Advertisement

ರಾಜ್ಯ ಬಜೆಟ್ 2022: ಜ್ವಲಂತ ಸಮಸ್ಯೆಗಳಿಗೆ ಸಿಗುವುದೇ ಮುಕ್ತಿ!

06:07 PM Mar 02, 2022 | Team Udayavani |

ಬಾಗಲಕೋಟೆ: ಉತ್ತರ ಕರ್ನಾಟಕದವರೇ ಆದ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ಬಳಿಕ ಮೊದಲ ಬಾರಿಗೆ ರಾಜ್ಯ ಸರ್ಕಾರದ ಆಯವ್ಯಯ ಮಂಡನೆ ಮಾಡಲಿದ್ದು, ಮುಳುಗಡೆ ಜಿಲ್ಲೆ ಬಾಗಲಕೋಟೆಯ ಹಲವು ಜ್ವಲಂತ ಸಮಸ್ಯೆಗಳಿಗೆ ಮುಕ್ತಿ ದೊರೆಯುತ್ತಾ ಎಂಬ ಬೆಟ್ಟದಷ್ಟು ನಿರೀಕ್ಷೆ ಜಿಲ್ಲೆಯ ಜನರಲ್ಲಿದೆ.

Advertisement

ಹೌದು, ನೀರಾವರಿಗಾಗಿ ತ್ಯಾಗ ಮಾಡಿದ ಜಿಲ್ಲೆ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಬಾಗಲಕೋಟೆ, ಇಂದಿಗೂ ಹಲವಾರು ಸಮಸ್ಯೆ ಎದುರಿಸುತ್ತಲೇ ಇದೆ. ಊರು ಮುಳುಗಡೆಯಾದರೂ, ಇನ್ನೊಂದಷ್ಟು ಭೂಮಿ ಉಳಿದಿದ್ದು, ಜನರು ಹಳೆಯ ಊರಲ್ಲೇ ವಾಸಿಸುವ ಅನಿವಾರ್ಯತೆ ಇದೆ. ಹೀಗಾಗಿ ಆಲಮಟ್ಟಿ ಜಲಾಶಯವನ್ನು ಈಗಿರುವ 519.60 ಮೀಟರ್‌ ನಿಂದ 524.256 ಮೀಟರ್‌ಗೆ ಎತ್ತರಿಸಿ, ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಇದೆ.

ಈ ಕಾರ್ಯ ಒಂದೇ ವರ್ಷದಲ್ಲಿ ಆಗಲು ಸಾಧ್ಯವಿಲ್ಲ. ಆದರೆ ಸರ್ಕಾರ ಮನಸ್ಸು ಮಾಡಿದರೆ ಕನಿಷ್ಠ ಮೂರು ವರ್ಷಗಳಲ್ಲಿ ಮುಗಿಸಲು ಸಾಧ್ಯವಿದೆ. ಕೃಷ್ಣಾ ಮೇಲ್ದಂಡೆ ಯೋಜನೆಯ 3ನೇ ಹಂತದ ಮುಳುಗಡೆ, ಪರಿಹಾರ, ಪುನರ್‌ವಸತಿ ಕೇಂದ್ರ ನಿರ್ಮಾಣ ಸೇರಿದಂತೆ ಎಲ್ಲಾ ರೀತಿಯ ಕಾಮಗಾರಿ ಕೈಗೊಳ್ಳಲು ಕನಿಷ್ಠ 1ಲಕ್ಷ ಕೋಟಿ ಬೇಕಾಗಬಹುದು ಎಂಬ ಅಂದಾಜು ಮಾಡಲಾಗಿದೆ.

ಇದು ಪ್ರತಿವರ್ಷ ತಡವಾದಂತೆ ಯೋಜನಾವೆಚ್ಚವೂ ಹೆಚ್ಚಾಗುತ್ತದೆ. ಆದ್ದರಿಂದ ರಾಜ್ಯ ಸರ್ಕಾರ ಮೂರು ವರ್ಷಗಳ ಗುರಿ ಹಾಕಿಕೊಂಡು, ಪ್ರತಿ ಬಜೆಟ್‌ನಲ್ಲಿ ತಲಾ 35 ಕೋಟಿಯಂತೆ ಮೂರು ವರ್ಷ ನಿರಂತರವಾಗಿ ಅನುದಾನ ಕೊಡಬೇಕು. ಜತೆಗೆ ಯುಕೆಪಿ ಕಚೇರಿಯಲ್ಲಿ ಖಾಲಿ ಇರುವ ಭೂಸ್ವಾಧೀನಾಧಿಕಾರಿಗಳು, ಪುನರ್‌ ವಸತಿ ಅಧಿಕಾರಿಗಳ, ಸರ್ವೇಯರ್‌ಗಳ ಹುದ್ದೆಯೂ ಭರ್ತಿ ಮಾಡಬೇಕು. ಆಗ ಅಂದುಕೊಂಡಂತೆ ಯೋಜನೆ ಪೂರ್ಣಗೊಳ್ಳಲು ಸಾಧ್ಯ ಎಂಬುದು ಮುಳುಗಡೆ ಹೋರಾಟ ಸಮಿತಿ ಪ್ರಮುಖ ಪ್ರಕಾಶ ಅಂತರಗೊಂಡ ಅವರ ಒತ್ತಾಯ.

ಇನ್ನು ಸುಮಾರು ಒಂದು ಶತಕದ ಬೇಡಿಕೆಯಾಗಿ ರುವ, ಕಳೆದ 2010ರಿಂದ ಕುಂಟುತ್ತಲೇ ಸಾಗಿರುವ ಬಾಗಲಕೋಟೆ-ಕುಡಚಿ ರೈಲ್ವೆ ಮಾರ್ಗ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ಅನುದಾನ ಕೊರತೆಯಿಂದ ನಿಂತಿದೆ. ಸದ್ಯ ಜಮಖಂಡಿ ಉಪ ವಿಭಾಗ ವ್ಯಾಪ್ತಿಯಲ್ಲಿ ಇನ್ನೂ ಸುಮಾರು 510 ಎಕರೆಗೂ ಅಧಿಕ ಭೂಸ್ವಾಧೀನಕ್ಕೆ ಸುಮಾರು 110 ಕೋಟಿ ಅನುದಾನ ಬೇಕಿದೆ. ಇದನ್ನು ಇದೇ ಬಜೆಟ್‌ನಲ್ಲಿ ರಾಜ್ಯ ಸರ್ಕಾರ ಮೀಸಲಿಡಬೇಕು ಎಂಬುದು ರೈಲ್ವೆ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಕುತುಬುದ್ದಿನ್‌ ಖಾಜಿ ಅವರು ಹಲವು ಬಾರಿ ಒತ್ತಾಯಿಸುತ್ತಿದ್ದಾರೆ. ಇದಕ್ಕೆ ಬೊಮ್ಮಾಯಿ ಸರ್ಕಾರ, ಅನುದಾನ ಕೊಡುತ್ತಾ ಎಂಬ ನಿರೀಕ್ಷೆ ಇದೆ.

Advertisement

ಆಲಮಟ್ಟಿ ಜಲಾಶಯವನ್ನು 524.256 ಮೀಟರ್‌ ಮೀಟರ್‌ಗೆ ಎತ್ತರಿಸಿದಾಗ ಬಾಗಲಕೋಟೆ ನಗರದ ಕಿಲ್ಲಾ ಪ್ರದೇಶ ನಡುಗಡ್ಡೆಯಾಗಲಿದೆ. ಇಲ್ಲಿನ ಸುಮಾರು 1 ಸಾವಿರಕ್ಕೂ ಮನೆಗಳಿಗೆ ಪರಿಹಾರ ನೀಡಿ, ಪುನರ್‌ ವಸತಿ ಕಲ್ಪಿಸಬೇಕೆಂಬ ಬೇಡಿಕೆ ಕೂಡ ಈಡೇರಿಲ್ಲ. ಮುಖ್ಯವಾಗಿ ಐತಿಹಾಸಿಕ ಪ್ರವಾಸಿ ತಾಣ ಐಹೊಳೆ ಸ್ಥಳಾಂತರ ಬೇಡಿಕೆಗೂ ಮತ್ತೆ ಮರುಜೀವ ಬಂದಿದ್ದು, ಈ ಕುರಿತು ಶಾಸಕ ಡಾ|ವೀರಣ್ಣ ಚರಂತಿಮಠ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಮಹತ್ವದ ಸಭೆ ಎರಡು ದಿನಗಳ ಹಿಂದಷ್ಟೇ ನಡೆದಿದೆ. ಇದಕ್ಕಾಗಿ ಅಗತ್ಯ ಇರುವ ಅನುದಾನ ಇದೇ ಬಜೆಟ್‌ನಲ್ಲಿಡಲಿ ಎಂಬುದು ಐಹೊಳೆ ಜನರ ಒತ್ತಾಯ.

ಜಿಲ್ಲೆಯ ಬೀಳಗಿ ಮತ್ತು ಮುಧೋಳ ಕ್ಷೇತ್ರ ಪ್ರತಿನಿಧಿಸುವ ಗೋವಿಂದ ಕಾರಜೋಳ ಮತ್ತು ಮುರುಗೇಶ ನಿರಾಣಿ ಅವರು ಸರ್ಕಾರದ ಪ್ರಮುಖ ಖಾತೆಗಳ ಸಚಿವರಾಗಿದ್ದಾರೆ. ಕೃಷ್ಣಾ ಮೇಲ್ದಂಡೆ ಯೋಜನೆಗೆ ವೇಗ ಕೊಡಬಲ್ಲ ಕಾರಜೋಳರೇ ಜಲ ಸಂಪನ್ಮೂಲ ಸಚಿವರೂ ಆಗಿದ್ದಾರೆ. ಹೀಗಾಗಿ ಯುಕೆಪಿಗೆ ಈ ಬಾರಿ ಹೆಚ್ಚು ಅನುದಾನ ಬರಲಿದೆ ಎಂಬ ನಿರೀಕ್ಷೆ ಬಹಳಷ್ಟಿದೆ. ಅಲ್ಲದೇ ಜಿಲ್ಲೆಯ ಪ್ರವಾಸಿ ತಾಣಗಳ ಸಮಗ್ರ ಅಭಿವೃದ್ಧಿಗೆ 500 ಕೋಟಿ ಮೊತ್ತದ ಪ್ಯಾಕೇಜ್‌. ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಅನುದಾನ. ಗುಳೇ¨ ‌ಗುಡ್ಡ-ರಬಕವಿ-ಬನಹಟ್ಟಿಯಲ್ಲಿ ನೇಕಾರರಿಗಾಗಿ ಜವಳಿ ಪಾರ್ಕ್‌. ಕೈಗಾರಿಕೆ ಸ್ಥಾಪನೆ, ತೋಟಗಾರಿಕೆ ವಿವಿಗೆ ಕನಿಷ್ಠ
100 ಕೋಟಿ ಅನುದಾನ. ಕೃಷ್ಣಾ ಭಾಗ್ಯ ಜಲ ನಿಗಮದ ಎಂಡಿ ಕಚೇರಿಗೆ ಆಲಮಟ್ಟಿಗೆ ಸ್ಥಳಾಂತರಕ್ಕೆ ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ.

ಬಾದಾಮಿಗೆ ಬಹು ಬೇಡಿಕೆ ಸಲ್ಲಿಸಿದ ಸಿದ್ದು
ಮಾಜಿ ಸಿಎಂ, ಬಾದಾಮಿ ಕ್ಷೇತ್ರದ ಶಾಸಕರೂ ಆಗಿರುವ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ತಾವು ಪ್ರತಿನಿಧಿಸುವ ಕ್ಷೇತ್ರದ ಹಲವು ಬೇಡಿಕೆಗಳಿಗೆ ಅನುದಾನ ಒದಗಿಸಲು ಸಿಎಂ ಹಾಗೂ ಸಂಬಂಧಿಸಿದ ಸಚಿವರಿಗೆ ಪತ್ರ ಬರೆದಿದ್ದಾರೆ. ಬನಶಂಕರಿ ಕ್ಷೇತ್ರ, ಪಟ್ಟದಕಲ್ಲ, ಮಹಾಕೂಟ ಸಹಿತ ಕ್ಷೇತ್ರ ವ್ಯಾಪ್ತಿಯ ಪ್ರವಾಸಿ ತಾಣಗಳ ಸಮಗ್ರ ಅಭಿವೃದ್ಧಿಗೆ 1 ಸಾವಿರ ಕೋಟಿ, ಮಲಪ್ರಭಾ ನದಿ ಪಾತ್ರದ ವಿವಿಧೆಡೆ ಸೇತುವೆ ಸಹಿತ ಬ್ಯಾರೇಜ್‌ ನಿರ್ಮಾಣಕ್ಕೆ 150 ಕೋಟಿ, ಚಾಲುಕ್ಯ ಅಭಿವೃದ್ಧಿ ಪ್ರಾಧಿಕಾರಕ್ಕೆ 25 ಕೋಟಿ, ಬಾದಾಮಿಯಲ್ಲಿ ಬಹುಮಹಡಿ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ 25 ಕೋಟಿ, ಕೆರೂರಿನಲ್ಲಿ ನಗರ ಭೂ ಮಾಪನ ಕಚೇರಿ ಸ್ಥಾಪನೆ, ಗುಳೇದಗುಡ್ಡದಲ್ಲಿ ಹೈನುಗಾರಿಕೆ ಕಾಲೇಜು ಸ್ಥಾಪನೆ, ಪ್ರವಾಸಿ ತಾಣಗಳಲ್ಲಿ ಟ್ರಿ ಪಾರ್ಕ್‌ ನಿರ್ಮಾಣಕ್ಕೆ 100 ಕೋಟಿ, ಬಾದಾಮಿಯಲ್ಲಿ ತಾಂತ್ರಿಕ ಕಾಲೇಜ್‌, ಗುಳೇದಗುಡ್ಡದಲ್ಲಿ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜ್‌, ಬಾದಾಮಿಯಲ್ಲಿ ಮಲ್ಟಿ ಸ್ಪೇಶಾಲಿಟಿ ಆಸ್ಪತ್ರೆ ಸ್ಥಾಪನೆ ಹೀಗೆ ಹಲವು ಯೋಜನೆಗಳಿಗೆ ಅಗತ್ಯ ಅನುದಾನ ಒದಗಿಸಲು ಕೋರಿದ್ದಾರೆ.

*ಶ್ರೀಶೈಲ ಕೆ. ಬಿರಾದಾರ

Advertisement

Udayavani is now on Telegram. Click here to join our channel and stay updated with the latest news.

Next