ತಿಪಟೂರು: 18 ಸಾವಿರದಿಂದ 7 ಸಾವಿರದ ಆಸುಪಾಸಿಗೆ ಕುಸಿದಿರುವ ಕೊಬ್ಬರಿ ಬೆಲೆಯಿಂದ ಕೊಬ್ಬರಿ ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದು, ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ವಿಂಟಲ್ ಕೊಬ್ಬರಿಗೆ ಕನಿಷ್ಠ 2 ಸಾವಿರವಾದರೂ ಪ್ರೋತ್ಸಾಹ ಬೆಲೆ ನೀಡುವ ಮೂಲಕ ತೆಂಗು ಬೆಳೆಗಾರರ ಕಣ್ಣೀರು ಒರೆಸುವ ಕೆಲಸ ಮಾಡಲಿದ್ದಾರೆಂದು ಬಹುನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಬಜೆಟ್‌ನಲ್ಲಿ ಕೊಬ್ಬರಿ ಹಾಗೂ ತೆಂಗಿನ ಬಗ್ಗೆ ಯಾವುದೇ ವಿಶೇಷ ಪ್ರಸ್ತಾಪ ಇಲ್ಲದಿರು ವುದರಿಂದ ಕೊಬ್ಬರಿ ಬೆಳೆಗಾರರು ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕಳೆದ 3ದಿನಗಳಿಂದ ಆರಂಭವಾಗಿರುವ ವಿಧಾನಸಭಾ ಕಲಾಪದಲ್ಲಿ ಕೊಬ್ಬರಿಗೆ ಬೆಲೆ ತೀರಾ ಕುಸಿದಿರುವುದರಿಂದ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರ ಕೂಡಲೇ ಬೆಂಬಲ ಬೆಲೆ ಹೆಚ್ಚಿಸಲು ಸೂಕ್ತ ಕ್ರಮ ಹಾಗೂ ಪ್ರೋತ್ಸಾಹಧನ ನೀಡುವ ಮೂಲಕ ಕೊಬ್ಬರಿ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸಬೇಕೆಂದು ಪಕ್ಷಾತೀತವಾಗಿ ಸಾಕಷ್ಟು ಶಾಸಕರು ಸರ್ಕಾರದ ಗಮನ ಸೆಳೆಯು ವಂತಹ ದೊಡ್ಡಮಟ್ಟದಲ್ಲಿ ಚರ್ಚೆ ನಡೆಸುವ ಮೂಲಕ ಸರ್ಕಾರಕ್ಕೆ ಒತ್ತಾಯಪಡಿಸಲಾಗಿತ್ತು.
ತೆಂಗು ಬೆಳೆಗಾರರ ಮೇಲೆ ಕಾಳಜಿ ಇಲ್ಲ: ಚರ್ಚೆ ನಡೆಯುವ ವೇಳೆಯಲ್ಲೂ ಸಹ ಮುಖ್ಯಮಂತ್ರಿಗಳು ಈ ಬಗ್ಗೆ ಯಾವುದೇ ನಿರ್ದಿಷ್ಟ ಉತ್ತರ ನೀಡದಿ ದ್ದರೂ, ತೋಟಗಾರಿಕಾ ಸಚಿವರಾದಿಯಾಗಿ ಕಲ್ಪತರು ನಾಡಿನ ಶಾಸಕರು, ಮುಖ್ಯ ಮಂತ್ರಿಗಳಲ್ಲಿ ಈ ಬಗ್ಗೆ ವಿಶೇಷ ಮನವಿ ಮಾಡಿಕೊಂಡಿದ್ದರಿಂದ ಅವರೂ ಸಹ ಬಹುನಿರೀಕ್ಷೆಯಲ್ಲಿದ್ದರು. ಆದರೆ, ಬಜೆಟ್ ನಲ್ಲಿ ಪ್ರಸ್ತಾಪವಾಗದಿರುವುದು ಸರ್ಕಾರಕ್ಕೆ ತೆಂಗು ಬೆಳೆಗಾರರ ಮೇಲೆ ಯಾವುದೇ ಕಾಳಜಿ ಇಲ್ಲದಿರುವುದು ಸ್ಪಷ್ಟವಾದಂತಿದೆ.
ನಮ್ಮ ಭಾಗದ ರೈತರ ಪ್ರಮುಖ ವಾಣಿಜ್ಯ ಬೆಳೆ ಕೊಬ್ಬರಿಯೇ ಆಗಿದೆ. ಬೆಲೆ ಕೇವಲ 7 ಸಾವಿರಕ್ಕೆ ಕುಸಿದಿರುವುದರಿಂದ ತೆಂಗು ಬೆಳೆಗಾರರು ಆತ್ಮಹತ್ಯೆ ದಾರಿ ತುಳಿಯುವಂತಹ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರದ ವಿರುದ್ಧ ತೆಂಗು ಬೆಳೆಗಾರರು ಹೋರಾಟ ಹಮ್ಮಿಕೊಳ್ಳಲಿದ್ದು, ವಿಧಾನಸೌಧ ಮುತ್ತಿಗೆ ಹಾಕಲು ತೀರ್ಮಾನಿಸುತ್ತೇವೆ.
●ಯೋಗಾನಂದ ಸ್ವಾಮಿ, ಕೊಬ್ಬರಿ ಬೆಲೆ ಹೋರಾಟಗಾರರ ಸಂಘದ ಅಧ್ಯಕ್ಷ