Advertisement
ಕಡೆಗಣಿಸಲ್ಪಟ್ಟ ಕೋಲಾರ!: ಹಿಂದಿನ ಬಹುತೇಕ ರಾಜ್ಯ ಬಜೆಟ್‌ಗಳಲ್ಲಿ ಕೋಲಾರ ಜಿಲ್ಲೆಯನ್ನು ಕಡೆಗಣಿಸಲಾಗುತ್ತಿತ್ತು. ಆದರೂ, ನೆಪಮಾತ್ರಕ್ಕೆ ಒಂದೆರೆಡು ಯೋಜನೆಗಳನ್ನಾದರೂ ಘೋಷಿಸಲಾಗುತ್ತಿತ್ತು. ಆದರೆ, ಹೀಗೆ ಘೋಷಿಸಿದ ಯೋಜನೆಗಳು ಇದುವರೆಗೂ ಈಡೇರಿಲ್ಲವೆಂಬುದು ವಾಸ್ತವ.
Related Articles
Advertisement
ಸಂಸದನ ಕೊಟ್ಟ ಜಿಲ್ಲೆಗಿಲ್ಲ ಆದ್ಯತೆ: ಲೋಕಸಭಾ ಚುನಾವಣೆಯಲ್ಲಿ ಕೋಲಾರ ಜಿಲ್ಲೆಯ ಜನ ಚುನಾವಣಾ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಬಿಜೆಪಿಯನ್ನು ಗೆಲ್ಲಿಸಿದ್ದನ್ನು ಬಿಜೆಪಿ ರಾಜ್ಯ ಸರ್ಕಾರ ಪರಿಗಣಿಸದಿರುವುದು ಬಜೆಟ್ ಘೋಷಣೆಯ ಮೂಲಕ ದೃಢಪಟ್ಟಿದೆ.
ಕೋಲಾರ ಜನತೆ ಅಸಮಾಧಾನ: ರಾಜ್ಯ ಬಜೆಟ್‌ನಲ್ಲಿ ಕೋಲಾರ ಜಿಲ್ಲೆಗೆ ಪ್ರತ್ಯಕ್ಷವಾಗಿ ಯಾವುದೇ ಯೋಜನೆಯನ್ನು ಘೋಷಿಸದ ಕಾರಣದಿಂದ ಪರೋಕ್ಷವಾಗಿ ಸಿಕ್ಕಿದ್ದೇನು ಎಂಬುದನ್ನು ಹುಡುಕಿಕೊಳ್ಳುವುದರಲ್ಲೇ ಸಮಾಧಾನ ಪಡಬೇಕಾಗಿದೆ.ತೀವ್ರ ಅಸಮಾಧಾನ: ಈ ಬಾರಿಯ ಬಜೆಟ್‌ಅನ್ನು ಇಲಾಖಾವಾರು ಅಲ್ಲದೆ, ವಲಯವಾರು ಎಂಬಂತೆ ಆರು ಆದ್ಯತಾ ವಲಯಗಳನ್ನಾಗಿ ವಿಂಗಡಿಸಿ ಮಂಡಿಸಲಾಗಿದೆ. ಈ ಆರೂ ವಲಯದಲ್ಲಿ ಎಲ್ಲಿಯೂ ಕೋಲಾರ ಜಿಲ್ಲೆಯನ್ನು ಪ್ರಸ್ತಾಪಿಸದಿರುವುದು ಜಿಲ್ಲೆಯ ಜನತೆಯ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಕೃಷಿ ಮತ್ತು ಪೂರಕ ಚಟುವಟಿಕೆಗಳ ವಲಯ: ಬಜೆಟ್‌ನ ಮೊದಲ ಈ ವಲಯದಲ್ಲಿ ಕೋಲಾರ ಜಿಲ್ಲೆಯ ಪಾಲಿಗೆ ಸಿಕ್ಕಿದ್ದೇನು ಎಂದರೇ ಅದು ಎತ್ತಿನಹೊಳೆ ಯೋಜನೆಯಲ್ಲಿ ಮೊದಲ ಹಂತದ ಏತ ಸಂಬಂಧಿತ ಕಾಮಗಾರಿಯನ್ನು ಪೂರ್ಣಗೊಳಿಸಿ ಮುಂದಿನ ಮುಂಗಾರು ಹಂಗಾಮಿನಲ್ಲಿ ಪ್ರಾಯೋಗಿಕವಾಗಿ ಚಾಲನೆಗೊಳಿಸಲಾಗುವುದು ಎಂದು ಘೋಷಿಸಿರುವುದೇ ಆಗಿದೆ. ಆದರೆ, ಎತ್ತಿನ ಹೊಳೆಯೋಜನೆಯಲ್ಲಿ ಕೊನೆಯ ಜಿಲ್ಲೆ ಕೋಲಾರವಾಗಿರುವುದರಿಂದ ಮೊದಲ ಹಂತದ ಏತ ನೀರಾವರಿಯಲ್ಲಿ ನೀರು ಹರಿಯುವುದು ಕಷ್ಟವೇ ಆದರೂ, ಸದ್ಯ ಯೋಜನೆಗೆ ಕಾಲಮಿತಿ ನಿಗದಿಯಾಯಿತಲ್ಲ ಎಂಬ ಸಮಾಧಾನ ಪಟ್ಟುಕೊಳ್ಳಬೇಕಾಗಿದೆ. ಇದರ ನಡುವೆ ಎತ್ತಿನಹೊಳೆಯನ್ನು ಯೋಜನೆಯಲ್ಲಿ ಪ್ರಸ್ತಾಪವಾಗದ ಜಿಲ್ಲೆಗಳಿಗೆ ಹರಿಸುವ ಕುರಿತು ಡಿಪಿಆರ್ ರಚಿಸುವಂತೆ ಸೂಚನೆ ನೀಡಿರುವ ಕುರಿತು ಆತಂಕವೂ ಇದ್ದೇ ಇದೆ. ಇದರ ಹೊರತಾಗಿ ಕೃಷಿ ಮತ್ತು ತೋಟಗಾರಿಕೆಯನ್ನು ಉದ್ದಿಮೆಯಾಗಿ ಪರಿಗಣಿಸಲು ಹೊಸ ಕೃಷಿ ನೀತಿ ರಚನೆಯ ಪ್ರಸ್ತಾಪ, ಅಂತರ್ಜಲ ಗಂಭೀರವಾಗಿರುವ 76 ತಾಲೂಕುಗಳಲ್ಲಿ ಮುಂದಿನ ಮೂರು ವರ್ಷದಲ್ಲಿ ನಾಲ್ಕು ಲಕ್ಷ ಹೆಕ್ಟೇರ್‌ನಲ್ಲಿ 810 ಅತಿ ಸಣ್ಣ ಜಲಾನಯನ ಜಲಾಮೃತ ಯೋಜನೆ ಅನುಷ್ಠಾನ, ಹಾಪ್‌ಕಾಮ್ಸ್ ಬಲವರ್ಧನೆ, ಅಟಲ್ ಭೂಜಲ ಯೋಜನೆಯಡಿ ಕೇಂದ್ರದ 1202 ಕೋಟಿ ಬಳಸಿಕೊಳ್ಳುವ ಯೋಜನೆ, ಸಹಕಾರ ಬ್ಯಾಂಕ್‌ಗಳ ದೀರ್ಘಾವಧಿ ಸಾಲದ ಮೇಲಿನ ಬಡ್ಡಿ ಮನ್ನಾ ಇತ್ಯಾದಿ ಯೋಜನೆಗಳಿಂದ ಕೋಲಾರ ಜಿಲ್ಲೆಗೆ ಕೊಂಚ ಅನುಕೂಲವಾಗುವ ಸಾಧ್ಯತೆ ಇದೆ. ಸರ್ವೋದಯ ಮತ್ತು ಕ್ಷೇಮಾಭಿವೃದ್ಧಿ: ಕೋಲಾರ ಜಿಲ್ಲೆಯಲ್ಲಿ ಅತಿ ಹೆಚ್ಚು ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ, ಅಲ್ಪಸಂಖ್ಯಾತ ಜನಸಂಖ್ಯೆ ಇದೆ. ಆದರೂ, ಜಿಲ್ಲೆಯನ್ನು ಈ ವಲಯದಲ್ಲಿ ಆದ್ಯತೆಯನ್ನಾಗಿ ಪರಿಗಣಿಸಿಲ್ಲ. ಎಸ್ಸಿ, ಎಸ್ಟಿ ಅಭಿವೃದ್ಧಿಗೆ 26,930 ಕೋಟಿ ರೂ. ಇಡಲಾಗಿದೆ. ಆದರೆ, ಇದು ನಿಯಮಾನುಸಾರಕ್ಕಿಂತ ಕೊಂಚ ಹೆಚ್ಚು ಎಂದು ಸರ್ಕಾರ ಹೇಳಿಕೊಂಡಿದ್ದರೆ, ಹಿಂದಿನ ಸರ್ಕಾರದ ಅನುದಾನಕ್ಕೆ ಹೋಲಿಸಿದರೆ ಕಡಿಮೆ ಎಂಬ ದೂರುಗಳು ಆರೋಪಗಳು ಕೇಳಿ ಬರುತ್ತಿದೆ. ಜಿಲ್ಲಾ ಮಟ್ಟದ ಪರಿಶಿಷ್ಟ ಎಸ್‌ಎಸ್‌ಎಲ್‌ಸಿ ಪ್ರತಿಭಾವಂತರಿಗೆ 1 ಲಕ್ಷ ರೂ., ಹಿಂದುಳಿದವರ ಅಭಿವೃದ್ಧಿ ನಿಗಮಗಳಿಗೆ 125 ಕೋಟಿ ರೂ., ಬ್ಯಾಗ್ ರಹಿತ ಶನಿವಾರ, ಪಬ್ಲಿಕ್ ಶಾಲೆಗಳ ಘೋಷಣೆ, ನಬಾರ್ಡ್ ನೆರವಿನಿಂದ ಶಾಲಾ ಕೊಠಡಿಗಳ ದುರಸ್ತಿ, ಕಟ್ಟಡ ಕಾರ್ಮಿಕರಿಗೆ ಮೊಬೈಲ್ ಕ್ಲಿನಿಕ್ ಇತ್ಯಾದಿ ನೆರವು ಸಿಗುವ ಸಾಧ್ಯತೆ ಇದೆ. ಆರ್ಥಿಕ ಅಭಿವೃದ್ಧಿಗೆ ಪ್ರಚೋದನೆ: -ಕೋಲಾರ ಜಿಲ್ಲೆಯ ಯಾವುದೇ ರೈಲ್ವೆ ಯೋಜನೆಗಳಿಗೆ ತನ್ನ ಪಾಲಿನ ನೆರವು ಘೋಷಿಸುವಲ್ಲಿ ಬಜೆಟ್ ವಿಫಲವಾಗಿದೆ. ಇದರಿಂದ ಸಂಸದ ಎಸ್.ಮುನಿಸ್ವಾಮಿ ಕೋರಿಕೆ ಮೇರೆಗೆ ಕೇಂದ್ರ ಬಜೆಟ್‌ನಲ್ಲಿ ಜಿಲ್ಲೆಗೆ ಘೋಷಣೆಯಾಗಿರುವ ರೈಲ್ವೆ ವರ್ಕ್‌ಶಾಪ್ ಯೋಜನೆಯೂ ನನೆಗುದಿಗೆ ಬೀಳುವ ಸಾಧ್ಯತೆಗಳಿವೆ. ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ 3060 ಕೋಟಿ ರೂ., ಮನೆ ಮನೆಗೆ ಗಂಗೆ, ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಮಗ್ರ ಘನತ್ಯಾಜ್ಯ ನಿರ್ವಹಣಾ ಕಾರ್ಯಕ್ರಮ ಇತ್ಯಾದಿಗಳಿಂದ ಕೊಂಚ ನೆರವು ಸಿಗಬಹುದೆಂಬ ನಿರೀಕ್ಷೆ ಇದೆ. ಬೆಂಗಳೂರು ಅಭಿವೃದ್ಧಿ ವಲಯ: ಈ ವಲಯದಲ್ಲಿ ಬೆಂಗಳೂರಿಗೆ ಅತಿ ಹತ್ತಿರ ವಿರುವ ಕೋಲಾರ ಜಿಲ್ಲೆಯನ್ನು ಕಡೆಗಣಿಸಲಾಗಿದೆ. ಕೆ.ಸಿ. ವ್ಯಾಲಿ ಯೋಜನೆಯಡಿ ಬೆಂಗಳೂರಿನ ತ್ಯಾಜ್ಯ ನೀರನ್ನು ಮೂರು ಬಾರಿ ಸಂಸ್ಕರಿಸಬೇಕೆಂಬ ಬೇಡಿಕೆಗೆ ಕಿಮ್ಮತ್ತು ಸಿಕ್ಕಿಲ್ಲ. ಬೆಂಗಳೂರು ತ್ಯಾಜ್ಯ ನೀರು ಸಂಸ್ಕರಣೆಯ ಸಾಮರ್ಥ್ಯವನ್ನು 1587 ದಶ ಲಕ್ಷ ಲೀಟರ್‌ಗೆ ಹೆಚ್ಚಿಸಲು ಕ್ರಮ ಕೈಗೊಂಡು ಹಳೆಯ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ಪುನರುಜ್ಜೀವನ ಮತ್ತು ನವೀಕರಣಕ್ಕೆ 1000 ಕೋಟಿ ರೂ. ಅನುದಾನ ಇಟ್ಟಿರುವುದರಿಂದ ಕೆ.ಸಿ.ವ್ಯಾಲಿ ಯೋಜನೆಯಡಿ ಮತ್ತಷ್ಟು ಶುದ್ಧ ಸಂಸ್ಕರಿತ ನೀರು ಸಿಗಬಹುದೆಂದು ನಿರೀಕ್ಷಿಸಬಹುದಾಗಿದೆ. ಸಂಸ್ಕೃತಿ, ಪರಂಪರೆ, ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆ ವಲಯ: ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಕ್ರೀಡಾ ಮೂಲ ಸೌಕರ್ಯ ಬಲಪಡಿಸಲು ಐದು ಕೋಟಿ ನಿಗದಿ, 60 ವರ್ಷ ಮೀರಿದ ಬಡವರಿಗೆ ಜೀವನ ಚೈತ್ರಯಾತ್ರೆ, ಪ್ರಾಚೀನ ದೇವಾಲಯ ಸ್ಮಾರಕಗಳ ಪುನರುಜ್ಜೀವನ ಸಂರಕ್ಷಣಾ ಯೋಜನೆಯಿಂದ ಕೊಂಚ ಉಪಯೋಗವಾಗುವ ನಿರೀಕ್ಷೆ ಇದೆ. ಕೋಲಾರ ಜಿಲ್ಲೆಯ ಯಾವುದೇ ಪುರಾಣ, ಐತಿಹಾಸಿಕ, ಪ್ರವಾಸಿ ತಾಣಗಳನ್ನು ಅಭಿವೃದ್ಧಿಪಡಿಸುವ ಯಾವುದೇ ಯೋಜನೆಯನ್ನು ಬಜೆಟ್ ಪ್ರಸ್ತಾಪಿಸಿಲ್ಲ. ಆಡಳಿತ ಸುಧಾರಣೆ, ಸಾರ್ವಜನಿಕ ಸೇವೆಗಳ ವಲಯ: ಸರಕಾರದ ಎಲ್ಲಾ ಸೇವೆಗಳನ್ನು ಒಂದೇ ಸೂರಿನಡಿ ನೀಡಲು ಖಾಸಗಿ ಸಹಭಾಗಿತ್ವದೊಂದಿಗೆ ಪ್ರತಿ ಗ್ರಾಮದಲ್ಲೂ ಗ್ರಾಮ-1 ಕೇಂದ್ರಗಳ ಸ್ಥಾಪನೆ, ಮಾಹಿತಿ ಕಣಜ ತಂತ್ರಾಂಶ, ಸರ್ಕಾರಿ ಜಮೀನು ಒತ್ತುವರಿ ಸಂರಕ್ಷಣೆಗೆ ಸಮಿತಿ, ಡಾ.ಡಿ.ವಿ.ಗುಂಡಪ್ಪ ಹೆಸರಿನಲ್ಲಿ ಡಿಜಿಟಲ್ ಮಾಧ್ಯಮ ಜಾಹೀರಾತು ನೀತಿ, ಆಟೋಚಾಲಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರತಿ ವರ್ಷ ಪ್ರತಿ ಕುಟುಂಬಕ್ಕೆ 2 ಸಾವಿರ ನೆರವು ಯೋಜನೆಯಿಂದ ಕೋಲಾರ ಜಿಲ್ಲೆಗೂ ಅನುಕೂಲವಾಗಬಹುದೆಂದು ನಂಬಲಾಗಿದೆ. ಒಟ್ಟಾರೆ ಅವಲೋಕನದಲ್ಲಿ ಬಿ.ಎಸ್.ಯಡಿಯೂರಪ್ಪ ಮಂಡಿಸಿದ ರಾಜ್ಯ ಬಜೆಟ್ ಕರ್ನಾಟಕ ರಾಜ್ಯದಲ್ಲಿ ಕೋಲಾರ ಒಂದು ಜಿಲ್ಲೆ ಎಂಬುದನ್ನೇ ಮರೆತಂತಿದೆ. ಹಿಂದಿನ ಎಚ್ಡಿಕೆ ಬಜೆಟ್‌ನಲ್ಲಿ ಸಿಕ್ಕಿದ್ದರೂ ಈಡೇರದಿದ್ದು: ಸಮ್ಮಿಶ್ರ ಸರ್ಕಾರದ ಎರಡನೇ ಬಜೆಟ್‌ನಲ್ಲಿ ಕೋಲಾರ ಜಿಲ್ಲೆಯಲ್ಲಿ ಹೆಚ್ಚಾಗಿ ಬೆಳೆಯುವ ಟೊಮೆಟೋ ಸಂಸ್ಕರಣಾ ಘಟಕ ಆರಂಭಿಸಲು 20 ಕೋಟಿ ರೂ. ಇಡಲಾಗಿತ್ತು. ಕೆ.ಸಿ. ವ್ಯಾಲಿ ಯೋಜನೆಯಡಿ ಕೈಗಾರಿಕಾ ಪ್ರದೇಶಗಳಲ್ಲಿ ಆರಂಭವಾಗುತ್ತಿರುವ ಕೈಗಾರಿಕೆಗಳಿಗೆ 40 ಎಂಎಲ್‌ಡಿ ನೀರು ಹರಿಸಲು 40 ಕೋಟಿ ರೂ. ಮೀಸಲಿಡಲಾಗಿತ್ತು. ಕೋಲಾರ ಸೇರಿ ಹತ್ತು ಜಿಲ್ಲಾಸ್ಪತ್ರೆಗಳಲ್ಲಿ ಮಹಿಳೆಯರ ಸ್ತನ ಕ್ಯಾನ್ಸರ್ ಪತ್ತೆ ಹಚ್ಚುವ ಸಲುವಾಗಿ ಸ್ತನ ರೇಖನ ವ್ಯವಸ್ಥೆ ಯಂತ್ರಗಳನ್ನು ಅಳವಡಿಸಲಾಗುತ್ತದೆ ಎಂದು ಹೇಳಲಾಗಿತ್ತು. ಕೋಲಾರ ಜಿಲ್ಲೆಯ ಶಿಲ್ಪಗ್ರಾಮ ಶಿವಾರಪಟ್ಟಣದಲ್ಲಿ 10 ಕೋಟಿ ರೂ. ವೆಚ್ಚದಲ್ಲಿ ಅಮರ ಶಿಲ್ಪಿ ಜಕಣಾಚಾರಿ ಶಿಲ್ಪಕಲಾ ಕೇಂದ್ರವನ್ನು ಮಂಜೂರು ಮಾಡಲಾಗಿತ್ತು. ಕೋಲಾರ ಜಿಲ್ಲೆ ಸೇರಿದಂತೆ 10 ಜಿಲ್ಲೆಗಳಲ್ಲಿ ಬಾಲಕಿಯರ ಕ್ರೀಡಾ ಹಾಸ್ಟೆಲ್ ತೆರೆಯಲು 15 ಕೋಟಿ ರೂ. ಮೀಸಲಿಡಲಾಗಿತ್ತು. ರಾಯಚೂರು, ವಿಜಯಪುರ, ಮಂಡ್ಯ ಜೊತೆಗೆ ಕೋಲಾರ ಜಿಲ್ಲೆಗೆ 4 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಜಲಧಾರೆ ಯೋಜನೆಯನ್ನು ಕೈಗೆತ್ತಿಕೊಳ್ಳುವುದಾಗಿ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಆದರೆ, ಇದ್ಯಾವ ಯೋಜನೆಗಳು ಈವರೆಗೂ ಈಡೇರಿಲ್ಲವೆನ್ನುವುದು ವಿಶೇಷ. ಮತ್ತೂಂದು ವಿಶೇಷವೆಂದರೆ ಹಾಲಿ ಬಜೆಟ್‌ನಲ್ಲಿ ಕೋಲಾರಕ್ಕೆ ಯಾವುದೇ ಯೋಜನೆಗಳನ್ನು ನೆಪಮಾತ್ರಕ್ಕೂ ಘೋಷಣೆ ಮಾಡದಿರುವುದು. * ಕೆ.ಎಸ್.ಗಣೇಶ್