ಹೊಸದಿಲ್ಲಿ: ಇದು ಸ್ಟಾರ್ಟ್‌ಅಪ್ ಗಳ ಯುಗವಾಗಿದ್ದು, ಈ ಕ್ಷೇತ್ರದಲ್ಲಿ ಭಾರತವು ಜಗತ್ತಲ್ಲೇ ಮುಂಚೂಣಿಯಲ್ಲಿದೆ. ದೇಶದಲ್ಲಿರುವ 70ಕ್ಕೂ ಅಧಿಕ ಸ್ಟಾರ್ಟ್‌ಅಪ್ ಗಳ ಮಾರುಕಟ್ಟೆ ಮೌಲ್ಯ 7,500 ಕೋಟಿ ರೂ.ಗೂ ಹೆಚ್ಚಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ರವಿವಾರ ಪ್ರಸಾರವಾದ 83ನೇ ಆವೃತ್ತಿಯ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಅಧಿಕಾರ ತಮಗೆ ಮಹತ್ವದ್ದಲ್ಲ ಎಂದು ಹೇಳಿಕೊಂಡಿರುವ ಅವರು, “ನಾನು ಇವತ್ತಿಗೂ ಅಧಿಕಾರದಲ್ಲಿಲ್ಲ ಮತ್ತು ಮುಂದೆಯೂ ಅಧಿಕಾರದಲ್ಲಿರಲು ಬಯಸುವುದಿಲ್ಲ. ನಾನು ಯಾವತ್ತೂ ಸೇವೆ ಮಾಡಲು ಬಯಸುತ್ತೇನೆ. ಅದಕ್ಕಾಗಿಯೇ ನಾನು ಪ್ರಧಾನಮಂತ್ರಿ ಹುದ್ದೆಯಲ್ಲಿದ್ದೇನೆ. ಇವೆಲ್ಲವೂ ಅಧಿಕಾರಕ್ಕಾಗಿ ಅಲ್ಲ, ಎಲ್ಲವೂ ಸೇವಾ ಕೈಂಕರ್ಯಕ್ಕಾಗಿ’ ಎಂದು ಹೇಳಿದ್ದಾರೆ.
ಕೇಂದ್ರ ಸರಕಾರ ಜಾರಿಗೊಳಿಸಿದ ಯೋಜನೆಗಳಿಂದ ಜೀವನ ಕ್ರಮಗಳಲ್ಲಿ ಸುಧಾರಣೆಯಾಗಿದೆ ಎಂದು ಹೇಳಿದ ಅವರು, ಯೋಜನೆಗಳ ಫಲಾನುಭವಿಗಳಿಂದ ಪ್ರಯೋಜನಗಳ ಅನುಭವ ಕೇಳಿದಾಗ ಭಾವ ಪರವಶನಾಗುತ್ತೇನೆ ಎಂದಿದ್ದಾರೆ. ಅದಕ್ಕೆ ಪೂರಕವಾಗಿ, ಆಯುಷ್ಮಾನ್ ಭಾರತ ಯೋಜನೆಯ ಫಲಾನುಭವಿ ರಾಜೇಶ್ ಕುಮಾರ್ ಪ್ರಜಾಪತಿ ಎಂಬವರ ಜತೆಗೆ ಸಂವಾದ ನಡೆಸಿದ ಮೋದಿ, ಯೋಜನೆಯಿಂದ ಉಂಟಾಗಿದ್ದ ಅನುಕೂಲಗಳ ವಿವರ ಪಡೆದಿದ್ದಾರೆ.
ಇದನ್ನೂ ಓದಿ:ಜಿಯೋ ಬಳಕೆದಾರರಿಗೆ ಕಹಿ ಸುದ್ದಿ
ಇದೇ ವೇಳೆ ದೇಶದಿಂದ ಕೊರೊನಾ ಇನ್ನೂ ಸಂಪೂರ್ಣವಾಗಿ ಹೋಗಿಲ್ಲ. ಎಲ್ಲರೂ ಸುರಕ್ಷತ ಕ್ರಮಗಳನ್ನು ಅನುಸರಿಸಬೇಕು ಎಂದೂ ಸಲಹೆ ನೀಡಿದ್ದಾರೆ.
ಮ್ಯೂಸಿಕ್ ಆ್ಯಪ್‌ಗಳಲ್ಲೂ ಇನ್ನು ಮನ್ ಕೀ ಬಾತ್
ಪ್ರಧಾನಿ ಮೋದಿ ಅವರ “ಮನ್ ಕೀ ಬಾತ್’ ಕಾರ್ಯಕ್ರಮ ಇನ್ನು ಎಲ್ಲ ಖಾಸಗಿ ರೇಡಿಯೋ ಮತ್ತು ಸಂಗೀತ ಆ್ಯಪ್ ಗಳಲ್ಲೂ ಲಭ್ಯವಾಗಲಿದೆ. ನ್ಪೋಟಿಫೈ, ಹಂಗಾಮಾ, ಗಾನ, ಜಿಯೋಸಾವನ್, ವಿಂಕ್ ಮತ್ತು ಅಮೆಜಾನ್ ಮ್ಯೂಸಿಕ್‌ಗಳಲ್ಲಿ ಮನ್ ಕೀ ಬಾತ್ ಪ್ರಸಾರವಾಗಲಿದೆ. ಇದ ರಿಂದಾಗಿ ಹೆಚ್ಚಿನ ಜನರನ್ನು ವಿಶೇಷವಾಗಿ ಯುವಜನತೆಯನ್ನು ತಲುಪಲು ಸಾಧ್ಯವಾಗಲಿದೆ.