Advertisement

ಭಾಗಮಂಡಲ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ರಾಜ್ಯ ಪ್ರಶಸ್ತಿ

12:03 AM Oct 01, 2019 | Team Udayavani |

ಮಡಿಕೇರಿ: ಭಾಗಮಂಡಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅತ್ಯುತ್ತಮ ಕಾರ್ಯನಿರ್ವಹಣೆ ಮತ್ತು ಸರ್ವಾಂಗೀಣ ಪ್ರಗತಿಯ ಕಾರಣಕ್ಕಾಗಿ ಅಪೆಕ್ಸ್‌ ಬ್ಯಾಂಕ್‌ 2017-18ನೇ ಸಾಲಿನ ರಾಜ್ಯ ಮಟ್ಟದ ತೃತೀಯ ಪ್ರಶಸ್ತಿಯನ್ನು ನೀಡಿದೆ ಎಂದು ಸಂಘದ ಅಧ್ಯಕ್ಷ ಹೊಸೂರು ಸತೀಶ್‌ ಕುಮಾರ್‌ ಅವರು ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಅಪೆಕ್ಸ್‌ ಬ್ಯಾಂಕ್‌ ಮಹಾಸಭೆಯಲ್ಲಿ ಪ್ರಶಸ್ತಿಯನ್ನು ಸಂಘದ ಪರವಾಗಿ ಸ್ವೀಕರಿಸಲಾಗಿದೆ. ಪ್ರಶಸ್ತಿಯು 10 ಸಾವಿರ ರೂ. ನಗದು, ಪ್ರಶಸ್ತಿ ಪತ್ರ, ಪಾರಿತೋಷಕವನ್ನು ಒಳಗೊಂಡಿದೆ. ಪ್ರಶಸ್ತಿ ಪಡೆದ ರಾಜ್ಯದ ಆರು ಸಂಘಗಳ ಪೈಕಿ ನಮ್ಮ ಸಂಘವೂ ಒಂದಾಗಿದೆ. ಅಲ್ಲದೆ, ಕೊಡಗು ಜಿಲ್ಲೆಯಲ್ಲಿ ಪ್ರಪ್ರಥಮ ಬಾರಿಗೆ ಈ ಪ್ರಶಸ್ತಿಯನ್ನು ಪಡೆದ ಸಂಘ ತಮ್ಮದೆಂದು ಹರ್ಷ ವ್ಯಕ್ತಪಡಿಸಿದರು.

Advertisement

ಪ್ರಶಸ್ತಿ ಸ್ವೀಕರಿಸುವ ಸಂದರ್ಭ ಸಂಘದ ನಿರ್ದೇಶಕರಾದ ಜೆ.ಎಸ್‌. ನಂಜುಂಡಪ್ಪ, ಅಯ್ಯಣೀರ ಎ.ದಿನೇಶ್‌ ಹಾಜರಿದ್ದರು.

ಡಿಸಿಸಿ ಪ್ರಶಸ್ತಿ
ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನಿಂದ 2018-19ನೇ ಸಾಲಿನ ಸ್ವಸಹಾಯ ಸಂಘಗಳ ರಚನೆ ಮತ್ತು ಸಾಲ ಜೋಡಣೆಗಾಗಿ ಮಡಿಕೇರಿ ತಾಲ್ಲೂಕಿಗೆೆ ಸಂಬಂಧಿಸಿದಂತೆ ಪ್ರಥಮ ಬಹುಮಾನವನ್ನು ಭಾಗಮಂಡಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಪಡೆದುಕೊಂಡಿದೆ ಎಂದು ಸತೀಶ್‌ ಕುಮಾರ್‌ ತಿಳಿಸಿದರು.

25.19 ಲಕ್ಷ ರೂಲಾಭ
ಭಾಗಮಂಡಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 1991-92 ನೇ ಸಾಲಿನಿಂದ ನಿರಂತರವಾಗಿ ಲಾಭವನ್ನು ಹೊಂದಿಕೊಂಡು ಪ್ರಗತಿಯ ಪಥದಲ್ಲಿ ಮುನ್ನಡೆಯುತ್ತಿದೆ. ಪ್ರಸಕ್ತ ಸಾಲಿನಲ್ಲಿ ಸಂಘವು 25.19 ಲಕ್ಷ ರೂ. ಲಾಭ ಗಳಿಸುವ ಮೂಲಕ ಲೆಕ್ಕಪರಿಶೋಧನಾ ವರ್ಗೀಕರಣದಲ್ಲಿ ಸತತ ಎ ದರ್ಜೆಯನ್ನು ಹೊಂದಿರುವುದಾಗಿ ಸತೀಶ್‌ ಕುಮಾರ್‌ ಮಾಹಿತಿ ನೀಡಿದರು. ಉಪಾಧ್ಯಕ್ಷ ಬಾರಿಕೆ ಪುಷ್ಪ, ನಿರ್ದೇಶಕರುಗಳಾದ ಜೆ.ಎಸ್‌.ನಂಜುಂಡಪ್ಪ, ಅಯ್ಯಣಿರ ಎ.ದಿನೇಶ್‌, ಕುದುಪಜೆ ಹರೀಶ್‌ ಹಾಗೂ ಕಾರ್ಯ ನಿರ್ವಹಣಾಧಿಕಾರಿ ಕಲಾವತಿ ಉಪಸ್ಥಿತರಿದ್ದರು.

ಮೃತರ ಸಾಲಮನ್ನಾ
ಸಂಘದ ಸದಸ್ಯರಾದ ಕೋರಂಗಾಲ ಗ್ರಾಮದ ಅತ್ತೇಡಿ ಎಂ.ಯಶವಂತ, ಬೋಳನ ಎ. ಬಾಲಕೃಷ್ಣ,ಅವರ ಪತ್ನಿ ಬೋಳನ ಬಿ. ಯಮುನಾ ಮತ್ತು ಕಾಳನ ಎಂ. ಉದಯ ಹಾಗೂ ನಡುಬೆಟ್ಟಿ ರಾಜು ‌ ಭೂ ಕುಸಿತದಲ್ಲಿ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಸದಸ್ಯರ ಡಿವಿಡೆಂಡ್‌ ಮೊತ್ತದಲ್ಲಿ ಮೃತ ಬಾಲಕೃಷ್ಣ ಅವರು ಹೊಂದಿಕೊಂಡಿದ್ದ ವಾಹನ ಸಾಲ ಅಸಲು ಮತ್ತು ಬಡ್ಡಿ ಸೇರಿ 37,068 ಹಾಗೂ ಮೃತ ಯಶವಂತ ಅವರು ಹೊಂದಿಕೊಂಡಿದ್ದ ವಾಹನ ಸಾಲ ಮತ್ತು ಆಭರಣ ಸಾಲ ಅಸಲು ಮತ್ತು ಬಡ್ಡಿ ಸೇರಿ 31,720 ರೂ.ಗಳನ್ನು ಸಂಪೂರ್ಣ ಮನ್ನಾ ಮಾಡಲಾಗಿದೆ. ಮೃತ ಉದಯ ಹಾಗೂ ರಾಜು ಅವರ ಕುಟುಂಬಸ್ಥರಿಗೆ ತಲಾ 10 ಸಾವಿರ ರೂ. ನೆರವು ನೀಡಲಾಗಿದೆ ಎಂದು ಸತೀಶ್‌ ಕುಮಾರ್‌ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next