ಸಾಕಷ್ಟು ಸವಾಲು, ಆರ್ಥಿಕ ಇತಿಮಿತಿ ನಡುವೆಯೂ 2021-22ನೇ ಸಾಲಿಗೆ ವಾಸ್ತವಕ್ಕೆ ಹತ್ತಿರವಾಗಿರುವ ಬಜೆಟ್ ಮಂಡಿಸಲು ಸಿಎಂ ಯಡಿಯೂರಪ್ಪ ಅವರು ಪ್ರಯತ್ನ ನಡೆಸಿರುವುದು ಕಾಣುತ್ತದೆ. ಬಜೆಟ್ ಗಾತ್ರವನ್ನು ಅನಗತ್ಯವಾಗಿ ಹಿಗ್ಗಿಸದೆ, ಅವಾಸ್ತವಿಕವಾಗಿ ಆದಾಯ ನಿರೀಕ್ಷಿಸದೆ, ವಾಸ್ತವತೆಗೆ ಪೂರಕವಾಗಿ ರಾಜಸ್ವ ನಿರೀಕ್ಷಿಸುವ ಮೂಲಕ ನೈಜತೆಗೆ ಮಹತ್ವ ನೀಡಿರುವುದನ್ನು ತೋರಿಸುತ್ತದೆ.
ಪ್ರತಿವರ್ಷ ಅಬಕಾರಿ ತೆರಿಗೆಯಿಂದ ನಿರೀಕ್ಷಿತ ಆದಾಯ ಸಂಗ್ರಹವಾಗುತ್ತಿರುವುದರಿಂದ ಮುಂದಿನ ಸಾಲಿನಲ್ಲಿ 24,580 ಕೋಟಿ ರೂ. ನಿರೀಕ್ಷಿಸಿರುವುದು ಸೂಕ್ತವಾಗಿದೆ. 35 ಲಕ್ಷ ರೂ.ನಿಂದ 45 ಲಕ್ಷ ರೂ.ವರೆಗಿನ ಮೌಲ್ಯದ ಫ್ಲ್ಯಾಟ್‌ಗಳ ಮೊದಲ ನೋಂದಣಿ ಮುದ್ರಾಂಕ ಶುಲ್ಕವನ್ನು ಶೇ. 5ರಿಂದ ಶೇ. 3ಕ್ಕೆ ಇಳಿಕೆ ಮಾಡುವ ಪ್ರಸ್ತಾವ ಸ್ವಾಗತಾರ್ಹ. ಇದರಿಂದ ಮುದ್ರಾಂಕ ಮತ್ತು ನೋಂದಣಿ ಶುಲ್ಕದ ಆದಾಯ ಹೆಚ್ಚಾಗುವ ನಿರೀಕ್ಷೆ ಮೂಡಿಸಿದೆ. ಮೂರ್‍ನಾಲ್ಕು ತಿಂಗಳಿನಿಂದ ದೇಶಾದ್ಯಂತ ಜಿಎಸ್‌ಟಿ ಸಂಗ್ರಹಚೇತರಿಕೆಯಾಗಿದ್ದು, ಅದರ ಆಧಾರದ ಮೇಲೆ ರಾಜ್ಯದಲ್ಲಿ ಮುಂದಿನ ಹಣಕಾಸು ವರ್ಷದಲ್ಲಿ 76,473 ಕೋಟಿ ರೂ. ವಾಣಿಜ್ಯ ತೆರಿಗೆ ಆದಾಯ ನಿರೀಕ್ಷಿಸಲಾಗಿದೆ. ಪ್ರಸಕ್ತ ಸಾಲಿಗೆ ಹೋಲಿಸಿದರೆ ಮುಂದಿನ ವರ್ಷ ವಾಣಿಜ್ಯ ತೆರಿಗೆ ನಿರೀಕ್ಷೆಯಲ್ಲಿ 6000 ಕೋಟಿ ರೂ.ನಷ್ಟು ಇಳಿಕೆಯಾಗಿದ್ದರೂ ವಾಸ್ತವಕ್ಕೆ ಸಮೀಪವಿರುವಂತೆ ಕಾಣುತ್ತಿದೆ.
ಸಂಪನ್ಮೂಲ ಕ್ರೋಢೀಕರಣದ ರೂಪದಲ್ಲೇವೆಚ್ಚ ಕ್ರೋಢೀಕರಣಕ್ಕೂ ಒತ್ತು ನೀಡುವ ಅಗತ್ಯವಿತ್ತು. ಉದಾಹರಣೆಗೆ, ಹೆಚ್ಚುವರಿಯಾಗಿ50 ಕರ್ನಾಟಕ ಪಬ್ಲಿಕ್ ಶಾಲೆ ಆರಂಭಿಸುವ ಪ್ರಸ್ತಾಪವಾಗಿದೆ. ಸಮಾಜ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ ಸೇರಿದಂತೆ ಇತರೆ ಇಲಾಖೆಗಳು ಪ್ರತ್ಯೇಕವಾಗಿ ಇಂತಹ ಶಾಲೆ ನಡೆಸುವ ಬದಲಿಗೆಶಿಕ್ಷಣ ಇಲಾಖೆಯೊಂದೇ ನಡೆಸಿ ಸಂಬಂಧಪಟ್ಟ ಇಲಾಖೆಗಳು ಅನುದಾನ ವರ್ಗಾಯಿಸಿದರೆ ವೆಚ್ಚ ಕ್ರೋಢೀಕರಣಕ್ಕೂ ನೆರವಾಗಲಿದೆ.
7.5ರಿಂದ 8 ಅಂಕ :
ಬದ್ಧತಾ ವೆಚ್ಚಗಳು ಹೆಚ್ಚಾಗುತ್ತಿದ್ದು, ಅದಕ್ಕೆ ಕಡಿವಾಣ ಹಾಕುವ ಅನಿವಾರ್ಯತೆಯೂ ಇದೆ. ಸಾಲ ಪ್ರಮಾಣಹೆಚ್ಚಾದಂತೆ ಬಡ್ಡಿ ಪಾವತಿಯೂಹೊರೆಯಾಗುತ್ತಿದ್ದು, ಈ ಬಗ್ಗೆಯೂ ಎಚ್ಚರ ವಹಿಸಬೇಕಾಗುತ್ತದೆ. ಒಟ್ಟಾರೆ ಸದ್ಯದ ಆರ್ಥಿಕ ಪರಿಸ್ಥಿತಿಯಲ್ಲಿ ವಾಸ್ತವಕ್ಕೆ ಹತ್ತಿರವಾದ ಅಂದಾಜುಗಳನ್ನು ಆಧರಿಸಿದ ಬಜೆಟ್ ಮಂಡನೆಯಾಗಿದೆ. 10 ಅಂಕಗಳಿಗೆ 7.5ರಿಂದ 8 ಅಂಕ ನೀಡಬಹುದಾಗಿದೆ.
ಬಿ.ವಿ. ಮಧುಸೂದನ ರಾವ್
ಹಿರಿಯ ಸಂಶೋಧನಾ
ಸಲಹೆಗಾರರು, ಆಯವ್ಯಯ
ಮತ್ತು ನೀತಿ ಅಧ್ಯಯನ ಕೇಂದ್ರ