Advertisement

ಸ್ಟಾರ್ಟ್‌ಅಪ್‌ ಯೋಜನೆ: ವಸತಿ ಸಮುಚ್ಚಯಗಳಲ್ಲಿ ಮಡಿಕೆ ಕಾಂಪೋಸ್ಟ್‌

09:53 PM Oct 12, 2020 | mahesh |

ಮಹಾನಗರ: ಮನೆಗಳಲ್ಲಿ, ವಸತಿ ಸಮುಚ್ಚಯಗಳಲ್ಲಿ ಹಸಿ ಕಸ-ಒಣ ಕಸ ವಿಂಗಡಣೆಯನ್ನು ಮಹಾನಗರ ಪಾಲಿಕೆ ಕಟ್ಟುನಿಟ್ಟಾಗಿ ಜಾರಿಗೆ ತರುತ್ತಿದ್ದು, ನಿಯಮ ಪಾಲನೆ ಮಾಡದಿದ್ದರೆ ದಂಡ ವಿಧಿಸಲಾಗುತ್ತಿದೆ. ನಗರದಲ್ಲಿರುವ ಕೆಲವೊಂದು ವಸತಿ ಸಮುಚ್ಚಯಗಳಲ್ಲಿ ಇದೀಗ ನೂತನ ಕಸ ವಿಂಗಡಣೆ ಕ್ರಮ ಅನುಷ್ಠಾನಿಸಲು ಚಿಂತಿಸಲಾಗಿದೆ.

Advertisement

ಅನೇಕ ವರ್ಷಗಳಿಂದ ಸ್ವತ್ಛತ ಅಭಿಯಾನದ ಮೂಲಕ ಜಾಗೃತಿ ಮೂಡಿಸಿರುವ “ರಾಮಕೃಷ್ಣ ಮಿಷನ್‌’ ಹಸಿ ಕಸ ವಿಲೇವಾರಿಗೆ ಮುಂದಾಗಿದೆ. ಹಸಿ ಕಸ ನಿರ್ವಹಣೆಗೆಂದು ನಗರದ 4,000ಕ್ಕೂ ಮಿಕ್ಕಿ ಮನೆಗಳಿಗೆ ಈಗಾಗಲೇ “ಮಡಿಕೆ ಕಾಂಪೋಸ್ಟ್‌’ ನೀಡಲಾಗಿದ್ದು, ಈ ಯೋಜನೆಯನ್ನು ಮಠದ ಮಾರ್ಗದರ್ಶನದಲ್ಲಿ ವಸತಿ ಸಮುಚ್ಚಯಗಳಲ್ಲೂ ಅಳವಡಿಸಲಾಗುತ್ತಿದೆ. ರಾಮಕೃಷ್ಣ ಮಠದ ಮಾರ್ಗದರ್ಶನದಲ್ಲಿ ಸ್ವತ್ಛ ಮಂಗಳೂರು ತಂಡದ ಸದಸ್ಯರು ಸ್ಟಾರ್ಟ್‌ಅಪ್‌ ಯೋಜನೆ¿ ಮೂಲಕ ಇದನ್ನು ಕಾರ್ಯರೂಪಕ್ಕೆ ತರಲು ಮುಂದಾಗಿದ್ದಾರೆ.

ವಸತಿ ಸಮುಚ್ಚ ಅಸೋಸಿಯೇಶನ್‌ ಅಧ್ಯಕ್ಷ ಬಿ.ಕೆ. ಶರ್ಮ ಅವರು “ಉದಯವಾಣಿ ಸುದಿನ’ಕ್ಕೆ ಪ್ರತಿಕ್ರಿಯಿಸಿ, ಕಸದಿಂದ ರಸ ಎಂಬ ಮಾತಿನಂತೆ ಸುತ್ತಮುತ್ತಲಿನ ಪರಿಸರ ಶುಚಿಯಾಗಿರಬೇಕು ಎಂಬ ಉದ್ದೇಶದಿಂದ ರಾಮಕೃಷ್ಣ ಮಿಷನ್‌ ಸಹಕಾರದೊಂದಿಗೆ ನಮ್ಮ ವಸತಿ ಸಮುಚ್ಚಯದಲ್ಲಿ ಈ ಕಾಂಪೋಸ್ಟ್‌ ಪದ್ಧತಿಯನ್ನು ಅಳವಡಿಸಿದ್ದೇವೆ. ಯಾಂತ್ರಿಕ ಪದ್ಧತಿಗೆ ಸುಮಾರು 5 ಲಕ್ಷ ರೂ. ಖರ್ಚು ತಗಲುತ್ತದೆ. ಆದರೆ ಮಡಿಕೆ ಕಾಂಪೋಸ್ಟ್‌ ವಿಧಾನ ಕಡಿಮೆ ಖರ್ಚಿನಲ್ಲಿ ಸಾಧ್ಯ. ಎಲ್ಲ ವಸತಿ ಸಮುಚ್ಚಯಗಳಲ್ಲಿ ಈ ವಿಧಾನ ಅಳವಡಿಸಿದರೆ ಸ್ವತ್ಛ ಮಂಗಳೂರು ಪರಿಕಲ್ಪನೆ ಸಾಧ್ಯ. ನಮ್ಮ ಈ ಪ್ರಯತ್ನಕ್ಕೆ ಅಸೋಸಿಯೇಶನ್‌ ಕಾರ್ಯದರ್ಶಿ ಧರಂವೀರ್‌ ಶೆಣೈ, ಖಜಾಂಚಿ ಚಂದ್ರಹಾಸ ಅಮೀನ್‌, ಮಂಗಳೂರು ಎಸ್‌ಇಝಡ್‌ ಲಿ.ನ ಮ್ಯಾನೇಜರ್‌ ಪುಂಡಲಿಕ ಶೆಣೈ ಸಹಿತ ಕಮಿಟಿ ಸದಸ್ಯರು, ಮಾಜಿ ಮೇಯರ್‌, ಸ್ಥಳೀಯ ಪಾಲಿಕೆ ಸದಸ್ಯ ಶಶಿಧರ ಹೆಗ್ಡೆ, ಪಾಲಿಕೆ ಪರಿಸರ ಅಭಿಯಂತರ ಮಧು ಅವರು ಪ್ರೋತ್ಸಾಹ ನೀಡಿದ್ದಾರೆ ಎಂದಿದ್ದಾರೆ.

ಕಾಂಪೋಸ್ಟ್‌ ವ್ಯವಸ್ಥೆ ಹೇಗೆ?
ರಾಮಕೃಷ್ಣ ಮಿಷನ್‌ ವತಿಯಿಂದ ಮೂರು ಮಣ್ಣಿನ ಮಡಕೆಗಳನ್ನು ಕೊಡಲಾಗುತ್ತದೆ. ಕೆಳ ಭಾಗದ ಮಡಕೆಯ ಮೇಲೆ ಎರಡು ಮಡಕೆಗಳನ್ನು ಇಡಲಾಗುತ್ತದೆ. ಮೇಲಿನ ಮಡಕೆಯಲ್ಲಿ ನೀರು ರಹಿತ ಹಸಿ ಕಸಗಳನ್ನು ಹಾಕಬೇಕು. ಅದರ ಮೇಲೆ ತೆಂಗಿನ ನಾರು ಅಥವಾ ಮಡಕೆಯೊಂದಿಗೆ ನೀಡಿದ ಕಾಂಪೋಸ್ಟ್‌ ಪೌಡರ್‌ನ್ನು ಹಾಕಬೇಕು. ಮೇಲಿನ ಮಡಕೆ ತುಂಬಿದಾಗ ಅದನ್ನು ತೆಗೆದು ಕೊನೆಯ ಮಡಕೆಗೆ ಹಾಕಬೇಕು. ಮತ್ತೆ ಎರಡನೇ ಮಡಕೆ ಮೇಲೆ ಇಟ್ಟು ಅದಕ್ಕೆ ಹಸಿ ಕಸ ಹಾಕಬೇಕು. ಹೀಗೆ ಮನೆಯ ಹಸಿ ತ್ಯಾಜ್ಯದಿಂದಲೇ ಗೊಬ್ಬರ ತಯಾರಾಗುತ್ತದೆ.

ಕಸ ವಿಂಗಡಣೆಯಲ್ಲಿ ಯಶಸ್ಸು
ಈ ಯೋಜನೆಗೆ ಪೂರಕ ಎಂಬಂತೆ, ನಗರದ ಕೊಟ್ಟಾರ ಬಳಿ ಇರುವ ಇವನ್ನಾ ಹೋಮ್‌ ಅಪಾರ್ಟ್‌ ಮೆಂಟ್‌ನಲ್ಲಿ ಮಡಿಕೆ ಕಾಂಪೋಸ್ಟ್‌ ಕಸ ವಿಂಗಡಣೆಯಲ್ಲಿ ಯಶಸ್ವಿಯಾಗಿದ್ದಾರೆ. ಈ ವಸತಿ ಸಮುಚ್ಚಯದಲ್ಲಿ 48 ಮನೆಗಳಿವೆ. ಹಸಿ ಕಸ ನಿರ್ವಹಣೆಗೆಂದು ಸ್ವತ್ಛ ಮಂಗಳೂರು ಸದಸ್ಯರು ಅಪಾರ್ಟ್‌ಮೆಂಟ್‌ನ ತೆರಳಿ ಮನೆಗೊಂದರಂತೆ ಮಡಿಕೆ ಕಾಂಪೋಸ್ಟ್‌ ಮತ್ತು ಎರಡು ಕಸದ ಬುಟ್ಟಿ ನೀಡಿದ್ದಾರೆ. ಆ ಮಡಿಕೆಯನ್ನು ವಸತಿ ಸಮುಚ್ಚಯದ ಕೆಳಗೆ ಸಾಲಾಗಿ ಇಡಲಾಗಿದ್ದು, ಮನೆಯಲ್ಲಿ ಉತ್ಪಾದನೆಯಾಗುವ ಹಸಿ ಕಸವನ್ನು ಈ ಮಡಿಕೆಗೆ ಹಾಕಲಾಗುತ್ತದೆ.

Advertisement

ಪಾಲಿಕೆಯಿಂದಲೂ ಪ್ರೋತ್ಸಾಹ
ಮಹಾನಗರ ಪಾಲಿಕೆ ಪರಿಸರ ಅಭಿಯಂತರ ಮಧು ಅವರು “ಉದಯವಾಣಿ’ಗೆ ಪ್ರತಿಕ್ರಿಯಿಸಿ, ವಸತಿ ಸಮುತ್ಛಗಳಲ್ಲಿ ಘನತ್ಯಾಜ್ಯ ನಿರ್ವಹಣೆ ಕುರಿತಂತೆ ಮಹಾ ನಗರ ಪಾಲಿಕೆಯಿಂದಲೂ ಅರಿವು ಮೂಡಿ ಸಲಾಗುತ್ತಿದ್ದು, ಪ್ರೋತ್ಸಾಹ ನೀಡಲಾಗುತ್ತಿದೆ. ಫ್ಲ್ಯಾಟ್‌ಗಳಲ್ಲಿಯೇ ಹಸಿ ಕಸ ಸಂಸ್ಕರಣೆ ಮಾಡಿದರೆ ಪಾಲಿಕೆಯ ಘನತ್ಯಾಜ್ಯ ನಿರ್ವಹಣೆ ಶುಲ್ಕದಲ್ಲಿ ಶೇ. 50ರಷ್ಟು ರಿಯಾಯಿತಿ ನೀಡಲಾಗುತ್ತದೆ. ದ.ಕ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪೊನ್ನುರಾಜ್‌ ಅಧ್ಯಕ್ಷತೆಯಲ್ಲಿ ಈಗಾಗಲೇ ತ್ಯಾಜ್ಯ ನಿರ್ವಹಣೆಯ ಬಗ್ಗೆ ಸಭೆ ನಡೆಸಿ ಚರ್ಚೆ ಮಾಡಲಾಲಾಗಿದೆ ಎಂದು ತಿಳಿಸಿದ್ದಾರೆ.

60 ವಸತಿ ಸಮುಚ್ಚಯಗಳಿಂದ ಬೇಡಿಕೆ
ನಗರದ 60 ವಸತಿ ಸಮುಚ್ಚಯಗಳಿಂದ ಮಡಿಕೆ ಕಾಂಪೋಸ್ಟ್‌ಗೆ ಬೇಡಿಕೆ ಬಂದಿದೆ. ಕೊರೊನಾ ಹಿನ್ನೆಲೆಯಲ್ಲಿ ವಿಲೇವಾರಿ ತುಸು ನಿಧಾನವಾಗಿದ್ದು, ಸದ್ಯ 11 ವಸತಿ ಸಮುಚ್ಚಗಳಲ್ಲಿ ಈ ವ್ಯವಸ್ಥೆ ಅಳವಡಿಸಲಾಗಿದೆ. ಸ್ವತ್ಛ ಮಂಗಳೂರು ಕಾರ್ಯಕರ್ತರು ಪ್ರತೀ ನಿತ್ಯ ಆಯಾ ಅಪಾರ್ಟ್‌ಮೆಂಟ್‌ಗೆ ತೆರಳಿ ಹಸಿ ಕಸ ನಿರ್ವಹಣೆಯಲ್ಲಿ ತೊಡಗುತ್ತಾರೆ.
-ಏಕಗಮ್ಯಾನಂದ ಸ್ವಾಮೀಜಿ,ರಾಮಕೃಷ್ಣ ಮಠ

ಮತ್ತಷ್ಟು ಕಡೆ ಪರಿಚಯ
ಸ್ವಚ್ಛ ಮಂಗಳೂರು ಪರಿಕಲ್ಪನೆಯಂತೆ ನಗರದ ಕೆಲವೊಂದು ವಸತಿ ಸಮು ಚ್ಚಯಗಳಲ್ಲಿ ಕಾಂಪೋಸ್ಟ್‌ ಗೊಬ್ಬರ ವಿಧಾನ ಅಳವಡಿಸಲಾಗಿದೆ. ಕಡಿಮೆ ಖರ್ಚಿನಲ್ಲಿ ಹಸಿ ಕಸ ನಿರ್ವಹಣೆ ಸಾಧ್ಯ. ರಾಮಕೃಷ್ಣ ಮಿಷನ್‌ ಕೂಡ ನಮಗೆ ಬೆಂಬಲ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ಈ ವಿಧಾನವನ್ನು ನನ್ನ ವಾರ್ಡ್‌ನ ಮತ್ತಷ್ಟು ಮನೆ, ವಸತಿ ಸಮುಚ್ಚಯಗಳಲ್ಲಿ ಪರಿಚಯಿಸುತ್ತೇನೆ.
-ಶಶಿಧರ ಹೆಗ್ಡೆ, ಪಾಲಿಕೆ ಸದಸ್ಯರು

Advertisement

Udayavani is now on Telegram. Click here to join our channel and stay updated with the latest news.

Next