟಿ ಫಲಿತಾಂಶದ ಮೇಲೆಯೂ ಬೀರಿದೆ.
ಈ ತಿಂಗಳ 17ರಂದು ಪ್ರಕಟವಾಗಬಹುದು ಎಂದು ನಿರೀಕ್ಷಿಸಿದ್ದ ಕೆ-ಸಿಇಟಿ-2022ರ ಫಲಿತಾಂಶ ಮತ್ತಷ್ಟು ಮುಂದೆ ಹೋಗುವ ಸಾಧ್ಯತೆಗಳಿವೆ.
ಸಿಇಟಿ ಪರೀಕ್ಷೆ ಆರಂಭದ ಸುದ್ದಿಗೋಷ್ಠಿಯಲ್ಲಿ ಉನ್ನತ ಶಿಕ್ಷಣ ಸಚಿವರು ಜು.17ರಂದು ಫಲಿತಾಂಶ ಪ್ರಕಟಿಸುವುದಾಗಿ ಹೇಳಿಕೆ ನೀಡಿದ್ದರು. ಜು.17ರ ವೇಳೆಗೆ ರಾಜ್ಯ ಪಠ್ಯಕ್ರಮದ ದ್ವಿತೀಯ ಪಿಯುಸಿ ಫಲಿತಾಂಶ ಹಾಗೂ ಕೇಂದ್ರ ಪಠ್ಯಕ್ರಮದ ಸಿಬಿಎಸ್‌ಇ, ಐಸಿಎಸ್‌ಇ 12ನೇ ತರಗತಿ ಫಲಿತಾಂಶವೂ ಪ್ರಕಟವಾಗಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ, ಸಿಬಿಎಸ್‌ಇ 12ನೇ ತರಗತಿ ಫಲಿತಾಂಶ ಇನ್ನೂ ಪ್ರಕಟವಾಗದ ಹಿನ್ನೆಲೆಯಲ್ಲಿ ವಿಳಂಬವಾಗುತ್ತಿದೆ. ಸಿಬಿಎಸ್‌ಇ ಫಲಿತಾಂಶ ಪ್ರಕಟವಾದ ನಂತರ ಸಿಇಟಿ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ಕೆಇಎ ಮೂಲಗಳು ತಿಳಿಸಿವೆ.
ರ್‍ಯಾಂಕ್ ಪಟ್ಟಿ ತಯಾರಿಸಲು ಕೆ-ಸಿಇಟಿ ಫಲಿತಾಂಶದ ಜೊತೆಗೆ ದ್ವಿತೀಯ ಪಿಯುಸಿಯ ಪಿಸಿಎಂ ವಿಷಯಗಳಿಂದ ಶೇ.50ರಷ್ಟು ಅಂಕಗಳನ್ನು ಪರಿಗಣಿಸುತ್ತೇವೆ. ಇಷ್ಟೊತ್ತಿಗೆ ಕೇಂದ್ರೀಯ ಪಠ್ಯಕ್ರಮದ ಮಂಡಳಿಗೂ 12ನೇ ತರಗತಿ ಫಲಿತಾಂಶ ಪ್ರಕಟಿಸಿದ್ದರೆ ನಾವು ರ್‍ಯಾಂಕ್ ಪಟ್ಟಿ ಸಿದ್ಧಪಡಿಸಲು ಅನುಕೂಲವಾಗುತ್ತಿತ್ತು. ಈಗ ಅದು ತಡವಾಗುತ್ತಿದೆ. ಇನ್ನು ಒಂದೆರಡು ದಿನದಲ್ಲಿ ಫಲಿತಾಂಶ ಬಂದರೂ ರ್‍ಯಾಂಕ್ ಪಟ್ಟಿ ಸಿದ್ಧತೆಗೆ ಸಮಯಾವಕಾಶ ಬೇಕಾಗುತ್ತದೆ ಹಾಗಾಗಿ ನಾವು ನಿಗದಿಪಡಿಸಿದ್ದ ಜು.17ರಂದು ಫಲಿತಾಂಶ ನೀಡಲು ಸಾಧ್ಯತೆ ಇಲ್ಲ ಎಂದು ಮೂಲಗಳು ತಿಳಿಸಿವೆ.
ಜೂನ್ 16 ರಿಂದ 18ರ ವರೆಗೆ ನಡೆದಿದ್ದ ಸಿಇಟಿಗೆ 2,16,525 ಅಭ್ಯರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು.