Advertisement

ರಾಜ್ಯ ಬಜೆಟ್‌ 2023; ಕೈಗಾರಿಕೆ, ನೀರಾವರಿಗೆ ಸಿಗುವುದೇ ಅನುದಾನ?

03:21 PM Feb 16, 2023 | Team Udayavani |

ಚಾಮರಾಜನಗರ: ಕಳೆದ ಬಾರಿ ಜಿಲ್ಲೆಗೆ ರಾಜ್ಯ ಬಜೆಟ್‌ ನಲ್ಲಿ ಹೇಳಿಕೊಳ್ಳುವಂಥ ಕೊಡುಗೆಯೇನೂ ದೊರೆತಿರಲಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನೀಡಬಹುದೆಂದು ಜನತೆ ನಿರೀಕ್ಷಿಸುತ್ತಿದ್ದಾರೆ.

Advertisement

2 ವರ್ಷಗಳ ಹಿಂದೆ ಜಿಲ್ಲಾಡಳಿತದಿಂದ ರಾಜ್ಯ ಸರ್ಕಾರಕ್ಕೆ ಜಿಲ್ಲೆಗೆ ಅಗತ್ಯವಾಗಿ ಬೇಕಾದ ಕೆಲಸಗಳ ಕುರಿತು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆ ಪಸ್ತಾವನೆಗಳು ಇಂತಿವೆ:

1. ಜಿಲ್ಲೆಯಲ್ಲಿ ಒಟ್ಟು ಐದು ತಾಲೂಕುಗಳಿದ್ದು, ಒಂದೇ ಉಪ ವಿಭಾಗ (ಕೊಳ್ಳೇಗಾಲ) ಇದೆ. ಆಡಳಿತದ ಕಾರ್ಯನಿರ್ವಹಣೆಗೆ ಅನುಕೂಲವಾಗಲು ಮತ್ತೊಂದು ಉಪವಿಭಾಗ ರಚನೆ ಮಾಡಬೇಕು.

2. ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ ಮಲೆ ಮಹದೇಶ್ವರ ಬೆಟ್ಟಕ್ಕೆ ಕೊಳ್ಳೇಗಾಲದಿಂದ ಹನೂರುವರೆವಿಗೆ ಕೆ-ಶಿಪ್‌ ಯೋಜನೆಯಡಿ ರಸ್ತೆಕಾರ್ಯ ಪ್ರಗತಿಯಲ್ಲಿದೆ. ಭಕ್ತಾ ದಿಗಳು, ಸ್ಥಳೀಯರಿಗೂ ಅನುಕೂಲವಾಗುವಂತೆ ಹನೂರಿನಿಂದ ಮಲೆ ಮಹದೇಶ್ವರ ಬೆಟ್ಟದವರೆಗಿನ ರಸ್ತೆ ಅಭಿವೃದ್ಧಿ ಪ್ರಸ್ತಾವ ಯೋಜನೆಗೆ ಅನು ಮೋದನೆ ನೀಡಿ ಅನುದಾನ ಬಿಡುಗಡೆ ಮಾಡಬೇಕು.

3. ಮಲೆ ಮಹದೇಶ್ವರ ಬೆಟ್ಟದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಿ ಉನ್ನತ ಆರೋಗ್ಯ ಸೌಲಭ್ಯ ಕಲ್ಪಿಸಲು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೇರಿಸಬೇಕು.

Advertisement

4. ಹನೂರು ಜಿಲ್ಲೆಯ ಹೊಸ ತಾಲೂಕಾಗಿದೆ. ಸುಗಮ ಕಾರ್ಯನಿರ್ವಹಣೆಗಾಗಿ 10 ಕೋಟಿ ರೂ ವೆಚ್ಚದಲ್ಲಿ ಮಿನಿ ವಿಧಾನ ಸೌಧ ಕಟ್ಟಡ ನಿರ್ಮಾಣ ಮಾಡಬೇಕು.

5. ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 766 ಮತ್ತು 948 ಸಂಪರ್ಕಿಸುವ ಸಂತೆಮರಹಳ್ಳಿ ಮೂಗೂರು ಕ್ರಾಸ್‌ ವರೆಗಿನ 7 ಕಿ.ಮೀ. ರಸ್ತೆಯನ್ನು 18 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಯೋಜನೆ ಪ್ರಸ್ತಾವನೆ.

6. ಯಳಂದೂರಿನ 30 ಹಾಸಿಗೆಗಳ ಆಸ್ಪತ್ರೆಯನ್ನು 100 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆ ಗೇರಿಸುವ 15.3 ಕೋಟಿ ರೂ ವೆಚ್ಚದ ಪ್ರಸ್ತಾವ ಮಾಡಲಾಗಿತ್ತು. ಇದಲ್ಲದೇ ಪ್ರತಿ ವರ್ಷ ಜಿಲ್ಲೆಯ ಜನರು ಬಜೆಟ್‌ ನಲ್ಲಿ ಜಿಲ್ಲೆಗೆ ಆಗಬೇಕಾದ ಈ ಕೆಳಕಂಡ ಯೋಜನೆಗಳ ಅನುಷ್ಠಾನಕ್ಕೆ ಅನುದಾನ
ನಿರೀಕ್ಷಿಸುತ್ತಿದ್ದಾರೆ.

ಪ್ರವಾಸಿತಾಣಗಳ ಅಭಿವೃದ್ಧಿಗೆ ಅನುದಾನ: ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಫ‌ುಲ ಅವಕಾಶಗಳಿದ್ದು, ಪ್ರವಾಸಿ ತಾಣಗಳ ಅಭಿವೃದ್ಧಿ ಮತ್ತು ಪ್ರವಾಸಿಗರನ್ನು ಆಕರ್ಷಿಸುವ ಯೋಜನೆ ರೂಪಿಸಿ ಅಭಿವೃದ್ಧಿ ಪಡಿಸಲು ನೂರಾರು ಕೋಟಿ ಅನುದಾನದ ಅಗತ್ಯವಿದೆ.

ಕಾನೂನು ಕಾಲೇಜು: ಜಿಲ್ಲೆಯಲ್ಲಿ ಸರ್ಕಾರಿ ಕಾನೂನು ಕಾಲೇಜು ಆರಂಭವಾಗಲು ರಾಜ್ಯ ಸರ್ಕಾರ ಅನುದಾನ ನೀಡಬೇಕು.

ಕಾವೇರಿ 2ನೇ ಹಂತ: ಜಿಲ್ಲಾ ಕೇಂದ್ರ ಚಾಮರಾಜ ನಗರಕ್ಕೆ ತಿ.ನರಸೀಪುರದಿಂದ ಕಾವೇರಿ ನೀರು ಪೂರೈಸಲಾಗುತ್ತಿದ್ದು, ಈಗಿನ ಜನಸಂಖ್ಯೆಗೆ ಈ ನೀರು ಸಾಲುತ್ತಿಲ್ಲ. ಹೀಗಾಗಿ ಪಟ್ಟಣಕ್ಕೆ ಎರಡನೇ ಹಂತದ ಕಾವೇರಿ ಕುಡಿಯುವ ನೀರಿನ ಯೋಜನೆಯನ್ನು ನಿರೀಕ್ಷಿಸಲಾಗಿದೆ. ಮಾಲಂಗಿಯಿಂದ ಪೈಪುಗಳ ಮೂಲಕ ನೀರು ಪೂರೈಸುವ ಈ ಯೋಜನೆಗೆ 279 ಕೋಟಿ ರೂ. ಅಂದಾಜು ತಯಾರಿಸಲಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಹ ಸಲ್ಲಿಸಲಾಗಿದೆ.

ಹೊಸ ಬಸ್‌ ನಿಲ್ದಾಣ: ನಗರದಲ್ಲಿರುವ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಚಿಕ್ಕದಾಗಿದ್ದು, ವಿಶಾಲವಾದ ಹೈಟೆಕ್‌ ಬಸ್‌ ನಿಲ್ದಾಣವನ್ನು ಸಂತೆಮರಹಳ್ಳಿ ರಸ್ತೆಯ ರೇಷ್ಮೆ ಇಲಾಖೆ ಕಟ್ಟಡದ ಆವರಣದಲ್ಲಿ ನಿರ್ಮಿಸಲು ಅನುದಾನ.

ಕೈಗಾರಿಕಾ ಪ್ರದೇಶ ಅಭಿವೃದ್ಧಿ: ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ತಾಲೂಕಿನ ಬದನಗುಪ್ಪೆ- ಕೆಲ್ಲಂಬಳ್ಳಿ ಪ್ರದೇಶದಲ್ಲಿ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿ ಪಡಿಸಲು ಅನುದಾನ . ಕೃಷಿ ಕಾಲೇಜು ಕಟ್ಟಡಕ್ಕೆ ಅನುದಾನ: ಸರ್ಕಾರಿ ಕೃಷಿ ಕಾಲೇಜಿನ ನೂತನ ಕಟ್ಟಡಕ್ಕೆ ಅನುದಾನ.

ಕಳೆದ ಬಜೆಟ್‌ನಲ್ಲಿ ಘೋಷಿಸಲಾಗಿದ್ದ ಯೋಜನೆಗಳು
1. ಸಾಂಪ್ರದಾಯಿಕ ವಿಶ್ವ ವಿದ್ಯಾಲಯಗಳಿಗಿಂತ ಭಿನ್ನವಾದ, ಹೆಚ್ಚುವರಿ ಮಾನವ ಸಂಪನ್ಮೂಲ ಬಳಸದೇ ಕಾರ್ಯನಿರ್ವಹಿಸುವ, ವಾರ್ಷಿಕ ತಲಾ 2 ಕೋಟಿ ರೂ. ಆವರ್ತ ವೆಚ್ಚ ಬಳಕೆಯ ವಿನೂತನ ಮಾದರಿಯ ವಿಶ್ವವಿದ್ಯಾಲಯವನ್ನು ಜಿಲ್ಲೆಗೆ ಬೊಮ್ಮಾಯಿ ತಮ್ಮ ಬಜೆಟ್‌ನಲ್ಲಿ ಘೋಷಿಸಿದ್ದರು. ಇದು ಅನುಷ್ಠಾನಕ್ಕೆ ಬಂದಿಲ್ಲ.

2. ವಿದ್ಯಾರ್ಥಿನಿಯರಿಗೆ ಪ್ರಾಯೋಗಿಕವಾಗಿ ಮೆನ್‌ಸ್ಟ್ರೆಯಲ್‌ ಕಪ್‌ಗ್ಳನ್ನು ವಿತರಿಸಲಾಗುವುದು ಎಂದು ಬಜೆಟ್‌ನಲ್ಲಿ ಪ್ರಕಟಿಸಿದ್ದರು. ಜಿಲ್ಲೆಯ ಬಿಳಿಗಿರಿರಂಗನಬೆಟ್ಟದಲ್ಲಿ ಈ ಯೋಜನೆಗೆ ಚಾಲನೆ ನೀಡಲಾಯಿತು.

3. ಇನ್ನು ಗ್ರಾಮೀಣ ಪ್ರದೇಶಗಳಲ್ಲಿ ಮನೆ ಬಾಗಿಲಿಗೆ ಅತ್ಯುತ್ತಮ ವೈದ್ಯಕೀಯ ಸೇವೆ ಒದಗಿಸುವ ಸಲುವಾಗಿ, ಬೀದರ್‌, ಹಾವೇರಿ, ಚಿಕ್ಕಮಗಳೂರು ಹಾಗೂ ಚಾಮರಾಜನಗರ ಜಿಲ್ಲೆಗಳಿಗೆ ಮುಖ್ಯಮಂತ್ರಿ ಆರೋಗ್ಯ ವಾಹಿನಿ ಎಂಬ ಹೊಸ ಯೋಜನೆಯಡಿ ಸಂಚಾರಿ ಕ್ಲಿನಿಕ್‌ಗಳನ್ನು 11 ಕೋಟಿ ರೂ. ವೆಚ್ಚದಲ್ಲಿ ಸ್ಥಾಪಿಸುವುದಾಗಿ ಘೋಷಿಸಲಾಗಿತ್ತು. ಇದು ಜಿಲ್ಲೆಯಲ್ಲಿ ಜಾರಿಗೆ ಬಂದಿಲ್ಲ.

ಶಿಕ್ಷಣ ಮತ್ತು ಆರೋಗ್ಯ ಸೇವೆಗಳಿಗೆ ಹೆಚ್ಚಿನ ಒತ್ತು ನೀಡಬೇಕು. ಸ್ನಾತಕೋತ್ತರ ಕೋರ್ಸ್‌ಗಳ ಅಧ್ಯಯನಕ್ಕಾಗಿ ಮೈಸೂರು, ಮಂಗಳೂರು ವಿವಿಗಳಂತೆ ಪರಿಪೂರ್ಣವಾದ ಪ್ರತ್ಯೇಕ ವಿಶ್ವವಿದ್ಯಾಲಯವನ್ನು ಜಿಲ್ಲೆಯಲ್ಲಿ ಸ್ಥಾಪನೆ ಮಾಡಬೇಕು. ವನ್ಯಜೀವಿ ಮತ್ತು ಮಾನವ ಸಂಘರ್ಷ ತಡೆಗೆ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಯವರಲ್ಲಿ ಮನವಿ ಮಾಡುತ್ತೇನೆ.
●ಜಿ.ನಾರಾಯಣಪ್ರಸಾದ್‌, ಜಿಲ್ಲಾಧ್ಯಕ್ಷ, ಬಿಜೆಪಿ

ಚಾಮರಾಜನಗರ ಪಟ್ಟಣಕ್ಕೆ ಮಾಲಂಗಿಯಿಂದ ಪೈಪ್‌ ಅಳವಡಿಸಿ ನೀರು ತರುವ ಕಾವೇರಿ ಎರಡನೇ ಹಂತದ ಕುಡಿಯುವ ನೀರಿನ ಯೋಜನೆ, ರೇಷ್ಮೆ ಇಲಾಖೆ ಆವರಣದಲ್ಲಿ ಸುಸಜ್ಜಿತ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ, ಕೈಗಾರಿಕಾ ಪ್ರದೇಶ ಅಭಿವೃದ್ಧಿಗೆ ಅನುದಾನ ಕೇಳಿದ್ದೇನೆ. ಮುಖ್ಯಮಂತ್ರಿ ಯವರು ಈ ಬಜೆಟ್‌ನಲ್ಲಾದರೂ ಜಿಲ್ಲೆಗೆ ಆದ್ಯತೆ ನೀಡಬೇಕು.
●ಸಿ. ಪುಟ್ಟರಂಗಶೆಟ್ಟಿ, ಶಾಸಕ, ಚಾ.ನಗರ.

ಜಿಲ್ಲಾ ಕೇಂದ್ರದ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಬೇಕು. ಒಳಚರಂಡಿ ಯೋಜನೆ ಸಮರ್ಪಕವಾಗಿ ಪೂರ್ಣಗೊಂಡಿಲ್ಲ. ಹಾಗಾಗಿ ಅದಕ್ಕೆ ಹೆಚ್ಚುವರಿ ಅನುದಾನ ನೀಡಬೇಕು. ಕೆಲ್ಲಂಬಳ್ಳಿ ಕೈಗಾರಿಕಾ ಕೇಂದ್ರಕ್ಕೆ ಪೂರ್ಣಪ್ರಮಾಣದಲ್ಲಿ ಕೈಗಾರಿಕೆಗಳು ಬಂದಿಲ್ಲ. ಇದರ ಅಭಿವೃದ್ದಿಗೆ ಕ್ರಮ ಕೈಗೊಳ್ಳಬೇಕು. ಉದ್ಯೋಗ ಅವಕಾಶಗಳನ್ನು ಹೆಚ್ಚಿಸಬೇಕು.
●ಎನ್‌. ನಾಗಯ್ಯ, ಬಿಎಸ್‌ಪಿ ಜಿಲ್ಲಾಧ್ಯಕ್ಷ

ಕೆ.ಎಸ್‌. ಬನಶಂಕರ ಆರಾಧ್ಯ

Advertisement

Udayavani is now on Telegram. Click here to join our channel and stay updated with the latest news.

Next