ಧಾರವಾಡ: ಕನ್ನಡ ನಾಡು ಕಟ್ಟುವಲ್ಲಿ ಕೊಡುಗೆ ನೀಡಿರುವ ಕವಿಸಂ ಕಳೆದ 130 ವರ್ಷಗಳಿಂದ ನಾಡು, ನುಡಿ, ಜಲ ವಿಷಯದಲ್ಲಿ ಸಾಕಷ್ಟು ಸೇವೆ ಸಲ್ಲಿಸಿದೆ. ನೂರಲ್ಲ, ಸಾವಿರ ವರ್ಷ ಸಂಘ ಮುನ್ನಡೆಯಲಿ ಎಂದು ಹಿರಿಯ ಚಲನಚಿತ್ರ ನಟ ದೊಡ್ಡಣ್ಣ ಹೇಳಿದರು.
ಕವಿಸಂನ ಕುವೆಂಪು ವೇದಿಕೆಯಲ್ಲಿ 130ನೇ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿರುವ 7 ದಿನಗಳ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸಂಘ ಕಟ್ಟುವುದು ಸುಲಭ. ಆದರೆ ಅದು ಸುದೀರ್ಘ ವರ್ಷಗಳ ಕಾಲ ಉತ್ತಮ ಸೇವೆ ನೀಡುವಂತೆ ನಡೆಸುವುದು ಕಷ್ಟ. ಸಂಸ್ಥಾಪಕರಿಂದ ಹಿಡಿದು ಅನೇಕ ಮಹನೀಯರು ಈ ಸಂಘವನ್ನು ನೂರು ವರ್ಷಗಳ ಕಾಲ ಮುನ್ನಡೆಸಿದ್ದಾರೆ. ಇಂದಿನವರೂ ಅದೇ ರೀತಿಯಲ್ಲಿ ಮುನ್ನಡೆಸಲಿ ಎಂದರು.
ಕವಿಸಂಗೆ 130 ವರ್ಷ ಆಗಿದ್ದರೆ, ಅದರ ಅಧ್ಯಕ್ಷರು ನೂರು ವರ್ಷ ಸಾಗಿ ಮುನ್ನಡೆದಿದ್ದಾರೆ. 1971ರಲ್ಲಿ ನಮ್ಮೂರಿನ ಕಾರ್ಯಕ್ರಮಕ್ಕೆ ಪಾಪು ಅವರನ್ನು ಕರೆ ತರಲು ಹುಬ್ಬಳ್ಳಿಗೆ ಬಂದಾಗ ಅವರನ್ನು ಕಂಡಿದ್ದೆ. ಆಗ ಈ ದೊಡ್ಡಣ್ಣ ಬರೀ ದಡ್ಡಣ್ಣ ಆಗಿದ್ದ ಅಷ್ಟೆ. ಆಗ ಕಂಡ ಪಾಪು ಅವರನ್ನು ಈಗ ಮರಳಿ ಕಾಣುತ್ತಾ ಇದ್ದು, ಅವರ ನಾಯಕತ್ವದಲ್ಲಿ ಸಂಘ ಸಾಗಿರುವುದು ಹೆಮ್ಮೆಯ ಸಂಗತಿ ಎಂದು ಹೇಳಿದರು.
ಅಂಬರೀಷ ಸ್ಮರಣೆ: ದೇಶದಲ್ಲಿ ಈಗ 21 ಭಾಷೆಗಳಲ್ಲಿ ಚಿತ್ರ ನಿರ್ಮಾಣ ಆಗುತ್ತಿದ್ದು, ಕರ್ನಾಟಕದಲ್ಲಿ ಎಲ್ಲ ಭಾಷೆಗಳ ಚಿತ್ರಗಳೂ ಪ್ರದರ್ಶನ ಆಗುತ್ತಲಿವೆ. ಈ ಮಧ್ಯೆ ನಮ್ಮ ಕನ್ನಡ ಚಿತ್ರಗಳು ಪೈಪೋಟಿ ನೀಡಿ ಪ್ರದರ್ಶನ ಆಗುತ್ತಿದ್ದು, ಎಲ್ಲ ಸವಾಲುಗಳನ್ನು ಕನ್ನಡ ಭಾಷೆ ಮೆಟ್ಟಿ ನಿಂತಿದೆ. ಯಾವ ಭಾಷೆಯಲ್ಲೂ ಕಲಾವಿದರ ಸಂಘವಿಲ್ಲ. ಆದರೆ ಕನ್ನಡ ಚಲನಚಿತ್ರ ರಂಗದಲ್ಲಿ ಮಾತ್ರವೇ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘವಿರುವುದು ನಮ್ಮ ಹೆಮ್ಮೆ. ಇದು ಸಾಕಾರ ರೂಪ ಪಡೆಯಲು ನಮ್ಮ ಅಂಬರೀಷಣ್ಣನೇ ಮೂಲ ಕಾರಣ ಎಂದು ಸ್ಮರಿಸಿದರು.
ಹಿಂದಿನ ದಿನಗಳಲ್ಲಿ ಸಿನಿಮಾ ನಟರು ಕೆಲ ಕಾರಣಕ್ಕೆ ಮುನಿಸಿಕೊಳ್ಳುತ್ತಿದ್ದರು. ಒಂದೆರಡು ತಿಂಗಳು ಕಳೆದ ಬಳಿಕ ನಾವು ಅವರ ಮನೆಗೆ, ಅವರು ನಮ್ಮ ಮನೆಗೆ ಬಂದು ಪುನಃ ಒಂದಾಗುತ್ತಿದ್ದೆವು. ಆದರೆ ಇಂದಿನ ನಟರಲ್ಲಿ ಆ ಲಕ್ಷಣಗಳು ಕಾಣುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನಾಡೋಜ ಡಾ| ಪಾಟೀಲ ಪುಟ್ಟಪ್ಪ ಅಧ್ಯಕ್ಷತೆ ವಹಿಸಿದ್ದರು. ಪ್ರಕಾಶ ಉಡಕೇರಿ, ನಿಂಗಣ್ಣ ಕುಂಟಿ ಸೇರಿದಂತೆ ಪದಾಧಿಕಾರಿಗಳು, ಗಣ್ಯರು ಪಾಲ್ಗೊಂಡಿದ್ದರು. ಶಿವಣ್ಣ ಬೆಲ್ಲದ ಸ್ವಾಗತಿಸಿದರು. ಕೃಷ್ಣಾ ಜೋಶಿ ಪ್ರಾಸ್ತಾವಿಕ ಮಾತನಾಡಿದರು. ವಿಶ್ವೇಶ್ವರಿ ಹಿರೇಮಠ ನಿರೂಪಿಸಿದರು. ಸಂಘದ ಹಿರಿಯ ಸದಸ್ಯರನ್ನು ಸನ್ಮಾನಿಸಲಾಯಿತು. ಡಾ|ಶ್ರೀಪಾದ ಭಟ್ ನಿರ್ದೇಶನದಲ್ಲಿ ಉಡುಪಿಯ ಕೊಡವೂರಿನ ನೃತ್ಯ ನಿಕೇತನದಿಂದ ಚಿತ್ರಾ ನಾಟಕ ಪ್ರದರ್ಶನಗೊಂಡಿತು.