ಬೆಂಗಳೂರು: ಸ್ಟಾರ್ಟ್‌ಅಪ್‌ಗಳು ಗಟ್ಟಿಯಾಗಿ ನೆಲೆಯೂರಲು ಆರಂಭಿಕ ಆರ್ಥಿಕ ಉತ್ತೇಜನ ಅಗತ್ಯ. ಆ ನಿಟ್ಟಿನಲ್ಲಿ ಪ್ರತಿಷ್ಠಿತ ಕಂಪೆನಿಗಳು, ಸರಕಾರಗಳು ಉದಾರ ಅನುದಾನ ನೀಡುವಂತಾಗಬೇಕು. ಜತೆಗೆ ಸ್ಟಾರ್ಟ್‌ಅಪ್ ಸ್ಥಾಪಕರು ಮಾರುಕಟ್ಟೆ ಕೌಶಲ ಅರಿತರೆ ಯಶಸ್ವಿಯಾಗಿ ವ್ಯವಹರಿಸಿ ಪ್ರಗತಿ ಸಾಧಿಸಲು ಸಹಕಾರಿಯಾಗಲಿದೆ ಎಂದು ಮಣಿಪಾಲ್ ಗ್ಲೋಬಲ್ ಎಜುಕೇಶನ್ ಅಧ್ಯಕ್ಷ ಟಿ.ವಿ. ಮೋಹನ್‌ದಾಸ್ ಪೈ ಹೇಳಿದರು.
ಬೆಂಗಳೂರು ಅರಮನೆಯಲ್ಲಿ ನಡೆದ ಬೆಂಗಳೂರು ಟೆಕ್ ಸಮ್ಮಿಟ್‌ನಲ್ಲಿ “ಭಾರತಕ್ಕೆ ಸ್ಟಾರ್ಟ್‌ಅಪ್‌ಗಳು: ಅನ್ವೇಷಣೆ ಹಾಗೂ ಉದ್ಯಮಶೀಲತೆಯು ಹೇಗೆ ಭಾರತದ ಪ್ರಗತಿಯನ್ನು ಮುನ್ನಡೆಸಲಿದೆ’ ವಿಷಯ ಕುರಿತು ಮಾತನಾಡಿದ ಅವರು, ದೇಶದಲ್ಲಿ ಇಂದು 32,000ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗ್ಳಿದ್ದು, ವರ್ಷಕ್ಕೆ ಐದಾರು ಸಾವಿರ ಸ್ಟಾರ್ಟ್‌ಅಪ್‌ಗ್ಳು ರೂಪುಗೊಳ್ಳುತ್ತಿವೆ. ಆದರೆ 1,200 ಸ್ಟಾರ್ಟ್‌ಅಪ್‌ಗ್ಳಿಗೆ ಮಾತ್ರ ಅನುದಾನ ಸಿಗುತ್ತಿದೆ.
ಎಲ್ಲ ಸ್ಟಾರ್ಟ್‌ಅಪ್‌ಗ್ಳಿಗೂ ಉತ್ತೇಜನ ಸಿಕ್ಕರೆ ಉದ್ಯಮ ಶೀಲತೆ ಬೆಳೆಸಿಕೊಳ್ಳಲು ಸಹಕಾರಿಯಾಗಲಿದೆ ಎಂದರು.
“ಎಲಿವೇಟ್ 100′ ಉತ್ತಮ ಪ್ರಯತ್ನ: 2025ರ ವೇಳೆಗೆ ಒಂದು ಲಕ್ಷಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗ್ಳು ಸ್ಥಾಪನೆಯಾಗುವ ನಿರೀಕ್ಷೆಯಿದ್ದು, ಲಕ್ಷಾಂತರ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ. ಹಾಗಾಗಿ ಸ್ಟಾರ್ಟ್‌ಅಪ್‌ಗ್ಳಿಗೆ ಉತ್ತೇಜನ ಅಗತ್ಯ. ರಾಜ್ಯ ಐಟಿಬಿಟಿ ಇಲಾಖೆಯು “ಎಲಿವೇಟ್ 100′ ಕಾರ್ಯಕ್ರಮದಡಿ ಸ್ಟಾರ್ಟ್‌ಅಪ್‌ಗ್ಳಿಗೆ 50 ಲಕ್ಷ ರೂ.ವರೆಗೆ ಉತ್ತೇಜನ ನೀಡುವ ಕಾರ್ಯಕ್ರಮ ಜಾರಿಗೊಳಿಸಿರುವುದು ಉತ್ತಮ ಪ್ರಯತ್ನ. ಈ ರೀತಿ ಸಾವಿರಕ್ಕೂ ಹೆಚ್ಚು ಸ್ಟಾರ್ಟ್ ಅಪ್‌ಗ್ಳಿಗೆ ನೆರವು ನೀಡಿದರೂ ಉಪಯುಕ್ತ ಎಂದರು.
ಖಾಸಗಿ ಕಂಪೆನಿಗಳ ನೆರವು ಅಗತ್ಯ: ದೇಶದ ಪ್ರತಿಷ್ಠಿತ ಕಂಪೆನಿಗಳು ತಮ್ಮ ಬಂಡವಾಳದಲ್ಲಿ ಸ್ವಲ್ಪ ಪಾಲನ್ನು ಸ್ಟಾರ್ಟ್ ಅಪ್‌ಗ್ಳಲ್ಲಿ ವಿನಿಯೋಗಿಸುವತ್ತ ಗಮನ ಹರಿಸಬೇಕು. ಇದರಿಂದ ನವೋದ್ಯಮ ಕ್ಷೇತ್ರವೂ ವ್ಯಾಪಕವಾಗಿ ಬೆಳೆಯಲು ಅನುಕೂಲವಾಗಲಿದೆ. ಜತೆಗೆ ಯಶಸ್ವಿ ಸ್ಟಾರ್ಟ್ ಅಪ್‌ಗ್ಳ ಯಶೋಗಾಥೆಯನ್ನು ಪ್ರಚಾರಪಡಿಸಬೇಕು. ಇದರಿಂದ ಯುವಜನತೆ ಸ್ಫೂರ್ತಿ ಪಡೆದು ಈ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಪ್ರೇರಣೆ ನೀಡಿದಂತಾಗಲಿದೆ ಎಂದು ಅಭಿಪ್ರಾಯಪಟ್ಟರು.