Advertisement
ರಾಜ್ಯದ 224 ಕ್ಷೇತ್ರಗಳ ಪೈಕಿ 156 ಕ್ಷೇತ್ರಗಳಲ್ಲಿ ಬಿಜೆಪಿ ಒಂದಲ್ಲ ಒಂದು ಬಾರಿ ಗೆಲುವು ಸಾಧಿಸಿದ್ದು, ಆ ಕ್ಷೇತ್ರಗಳನ್ನೇ ಪ್ರಮುಖ ಗುರಿ ಆಗಿ ಪರಿಗಣಿಸಲಾಗಿದೆ. ಜತೆಗೆ ಇದುವರೆಗೆ ಗೆಲುವು ಸಾಧಿಸದ ಕ್ಷೇತ್ರಗಳಲ್ಲಿ ಇತರ ಪಕ್ಷಗಳ ಪ್ರಭಾವಿಗಳನ್ನು ಸೆಳೆಯುವ ಕಾರ್ಯತಂತ್ರವನ್ನೂ ರೂಪಿಸಲಾಗಿದೆ. ಈಗಾಗಲೇ ಇಂಥ 20 ಕ್ಷೇತ್ರಗಳನ್ನು ಗುರುತಿಸಿ, ಅಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಪ್ರಭಾವಿಗಳನ್ನು ಸೇರ್ಪಡೆ ಮಾಡಿಕೊಳ್ಳುವ ಸಂಬಂಧ ಎರಡು ಸುತ್ತಿನ ಮಾತುಕತೆ ನಡೆಸಿದ್ದು, ಜನವರಿಯಲ್ಲಿ ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿದೆ.
Related Articles
Advertisement
ಕಳೆದ ಬಾರಿ ನಡೆಸಿದ್ದ ಸಮೀಕ್ಷೆಯಲ್ಲಿ ಗೆಲ್ಲಲು ಇರುವ ಸಮಸ್ಯೆಗಳ ಬಗ್ಗೆ ಪಟ್ಟಿ ಮಾಡಿ ಸರಿಪಡಿಸಿಕೊಳ್ಳುವಂತೆ ಹಾಲಿ ಮತ್ತು ಮಾಜಿ ಶಾಸಕರಿಗೆ ಸೂಚನೆ ನೀಡಲಾಗಿತ್ತು. ಈ ಬಾರಿ ಸಮೀಕ್ಷೆಯಲ್ಲಿ ಹಿಂದಿನ ಮಾರ್ಗದರ್ಶನ ಪಾಲಿಸದ ಹಾಗೂ ಇನ್ನೂ ಸುಧಾರಿಸದ ಕಡೆ ನೇರವಾಗಿಯೇ “ಟಿಕೆಟ್ ನೀಡಲಾಗದು’ ಎಂಬ ಸಂದೇಶ ರವಾನೆ ಮಾಡಿ ಹೊಸ ಮುಖಗಳಿಗೆ ಅವಕಾಶ ಕೊಡುವ ಬಗ್ಗೆ ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.
ಸರಣಿ ಸಮಾವೇಶಗಳು:
ಜನಸ್ಪಂದನ ಯಾತ್ರೆಯ ಜತೆಗೆ ಸಮುದಾಯಗಳ ಸಮಾವೇಶಕ್ಕೂ ಚಾಲನೆ ನೀಡುವ ನಿರ್ಧಾರದಂತೆ ಈಗಾಗಲೇ ಎಸ್‌ಟಿ ಮೋರ್ಚಾ ಸಮಾವೇಶ ಮುಗಿಸಿರುವ ಬಿಜೆಪಿ, ಶಿವಮೊಗ್ಗದಲ್ಲಿ ಯುವ ಮೋರ್ಚಾ, ರಾಯಚೂರಿನಲ್ಲಿ ಎಸ್‌ಸಿ ಮೋರ್ಚಾ, ಹುಬ್ಬಳ್ಳಿಯಲ್ಲಿ ರೈತ ಮೋರ್ಚಾ, ಬೆಂಗಳೂರಿನಲ್ಲಿ ಮಹಿಳಾ ಮೋರ್ಚಾ ಸಮಾವೇಶ ನಡೆಸಲಿದೆ. ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗುವ ಸಾಧ್ಯತೆಯಿದೆ.
ಗುಜರಾತ್ ಫಲಿತಾಂಶದ ನಂತರ ರಾಷ್ಟ್ರ ನಾಯಕರು ಕರ್ನಾಟಕದತ್ತ ಚಿತ್ತ ಹರಿಸಲಿದ್ದು, ಒಂದಷ್ಟು ಬದಲಾವಣೆಗಳೊಂದಿಗೆ ಚುನಾವಣಾ ಹೋರಾಟ ಪ್ರಾರಂಭವಾಗಲಿದೆ. ಈಗಾಗಲೇ ಕೇಂದ್ರ ನಾಯಕರ ಸೂಚನೆಯಂತೆ ನಾವು ನಮ್ಮ ಕೆಲಸ ಆರಂಭಿಸಿದ್ದೇವೆ ಎಂದು ಸಚಿವರೊಬ್ಬರು ತಿಳಿಸಿದ್ದಾರೆ.
ಎಪ್ಪತ್ತು ವರ್ಷ ದಾಟಿದವರಿಗೆ ಟಿಕೆಟ್ ನಿರಾಕರಣೆ, ಸಾಧ್ಯವಿರುವ ಕಡೆ ಕುಟುಂಬ ರಾಜಕಾರಣಕ್ಕೆ ಅವಕಾಶ ನೀಡಿರುವುದು, ಹಿಂದುತ್ವ ಪ್ರತಿಪಾದನೆ ಹಾಗೂ ವೈಚಾರಿಕ ಬದ್ಧತೆ ಹೊಂದಿರುವವರಿಗೆ ಅವಕಾಶ ನೀಡುವ ಬಗ್ಗೆ ನಿರಂತರವಾಗಿ ಪಕ್ಷದಲ್ಲಿ ಚರ್ಚೆಗಳು ನಡೆಯುತ್ತಿದ್ದು, ಈ ಬಾರಿಯ ಚುನಾವಣೆಯಲ್ಲಿ ಪ್ರಯೋಗವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಸಿ.ಟಿ.ರವಿ, ವಿಜಯೇಂದ್ರ ಒಳಗೊಂಡ ಉಸ್ತುವಾರಿ ಸಮಿತಿ? ;
ಗುಜರಾತ್ ವಿಧಾನಸಭೆ ಚುನಾವಣೆ ಫಲಿತಾಂಶದ ನಂತರ ಕೇಂದ್ರ ಸಚಿವರ ತಂಡವನ್ನು ಒಳಗೊಂಡ ವಾರ್ ರೂಂ’ ಪ್ರಾರಂಭಿಸಲು ನಿರ್ಧರಿಸಲಾಗಿದೆ. ಯಾವ್ಯಾವ ಸಚಿವರಿಗೆ ಯಾವ್ಯಾವ ಹೊಣೆಗಾರಿಕೆ ಎಂಬುದು ಈಗಾಗಲೇ ತೀರ್ಮಾನವಾಗಿದೆ. ಇದರ ಜತೆಗೆ ಸಿ.ಟಿ.ರವಿ, ವಿಜಯೇಂದ್ರ ಸೇರಿದಂತೆ ಪ್ರಮುಖ ಚುನಾವಣಾ ಉಸ್ತುವಾರಿ ಸಮಿತಿ ಸಹ ರಚನೆಯಾಗಲಿದೆ. ವಾರ್ ರೂಂ ಹಾಗೂ ಉಸ್ತುವಾರಿ ಸಮಿತಿಯ ತಂಡ ನಿರ್ಣಾಯಕ ಪಾತ್ರ ವಹಿಸಲಿದೆ ಎಂದು ಹೇಳಲಾಗಿದೆ.
-ಎಸ್. ಲಕ್ಷ್ಮೀನಾರಾಯಣ