Advertisement

ಶಿಕ್ಷಕ ಈಶ್ವರಪ್ಪ ರೇವಡಿಗೆ ರಾಜ್ಯ ಪ್ರಶಸ್ತಿ ಗರಿ

01:00 PM Sep 05, 2022 | Team Udayavani |

ಗಜೇಂದ್ರಗಡ: ಕೋಟೆ ನಾಡಿನ ಭಾಗದಲ್ಲಿ ಕನ್ನಡ ಕಟ್ಟುವಲ್ಲಿ ಅಹರ್ನಿಶಿ ಶ್ರಮಿಸುತ್ತ, ಸಾಮಾಜಿಕ ಜೀವನದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡು, ಮಕ್ಕಳಿಗೆ ಜ್ಞಾನಾಮೃತ ನೀಡುತ್ತಿರುವ ಮಾದರಿ ಶಿಕ್ಷಕ ಈಶ್ವರಪ್ಪ ರೇವಡಿ ಅವರು ಈ ಬಾರಿಯ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Advertisement

ಹೌದು, ಒಬ್ಬ ಶಿಕ್ಷಕ ಮನಸ್ಸು ಮಾಡಿದರೆ ಏನೆಲ್ಲಾ ಮಾಡಬಹುದು ಎಂಬುದಕ್ಕೆ ಈಶ್ವರಪ್ಪ ರೇವಡಿ ಮಾದರಿಯಾಗಿ ನಿಲ್ಲುತ್ತಾರೆ. ರೋಣ-ಗಜೇಂದ್ರಗಡ ತಾಲೂಕಿನ ಪ್ರತಿ ನಗರ, ಗ್ರಾಮಗಳ ಮನೆ, ಮನೆಗಳಲ್ಲೂ ಕನ್ನಡ ಕಟ್ಟುವ ಕೆಲಸ ಮಾಡಿದ್ದಾರೆ.

ಇದಕ್ಕಷ್ಟೇ ಸೀಮಿತವಾಗದೇ, ಮಕ್ಕಳ ಮೆಚ್ಚಿನ ಮೇಸ್ಟ್ರೆ ಆಗಿ ಹೊರಹೊಮ್ಮುವ ಮೂಲಕ ಈ ಭಾಗದ ಮಾದರಿ ಶಿಕ್ಷಕರಾಗಿದ್ದಾರೆ. ತಾಲೂಕಿನ ಹಿರೇಕೊಪ್ಪ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಕಳೆದ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಈಶ್ವರಪ್ಪ ರೇವಡಿ ಅವರು, ಪಠ್ಯದ ಜತೆ ಹಲವಾರು ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಶಾಲೆಗಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದಾರೆ. ಮಕ್ಕಳ ಓದಿನ ಬೆಳವಣಿಗೆಗಷ್ಟೇ ಅಲ್ಲ, ಅವರಲ್ಲಿ ಸಮಾಜದ ಆಗು ಹೋಗುಗಳ ಬಗ್ಗೆಯೂ ಅರಿವು ಮೂಡಿಸುವುದಲ್ಲದೇ, ವೈಶಿಷ್ಟತೆಯಿಂದ ಶಿಕ್ಷಣ ನೀಡುತ್ತಿದ್ದಾರೆ.

ಶಿಕ್ಷಕ ಐ.ಎ. ರೇವಡಿ ಅವರು ಕನ್ನಡ ಸಾಹಿತ್ಯ ಪರಿಷತ್‌ ತಾಲೂಕು ಅಧ್ಯಕ್ಷರಾಗಿಯೂ ಸವೆ ಸಲ್ಲಿಸುತ್ತಿದ್ದಾರೆ. ಶಾಲಾ ರಜೆ ದಿನಗಳಲ್ಲಿ ಬೇಸಿಗೆ ಶಿಬಿರಗಳಂತಹ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಹೊಸತನಕ್ಕೆ ಸಾಕ್ಷಿಯಾಗಿದ್ದಾರೆ. ಒಂದಿಲ್ಲೊಂದು ಸಾಮಾಜಿಕ ಸೇವೆಯಲ್ಲಿರುವ ಇವರು ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ, ಸಹಕಾರ ಮಾಡುವುದಲ್ಲದೇ, ಇದು ನನ್ನದಲ್ಲ, ನಮ್ಮದು ಎಂಬ ಉದಾರ ಮನೋಭಾವ ಹೊಂದಿದವರದ್ದಾಗಿದೆ.

ರೇವಡಿ ಮೇಸ್ಟ್ರಿಗೆ ರಾಜ್ಯ ಪ್ರಶಸ್ತಿ ಗರಿ: ಶಿಕ್ಷಕ ಈಶ್ವರಪ್ಪ ರೇವಡಿ ಅವರ ಈ ಸೇವೆ ಇಂದು, ನೆನ್ನೆಯದಲ್ಲ. ಇದಕ್ಕೆ ಹಲವಾರು ವರ್ಷಗಳ ಇತಿಹಾಸವಿದೆ. ಸಂಕಷ್ಟದಲ್ಲಿರುವವರ ನೆರವಿಗೆ ಭಾಗ್ಯದಾತನಾಗಿ, ಬಡ ವಿದ್ಯಾರ್ಥಿಗಳಿಗೆ ವಿದ್ಯಾದಾತನಾಗಿ, ಹಿಂದುಳಿದ ಸಮುದಾಗಳ ಪಾಲಿಗೆ ಭಾವೈಕ್ಯದಾತನಾಗಿ ನಿಸ್ವಾರ್ಥ ಸೇವೆಗೈಯುತ್ತಿರುವ ಇವರಿಗೆ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಗೌರವಾದರವಾಗಿದೆ. ಹೀಗಾಗಿ, ಶಿಕ್ಷಕ ಈಶ್ವರಪ್ಪ ರೇವಡಿ ಅವರ ಜ್ಞಾನ ದೀವಿಗೆಗೆ ಪ್ರಶಸ್ತಿಯ ಗರಿ ಮೂಡಿರುವುದು ಅಭಿಮಾನಿಗಳಲ್ಲಿ ಹರ್ಷ ಇಮ್ಮಡಿಗೊಳಿಸಿದೆ.

Advertisement

ಸನ್ನಡತೆಯ ಸಾಕಾರಮೂರ್ತಿ: ಯಾವುದೇ ವ್ಯಕ್ತಿಗೆ ನಿರಾಡಂಬರದ ಜೀವನ, ಸನ್ನಡತೆ, ಸಚ್ಚಾರಿತ್ರ್ಯದಿಂದ ಭೇದಭಾವವಿಲ್ಲದೆ ಸರ್ವರಲ್ಲೂ ಬೆರೆತು ಸೇವೆ ಮಾಡುವ ಮನೋಭಾವ ಅಗತ್ಯವಾಗಿರುತ್ತದೆ. ಇಂತಹ ಮನೋವೃತ್ತಿಯ ಮಹಾಚೇತನ ಶಿಕ್ಷಕ ಐ.ಎ. ರೇವಡಿ ಅವರ ಸರಳತೆ, ಸಜ್ಜನಿಕೆ, ಮಾನವ ಪ್ರೇಮ ಅಮೋಘವಾದದ್ದಾಗಿದೆ. ಬಡ ಮಕ್ಕಳಿಗೆ ಟ್ಯಾಬ್‌ ವಿತರಣೆ: ಕೋವಿಡ್‌ ಸಂಕಷ್ಟದಿಂದಾಗಿ ಮಕ್ಕಳಿಗೆ ಶಿಕ್ಷಣ ನೀಡಲು ಶಾಲೆಗಳು ಸ್ಥಗಿತಗೊಂಡಿದ್ದವು. ಆದರೆ ವಿದ್ಯಾರ್ಥಿ ಜೀವನದ ಮಹತ್ವದ ಘಟ್ಟವಾದ ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಆನ್‌ ಲೈನ್‌ ತರಗತಿ ನಡೆಸುತ್ತಿದ್ದ ಸಂದರ್ಭದಲ್ಲಿ ಬಡ ಮಕ್ಕಳಿಗೆ ತರಗತಿ ವೀಕ್ಷಣೆಗೆ ತೊಂದರೆಯಾಗುತ್ತಿರುವುದನ್ನು ಮನಗಂಡು ತಾಲೂಕಿನ ಕಡು ಬಡ ಮಕ್ಕಳಿಗೆ 10 ಟ್ಯಾಬ್‌ ನೀಡಿ ಮಾನವೀಯತೆ ಮೆರೆದ ಹಿರಿಮೆ ರೇವಡಿ ಅವರದ್ದಾಗಿದೆ.

ಇಂದು ಪ್ರಶಸ್ತಿ ಪ್ರದಾನ

ಈಗಾಗಲೇ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿರುವ ಶಿಕ್ಷಕ ಈಶ್ವರಪ್ಪ ರೇವಡಿ ಅವರಿಗೆ ಸೆ. 5 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಆಚಾರ ವಿಚಾರಗಳಲ್ಲಿ ಪರಿಶುದ್ಧತೆ, ಸರಳ ನಿಸ್ವಾರ್ಥ ಜೀವನ ತಮ್ಮದೆಲ್ಲವನ್ನು ಶಾಲೆಗೆ, ವಿದ್ಯಾರ್ಥಿಗಳಿಗೆ ನೀಡಿದ್ದಾರೆ. ತನ್ನವರು, ತನ್ನದು ಎನ್ನುವುದು ಏನೂ ಇಲ್ಲ ಎಂಬ ತತ್ವದಡಿ ಶಿಕ್ಷಕ ಈಶ್ವರಪ್ಪ ರೇವಡಿ ಹಚ್ಚಿದ ಜ್ಞಾನದ ದೀವಿಗೆ ರಾಜ್ಯದ ತುಂಬೆಲ್ಲಾ ಪಸರಿಸಿದೆ. ಅವರಿಗೆ ದೊರೆತಿರುವ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಹಿರಿಮೆ ಬಂದಂತಾಗಿದೆ.  –ಶ್ರೀ ವಿಜಯಮಹಾಂತ ಸ್ವಾಮೀಜಿ ಮೈಸೂರ ಸಂಸ್ಥಾನ ಮಠ

ಪ್ರತಿಯೊಬ್ಬರೂ ತಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡಿದರೆ ಸುಂದರ ಸಮಾಜ ಕಟ್ಟಬಹುದು. ನನ್ನ ಅಳಿಲು ಸೇವೆಯನ್ನು ಸರ್ಕಾರ ಗುರುತಿಸಿ ರಾಜ್ಯ ಮಟ್ಟದ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ.  -ಐ.ಎ. ರೇವಡಿ, ಪ್ರಶಸ್ತಿ ಪುರಸ್ಕೃತ ಶಿಕ್ಷಕ

-ಡಿ.ಜಿ. ಮೋಮಿನ್‌

Advertisement

Udayavani is now on Telegram. Click here to join our channel and stay updated with the latest news.

Next