Advertisement

ಇಂದಿನಿಂದ ಅಧಿವೇಶನ: ಕರಾವಳಿಯ ನಿರೀಕ್ಷೆ , ಬೇಡಿಕೆ ಪ್ರತಿಧ್ವನಿಸಲಿ

11:48 PM Sep 12, 2021 | Team Udayavani |

ಉಡುಪಿ/ಮಂಗಳೂರು: ಸೋಮವಾರದಿಂದ ವಿಧಾನಮಂಡಲ ಅಧಿವೇಶನ ನಡೆಯಲಿದ್ದು, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಜನತೆ ಸಾಕಷ್ಟು ನಿರೀಕ್ಷೆಗಳನ್ನು ಇರಿಸಿಕೊಂಡಿದ್ದಾರೆ.

Advertisement

ಕರಾವಳಿಯ ಸಮಸ್ಯೆಗಳ ಬಗ್ಗೆ ಇಲ್ಲಿನ ಸಚಿವರು ಮತ್ತು ಶಾಸಕರು ಸದನದಲ್ಲಿ ಧ್ವನಿಯೆತ್ತುವ ಆವಶ್ಯಕತೆಯಿದೆ. ಇದಕ್ಕೆ ಪೂರಕವಾಗಿ ಉಭಯ ಜಿಲ್ಲೆಗಳ ವಿಧಾನಸಭಾ ಕ್ಷೇತ್ರಗಳಲ್ಲಿ ಆಡಳಿತಾರೂಢ ಬಿಜೆಪಿಯ ಶಾಸಕರೇ ಅತ್ಯಧಿಕ ಸಂಖ್ಯೆಯಲ್ಲಿದ್ದು,  ಜನರ ಭರವಸೆ, ನಿರೀಕ್ಷೆ ಹೆಚ್ಚಿರುವುದು ಸಹಜ .

ಉಡುಪಿ ಜಿಲ್ಲೆಗೆ ಸುಸಜ್ಜಿತ ಸರಕಾರಿ ಮೆಡಿಕಲ್‌ ಕಾಲೇಜು, ಕೈಗಾರಿಕೆಗಳಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶ, ಕಡಲ್ಕೊರೆತ ತಡೆಗೆ ಶಾಶ್ವತ ಪರಿಹಾರ ಕಲ್ಪಿಸುವುದರ ಸಹಿತ ಹಲವು ಬೇಡಿಕೆಗಳಿವೆ.

ರೈತರ ಹಿತ ಕಾಯಿರಿ:

ಕಾಡು ಪ್ರಾಣಿ ಹಾವಳಿಯಿಂದ ಬೆಳೆ ನಾಶಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಕಸ್ತೂರಿ ರಂಗನ್‌ ವರದಿಗೆ ಸಂಬಂಧಿಸಿ ರೈತರ ಹಿತ ಕಾಯುವ ಕುರಿತ ಚರ್ಚೆ, ಡೀಮ್ಡ್ ಫಾರೆಸ್ಟ್‌ ನಿಯಮದಿಂದಾಗಿ 53 ಮತ್ತು 94ಸಿ ಅಡಿ ಅರ್ಜಿ ಸಲ್ಲಿಸಿದವರಿಗೆ ಕೃಷಿ ಭೂಮಿ ಮತ್ತು ನಿವೇಶನ ಹಕ್ಕುಪತ್ರ ಮಂಜೂರಾತಿಗೆ ತೊಡಕು ಚರ್ಚೆಯಾಗಬೇಕು. ರೈತರಿಗೆ ಕುಮ್ಕಿ ಜಾಗದ ಹಕ್ಕು ನೀಡಿಕೆ ಕಾಯ್ದೆ ತಾಂತ್ರಿಕ ಕಾರಣಗಳಿಂದ ಅನುಷ್ಠಾನಕ್ಕೆ ಬಂದಿಲ್ಲ. ಇದು ಶೀಘ್ರ ಜಾರಿಯಾಗಬೇಕು.

Advertisement

ತುಳುಭಾಷೆಗೆ ರಾಜ್ಯಭಾಷೆ ಸ್ಥಾನಮಾನ:

ತುಳುಭಾಷೆ ಸಂವಿಧಾನದ 8ನೇ ಪರಿಚ್ಛೇದದಲ್ಲಿ ಸೇರ್ಪಡೆಗೆ ಪೂರಕವಾಗಿ ಸರಕಾರ ಅದಕ್ಕೆ ರಾಜ್ಯಭಾಷೆಯಾಗಿ ಮಾನ್ಯತೆ ನೀಡಬೇಕಿದೆ. ಕರಾವಳಿಯ ಶಾಸಕರು ಈ ಬಾರಿಯ ಅಧಿವೇಶನದಲ್ಲಿ ಈ ಕುರಿತು ಪ್ರಯತ್ನಿಸ ಬೇಕಿದೆ.

ಮೀನುಗಾರಿಕೆ ವಿ.ವಿ. :

ಮೀನುಗಾರಿಕೆಗೆ ಸಂಬಂಧಿಸಿ ಸಂಶೋಧನೆ ಮತ್ತು ಚಟುವಟಿಕೆಗಳಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಮೀನುಗಾರಿಕೆ ಕಾಲೇಜನ್ನು ಕೇಂದ್ರವಾಗಿ ಇರಿಸಿಕೊಂಡು ವಿಶ್ವವಿದ್ಯಾನಿಲಯ ಸ್ಥಾಪಿಸುವ ಯತ್ನವಾಗಬೇಕು.

ಗ್ರಾಮೀಣ ಸಾರಿಗೆ, ಸಂಪರ್ಕ ಸೇತುವೆ :

ಕೋಡಿ – ಗಂಗೊಳ್ಳಿ ಸಂಪರ್ಕ ಸೇತುವೆ ಬೇಡಿಕೆಯಿದೆ, ಹೆಜಮಾಡಿ ಬಂದರಿಗೆ ಶಿಲಾನ್ಯಾಸ ಮಾಡಿ ಹಲವು ತಿಂಗಳು ಕಳೆದರೂ ತಾಂತ್ರಿಕ ಕಾರಣಗಳಿಂದಾಗಿ ಇನ್ನೂ ಕಾಮಗಾರಿ ಆರಂಭಗೊಂಡಿಲ್ಲ. ಇದಲ್ಲದೆ ಸ್ಥಳೀಯರ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಸಣ್ಣ ಕೈಗಾರಿಕೆ ಘಟಕ ಸ್ಥಾಪನೆ, ಗ್ರಾಮೀಣ ಭಾಗಗಳಿಗೆ ಸಾರಿಗೆ ವ್ಯವಸ್ಥೆ, ಪ್ರವಾಸೋದ್ಯಮ ಅಭಿವೃದ್ಧಿ, ನೂತನ ಪುರಸಭೆ ಕಟ್ಟಡ ನಿರೀಕ್ಷೆಯನ್ನು ಹೊಂದಲಾಗಿದೆ.

ಮೀನುಗಾರರಿಗೆ ನೆರವು : ಮೀನುಗಾರರಿಗೆ ಸಬ್ಸಿಡಿ ಸೀಮೆ ಎಣ್ಣೆ ನೀಡುವ ವಿಚಾರ ಮತ್ತು ಸಬ್ಸಿಡಿ ಡೀಸೆಲ್‌ ಹಣ ಸಕಾಲದಲ್ಲಿ ಪಾವತಿ ಯಾಗದ ಬಗ್ಗೆ ಚರ್ಚೆ ನಡೆಯಬೇಕಿದೆ.

ಸಕ್ಕರೆ ಕಾರ್ಖಾನೆ ಪುನಶ್ಚೇತನ :  ಬ್ರಹ್ಮಾವರದಲ್ಲಿ ಸಕ್ಕರೆ ಕಾರ್ಖಾನೆಯ ಪುನಶ್ಚೇತನವಾಗ

ಬೇಕಿದೆ. ಶಿಕ್ಷಕರು, ಪಶು ವೈದ್ಯರ ಖಾಲಿ ಹುದ್ದೆ ಭರ್ತಿ ಕುರಿತು ನಿರೀಕ್ಷೆ ಹೊಂದಲಾಗಿದೆ. ಕುಂದಾಪುರಕ್ಕೆ ಆರ್‌ಟಿಒ ಕಚೇರಿ ಮಂಜೂರಾತಿ ಮತ್ತು ಬೈಂದೂರಿಗೆ ನ್ಯಾಯಾಲಯದ ಬೇಡಿಕೆ ಈಡೇರಬೇಕಾಗಿದೆ. ಉಡುಪಿ ನಗರಕ್ಕೆ ಬೇಕಿರುವ ಸುಸಜ್ಜಿತ ಯುಜಿಡಿ ಕಾಮಗಾರಿ ಇನ್ನಿತರ ಆವಶ್ಯಕತೆಗಳು.

ಪ್ರಾಕೃತಿಕ ವಿಕೋಪ ಅನುದಾನ :

ಪ್ರಕೃತಿ ವಿಕೋಪಗಳಿಂದ ಕರಾವಳಿಯ ರಸ್ತೆ, ಸೇತುವೆಗಳಿಗೆ ಹಾನಿಯಾಗಿದ್ದು ಇದಕ್ಕೆ ಹೆಚ್ಚಿನ ಅನುದಾನ ಬಿಡುಗಡೆಯಾಗಬೇಕು.

ಮನೆ ನಿವೇಶನ ಮಿತಿ ಹೆಚ್ಚಳ :  ಪ್ರಸ್ತುತ ನಗರ ಪ್ರದೇಶದಲ್ಲಿ ಮನೆ ನಿವೇಶನಗಳಿಗೆ ಸರಕಾರದ ವತಿಯಿಂದ 1.25 ಸೆಂಟ್ಸ್‌ ಜಾಗ ನೀಡುತ್ತಿದ್ದು ಇದು ಸಾಕಾಗುತ್ತಿಲ್ಲ. ಇದನ್ನು ಕನಿಷ್ಠ 2.75 ಸೆಂಟ್ಸ್‌ಗೆ ಏರಿಸಬೇಕು. ಬಿಪಿಎಲ್‌ ಕಾರ್ಡ್‌ ಗೊಂದಲ, ಕೆವೈಸಿ, ಹೊಸತಾಗಿ ಬಿಪಿಎಲ್‌ಪಡಿತರ ಚೀಟಿ ನೀಡಿಕೆ ಸಮಸ್ಯೆ ಪರಿಹಾರವಾಗಬೇಕು.

ಪ್ರತ್ಯೇಕ ಮರಳು ನೀತಿ :  ಕರಾವಳಿಗೆ ಪ್ರತ್ಯೇಕ ಮರಳು ನೀತಿ  ಘೋಷಿಸುವುದಾಗಿ ಈ ಹಿಂದೆ ಹಲವು ಬಾರಿ ಭರವಸೆ ನೀಡಿದ್ದರೂ ಈಡೇರಿಲ್ಲ. ಈ ಅಧಿವೇಶನದಲ್ಲಿ ಈವರೆಗಿನ  ಭರವಸೆಗಳು ಈಡೇರಬೇಕು.

ಲಸಿಕೆ ಹೆಚ್ಚಳ :  ಕೇರಳದಲ್ಲಿ ಕೊರೊನಾ ಸೋಂಕು ಹೆಚ್ಚಿರುವ ಹಿನ್ನೆಲೆಯಲ್ಲಿ ಕರಾವಳಿಗೆ ಕೊರೊನಾ ಲಸಿಕೆ ಪ್ರಮಾಣ ಹೆಚ್ಚಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next