Advertisement
ಕಳೆದ ಎರಡ್ಮೂರು ಬಜೆಟ್‌ಗಳಲ್ಲಿಯೂ ಜಿಲ್ಲೆಗೆ ಗುರುತರವಾದ ಕೊಡುಗೆ ಸಿಕ್ಕಿಲ್ಲ. ಪ್ರಸ್ತುತ ಕೋವಿಡ್ ನಂತರ ಮಂಡನೆಯಾದ ಬಜೆಟ್ ನಲ್ಲಾದರೂ ಜಿಲ್ಲೆಯ ಆರ್ಥಿಕ, ಸಾಮಾಜಿಕ,ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರ ಪುನಶ್ಚೇತನಕ್ಕೆ ಪೂರಕ ವಿಶೇಷ ಸೌಲಭ್ಯಗಳು ಸಿಗಬಹುದು. ಅದರಲ್ಲಿಯೂ ಪ್ರಸ್ತುತ ಸ್ಥಳೀಯವಾಗಿ ಸಚಿವರಿಲ್ಲದ ಜಿಲ್ಲೆಯ (ಉಸ್ತುವಾರಿ ಸಚಿವರು ಬೇರೆ ಜಿಲ್ಲೆಯವರು) ಬಗ್ಗೆ ಸ್ವತಃ ಮುಖ್ಯಮಂತ್ರಿಯವರೇ ಮುತುವರ್ಜಿ ವಹಿಸಿ, ಅನೇಕ ವಿಶೇಷ ಕೊಡುಗೆ ನೀಡಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಆ ನಿರೀಕ್ಷೆಗಳೆಲ್ಲವೂ ಹುಸಿಯಾಗಿವೆ.
Related Articles
Advertisement
ಹುಸಿಯಾದ ನಿರೀಕ್ಷೆಗಳು: ಈ ಬಾರಿಯ ಬಜೆಟ್‌ನಲ್ಲಿ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರಾಗಬಹುದು. ಬಹುದಿನಗಳ ಬೇಡಿಕೆಯಾದ ವಿಮಾನ ನಿಲ್ದಾಣದ ಬಗ್ಗೆ ಪ್ರಸ್ತಾಪವಾಗಬಹುದು. ಮಾಯಕೊಂಡಹೊಸ ತಾಲೂಕಾಗಬಹುದು. ಮೆಕ್ಕೆಜೋಳದ ಕಣಜ ಖ್ಯಾತಿಯ ಜಿಲ್ಲೆಯಲ್ಲಿ ಮೆಕ್ಕೆಜೋಳ ಸಂಸ್ಕರಣ ಘಟಕ ಇಲ್ಲವೇ ಕೃಷಿ ಉತ್ಪನ್ನ ಪೂರಕ ಕೈಗಾರಿಕೆ, ಉದ್ದಿಮೆಗಳ ಸ್ಥಾಪನೆಯಾದೀತು. ಚಿಗಟೇರಿ ಜಿಲ್ಲಾಸ್ಪತ್ರೆ ಮತ್ತು ಸುತ್ತಮುತ್ತಲಿನ ಜಿಲ್ಲೆಯ ಜನರ ಪ್ರಮುಖ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸಬಹುದು. ಜಿಲ್ಲೆಯ ಕಾಡಜ್ಜಿಯ ಕೃಷಿ ತರಬೇತಿ ಕೇಂದ್ರದಲ್ಲಿ ಕೃಷಿ ಕಾಲೇಜು ಘೋಷಿಸಬಹುದು. ಜಿಲ್ಲೆಗೆ ಪ್ರತ್ಯೇಕಹಾಲು ಒಕ್ಕೂಟ ಕಾರ್ಯಾರಂಭಕ್ಕೆ ಅನುದಾನ ಘೋಷಿಸಬಹುದು ಸೇರಿದಂತೆ ಹತ್ತು ಹಲವು ಜನರ ನಿರೀಕ್ಷೆಗಳು ಹುಸಿಯಾಗಿವೆ.
ಒಟ್ಟಾರೆ ಈ ಬಾರಿಯ ಬಜೆಟ್ ಕೂಡ ಜಿಲ್ಲೆಯ ಜನರ ಹತ್ತು ಹಲವು ನಿರೀಕ್ಷೆಗಳನ್ನು ಹುಸಿಗೊಳಿಸುವ ಮೂಲಕ ನಿರಾಶಾದಾಯಕವಾಗಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.
ಸಚಿವರಿಲ್ಲ ಎಂಬುದೂ ಹಿನ್ನಡೆ :
ಬಜೆಟ್‌ನಲ್ಲಿ ಜಿಲ್ಲೆಗೆ ವಿಶೇಷ ಕೊಡುಗೆಗಳು ಸಿಗದೆ ಇರಲು ಜಿಲ್ಲೆಯ ಶಾಸಕರಾರೂ ಸಚಿವ ಸಂಪುಟದಲ್ಲಿಲ್ಲ ಎನ್ನುವುದು ಸಹ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಸಚಿವ ಸಂಪುಟದಲ್ಲಿ ಜಿಲ್ಲೆಯ ಸಮಸ್ಯೆ, ಬೇಡಿಕೆಗಳ ಬಗ್ಗೆ ಜ್ಞಾನವಿರುವ, ಕಾಳಜಿ ಇರುವ ಜಿಲ್ಲೆಯ ಸಚಿವರು ಇದ್ದಿದ್ದರೆ ಜಿಲ್ಲೆಗೆ ಇನ್ನಷ್ಟು ಹೆಚ್ಚಿನ ಕೊಡುಗೆಗಳನ್ನು ನಿರೀಕ್ಷಿಸಬಹುದಿತ್ತು. ಜಿಲ್ಲೆಯ ಒಟ್ಟು ಏಳು ವಿಧಾನಸಭೆ ಕ್ಷೇತ್ರಗಳಲ್ಲಿ ಐವರು ಬಿಜೆಪಿ ಶಾಸಕರಿದ್ದಾರೆ. ಆದರೆ, ಸಚಿವ ಸಂಪುಟದಲ್ಲಿ ಒಬ್ಬರಿಗೂ ಮಂತ್ರಿ ಸ್ಥಾನ ಸಿಕ್ಕಿಲ್ಲ. ಬೇರೆ ಜಿಲ್ಲೆಯವರನ್ನು ಉಸ್ತುವಾರಿ ಸಚಿವರನ್ನಾಗಿ (ಭೈರತಿ ಬಸವರಾಜ್)ಮಾಡಲಾಗಿದೆ. ಸಹಜವಾಗಿ ಅವರಿಂದ ಹೆಚ್ಚಿನ ಸೌಲಭ್ಯ, ಸರ್ಕಾರದ ಮೇಲೆ ಒತ್ತಡ ನಿರೀಕ್ಷಿಸಲು ಸಾಧ್ಯವಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.
ಮುಖ್ಯಮಂತ್ರಿ ಯಡಿಯೂರಪ್ಪ ಈ ಬಾರಿಯ ಬಜೆಟ್ ನಲ್ಲಿ ಮಹಿಳಾ ಉದ್ಯಮಕ್ಕೆ ಹೆಚ್ಚಿನ ರೀತಿಯಲ್ಲಿ ಸೌಲಭ್ಯ ಕೊಟ್ಟಿದ್ದಾರೆ. ಸರ್ಕಾರಿ ಮೆಡಿಕಲ್ ಕಾಲೇಜು ತೆರೆಯಲು ಕಳೆದ ವರ್ಷದ ಬಜೆಟ್‌ನಲ್ಲಿ ಹೇಳಿದ್ದರು. ಈ ವರ್ಷದ ಬಜೆಟ್‌ನಲ್ಲಿ ಸಹ ಹೇಳಿರುವ ಬಗ್ಗೆ ಹೆಚ್ಚಿನಗಮನ ಹರಿಸಬೇಕು. ವ್ಯಾಟ್‌ನಲ್ಲಿ 2014-15 ರಿಂದ 2017 ಜೂನ್ ತಿಂಗಳವರೆಗಿನ ಲೆಕ್ಕ ಪರಿಶೋಧನೆಯಲ್ಲಿ ಹಾಕುವ ದಂಡಮತ್ತು ಬಡ್ಡಿಯನ್ನು ಕರಸಮಾಧಾನದ ಅಡಿಯಲ್ಲಿ ಜಾರಿಗೆ ತಂದಿದ್ದು, ಸುಮಾರು 76,500.00 ಕೋಟಿ ತೆರಿಗೆ ಹಣ ಸರ್ಕಾರಕ್ಕೆ ಸಂದಾಯವಾಗಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ. ವ್ಯಾಪಾರಸ್ಥರಿಗೆ ಅನುಕೂಲಕರವಾಗಿದೆ. ಒಟ್ಟಿಗೆ ರಾಜ್ಯ ಬಜೆಟ್ 6ಕ್ಕೆ ಏರಲಿಲ್ಲ 3ಕ್ಕೆ ಇಳಿಯಲಿಲ್ಲ ಎನ್ನುವಂತಿದೆ.-ರಾಧೇಶ್ ಜಂಬಗಿ, ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷ
ಸಿಎಂ ಯಡಿಯೂರಪ್ಪನವರು ಮಂಡಿಸಿದ 2021-22 ನೇ ಸಾಲಿನ ಬಜೆಟ್ ನಾಡಿನ ಜನರ ಸರ್ವವ್ಯಾಪಿ ಹಾಗೂ ಸರ್ವಸ್ಪರ್ಶಿ, ಘೋಷಣೆಯೊಂದಿಗೆ, ಎಲ್ಲ ಕ್ಷೇತ್ರಗಳಿಗೆ ಸಮತೋಲಿತವಾಗಿ ಸಮೃದ್ಧ ಕರ್ನಾಟಕದ ವಿಕಾಸಕ್ಕಾಗಿ ದಿಟ್ಟ ಹೆಜ್ಜೆಯಾಗಿದೆ. ದಾವಣಗೆರೆಗೆ 50 ಹಾಸಿಗೆ ಸಾಮರ್ಥಯದ ಜಯದೇವ ಹೃದ್ರೋಗ ಆಸ್ಪತ್ರೆಯ ಉಪ ಕೇಂದ್ರ ಸ್ಥಾಪಿಸಲು 20 ಕೋಟಿ ಅನುದಾನ ನೀಡಿದ್ದಾರೆ. ವಿಶೇಷವಾಗಿ ಅಂತಾರಾಷ್ಟ್ರೀಯ ಮಹಿಳಾ ದಿನ ಮಂಡಿಸಿದ ಬಜೆಟ್‌ನಲ್ಲಿ ಮಹಿಳಾ ಅಭಿವೃದ್ಧಿಗೆ ಒಟ್ಟಾರೆ 37 ಸಾವಿರ ಕೋಟಿ ಮೀಸಲಿರಿಸಿದ್ದಾರೆ. ಕಡಿಮೆ ಬಡ್ಡಿದರಲ್ಲಿ ಮಹಿಳಾ ಉದ್ಯಮಿಗಳಿಗೆ 2 ಕೋಟಿವರೆಗೆ ಸಾಲ ನೀಡುವ ಯೋಜನೆಯ ರಾಜ್ಯದ ಮಹಿಳೆಯರ ಸಬಲೀಕರಣಕ್ಕೆ ಸಹಕಾರಿ ಆಗಲಿದೆ. ವಿವಿಧ ಹಿಂದುಳಿದ ವರ್ಗಗಳ ಸಮಾಜದ ಅಭಿವೃದ್ಧಿಗೆ ವಿಶೇಷ ಅನುದಾನ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸಮುದಾಯದ ಬೆಳವಣಿಗೆ, ಶಿಕ್ಷಣ, ಗ್ರಾಮೀಣಾಭಿವೃದ್ಧಿಗೆ ಆದ್ಯತೆ, ರೈತರ ಸಬಲೀಕರಣಕ್ಕೆ ಯೋಜನೆ, ಜನಪರ ಕಾಳಜಿಯ ಬಜೆಟ್ ಸ್ವಾಗತಾರ್ಹ. -ಕೆ.ಪ್ರಸನ್ನ ಕುಮಾರ್, ನಗರಪಾಲಿಕೆ ಸದಸ್ಯರು.
ಮುಖ್ಯಮಂತ್ರಿಯಡಿಯೂರಪ್ಪ ಅವರು ಮಂಡಿಸಿರುವ ರಾಜ್ಯ ಬಜೆಟ್ ಆರ್ಥಿಕ ನಿರ್ವಹಣೆಯ ಲೋಪಗಳನ್ನು ಬಿಂಬಿಸಿದೆ. ಯಾವ ಬಾಬ್ತಿಗೆ ಎಷ್ಟು ಅನುದಾನ ಹಂಚಿಕೆ ಮಾಡಬೇಕು ಎಂಬುದರ ಬಗ್ಗೆ ಸ್ವತಃ ಸಿಎಂ ಅವರೇ ಗೊಂದಲದಲ್ಲಿದ್ದಾರೆ ಎನಿಸುತ್ತದೆ. ಕಲ್ಯಾಣ ಕರ್ನಾಟಕಕ್ಕೆ ಸಿಂಹಪಾಲು ಮೊತ್ತವನ್ನು ತೋರಿಸಲಾಗಿದ್ದು, ಯಾವುದಕ್ಕೆಎಂದು ಸ್ಪಷ್ಟವಾಗಿ ಹೇಳಿಲ್ಲ. ಜಾತಿ ಅಭಿವೃದ್ಧಿ ನಿಗಮಗಳಿಗೆ ಹೇರಳವಾಗಿ 2 ಸಾವಿರ ಕೋಟಿ ಅನುದಾನ ಮೀಸಲಿರಿಸಿರುವುದು ಸರಿಯಲ್ಲ. ಜಿಲ್ಲೆಗೆ ಜಯದೇವ ಹೃದಯರೋಗ ಉಪ ಕೇಂದ್ರ ತೆರಯಲು ಅನುದಾನ ಬಿಟ್ಟರೆಯಾವುದೇ ಘೋಷಣೆ ಮಾಡಿಲ್ಲ. ಮಧ್ಯಕರ್ನಾಟಕ ದಾವಣಗೆರೆಗೆ ನಿರಾಶೆಯಾಗಿದೆ. ವಕೀಲರಿಗೆ ಯಾವುದೇ ಯೋಜನೆ ಘೋಷಣೆಯಾಗಿಲ್ಲ. –ಎಲ್.ಎಚ್.ಅರುಣ್ ಕುಮಾರ್, ಹಿರಿಯ ವಕೀಲರು
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಮಂಡಿಸಿದ ರಾಜ್ಯ ಬಜೆಟ್ ಜನವಿರೋಧಿ ಹಾಗೂ ನಿರಾಶದಾಯಕ. ಗಗನಕ್ಕೆ ಏರಿರುವ ಪೆಟ್ರೋಲ್, ಡೀಸೆಲ್ ಹಾಗೂ ಸಿಲಿಂಡರ್ ಮೇಲಿನ ರಾಜ್ಯ ಮಾರಾಟ ತೆರಿಗೆಯನ್ನು ಬಜೆಟ್‌ನಲ್ಲಿ ಇಳಿಸುತ್ತಾರೆಂದು ನಂಬಿದ್ದ ಜನರಿಗೆ ತೀವ್ರ ನಿರಾಶೆಯಾಗಿದೆ. ದಾವಣಗೆರೆ ಜಿಲ್ಲೆಗೆ ಬಿಜೆಪಿಯಿಂದ 6 ಶಾಸಕರು ಗೆದ್ದರು ಯಾರೊಬ್ಬರನ್ನೂ ಮಂತ್ರಿ ಮಾಡಲಿಲ್ಲ. ಜಿಲ್ಲೆಗೆ ಸೂಕ್ತ ಯೋಜನೆ ಹಾಗೂ ಅನುದಾನ ನೀಡಲಿಲ್ಲ. ದಾವಣಗೆರೆ ಜಿಲ್ಲೆ ಬಿಜೆಪಿ ಸರ್ಕಾರದಲ್ಲಿ ಆಟಕ್ಕೆ ಉಂಟು ಲೆಕ್ಕಕ್ಕೆ ಇಲ್ಲ ಎನ್ನುವಂತಾಗಿದೆ. ಒಟ್ಟಾರೆಯಾಗಿ 2021-22ರ ಬಜೆಟ್ ರಾಜ್ಯದ ಅಭಿವೃದ್ಧಿಗೆ ಪೂರಕವಾಗಿಲ್ಲ. -ಡಿ.ಬಸವರಾಜ್, ಕೆಪಿಸಿಸಿ ವಕ್ತಾರರು.
ಜಿಲ್ಲೆಗೆ ಜಯದೇವ ಹೃದ್ರೋಗ ವಿಜ್ಞಾನ ಸಂಸ್ಥೆಯ ಉಪಕೇಂದ್ರ ಹೊರತುಪಡಿಸಿದರೆ ಬೇರೆಯಾವ ವಿಶೇಷ ಸೌಲಭ್ಯ ನೀಡದೆ ಜಿಲ್ಲೆಯನ್ನು ಕಡೆಗಣಿಸಲಾಗಿದೆ. ಯುವಸಮೂಹಕ್ಕೆ ಉದ್ಯೋಗ, ಕೈಗಾರಿಕೆ ಸ್ಥಾಪನೆ ವಿಚಾರ ಪ್ರಸ್ತಾಪವಾಗಿಲ್ಲ. ಜಿಲ್ಲೆಯಲ್ಲಿ ವಿಶೇಷ ಅಭಿವೃದ್ಧಿಗೆ ಯಾವುದೇಕೊಡುಗೆ ನೀಡಿಲ್ಲ. ಜಿಲ್ಲೆಯ ಪಾಲಿಗೆ ಇದು ನಿರಾಶಾದಾಯಕ ಬಜೆಟ್. – ಬಿ.ಚಿದಾನಂದಪ್ಪ, ಜಿಲ್ಲಾಧ್ಯಕ್ಷರು, ಜೆಡಿಎಸ್.
ಜಿಲ್ಲೆಗೆ ಅತ್ಯವಶ್ಯಕವಾಗಿದ್ದ ಜಯದೇವ ಹೃದ್ರೋಗ ವಿಜ್ಞಾನ ಸಂಸ್ಥೆಯಉಪಕೇಂದ್ರಕ್ಕೆ ಬಜೆಟ್‌ನಲ್ಲಿ 20ಕೋಟಿ ರೂ. ನೀಡಲಾಗಿದೆ. ಎಲ್ಲ ವರ್ಗದ ಜನರಿಗೆ,ಮಹಿಳೆಯರಿಗೆ ಅನುಕೂಲ ಕಲ್ಪಿಸಲಾಗಿದೆ. ವಿವಿಧ ರಾಜ್ಯ ಕಾರ್ಯಕ್ರಮಗಳು ಜಿಲ್ಲೆಯ ಜನರಿಗೂ ಸಾಕಷ್ಟು ಅನುಕೂಲಕರವಾಗಿದ್ದು ಸರ್ವ ರಂಗಗಳ ಅಭಿವೃದ್ಧಿ ಪರಬಜೆಟ್ ಇದಾಗಿದೆ. – ವಿರೇಶ್ ಹನಗವಾಡಿ, ಜಿಲ್ಲಾಧ್ಯಕ್ಷರು, ಬಿಜೆಪಿ.
ಪೆಟ್ರೋಲ್, ಡೀಸೆಲ್ ಮೇಲಿನ ರಾಜ್ಯ ತೆರಿಗೆ ಕಡಿಮೆಗೊಳಿಸಿ ಜನರಿಗೆಬೆಲೆ ಏರಿಕೆ ಭಾರ ಇಳಿಸುವ ನಿರೀಕ್ಷೆ ಇತ್ತು. ಅದು ಹುಸಿಯಾಗಿದೆ. ಕೇವಲ ಸಣ್ಣಪುಟ್ಟ ಘೋಷಣೆ ಮಾಡಲಾಗಿದೆ. ಎಲ್ಲ ವರ್ಗದ ಜನರಿಗೂ ಈ ಬಜೆಟ್ ಅನುಕೂಲವಾಗಿಲ್ಲ. ಜನವಿರೋಧಿ ಹಾಗೂ ನಿರಾಶಾದಾಯಕ ಬಜೆಟ್ ಇದಾಗಿದೆ. – ಡಿ.ಬಸವರಾಜ್, ವಕ್ತಾರರು, ಕೆಪಿಸಿಸಿ.
-ಎಚ್.ಕೆ. ನಟರಾಜ