Advertisement

ಮೋದಿ ಅಧಿಕಾರಗ್ರಹಣದ ನಂತರ ಮೈತ್ರಿಗೆ ‘ಗ್ರಹಣ’?

01:52 AM May 27, 2019 | Sriram |

ಬೆಂಗಳೂರು: ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪ್ರಮಾಣ ವಚನ ಸ್ವೀಕರಿಸಿ, ಹೊಸ ಸರ್ಕಾರ ರಚನೆಯಾದ ನಂತರ ಅಧಿಕೃತ ‘ಆಪರೇಷನ್‌ ಕಮಲ’ಕ್ಕೆ ಕೈ ಹಾಕಲು ರಾಜ್ಯ ಬಿಜೆಪಿ ನಾಯಕರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

Advertisement

ಈಗಾಗಲೇ ಬಂಡಾಯ ಶಾಸಕರ ಜತೆಗೆ ನಿರಂತರ ಸಂಪರ್ಕದಲ್ಲಿರುವ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಕೇಂದ್ರದಲ್ಲಿ ಸರ್ಕಾರ ಅಸ್ಥಿತ್ವಕ್ಕೆ ಬರುವ ಸಂದರ್ಭದಲ್ಲಿ ರಾಜ್ಯದಲ್ಲಿ ಗೊಂದಲ ಸೃಷ್ಠಿಸಿದರೆ, ರಾಷ್ಟ್ರಮಟ್ಟದಲ್ಲಿ ಬೇರೆ ಸಂದೇಶ ರವಾನೆಯಾಗುತ್ತದೆ ಎನ್ನುವ ಕಾರಣಕ್ಕೆ ಕೇಂದ್ರದಲ್ಲಿ ಸರ್ಕಾರ ಅಸ್ಥಿತ್ವಕ್ಕೆ ಬರುವವರೆಗೂ ‘ಆಪರೇಷನ್‌ ಕಮಲ’ವನ್ನು ಮುಂದೂಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

ಈ ನಡುವೆ, ಕಾಂಗ್ರೆಸ್‌ ಅತೃಪ್ತ ಶಾಸಕ ರಮೇಶ್‌ ಜಾರಕಿಹೊಳಿ ನೇತೃತ್ವದಲ್ಲಿ ಕೆಲ ಶಾಸಕರು ಗೋವಾಕ್ಕೆ ತೆರಳುವ ಸಾಧ್ಯತೆಯಿದ್ದು, ಬಿಜೆಪಿ ನಿರೀಕ್ಷಿಸಿದಷ್ಟು ಶಾಸಕರ ಸಂಖ್ಯೆ ಸೇರುವ ವರೆಗೂ ಅತೃಪ್ತ ಶಾಸಕರು ಗೋವಾದಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಈಗಾಗಲೇ ಗೋವಾದ ಐಷಾರಾಮಿ ಹೋಟೆಲ್ನಲ್ಲಿ ಮೂವತ್ತು ರೂಮುಗಳನ್ನು ಕಾಯ್ದಿರಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಬಿಜೆಪಿ ಮೂಲಗಳ ಪ್ರಕಾರ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ನ 20ಕ್ಕೂ ಹೆಚ್ಚು ಶಾಸಕರು ಬಿಜೆಪಿ ನಾಯಕರ ಸಂಪರ್ಕ ದಲ್ಲಿದ್ದು, ಕೇಂದ್ರ ಸರ್ಕಾರ ರಚನೆಯಾ ಗುವವರೆಗೂ ‘ಆಪರೇಷನ್‌ ಕಮಲ’ದ ಬಗ್ಗೆ ಯಾವುದೇ ರೀತಿಯ ಚಟುವಟಿಕೆ ನಡೆಸದಂತೆ ಪಕ್ಷದ ಹೈಕಮಾಂಡ್‌ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಸದ್ಯಕ್ಕೆ ‘ಆಪರೇಷನ್‌ ಕಮಲ’ಕ್ಕೆ ಅಲ್ಪವಿರಾಮ ನೀಡಲಾಗಿದೆ.

ಕೃಷ್ಣ ಭೇಟಿ ಮಾಡಿದ ರಮೇಶ್‌: ಅತೃಪ್ತ ಶಾಸಕರ ನಾಯಕ ರಮೇಶ್‌ ಜಾರಕಿಹೊಳಿ ಹಾಗೂ ಚಿಕ್ಕಬಳ್ಳಾಪುರ ಶಾಸಕ ಡಾ.ಕೆ.ಸುಧಾಕರ್‌ ಭಾನುವಾರ ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರನ್ನು ಭೇಟಿ ಮಾಡಿ ಸುಮಾರು ಎರಡು ಗಂಟೆಗಳ ಕಾಲ ಚರ್ಚಿಸಿದರು. ಅವರ ಭೇಟಿಯ ಸಂದರ್ಭದಲ್ಲಿಯೇ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಮಂಡ್ಯ ನೂತನ ಸಂಸದೆ ಸುಮಲತಾ ಕೂಡ ಭೇಟಿ ನೀಡಿ, ಚುನಾವಣೆ ವೇಳೆ ಬೆಂಬಲ ನೀಡಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದರು.

ಯಡಿಯೂರಪ್ಪ ಹಾಗೂ ಸುಮಲತಾ ಅವರು ಎಸ್‌.ಎಂ.ಕೃಷ್ಣಗೆ ಕೃತಜ್ಞತೆ ಸಲ್ಲಿಸಿ ತೆರಳಿದ ನಂತರ ಅವರೊಂದಿಗೆ ಆಗಮಿಸಿದ್ದ ಮಾಜಿ ಉಪ ಮುಖ್ಯಮಂತ್ರಿ ಆರ್‌.ಅಶೋಕ್‌ ಅವರು, ರಮೇಶ್‌ ಜಾರಕಿಹೊಳಿ ಹಾಗೂ ಡಾ.ಕೆ.ಸುಧಾಕರ್‌ ಜೊತೆಗೆ ಎಸ್‌.ಎಂ.ಕೃಷ್ಣ ಅವರ ಮನೆಯಲ್ಲಿಯೇ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

Advertisement

ಡಾ.ಸುಧಾಕರ್‌ ಅವರಿಗೆ ಎಸ್‌.ಎಂ.ಕೃಷ್ಣ ಅವರೊಂದಿಗೆ ಆತ್ಮೀಯತೆ ಇದ್ದರೂ, ಅವರು ಮೈತ್ರಿ ಸರ್ಕಾರದಲ್ಲಿ ಅಧಿಕಾರಕ್ಕಾಗಿ ಪಕ್ಷದ ನಾಯಕರ ಮೇಲೆ ಒತ್ತಡ ಹೇರುವ ತಂತ್ರವಾಗಿ ಈ ರೀತಿಯ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂಬ ಮಾತುಗಳು ಕಾಂಗ್ರೆಸ್‌ ವಲಯದಲ್ಲಿ ಕೇಳಿ ಬರುತ್ತಿವೆ. ಆದರೆ, ಈ ಬೆಳವಣಿಗೆಯ ಬಗ್ಗೆ ಎಸ್‌.ಎಂ.ಕೃಷ್ಣ ಅವರು ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ಅಂತರ ಕಾಯ್ದುಕೊಂಡರು.

ರಾಜ್ಯದಲ್ಲಿ ಬಿಜೆಪಿಯ ಅಭೂತಪೂರ್ವ ಗೆಲುವಿಗೆ ಕಾರಣವಾಗಿರುವ ಎಸ್‌.ಎಂ.ಕೃಷ್ಣ ಅವರಿಗೆ ಕೃತಜ್ಞತೆ ಸಲ್ಲಿಸುವುದು ನಮ್ಮಜವಾಬ್ದಾರಿ. ರಮೇಶ್‌ ಜಾರಕಿಹೊಳಿ ಜತೆ ಮಾತನಾಡಿಲ್ಲ.ಅವರೊಂದಿಗೆ ಯಾವುದೇ ರೀತಿಯ ಮಾತುಕತೆ ನಡೆಸಿಲ್ಲ. ವೈಯಕ್ತಿಕವಾಗಿ ಅವರು ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂಬುದು ಅವರಿಗೆ ಬಿಟ್ಟಿದ್ದು.
– ಬಿ.ಎಸ್‌.ಯಡಿಯೂರಪ್ಪ,
ಬಿಜೆಪಿ ರಾಜ್ಯಾಧ್ಯಕ್ಷ

ಎಸ್‌.ಎಂ.ಕೃಷ್ಣ ಅವರು ಬಿಜೆಪಿ ಸೇರಿದಾಗಿನಿಂದಲೂ ಅವರೊಂದಿಗೆ ಸಂಪರ್ಕದಲ್ಲಿದ್ದೇನೆ.ಪಕ್ಷದ ಚಟುವಟಿಕೆಗಳ ಬಗ್ಗೆ ಅವರೊಂದಿಗೆ ಚರ್ಚಿಸಲು ಆಗಮಿಸಿದ್ದೆ. ರಮೇಶ್‌ ಜಾರಕಿಹೊಳಿ ಅವರು ಎಸ್‌.ಎಂ. ಕೃಷ್ಣ ಅವರ ಅಭಿಮಾನಿಗಳು. ನನಗೂ, ರಮೇಶ್‌ ಜಾರಕಿಹೊಳಿ ನಡುವೆ ಯಾವುದೇ ಸ್ನೇಹವಿಲ್ಲ. ಒಂದೇ ಸಮಯದಲ್ಲಿ ಕೃಷ್ಣ ಅವರ ಮನೆಗೆ ಆಗಮಿಸಿದ್ದು ಕಾಕತಾಳೀಯ ಅಷ್ಟೇ. ಸರ್ಕಾರದ ಅಸ್ಥಿತ್ವದ ಬಗ್ಗೆ ನಾನು ಹೇಳುವುದಿಲ್ಲ.ರೇವಣ್ಣ ಅವರ ನಿಂಬೆಹಣ್ಣು ಹೇಳುತ್ತದೆ.
– ಆರ್‌.ಅಶೋಕ್‌, ಬಿಜೆಪಿ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next