Advertisement

ತುಂಗಭದ್ರಾ ಹೂಳಿನ ಜಾತ್ರೆಗೆ ಚಾಲನೆ

02:59 PM May 31, 2019 | Suhan S |

ಹೊಸಪೇಟೆ: ಮೂರನೇ ವರ್ಷವೂ ತುಂಗಭದ್ರಾ ಜಲಾಶಯದ ಹೂಳಿನ ಜಾತ್ರೆಗೆ ಉಜ್ಜಯಿನಿ ಜಗದ್ಗುರು ಶ್ರೀಗಳು ಸೇರಿದಂತೆ ವಿವಿಧ ಜಿಲ್ಲೆಯ ಮಠಾಧೀಶರು ಗುರುವಾರ ಚಾಲನೆ ನೀಡಿದರು. ಈ ಮೂಲಕ ಕಳೆದೆರಡು ವರುಷಗಳಿಂದ ಬೇಸಿಗೆಯಲ್ಲಿ ಇದೇ ರೀತಿ ಹೂಳು ತೆಗೆದು ಸರ್ಕಾರವನ್ನು ಎಚ್ಚರಿಸುವ ಕೆಲಸ ಮುಂದುವರಿಸಿದರು.

Advertisement

ಈ ವೇಳೆ ತುಂಗಭದ್ರಾ ರೈತ ಸಂಘದಿಂದ ವ್ಯಾಸನಕೆರೆಯ ತುಂಗಭದ್ರಾ ಹಿನ್ನೀರಿನ ಪ್ರದೇಶದಲ್ಲಿ ನಡೆದ ಹೂಳೆತ್ತುವ ಜಾತ್ರೆ ಕಾರ್ಯಕ್ರಮದಲ್ಲಿ ಬಳ್ಳಾರಿಯ ಕಲ್ಯಾಣ ಸ್ವಾಮೀಜಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಪರಿಸರ ರಕ್ಷಣೆಗೆ ಗಂಭೀರ ಚಿಂತನೆ ನಡೆದ ಹಿನ್ನೆಲೆಯಲ್ಲಿ ಸತತ ಪರಿಸರ ಹಾಗೂ ಜೀವ ಸಂಕುಲ ಅವನತಿ ಹಾದಿಯಲ್ಲಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಸದಾ ಪರಿಸರ ನಾಶಕ್ಕೆ ಕಾರಣವಾಗುವ ಯೋಜನೆಗಳಿಗೆ ಆದ್ಯತೆ ನೀಡುವ ಮೂಲಕ ಪ್ರಕೃತಿ ವಿಕೋಪಕ್ಕೆ ಎಣೆ ಮಾಡಿಕೊಟ್ಟಿದೆ. ಅರಣ್ಯ ಇಲಾಖೆ ಅರಣ್ಯ ಬೆಳೆಸುವ ಇಚ್ಛಾಶಕ್ತಿ ತೋರುತ್ತಿಲ್ಲ. ಕಳೆದ ಕೆಲ ವರ್ಷಗಳಿಂದ ಗಣಿಗಾರಿಕೆಯ ಪ್ರಭಾವದಿಂದ ಸಾಕಷ್ಟು ಅರಣ್ಯ ನಾಶವಾಗಿದೆ. ಆದರೆ ಅರಣ್ಯ ಇಲಾಖೆಯು ಅದನ್ನು ಪುನರ್‌ ನಿರ್ಮಿಸುವ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದರು.

ದೇಶದಲ್ಲಿ ನದಿಗಳ ಜೋಡಣೆಯ ಅವಶ್ಯಕತೆಯಿದ್ದು, ಮುಂದಿನ ದಿನಗಳಲ್ಲಿ ನದಿ ಜೋಡಣೆ ಕಾರ್ಯ ಮಾಡದಿದ್ದರೆ, ಮುಂದಿನ ಭವಿಷ್ಯ ಕರಾಳವಾಗಿರುತ್ತದೆ. ಪರಿಸರ ಸಂರಕ್ಷಣೆ ಹಾಗೂ ನದಿ ಜೋಡಣೆ ಕಾರ್ಯಕ್ಕೆ ರೈತರು, ಮಠಾಧೀಶರು, ಪ್ರಜ್ಞಾವಂತರು ಹೋರಾಟದ ಮೂಲಕ ಸರ್ಕಾರದ ಗಮನ ಸೆಳೆಯಬೇಕು ಎಂದು ಕರೆ ನೀಡಿದರು.

ಪಟ್ಟಣದ ಗುರುಪಾದ ದೇವರಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ತುಂಗಭದ್ರಾ ಜಲಾಶಯದ ಹೂಳು ತೆಗೆಯುವ ಹೋರಾಟಕ್ಕೆ ಕೇಂದ್ರ ಸರ್ಕಾರದ ಗಮನ ಸೆಳೆಯಲು ಪ್ರಧಾನ ಮಂತ್ರಿಗಳ ನಿವಾಸದ ಎದುರು ಪ್ರತಿಭಟನೆ ನಡೆಸಲು ರೈತರೊಂದಿಗೆ ಮಠಾಧೀಶರ ಪರಿಷತ್ತು ಅಣಿಯಾಗಲಿದೆ ಎಂದು ಬೆಂಬಲ ಸೂಚಿಸಿದರು. ನದಿಗಳ ಜೋಡಣೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಆಶಯವಾಗಿತ್ತು. ಅದು ಇದುವರೆಗೂ ಈಡೇರಿಸಲು ಸರ್ಕಾರಗಳು ಮುಂದಾಗುತ್ತಿಲ್ಲವೆಂದು ಸರ್ಕಾರಗಳ ನಡೆಗೆ ಬೇಸರ ವ್ಯಕ್ತಪಡಿಸಿದರು.

Advertisement

ಹಾಲಶಂಕರ ಸ್ವಾಮೀಜಿ, ನಂದಿಪುರದ ಮಹೇಶ್ವರ ಸ್ವಾಮೀಜಿ, ಸಿರುಗುಪ್ಪದ ಬಸವಭೂಷಣ ಸ್ವಾಮೀಜಿ, ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಬಂಗ್ಲೆ ಮಲ್ಲಿಕಾರ್ಜುನ, ಸಾಮಾಜಿಕ ಕಾರ್ಯಕರ್ತರಾದ ಅನುಪಮಶೆಣೈ, ರಾಜಶೇಖರ ಮುಲಾಲಿ ಮಾತನಾಡಿದರು. ಬಳ್ಳಾರಿ ಕನಕದುರ್ಗಮ್ಮ ದೇವಸ್ಥಾನದ ಪ್ರಧಾನ ಅರ್ಚಕ ಗಾದೆಪ್ಪ, ರೈತ ಮುಖಂಡರಾದ ಶ್ರೀಧರ, ಶರಣಪ್ಪ, ವೀರೇಶಯ್ಯ ಇತರರಿದ್ದರು.

ತುಂಗಭದ್ರಾ ಜಲಾಶಯದಲ್ಲಿ 33 ಟಿಎಂಸಿ ಅಡಿ ನೀರಿನ ಸಾಮರ್ಥ್ಯದ ಹೂಳುತುಂಬಿದೆ. ಇದರಿಂದ ಮೂರು ರಾಜ್ಯಗಳಾದ ಕರ್ನಾಟಕ, ಸೀಮಾಂದ್ರ, ತೆಲ್ಲಾಂಗಾಣದ 11 ಜಿಲ್ಲೆಗಳ 11ಲಕ್ಷ ಕೃಷಿ ಭೂಮಿಗೆ ನೀರುಣಿಸುವ ಸಾಮರ್ಥ್ಯವನ್ನು ಜಲಾಶಯ ಕಳೆದುಕೊಂಡಿದೆ .ಕೃಷಿ ಜಮೀನುಗಳಿಗೆ ಹಾಗೂ ಜನರಿಗೆ ಕುಡಿಯಲು ನೀರಿಲ್ಲ. ಆದರೆ ಸರ್ಕಾರ ಜಿಲ್ಲೆಯ ಕಾರ್ಖಾನೆಗಳಿಗೆ ನಿರಂತರ ನೀರು ಧಾರೆ ಎರೆಯುತ್ತಿದೆ. •ದರೂರು ಪುರುಷೋತ್ತಮಗೌಡ, ತುಂಗಭದ್ರಾ ರೈತ ಸಂಘದ ಅಧ್ಯಕ್ಷ
Advertisement

Udayavani is now on Telegram. Click here to join our channel and stay updated with the latest news.

Next