ಬೆಂಗಳೂರು: ಎಸಿಬಿ ಕಾರ್ಯವೈಖರಿ ಬಗ್ಗೆ ಪ್ರಶ್ನೆ ಮಾಡಿದ್ದ ನ್ಯಾಯಮೂರ್ತಿಗಳನ್ನು ಐಪಿಎಸ್ ಅಧಿಕಾರಿಯೊಬ್ಬರು ವರ್ಗಾವಣೆ ನಡೆಸಲು ಮುಂದಾಗುತ್ತಾರೆ ಎಂದರೆ ಸರ್ಕಾರ ಸತ್ತು ಹೋಗಿದೆ ಎಂದರ್ಥ ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಈ ಸರ್ಕಾರದಲ್ಲಿ ಐಪಿಎಸ್- ಐಎಎಸ್‌ಗಳು ಹೈಕೋರ್ಟ್ ನ್ಯಾಯಮೂರ್ತಿಗಳನ್ನೇ ವರ್ಗಾವಣೆ ಮಾಡುವಷ್ಟು ಬಲಾಡ್ಯರೆ. ಹಾಗಾದರೆ ಈ ಸರ್ಕಾರಕ್ಕೆ ಅಧಿಕಾರಿಗಳ ಮೇಲೆ ನಿಯಂತ್ರಣವೇ ಇಲ್ಲವೆ ಎಂದು ಪ್ರಶ್ನಿಸಿದ್ದಾರೆ.
ತಮ್ಮ ವರ್ಗಾವಣೆಗೆ ಐಪಿಎಸ್ ಅಧಿಕಾರಿಯೊಬ್ಬರು ಸರ್ಕಾರಿ ಮಟ್ಟದಲ್ಲಿ ಪ್ರಭಾವ ಬೀರುತ್ತಿರುವ ಬಗ್ಗೆ ಸ್ವತಃ ನ್ಯಾಯಮೂರ್ತಿಗಳೇ ಹೇಳಿಕೊಂಡಿದ್ದಾರೆ. ಹಾಗಾದರೆ ಆ ಐಪಿಎಸ್ ಅಧಿಕಾರಿ ನ್ಯಾಯಾಂಗಕ್ಕಿಂತ ದೊಡ್ಡವರೆ.
ನ್ಯಾಯಮೂರ್ತಿಗಳ ವರ್ಗಾವಣೆ ಪ್ರಕರಣ ಅತ್ಯಂತ ಗಂಭೀರವಾದದ್ದು. ಸರ್ಕಾರ ನ್ಯಾಯಮೂರ್ತಿಗಳ ಆರೋಪದ ಕುರಿತು ತಕ್ಷಣವೆ ತನಿಖೆಗೆ ಆದೇಶಿಸಲಿ ಎಂದು ಆಗ್ರಹಿಸಿದ್ದಾರೆ.
ರಾಜ್ಯ ಬಿಜೆಪಿ ಸರ್ಕಾರದಲ್ಲಿ ಕೆಲ ಐಪಿಎಸ್-ಐಎಎಸ್‌ಐಕಖ ಅಧಿಕಾರಿಗಳು ಕೊಬ್ಬಿದ ಗೂಳಿಗಳಾಗಿದ್ದಾರೆ. ಭ್ರಷ್ಟ ಅಧಿಕಾರಿಗಳೊಂದಿಗೆ ಸರ್ಕಾರವೇ ಕೈ ಜೋಡಿಸಿ 40 ಪರ್ಸೆಂಟ್ ಕಮೀಷನ್ ಹೊಡೆಯುತ್ತಿರುವಾಗ ಈ ಅಧಿಕಾರಿಗಳಿಗೆ ಸರ್ಕಾರದ ಮೇಲೆ ಭಯವಿರಲು ಹೇಗೆ ಸಾಧ್ಯ. ಇಂದು ನ್ಯಾಯಮೂರ್ತಿಗಳ ವರ್ಗಾವಣೆಗೆ ಯತ್ನಿಸಿದವರು ಮುಂದೆ ಮುಖ್ಯಮಂತ್ರಿಗಳ ಬದಲಾವಣೆಗೂ ಕೈ ಹಾಕುವುದಿಲ್ಲವೆ ಎಂದಿದ್ದಾರೆ.
ಈ ಭ್ರಷ್ಟ ಸರ್ಕಾರದಲ್ಲಿ ದೀನ ದಲಿತರ ಹಾಗೂ ನೊಂದವರ ಆಶಾಕಿರಣವಾಗಿ ಉಳಿದಿರುವುದು ನ್ಯಾಯಾಂಗವೊಂದೆ. ಈಗ ಆ ನ್ಯಾಯಾಂಗದ ಮೇಲೂ ದುಷ್ಟರ ಕಣ್ಣು ಬಿದ್ದಿದೆ. ಇದು ನ್ಯಾಯಾಂಗ ವ್ಯವಸ್ಥೆಗೆ ಮಾರಕ. ಕಾರ್ಯಾಂಗದ ಅಧಿಕಾರಿಯೊಬ್ಬರು ನ್ಯಾಯಾಂಗದ ಮೇಲೆ ಪ್ರಭುತ್ವ ಸಾಧಿಸಲು ಹೊರಟಿರುವುದು ಸಣ್ಣ ಸಂಗತಿಯಲ್ಲ. ಸರ್ಕಾರ ಈ ಕೂಡಲೆ ಕ್ರಮ ತೆಗೆದುಕೊಳ್ಳಲಿ ಎಂದು ಆಗ್ರಹಿಸಿದ್ದಾರೆ.