Advertisement

State Budget: ರಾಜ್ಯ ಬಜೆಟ್‌; ಜಿಲ್ಲೆಗೆ ಏನೇನೂ ಸಿಕ್ಕಿಲ್ಲ!

10:43 AM Feb 17, 2024 | Team Udayavani |

ಕೋಲಾರ: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ 3.71 ಲಕ್ಷ ಕೋಟಿ ರೂಪಾಯಿಗಳ 2024-25ನೇ ಸಾಲಿನ ಬಜೆಟ್‌ನಲ್ಲಿ ಯಥಾ ಪ್ರಕಾರ ಕೋಲಾರ ಜಿಲ್ಲೆಯನ್ನು ಕಡೆಗಣಿಸಲಾಗಿದ್ದು, ಕೋಲಾರಕ್ಕೆ ಏನೇನೂ ಸಿಕ್ಕಿಲ್ಲ.

Advertisement

ಜಿಲ್ಲೆಯ ಜನಪ್ರತಿನಿಧಿಗಳು ಬಜೆಟ್‌ನಲ್ಲಿ ಕೋಲಾರ ಜಿಲ್ಲೆಗೆ ವಿಶೇಷವಾದ ಯೋಜನೆ ಮಂಜೂರು ಮಾಡಿಸುವಲ್ಲಿ ಸರ್ಕಾರದ ಮೇಲೆ ಒತ್ತಡ ಹಾಕುವ ಸಂಘಟಿತ ಪ್ರಯತ್ನ ಮಾಡದಿರುವುದು ಮತ್ತೂಮ್ಮೆ ಸಾಬೀತಾಗಿದೆ. ಪ್ರತಿವರ್ಷ ಬಜೆಟ್‌ ಮಂಡನೆ ಸಂದರ್ಭದಲ್ಲಿ ಕೋಲಾರ ಜಿಲ್ಲೆಯ ಜನರು ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳುತ್ತಾರೆ. ಬಜೆಟ್‌ ಮಂಡನೆ ಒಂದು ತಿಂಗಳ ಮೊದಲೇ ವಿವಿಧ ಮಹತ್ವಾಕಾಂಕ್ಷಿ ಯೋಜನೆ ಪ್ರಸ್ತಾಪಿಸಿ, ಸರ್ಕಾರಕ್ಕೆ ವಿವಿಧ ಹಂತಗಳಲ್ಲಿ ಸಲಹೆ ನೀಡುತ್ತಾರೆ. ಮನವಿ ಸಲ್ಲಿಸುತ್ತಾರೆ. ಆದರೆ, ಬಜೆಟ್‌ ಮಂಡನೆಯಾದಾಗ ನಿರಾಸೆ ಕಾದಿರುತ್ತದೆ. ಈ ಬಾರಿ ಸಿದ್ದರಾಮಯ್ಯ ಮಂಡಿಸಿದ 15ನೇ ಬಜೆಟ್‌ ಜಿಲ್ಲೆಗೆ ನಿರಾಸೆಗಿಂತಲೂ ಮಿಗಿಲಾದ ಬಜೆಟ್‌ ಆಗದಿರುವುದು ಖಚಿತವಾಗಿದೆ.

ಕೋಲಾರ ಜಿಲ್ಲೆಯ ಜನರು ಬಜೆಟ್‌ನಲ್ಲಿ ಇಂತಿಂಥ ಯೋಜನೆ ಮಂಜೂರಾಗಬೇಕೆಂದು ಒತ್ತಾಯಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಲೇ ಇದ್ದಾರೆ. ಕೋಲಾರ ಜಿಲ್ಲೆಯ ಜನಪ್ರತಿನಿಧಿಗಳು ಜನರ ಒತ್ತಾಯಕ್ಕೆ ಧ್ವನಿಗೂಡಿಸುವ ಕೆಲಸವನ್ನು ಇದುವರೆಗೂ ಮಾಡಿಲ್ಲ, ಅಥವಾ ಸ್ವಂತವಾಗಿಯೂ ಕೋಲಾರ ಜಿಲ್ಲೆ ಅಥವಾ ತಮ್ಮ ಕ್ಷೇತ್ರದ ಪರವಾಗಿಯಾದರೂ ಕೂಗೆತ್ತಿಲ್ಲ. ಇದರ ಪರಿಣಾಮ ಎಂಥ ಬಜೆಟ್‌ ಮಂಡನೆಯಾಗಬೇಕೋ ಅಂತದ್ದೇ ಬಜೆಟ್‌ ಮಂಡನೆಯಾಗಿದೆ.

ಪ್ರತ್ಯಕ್ಷವಾಗಿ ಸಿಕ್ಕಿದ್ದು: ಜಿಲ್ಲೆಯ ಹೆಸರನ್ನು 181 ಪುಟಗಳ ಬಜೆಟ್‌ ಪ್ರತಿಯಲ್ಲಿ ಒಂದೆರೆಡು ಕಡೆ ಪ್ರಸ್ತಾಪಿಸಲಾಗಿದೆ. ಅದೂ ಹಿಂದಿನ ಸರ್ಕಾರಗಳು ಮಂಡಿಸಿದ ಬಜೆಟ್‌ನಲ್ಲಿ ಘೋಷಿಸಿದ್ದ ಯೋಜನೆ ಈಡೇರಿರಲಿಲ್ಲ. ಇವುಗಳನ್ನು ಮತ್ತೇ ಅನುಷ್ಠಾನಗೊಳಿಸುತ್ತೇವೆ ಎಂಬ ಭರವಸೆ ಈ ಬಜೆಟ್‌ನಲ್ಲಿ ದೊರೆತಿದೆ. ಬೆಂಗಳೂರಿನ ಒಳಚರಂಡಿ ಸಂಸ್ಕರಿತ ನೀರನ್ನು ಕೋಲಾರದ ಕೆರೆಗಳಿಗೆ ಈಗಾಗಲೇ ಕೆ.ಸಿ. ವ್ಯಾಲಿ ಯೋಜನೆಯಡಿ ಹರಿಸಲಾಗುತ್ತಿದೆ. ಇದೇ ಯೋಜನೆಯ ಎರಡನೇ ಹಂತದಲ್ಲಿ 272 ಕೆರೆಗೆ ನೀರು ತುಂಬಿಸಲು ಹಿಂದೆಯೇ ಅನುಮೋದನೆ ನೀಡಲಾಗಿತ್ತು. ಈ ಬಜೆಟ್‌ನಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಸುವ ವಾಗ್ಧಾನ ಮಾಡಲಾಗಿದೆ.

ಇಂಟಿಗ್ರೇಟೆಡ್‌ ಟೌನ್‌ ಶಿಪ್‌ ಕುರಿತು ಪ್ರಸ್ತಾಪ: ಕೆಜಿಎಫ್‌ ಶಾಸಕಿ ರೂಪಕಲಾ ಪಟ್ಟು ಹಿಡಿದ ಪ್ರಯುಕ್ತ ಕೆಜಿಎಫ್‌ಗೆ ಬಜೆಟ್‌ ನಂತರ ಸುಮಾರು 900 ಎಕರೆ ಜಮೀನನ್ನು ಕೈಗಾರಿಕಾ ಪ್ರದೇಶಾಭಿವೃದ್ಧಿಗೆ ಮಂಜೂರು ಮಾಡಲಾಗಿತ್ತು. ಈ ಪೈಕಿ 650 ಎಕರೆಯಷ್ಟು ಕೈಗಾರಿಕೆಗಳ ಅಭಿವೃದ್ಧಿ ಉಳಿದ 250 ಎಕರೆಯಷ್ಟು ಪ್ರದೇಶದಲ್ಲಿ ಕೈಗಾರಿಕಾ ಇಂಟಿಗ್ರೇಟೆಡ್‌ ಟೌನ್‌ಶಿಪ್‌ ನಿರ್ಮಾಣ ಮಾಡಲಾಗುವುದು ಎಂದು ಇದೇ ಸರ್ಕಾರ ಬಜೆಟ್‌ಗೂ ಮುನ್ನ ಭೂ ಮಂಜೂರಾತಿ ಆದೇಶ ಪ್ರತಿಯಲ್ಲಿಯೇ ತಿಳಿಸಿತ್ತು. ಈಗ ಬಜೆಟ್‌ನಲ್ಲಿಯೂ ಘೋಷಿಸಿದೆ. ಈ ಹಿಂದೆ ಬಸವರಾಜ್‌ ಬೊಮ್ಮಾಯಿ ಮಂಡಿಸಿದ್ದ ಕೊನೆಯ ಬಜೆಟ್‌ನಲ್ಲಿಯೂ ಟೌನ್‌ ಶಿಪ್‌ ಕುರಿತು ಪ್ರಸ್ತಾಪಿಸಲಾಗಿತ್ತು.

Advertisement

ಪರೋಕ್ಷವಾಗಿ ಸಿಕ್ಕಿದ್ದು: ಪ್ರತಿ ಬಾರಿ ಬಜೆಟ್‌ ಮಂಡನೆಯಾದಾಗಲೂ ಪ್ರತ್ಯಕ್ಷವಾಗಿ ಕೋಲಾರ ಜಿಲ್ಲೆಗೆ ಸಿಗುವುದೇನು ಇಲ್ಲ.ಆದ್ದರಿಂದ ಪರೋಕ್ಷವಾಗಿ ವಿವಿಧ ಇಲಾಖೆಗಳ ಮೂಲಕ ಸಿಗುವುದೇನು ಎಂದು ಹುಡುಕುವುದೇ ಆಗಿದೆ. ಈ ಬಾರಿಯೂ ಹಾಗೆ ಹುಡುಕಿದಾಗ ಸಿರಿಧಾನ್ಯಗಳ ಹಾಗೂ ಮೌಲ್ಯವರ್ಧಿತ ಸಿರಿಧಾನ್ಯ ಉತ್ಪನ್ನಗಳ ಒದಗಿಸಲು ನಮ್ಮ ಮಿಲ್ಲೆಟ್‌ ಹೊಸ ಕಾರ್ಯಕ್ರಮ ಪ್ರಾರಂಭಿಸಲಾಗುತ್ತಿದೆ. ಇದು ಈಗಾಗಲೇ ಸಿರಿಧಾನ್ಯ ಉತ್ಪನಗಳ ತಯಾರಿಸಿ ಮಾರಾಟ ಮಾಡುತ್ತಿರುವ ಸ್ವಸಹಾಯ ಸ್ತ್ರೀಶಕ್ತಿ ಸಂಘಗಳಿಗೆ ಅನುಕೂಲವಾಗುವ ಸಾಧ್ಯತೆ ಇದೆ.

12 ಕೋಟಿ ಅನುದಾನ ಮೀಸಲು: ರೈತರಿಗೆ ಕೃಷಿ, ತೋಟಗಾರಿಕೆ ಕೀಟ ರೋಗ ಮತ್ತು ಪೋಷಕಾಂಶ ನಿರ್ವಹಣೆಯ ಸಲಹೆಗಾಗಿ ಇ-ಸ್ಯಾಪ್‌ ಆಪ್‌ ಪರಿಚಯಿಸುತ್ತಿದ್ದು, ಇದರಿಂದ ಕೀಟಬಾಧೆ ಸಮಸ್ಯೆಯಿಂದ ಬಾಧಿತವಾಗಿರುವ ಕೋಲಾರ ಜಿಲ್ಲೆ ರೈತರಿಗೂ ಪ್ರಯೋಜನವಾಗಲಿದೆ. ಜಿಲ್ಲೆಯಲ್ಲಿಯೂ ಹೆಚ್ಚು ರೇಷ್ಮೆ ಉತ್ಪಾದಕರು ಇರುವುದರಿಂದ ಬೈವೋಲ್ಟಿàನ್‌ ರೇಷ್ಮೆ ಉತ್ಪಾದಕರಿಗೆ ಪ್ರೋತ್ಸಾಹ ಧನವನ್ನು 30 ರೂ.ಗೆ ಹೆಚ್ಚಿಸಿರುವುದು, ರೇಷ್ಮೆ ಬಿಚ್ಚಣಿಕೆದಾರರ ಕಚ್ಚಾ ರೇಷ್ಮೆಗೂ 12 ಕೋಟಿ ಅನುದಾನ ಇಟ್ಟಿರುವುದು ಅನುಕೂಲವಾಗಲಿದೆ.

ಗ್ರಾಮೀಣ ಪತ್ರಕರ್ತರಿಗೆ ಬಸ್‌ ಪಾಸ್‌: ಹಿಂದಿನ ಏಳೆಂಟು ಬಜೆಟ್‌ಗಳಲ್ಲಿ ಪ್ರಸ್ತಾಪವಾಗುತ್ತಲೇ ಇರುವ ಎತ್ತಿನಹೊಳೆ ಯೋಜನೆ ಯೋಜನೆಯಡಿ ಗುರುತ್ವ ಕಾಲುವೆಗೆ ನೀರು ಹರಿಸಲಾಗುವುದು ಎಂದು ಘೋಷಿಸಿರುವುದು ಕೋಲಾರ ಜಿಲ್ಲೆಗೆ ನೀರು ಹರಿಯಬಹುದು ಎಂದು ನಿರೀಕ್ಷಿಸಬಹುದಾಗಿದೆ. ಹಾಗೆಯೇ 80 ವರ್ಷ ಮೇಲ್ಪಟ್ಟವರ ಕುಟುಂಬಗಳಿಗೆ ಆಹಾರ ಧಾನ್ಯ ವಿತರಿಸುವ ಅನ್ನ ಸುವಿಧಾ, ಗ್ರಾಮೀಣ ಪತ್ರಕರ್ತರಿಗೆ ಬಸ್‌ ಪಾಸ್‌ ಮತ್ತು ಮಿನಿ ಜವಳಿ ಪಾರ್ಕ್‌ ನಿರ್ಮಾಣ ಘೋಷಣೆಗಳಿಂದಲೂ ಕೋಲಾರಕ್ಕೆ ಅನುಕೂಲವಾಗಬಹುದು ಎನ್ನುವ ನಿರೀಕ್ಷೆ ಹುಟ್ಟಿದೆ.

ಪಂಚ ಗ್ಯಾರಂಟಿಗಳೇ ಪಕ್ಕಾ :

ಮುಖ್ಯಮಂತ್ರಿ ಸಿದ್ದರಾಮಯ್ಯರ ಅಚ್ಚುಮೆಚ್ಚಿನ ಪಂಚ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ಸಾಗಿದ್ದು, ಅಭಾದಿತವಾಗಿ ಮುನ್ನಡೆಸಲಾಗುವುದು ಎಂದು ಬಜೆಟ್‌ನಲ್ಲಿ ವಿವರಿಸಿರುವುದು ಕೋಲಾರ ಜಿಲ್ಲೆಯ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಿಗೂ ಅನುಕೂಲ ಆಗಲಿದೆ. ಸದ್ಯಕ್ಕೆ ಕೋಲಾರ ಜಿಲ್ಲೆಯ ಜನರು ವಿವಿಧ ಇಲಾಖೆಗಳ ಮೂಲಕ ಕೋಲಾರ ಜಿಲ್ಲೆಯ ರೈತರು, ದಲಿತರು, ವಿದ್ಯಾರ್ಥಿಗಳು, ಕೃಷಿ ಕೂಲಿ ಕಾರ್ಮಿಕರಿಗೆ ಸಿಗುವುದೇನು ಎಂದು ಹುಡುಕಿ ಕೊಳ್ಳುವುದರಲ್ಲೇ ತೃಪ್ತಿ ಪಟ್ಟುಕೊಳ್ಳಬೇಕಿದೆ.

ಕಿಮೋಥೆರಪಿ ಘಟಕ ಸ್ಥಾಪನೆ :

ಕೋಲಾರ ಜಿಲ್ಲೆಯಲ್ಲಿ ಕ್ಯಾನ್ಸರ್‌ ರೋಗಿಗಳು ಹೆಚ್ಚಾಗುತ್ತಿರುವುದರಿಂದ ಕಿಮೋಥೆರಪಿ ಘಟಕವನ್ನು ಪ್ರತಿ ಜಿಲ್ಲಾ ಆಸ್ಪತ್ರೆಯಲ್ಲಿ ಆರಂಭಿಸಲಾಗುವುದು. ಕಾಲೊ³àನ್ಪೋಪಿ ಉಪಕರಣವನ್ನು ಅಳವಡಿಸಲು 21 ಕೋಟಿ ರೂಪಾಯಿ ನಿಗದಿಪಡಿಸಲಾಗಿದೆಯೆಂದು ಘೋಷಿಸಲಾಗಿದೆ. ಈ ಯೋಜನೆಯನ್ನು ಬಸವರಾಜ್‌ ಬೊಮ್ಮಾಯಿ ಮಂಡಿಸಿದ್ದ ಬಜೆಟ್‌ನಲ್ಲಿಯೇ ಘೋಷಿಸಲಾಗಿತ್ತು. ಯಥಾ ಪ್ರಕಾರ ಅನುಷ್ಠಾನವಾಗಿರಲಿಲ್ಲ. ಇದೀಗ ಮತ್ತೇ ಇದೇ ಘೋಷಣೆಯನ್ನು ಬಜೆಟ್‌ನಲ್ಲಿ ಮಂಡಿಸಲಾಗಿದೆ.

ರೈತಾಪಿ ವರ್ಗಕ್ಕೆ ನಿರಾಸೆ ಮೂಡಿಸಿದ ಬಜೆಟ್‌:

ಬಜೆಟ್‌ಗೂ ಮುನ್ನ ಕೋಲಾರ ಜಿಲ್ಲೆಗೆ ಈ ಬಾರಿ ಏನೇನೋ ಘೋಷಣೆಯಾಗಿ ಬಿಡುತ್ತದೆಂದು ಭಾಷಣ ಬಿಗಿದಿದ್ದ ಉಸ್ತುವಾರಿ ಸಚಿವರು, ಕಾಂಗ್ರೆಸ್‌ ಶಾಸಕರು ಕೋಲಾರಕ್ಕೆ ಬಜೆಟ್‌ನಲ್ಲಿ ಏನೂ ಸಿಗದಿರುವ ಕುರಿತು ಜಿಲ್ಲೆಯ ಜನತೆಗೆ ಉತ್ತರಿಸಬೇಕಾಗಿದೆ. ಹಿಂದೆ ಬಿಜೆಪಿ ಸರ್ಕಾರದಲ್ಲಿ ಘೋಷಿಸಲ್ಪಟ್ಟ ಯೋಜನೆಗಳನ್ನೇ ಮತ್ತೇ ಪ್ರಸ್ತಾಪಿಸಿ ಜನರನ್ನು ತೃಪ್ತಿಪಡಿಸುವ ಪ್ರಯತ್ನ ಮಾಡಲಾಗಿದೆ. ಕೋಲಾರದ ಕೃಷಿ ಮಾರುಕಟ್ಟೆ, ಕೃಷಿ, ತೋಟಗಾರಿಕೆ, ಹೈನುಗಾರಿಕೆಯಲ್ಲಿ ತೊಡಗಿರುವ ರೈತಾಪಿ ವರ್ಗಕ್ಕೆ ನಿರಾಸೆ ಮೂಡಿಸಿದ ಬಜೆಟ್‌ ಇದಾಗಿದೆ.-ಸಿಎಂಆರ್‌ ಶ್ರೀನಾಥ್‌, ಜೆಡಿಎಸ್‌ ಮುಖಂಡ, ಕೋಲಾರ

ನದಿ ಜೋಡಣೆ ಬಗ್ಗೆ ಸರ್ಕಾರ ಚಕಾರವೆತ್ತಿಲ್ಲ:

ಮುಂದುವರಿದ ಮಹಾ ಮೋಸ, ಬಯಲು ಸೀಮೆಗೆ ಮೋಸದ ಪರಾಕಾಷ್ಟೆ, ಚುನಾವಣೆ ಗೆಲ್ಲಲು ಮಾತ್ರ ಮೂರನೇ ಹಂತದ ಶುದ್ಧೀಕರಣ ಬಜೆಟ್‌ನಲ್ಲಿ ಕೆ.ಸಿ. ವ್ಯಾಲಿ ಹಾಗೂ ಎಚ್‌.ಎನ್‌ ವ್ಯಾಲಿ ಯೋಜನೆಗಳ ಮೂರನೇ ಹಂತದ ಶುದ್ಧೀಕರಣಕ್ಕೆ ತಿಲಾಂಜಲಿ ಇಡಲಾಗಿದೆ.ಯಾವುದೇ ಲಾಭವಿಲ್ಲದ ಮುಂದುವರಿದ ಎತ್ತಿನಹೊಳೆ ಯೋಜನೆಯ ಜಪ ಮಾಡಲಾಗಿದೆ, ಕೆರೆ-ಕುಂಟೆ, ಕಾಲುವೆಗಳ ಸಮಗ್ರ ಅಭಿವೃದ್ಧಿಗೆ ಒತ್ತು ಕೊಟ್ಟಿಲ್ಲ. ಕೃಷ್ಣ ಪೆನ್ನಾರ್‌ ನದಿ ಜೋಡಣೆ ಕುರಿತು ಚಕಾರವೆತ್ತಿಲ್ಲ.-ಆಂಜನೇಯರೆಡ್ಡಿ, ಅಧ್ಯಕ್ಷರು, ಶಾಶ್ವತ ನೀರಾವರಿ ಹೋರಾಟ ಸಮಿತಿ 

ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಅನುಭವವನ್ನು ಬಳಸಿಕೊಂಡು ಮಂಡಿಸಿರುವ ಈ ಸಾಲಿನ ರಾಜ್ಯ ಬಜೆಟ್‌ ಎಲ್ಲಾ ವರ್ಗದ ಜನರಿಗೂ ಹಿತಕಾರಿಯಾಗಿದೆ. ಪಂಚ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡುತ್ತಲೇ ವಿವಿಧ ಇಲಾಖೆಗಳ ಪ್ರಗತಿಗೂ ಅನುದಾನ ನೀಡಿರುವ ಉತ್ತಮ ಹೊಂದಾಣಿಕೆಯ ಬಜೆಟ್‌ ಇದಾಗಿದೆ. ಕೆಜಿಎಫ್‌ನಲ್ಲಿ ಕೈಗಾರಿಕಾ ಪ್ರದೇಶಾಭಿವೃದ್ಧಿ ಜೊತೆಗೆ ಇಂಟಿಗ್ರೇಟೆಡ್‌ ಟೌನ್‌ಶಿಪ್‌ ಘೋಷಿಸಿರುವುದು ಜಿಲ್ಲೆಯ ಪ್ರಗತಿಗೆ ನಾಂದಿಯಾಗಲಿದೆ.-ಲಕ್ಷ್ಮೀನಾರಾಯಣ್‌, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ, ಕೋಲಾರ

ಅಧಿಕಾರಕ್ಕೆ ಬರುವ ಸರ್ಕಾರಗಳು ಜಿಲ್ಲೆಯನ್ನು ಸಂಪೂರ್ಣ ಕಡೆಗಣಿಸುತ್ತವೆ ಎಂಬುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ 15ನೇ ಬಜೆಟ್‌ ಸಾಕ್ಷಿಯಾಗಿದೆ. ಜಿಲ್ಲೆಯ ಹತ್ತು ಹಲವು ಬೇಡಿಕೆಗೆ ಸರ್ಕಾರ ಸ್ಪಂದಿಸಿಲ್ಲ. ಗ್ರಾಮೀಣ ಭಾಗದ ರಸ್ತೆಗಳು, ತಾಲೂಕು ಕೇಂದ್ರಗಳಿಂದ ಜಿಲ್ಲಾ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿಗೂ ಬಜೆಟ್‌ನಲ್ಲಿ ಆದ್ಯತೆ ನೀಡಿಲ್ಲ.ಕೆ.ಶ್ರೀನಿವಾಸಗೌಡ, ಜಿಲ್ಲಾ ಸಂಚಾಲಕ, ರೈತ ಸಂಘ ಹಸಿರುಸೇನೆ, ಕೋಲಾರ

ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಸೇರಿದಂತೆ ಉನ್ನತ ಶಿಕ್ಷಣ ಸಂಸ್ಥೆಗಳ ಕೊರತೆಯನ್ನು ನಿವಾರಿಸಲು ಬಜೆಟ್‌ ಸಂಪೂರ್ಣ ವಿಫಲವಾಗಿದೆ. ಜಿಲ್ಲಾ ಕೇಂದ್ರದಲ್ಲಿ ಶಾಸಕರಾಗಿರುವ ಕೊತ್ತೂರು ಮಂಜುನಾಥ್‌ ಈ ಕುರಿತು ಚಕಾರ ಎತ್ತಿಲ್ಲ. ಬಜೆಟ್‌ ಉಳ್ಳವರ ಪರವಾಗಿದೆ. ರೈತರು, ದಲಿತರು, ವಿದ್ಯಾರ್ಥಿ, ಮಹಿಳೆಯರಿಗೆ ವಿಶೇಷ ಯೋಜನೆ ಪ್ರಕಟಿಸಿಲ್ಲ. ನಿರುದ್ಯೋಗ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಗಂಭೀರ ಯೋಜನೆಗಳಿಲ್ಲ. -ಕೆಂಬೋಡಿ ನಾರಾಯಣಸ್ವಾಮಿ, ಜಿಲ್ಲಾಧ್ಯಕ್ಷ , ಬಿಎಸ್‌ಪಿ ಕೋಲಾರ

ಸಿದ್ದರಾಮಯ್ಯ ಬಜೆಟ್‌ ಸಮುದಾಯಗಳಿಗೆ ಅನುದಾನ ನೀಡಿ, ಜಾತಿ-ಜಾತಿಗಳ ಮಧ್ಯೆ ವಿಷ ಬೀಜ ಬಿತ್ತಿದೆ. ಕೇಂದ್ರ ಅನುದಾನ ನೀಡಿಲ್ಲವೆಂದು ದೂಷಿಸಲು ಸೀಮಿತವಾಗಿದೆ. ಮುಜರಾಯಿ ಅನುದಾನವನ್ನು ಪ್ರಾಧಿಕಾರ ಮಾಡಿ ಪಕ್ಷದವರಿಗೆ ಅಧಿಕಾರ ನೀಡಲು ಉದ್ದೇಶಿಸಿದೆ. ರೈತರಿಗೆ ಬರ ಪರಿಹಾರ ನೀಡಲು ಹಣವಿಲ್ಲದಂತಾಗಿದೆ, ವಕ್ಫ್ ಆಸ್ತಿ ಉಳಿಸಲು 100 ಕೋಟಿ ನೀಡಿ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಕ್ಷೇತ್ರ ಗೆಲ್ಲಲು ಮತಬ್ಯಾಂಕ್‌ ಭದ್ರ ಮಾಡಿಕೊಂಡಿದ್ದಾರೆ.-ಎಸ್‌.ಮುನಿಸ್ವಾಮಿ, ಸಂಸದರು, ಕೋಲಾರ

– ಕೆ.ಎಸ್‌.ಗಣೇಶ್‌

Advertisement

Udayavani is now on Telegram. Click here to join our channel and stay updated with the latest news.

Next