Advertisement

BJP: ಯತ್ನಾಳ್‌ ವಿರುದ್ಧ ಶಿಸ್ತುಕ್ರಮಕ್ಕೆ ಆಗ್ರಹ ರಾಜ್ಯ ಬಿಜೆಪಿ ಸಭೆ

12:42 AM Dec 28, 2023 | Team Udayavani |

ಬೆಂಗಳೂರು: ನೂತನ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ನಡೆದ ರಾಜ್ಯ ಬಿಜೆಪಿ ಪದಾಧಿಕಾರಿಗಳ ಚೊಚ್ಚಲ ಸಭೆಯಲ್ಲಿ ಪಕ್ಷ ಸಂಘಟನೆಗಿಂತ ಹೆಚ್ಚು ಪಕ್ಷದ ಪಾಲಿಗೆ ಬಿಸಿತುಪ್ಪವಾಗಿ ಪರಿಣಮಿಸಿರುವ ಬಸನಗೌಡ ಪಾಟೀಲ್‌ ಯತ್ನಾಳ್‌ ಕುರಿತಾದ ಚರ್ಚೆಯೇ ಬಿರುಸಾಗಿತ್ತು. ಪಕ್ಷಕ್ಕೆ ಮುಜುಗರ ತರುವಂತಹ ಬಹಿರಂಗ ಹೇಳಿಕೆಗಳನ್ನು ನೀಡುತ್ತಿರುವ ಯತ್ನಾಳ್‌ ವಿರುದ್ಧ ಏಕೆ ಕ್ರಮ ಆಗುತ್ತಿಲ್ಲ ಎಂದು ನೂತನ ಪದಾಧಿಕಾರಿಗಳೇ ಪ್ರಶ್ನಿಸಿದ ಪ್ರಸಂಗ ನಡೆಯಿತು. ಈ ವೇಳೆ ವಿಜಯೇಂದ್ರ ಪದಾಧಿಕಾರಿಗಳನ್ನು ಸಮಾಧಾನಿಸಿದರೂ ಬೇಸರ ತಣಿಯಲಿಲ್ಲ.

Advertisement

ಪಕ್ಷದ ಸಂಘಟನೆ, ಜಿಲ್ಲಾಧ್ಯಕ್ಷರು, ಜಿಲ್ಲಾ ಪದಾಧಿಕಾರಿಗಳ ಆಯ್ಕೆ ಇತ್ಯಾದಿ ವಿಚಾರಗಳನ್ನು ಚರ್ಚಿಸುವ ಸಲುವಾಗಿ ನೂತನ ಪದಾಧಿಕಾರಿಗಳ ಸಭೆಯನ್ನು ಪಕ್ಷದ ಕಚೇರಿ ಜಗನ್ನಾಥ ಭವನದಲ್ಲಿ ವಿಜಯೇಂದ್ರ ಕರೆದಿದ್ದರು. ಸಭೆಯಲ್ಲಿ ನೂತನ ಪರಾಧಿಕಾರಿಗಳಿಗೆ ನೇಮಕಾತಿ ಪತ್ರ ನೀಡಿದ ವಿಜಯೇಂದ್ರ ಉದ್ಘಾಟನೆಯ ಬಳಿಕ ಸಂಘಟನಾತ್ಮಕ ಅಂಶಗಳ ಮೇಲೆ ಬೆಳಕು ಚೆಲ್ಲಿದರು. ರಾಜ್ಯ ಬಿಜೆಪಿ ಸಂಘಟನ ಪ್ರಧಾನ ಕಾರ್ಯದರ್ಶಿ ಜಿ.ವಿ. ರಾಜೇಶ್‌ ಕೂಡ ಸಂಘಟನೆಯ ರೂಪುರೇಷೆಗಳನ್ನು ವಿವರಿಸಿದರು.

ಕಾಂಗ್ರೆಸಿಗರಿಗೆ ಅಸ್ತ್ರ
ಬಳಿಕ ಕೆಲವರು ನೇರವಾಗಿ ಯತ್ನಾಳ್‌ ವಿಷಯ ಪ್ರಸ್ತಾವಿಸಿದರಲ್ಲದೆ ಪದೇಪದೆ ಹೇಳಿಕೆಗಳನ್ನು ಕೊಡುತ್ತಿರುವ ಅವರು ಶಿಸ್ತುಕ್ರಮವನ್ನೇಕೆ ಕೈಗೊಳ್ಳಬಾರದು? 40 ಸಾವಿರ ಕೋಟಿ ರೂ. ಅಕ್ರಮದ ಅವರ ಆರೋಪದಿಂದಾಗಿ ಕಾಂಗ್ರೆಸಿಗರಿಗೆ ಅಸ್ತ್ರ ಸಿಕ್ಕಂತಾಗಿದೆ. ಇದನ್ನೇ ಸತ್ಯ ಎಂದು ಎಲ್ಲರೂ ತಿಳಿಯುವ ಅಪಾಯವಿದೆ. ಪಕ್ಷ ಕಟ್ಟುವ ದೃಷ್ಟಿಯಿಂದ ಪದಾಧಿಕಾರಿಗಳು ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಎಲ್ಲರೂ ಇದೇ ವಿಚಾರ ಕೇಳುವ ಸಾಧ್ಯತೆ ಹೆಚ್ಚಿದೆ. ಏನೆಂದು ಉತ್ತರಿಸುವುದು ಎಂದು ಪ್ರಶ್ನಿಸಿದರು.

ಸಮಾಧಾನಪಡಿಸಿದ ವಿಜಯೇಂದ್ರ
ಮಧ್ಯಪ್ರವೇಶಿಸಿದ ವಿಜಯೇಂದ್ರ, ಪಕ್ಷ ಸಂಘಟನೆ ಸಲುವಾಗಿ ನಾವಿಂದು ಸೇರಿದ್ದೇವೆ. ಈ ಬಗ್ಗೆ ನಮ್ಮ ಗಮನ ಹರಿಸೋಣ. ಶಾಸಕರ ವಿರುದ್ಧ ಕ್ರಮ ತೆಗೆದುಕೊಳ್ಳುವ ಅಧಿಕಾರ ಇರುವುದು ಕೇಂದ್ರ ಶಿಸ್ತು ಸಮಿತಿಗೇ ವಿನಾ ನಮಗಲ್ಲ. ನಮ್ಮ ಗುರಿ ಏನಿದ್ದರೂ ಲೋಕಸಭೆ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸುವುದು, ಮೋದಿ ಅವರನ್ನು ಪ್ರಧಾನಿ ಮಾಡುವ ಮೂಲಕ ಕೈ ಬಲಪಡಿಸುವುದಷ್ಟೇ. ಅದರೆಡೆಗೆ ಗಮನ ಕೊಡೋಣ ಎಂದು ಪದಾಧಿಕಾರಿಗಳನ್ನು ಸಮಾಧಾನಪಡಿಸಲು ಯತ್ನಿಸಿದರು.

ನಿರ್ಣಯ ಕೈಗೊಂಡು ಕೇಂದ್ರಕ್ಕೆ ಕಳುಹಿಸೋಣ
ಸಮಾಧಾನಗೊಳ್ಳದ ಕೆಲವರು ಯತ್ನಾಳ್‌ ಅವರ ವಿರುದ್ಧ ನಾವು ಇಲ್ಲಿಂದ ಒಂದು ನಿರ್ಣಯ ಕೈಗೊಂಡು ಕೇಂದ್ರಕ್ಕೆ ಕಳುಹಿಸಿಕೊಡೋಣ. ಅಲ್ಲಿ ಏನು ಕ್ರಮ ತೆಗೆದುಕೊಳ್ಳುತ್ತಾರೋ ತೆಗೆದುಕೊಳ್ಳಲಿ. ಇಲ್ಲದಿದ್ದರೆ ರಾಜ್ಯ ಪ್ರವಾಸದ ಸಂದರ್ಭದಲ್ಲಿ ಉತ್ತರಿಸಲಾಗುವುದಿಲ್ಲ ಎಂದು ಆಗ್ರಹಿಸಿದ್ದಾರೆ. ಈ ಬಗ್ಗೆ ತತ್‌ಕ್ಷಣ ನಾವು ಯಾವುದೇ ಕ್ರಮ ಕೈಗೊಂಡರೂ ತಪ್ಪಾಗುತ್ತದೆ. ವರಿಷ್ಠರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಕಾದು ನೋಡೋಣ ಎಂದಷ್ಟೇ ವಿಜಯೇಂದ್ರ ಹೇಳಿದ್ದಾರೆ.

Advertisement

ಡಿವಿಎಸ್‌ ಆಕ್ರೋಶ
ಬುಧವಾರ ಮತ್ತೂಮ್ಮೆ ಪಕ್ಷದ ವಿರುದ್ಧ ಅಸಮಾಧಾನ ಹೊರಹಾಕಿರುವ ಮಾಜಿ ಸಿಎಂ ಸದಾನಂದ ಗೌಡ, ಈ ಹಿಂದೆ ನಾನು ಪಕ್ಷದ ರಾಜ್ಯಾಧ್ಯಕ್ಷನಾಗಿದ್ದಾಗ ಕುಮಾರಸ್ವಾಮಿ ಅವರೊಂದಿಗೆ ಸರಕಾರ ಮಾಡಿದ್ದೆವು. ಸಮ್ಮಿಶ್ರ ಸರಕಾರದ ವಿರುದ್ಧ ಆರೋಪ ಮಾಡಿದ್ದ ಜನಾರ್ದನ ರೆಡ್ಡಿ ವಿರುದ್ಧ ಒಂದೇ ತಾಸಿನಲ್ಲಿ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಿದ್ದಲ್ಲದೆ, ಅಂದಿನ ರಾಷ್ಟ್ರೀಯ ಅಧ್ಯಕ್ಷ ರಾಜನಾಥಸಿಂಗ್‌ ಅವರ ಅನುಮತಿ ಪಡೆದು ಅಮಾನತು ಕೂಡ ಮಾಡಿದ್ದೆ. ಇದನ್ನೇಕೆ ಈಗ ಮಾಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. ಯತ್ನಾಳ್‌ ಅವರನ್ನೂ ನಾನು ಅಮಾನತು ಮಾಡಿದ್ದೆ. ಯತ್ನಾಳ್‌ ಸೇರಿದಂತೆ ಡಜನ್‌ಗಟ್ಟಲೆ ಜನರು ಹೀಗೆ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ನಾನೇ ಅಶಿಸ್ತು ತೋರಿದರೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ ಎಂದು ರಾಜ್ಯ ಮತ್ತು ರಾಷ್ಟ್ರೀಯ ನಾಯಕರಿಗೆ ಒತ್ತಾಯಿಸಿದರು.

ಬಿಜೆಪಿ ಅಧಿಕಾರದಲ್ಲಿದ್ದಾಗ ನಾವು ಶೇ. 40ರ ಸರ್ಕಾರ ಎಂದು ಆರೋಪಿಸಿದ್ದೆವು. ಈಗ ಅವರ ಪಕ್ಷದವರೇ ದಾಖಲೆ ಇದೆ ಎಂದಿದ್ದಾರೆ. ಅವರ ಬಳಿ ಭ್ರಷ್ಟಾಚಾರದ ದಾಖಲೆ, ಮಾಹಿತಿ ಇರುವುದರಿಂದಲೇ ಕ್ರಮ ಕೈಗೊಳ್ಳುತ್ತಿಲ್ಲ. ಭ್ರಷ್ಟಾಚಾರಕ್ಕೆ ಬಿಜೆಪಿಯಲ್ಲಿ ಎಷ್ಟರ ಮಟ್ಟಿಗೆ ಪೋಷಣೆ ಇದೆ ಎಂಬುದು ಯತ್ನಾಳ್‌ ಹೇಳಿಕೆಯಿಂದ ಮತ್ತೂಮ್ಮೆ ಸ್ಪಷ್ಟವಾಗಿದೆ.
ದಿನೇಶ್‌ ಗುಂಡೂರಾವ್‌,ಆರೋಗ್ಯ ಸಚಿವ.

ಜಿಲ್ಲಾಧ್ಯಕ್ಷರ ನೇಮಕಕ್ಕೆ 60 ಜನರ ತಂಡ
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆಗೆ ಒತ್ತು ಕೊಡಲು ನಿರ್ಧರಿಸಿರುವ ರಾಜ್ಯ ಬಿಜೆಪಿಯು ಜಿಲ್ಲಾಧ್ಯಕ್ಷರು ಹಾಗೂ ಜಿಲ್ಲಾ ಪದಾಧಿಕಾರಿಗಳ ನೇಮಕಾತಿಗಾಗಿ 60 ಜನರ ತಂಡ ರಚಿಸಿದೆ. ಈ ತಂಡವು ಪಕ್ಷದ ಎಲ್ಲ ಸಂಘಟನಾತ್ಮಕ ಜಿಲ್ಲೆಗಳಲ್ಲಿ ಪ್ರವಾಸ ನಡೆಸಿ ಅಭಿಪ್ರಾಯ ಸಂಗ್ರಹಿಸಲಿದೆ. ಇದನ್ನು ಆಧರಿಸಿ ಜಿಲ್ಲಾಧ್ಯಕ್ಷರು ಮತ್ತು ಪದಾಧಿಕಾರಿಗಳ ನೇಮಕ ಆಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next