ಸಕಲೇಶಪುರ: ಮಲೆನಾಡು ಭಾಗವಾದ ತಾಲೂಕು ಈ ಬಾರಿ ರಾಜ್ಯ ಬಜೆಟ್‌ನಲ್ಲಿ ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಅತ್ಯಂತ ಜಟಿಲ ಸಮಸ್ಯೆಯಾದ ಕಾಡಾನೆ ಹಾವಳಿ ತಡೆಗೆ ರಾಜ್ಯ ಬಜೆಟ್‌ನಲ್ಲಾದರೂ ಪರಿಹಾರ ಸಿಗಬಹುದೆಂದು ನಿರೀಕ್ಷೆ ಹುಸಿಯಾಗಿದೆ.
ಈ ಹಿಂದಿನ ಕೇಂದ್ರ ಬಜೆಟ್‌ನಲ್ಲಿ ಸಾಕಷ್ಟು ನಿರಾಶೆಗೊಂಡಿದ್ದ ಮಲೆನಾಡಿಗರು, ರಾಜ್ಯ ಬಜೆಟ್ ನೋಡಿ ಆಕ್ರೋಶಗೊಂಡಿದ್ದಾರೆ.ಹಲವು ವರ್ಷಗಳಿಂದ ಕಾಡಾನೆಹಾವಳಿಯಿಂದ ನಿಲುಗಿರುವ ಕಾಫಿ, ಭತ್ತ, ಮೆಣಸು, ಅಡಕೆ ಬೆಳೆಗಾರರು ಮುಖಕ್ಕೆ ಹಣಕಾಸು ಖಾತೆಯೂ ಹೊಂದಿರುವ ಸಿಎಂ ಯಡಿಯೂರಪ್ಪ ತಣ್ಣೀರು ಎರಚಿದ್ದಾರೆ.
ಮುಂದಿನ ದಿನಗಳಲ್ಲಿ ಕಾಡಾನೆಯಿಂದ ಸಾವು ನೋವು ಸಂಭವಿಸಿದಲ್ಲಿ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಜನ ದೊಡ್ಡ ಮಟ್ಟದಲ್ಲಿಹೋರಾಟಕ್ಕೆ ಇಳಿಯುವುದರಲ್ಲಿ ಯಾವುದೇ ಅನುಮಾನವಿಲ್ಲ.
ಎತ್ತಿನಹೊಳೆಗೆ ಅನುದಾನ ನಿರೀಕ್ಷೆ: ಬಯಲುಸೀಮೆಯ ಬಹು ನಿರೀಕ್ಷಿತಎತ್ತಿನಹೊಳೆ ಯೋಜನೆಗೆ ತಾಲೂಕಿನಲ್ಲಿಶೇ.85 ಭೂಸ್ವಾಧೀನ ಮುಗಿದಿದೆ. ಕೆಲವರು ನ್ಯಾಯಾಲಯಕ್ಕೆ ಹೋಗಿರುವುದರಿಂದ ಅಂತಹ ಪ್ರಕರಣಗಳನ್ನು ಮಾತ್ರ ಬಗೆಹರಿಸಿಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸಲು ಅನುದಾನ ದೊರಕುವ ಸಾಧ್ಯತೆಯಿದೆ.
ತಾಲೂಕಿನ ಪ್ರವಾಸಿ ತಾಣಗಳ ಕಡೆಗಣನೆ : ಅತಿವೃಷ್ಟಿ ಹಾಗೂ ಅಕಾಲಿಕ ಮಳೆಯಿಂದ ಕಾಫಿ ಬೆಳೆಗಾರರು ತತ್ತರಿಸಿದ್ದು, ಅವರ ಅನುಕೂಲಕ್ಕೂ ಯಾವುದೇ ಅನುದಾನ ದೊರಕಿಲ್ಲ. ಏಲಕ್ಕಿ ಬೆಳೆಗಾರರ ಹಿತ ರಕ್ಷಣೆಗೂ ಯಾವುದೇ ಪ್ರಸ್ತಾಪವಿಲ್ಲ. ತಾಲೂಕಿನಲ್ಲಿ ಹಲವು ಪ್ರವಾಸಿತಾಣ ಗಳಿವೆ. ಆದರೆ, ಇವುಗಳನ್ನು ಅಭಿವೃದ್ಧಿಪಡಿಸಲು ಪ್ರವಾಸೋದ್ಯಮ ಇಲಾಖೆಗೆಯಾವುದೇ ಅನುದಾನ ನೀಡಿಲ್ಲ. ಬಿಸಿಲೆಘಾಟ್, ಮಂಜ್ರಾಬಾದ್ ಕೋಟೆಯಂತಹ ದೊಡ್ಡ ಪ್ರವಾಸಿ ತಾಣಗಳ ಅಭಿವೃದ್ಧಿಗೂ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ. ಒಟ್ಟಾರೆಯಾಗಿ ತಾಲೂಕಿನ ಮಟ್ಟಿಗೆ ಈ ಬಜೆಟ್ ನೀರಸ ಬಜೆಟ್ ಆಗಿದೆ.
ಅಭಿವೃದ್ಧಿಗೆ ಪ್ರೋತ್ಸಾಹ ನೀಡದ ಸಾಮಾನ್ಯ ಬಜೆಟ್ ಇದಾಗಿದೆ. ಬಡವರ, ರೈತರ, ಕಾರ್ಮಿಕರ ಏಳಿಗೆಗೆ ನಿರ್ದಿಷ್ಟ ಅನು ದಾನ ಇಲ್ಲ. ಜೊತೆಗೆ ರಾಜ್ಯದ ಪ್ರಗತಿಗೂ ವಿಶೇಷ ಕಾರ್ಯಕ್ರಮವಿಲ್ಲ. ಪರಿಶಿಷ್ಟಿ ಜಾತಿ, ಪಂಗಡಕ್ಕೆ ಅನುದಾನ ಕಡಿಮೆಯಾಗಿದೆ.
– ಎಚ್.ಕೆ.ಕುಮಾರಸ್ವಾಮಿ, ಶಾಸಕ
ಕಾಡಾನೆ ಸಮಸ್ಯೆಯನ್ನು ಸಂಪೂರ್ಣವಾಗಿ ಬಜೆಟ್‌ನಲ್ಲಿ ನಿರ್ಲಕ್ಷಿಸಲಾಗಿದೆ. ಜೊತೆಗೆ ಕಾಫಿ ಹಾಗೂ ಏಲಕ್ಕಿ ಬೆಳೆಗಾರರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಈ ಬಜೆಟ್‌ನಿಂದ ಮಲೆನಾಡು ಭಾಗಕ್ಕೆ ಯಾವುದೇ ಉಪಯೋಗವಾಗಿಲ್ಲ.
–ಕೌಡಹಳ್ಳಿ ಲೋಹಿತ್, ಟಿಎಪಿಸಿಎಂಎಸ್ ಅಧ್ಯಕ್ಷ, ಕಾಂಗ್ರೆಸ್ ಮುಖಂಡ