ಚಳ್ಳಕೆರೆ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರಕ್ಕೆ ರೈತ ಹಾಗೂ ಅಭಿವೃದ್ಧಿ ಪರ ಚಿಂತನೆ ಇದೆ ಎಂದು ಸಾರಿಗೆ ಮತ್ತು ಪರಿಶಿಷ್ಟ ಪಂಗಡ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಹೇಳಿದರು.
ತಳಕು ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ 2021-22ನೇ ಸಾಲಿನ ಕೃಷಿ ಯಂತ್ರೋಕರಣ ಉಪ ಅಭಿಯಾನ ಯೋಜನೆಯಡಿ ಆಯ್ದ ಫಲಾನುಭವಿಗಳಿಗೆ ಯಂತ್ರೋಪಕರಣ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಅನ್ನದಾತರ ಮಕ್ಕಳು ಉನ್ನತ ಪದವಿ ಪಡೆಯಲು ಅನುಕೂಲವಾಗುವಂತೆ ವಿದ್ಯಾಸಿರಿ ಯೋಜನೆಯಲ್ಲಿ ರೈತರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ರಾಜ್ಯದ 2057 ರೈತರ ಮಕ್ಕಳಿಗೆ 65 ಲಕ್ಷ ರೂ. ವಿದ್ಯಾರ್ಥಿ ವೇತನ ನೀಡಲಾಗಿದೆ. ರೈತರ ಮಕ್ಕಳು ವಿದ್ಯಾಸಿರಿ ಯೋಜನೆಯಡಿ ಆರ್ಥಿಕ ನೆರವು ಪಡೆದು ಐಎಎಸ್, ಐಪಿಎಸ್ ಅಧಿಕಾರಿಗಳಾಗಿ ಸಮಾಜದ ನೆರವಿಗೆ ಧಾವಿಸಬೇಕು ಎಂದು ಕರೆ ನೀಡಿದರು.
ರಾಜ್ಯದ 14 ಲಕ್ಷ ರೈತರು 2019-20ನೇ ಸಾಲಿನಲ್ಲಿ 40 ಕೋಟಿಗೂ ಹೆಚ್ಚು ಪರಿಹಾರವನ್ನು ಪಡೆದಿದ್ದಾರೆ. ಬಿಜೆಪಿ ಸರ್ಕಾರದ ಜನಪರ ಆಡಳಿತಕ್ಕೆ ಜನರು ಬೆಂಬಲ ವ್ಯಕ್ತಪಡಿಸಿದ್ದಾರೆ. ಇದನ್ನು ಸಹಿಸದ ವಿರೋಧ ಪಕ್ಷಗಳು ಅನಗತ್ಯವಾಗಿ ಟೀಕೆ ಮಾಡುತ್ತಿವೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಜನಹಿತ ಮರೆತಿವೆ ಎಂದು ಆರೋಪಿಸಿದರು.
ರಾಷ್ಟ್ರೀಯ ಭದ್ರತಾ ಅಭಿಯಾನ ಯೋಜನೆಯಡಿ 750 ರೈತರಿಗೆ 68.90 ಲಕ್ಷ ರೂ.ಗಳನ್ನು ನೀಡಲಾಗಿದೆ. 2021-22ನೇ ಸಾಲಿನಲ್ಲಿ ಅತಿವೃಷ್ಟಿಗೆ ಒಳಗಾದ 29,933 ರೈತರಿಗೆ 16.28 ಲಕ್ಷ ರೂ.ಗಳನ್ನು ಅವರ ಖಾತೆಗೆ ಜಮಾ ಮಾಡಲಾಗಿದೆ. 2019ರಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ 13,193 ಸಾವಿರ ರೈತರಿಗೆ ತಲಾ 10 ಸಾವಿರದಂತೆ 131 ಕೋಟಿ ರೂ. ನೀಡಲಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತ ಸಮುದಾಯಕ್ಕೆ ನೀಡುವ ಸೌಲಭ್ಯ ನೇರವಾಗಿ ಅವರ ಖಾತೆಗೆ ಜಮಾ ಆಗುತ್ತಿದೆ. ಇದರಲ್ಲಿ ಯಾವುದೇ ರೀತಿಯ ವ್ಯತ್ಯಯವಾಗುತ್ತಿಲ್ಲ. ಆದರೂ ಸರ್ಕಾರದ ಮೇಲೆ ಆರೋಪ ಮಾಡಲಾಗುತ್ತಿದೆ ಎಂದು ಆಕ್ಷೇಪಿಸಿದರು.
ಇದೇ ಸಂದರ್ಭದಲ್ಲಿ ಸಚಿವರು ತಿಮ್ಮಣ್ಣನಹಳ್ಳಿ, ಚನ್ನಗಾನಹಳ್ಳಿ, ಚಿತ್ರನಾಯಕನಹಳ್ಳಿ, ಮೈಲನಹಳ್ಳಿ, ಓಬಳಾಪುರ ಮುಂತಾದ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ, ಅಂಬೇಡ್ಕರ್ ಭವನ, ರಸ್ತೆ ಅಭಿವೃದ್ಧಿ ಕಾಮಗಾರಿ, ಹೈಮಾಸ್ಟ್ ದೀಪ ಉದ್ಘಾಟನೆ ಹಾಗೂ ಅಂಗನವಾಡಿ ಕಟ್ಟಡಗಳ ಭೂಮಿಪೂಜೆ ನೆರವೇರಿಸಿದರು.
ಕೃಷಿ ಇಲಾಖೆ ಉಪನಿರ್ದೇಶಕ ಶಿವಮೂರ್ತಿ, ಸಹಾಯಕ ನಿರ್ದೇಶಕ ಅಶೋಕ್, ತೋಟಗಾರಿಕೆ ಇಲಾಖೆ ಅಧಿಕಾರಿ ವಿರೂಪಾಕ್ಷಪ್ಪ, ತಹಶೀಲ್ದಾರ್ ಎನ್. ರಘುಮೂರ್ತಿ, ಕಂದಾಯಾಧಿಕಾರಿ ರಫೀಕ್, ಉಪ ತಹಶೀಲ್ದಾರ್ ಅಬ್ದುಲ್ ಅಜೀಮ್, ಬಿಜೆಪಿ ಜಿಲ್ಲಾಧ್ಯಕ್ಷ ಎ. ಮುರಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಪಿ. ಜಯಪಾಲಯ್ಯ, ಎಸ್‌ಟಿ ಮೋರ್ಚಾ ಜಿಲ್ಲಾಧ್ಯಕ್ಷ ಶಿವಣ್ಣ, ಮಂಡಲ ಅಧ್ಯಕ್ಷ ಈ. ರಾಮರೆಡ್ಡಿ, ಬಿಜೆಪಿ ಮುಖಂಡ ಎಸ್. ಪಾಪೇಶ್ ನಾಯಕ, ಚನ್ನಗಾನಹಳ್ಳಿ ಮಲ್ಲೇಶ್, ಟಿ.ಎಸ್. ತಿಪ್ಪೇಸ್ವಾಮಿ, ಕಾಲುವೇಹಳ್ಳಿ ಶ್ರೀನಿವಾಸ್, ಎನ್. ಓಬಳೇಶ್, ಎಚ್.ವಿ.ಪ್ರಕಾಶ್ ರೆಡ್ಡಿ, ಮೋಹನ್, ಆಪ್ತ ಸಹಾಯಕ ಆರ್.ಹನುಮಂತರಾಯ ಇದ್ದರು.