ಧಾರವಾಡ: ಕಲಘಟಗಿ ತಾಲೂಕಿನ ನೀರಸಾಗರ ಕೆರೆ ಹೂಳೆತ್ತುವ ಕಾರ್ಯಕ್ಕೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ಶನಿವಾರ ಚಾಲನೆ ನೀಡಿದರು.
ಸಚಿವ ದೇಶಪಾಂಡೆ ಮಾತನಾಡಿ, ಅಂದಾಜು 8 ಕೋಟಿ ವೆಚ್ಚದಲ್ಲಿ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಟಾಟಾ ಹಿಟಾಚಿ ಕಂಪನಿ ವ್ಯವಸ್ಥಾಪಕ ನಿರ್ದೇಶಕ ರಾಖೇಶ ಸಿಂಗ್ ಜೊತೆ ಮಾತನಾಡಿ ಕಂಪನಿಯ ಸಿಎಸ್‌ಆರ್ ನಿಧಿಯಲ್ಲಿ ಹಣ ಬಳಕೆ ಮಾಡಿಕೊಂಡು ಉಚಿತವಾಗಿ ಕೆರೆ ಹೂಳು ತೆಗೆದುಕೊಡಲು ವಿನಂತಿಸಲಾಗಿದೆ. ಅದರಂತೆ ಸುಮಾರು ಮೂರು ಹಿಟಾಚಿ ಯಂತ್ರಗಳನ್ನು ಕೆರೆ ಹೂಳೆತ್ತಲು ನೀಡಿದ್ದು, 2-3 ಮೂರು ತಿಂಗಳು ಈ ಕೆಲಸ ನಡೆಯಲಿದೆ. ರೈತರು ತಮ್ಮ ಟ್ರ್ಯಾಕ್ಟರ್‌ಗಳಲ್ಲಿ ಮಣ್ಣು ಒಯ್ದು ಜಮೀನುಗಳಿಗೆ ಹಾಕಲಿದ್ದಾರೆ ಎಂದರು.
ಕೆರೆಗೆ ನೀರು ಬರುವ ಕಾಲುವೆ, ಹಳ್ಳ-ಕೊಳ್ಳಗಳನ್ನು ಸ್ವಚ್ಛಗೊಳಿಸಲು, ಕೆರೆ ಮತ್ತು ಕೆರೆಗೆ ನೀರು ಬರುವ ಪ್ರದೇಶ ಒತ್ತುವರಿಯಾಗಿದ್ದಲ್ಲಿ ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಡಿಸಿ ದೀಪಾ ಚೋಳನ್ ಅವರಿಗೆ ದೇಶಪಾಂಡೆ ಸೂಚಿಸಿದರು. ಮಳೆ ಆರಂಭಗೊಂಡು ಹೂಳೆತ್ತುವ ಕಾರ್ಯ ಸ್ಥಗಿತಗೊಂಡರೂ ಅಕ್ಟೋಬರ್‌ನಲ್ಲಿ ಹೂಳೆತ್ತುವಿಕೆ ಮುಂದುವರಿಸಲಾಗುವುದು. ಕಾಳಿ ನದಿಯಿಂದ ಕೆರೆಗೆ ನೀರು ತುಂಬಿಸುವ ಬಗ್ಗೆ ಮತ್ತೂಮ್ಮೆ ಸರ್ವೇ ಕೈಗೊಂಡು ಪರಿಶೀಲಿಸಲಾಗುವುದು ಎಂದು ಹೇಳಿದರು.
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ಅವಳಿ ನಗರಕ್ಕೆ ನೀರಿನ ಕೊರತೆ ಆಗದಂತೆ ಮಲಪ್ರಭಾ ಜಲಾಶಯದಲ್ಲಿ ಹೆಚ್ಚುವರಿ ಕಾಮಗಾರಿ ಕೈಗೊಳ್ಳಲಾಗಿದೆ. ಮುಂಬರುವ ಡಿಸೆಂಬರ್‌ದೊಳಗೆ ಅದು ಪೂರ್ಣಗೊಂಡು ಹೆಚ್ಚುವರಿ ನೀರು ಲಭ್ಯವಾಗಲಿದೆ. ನೀರಸಾಗರ ಕೆರೆ ಹೂಳೆತ್ತುವ, ಒತ್ತುವರಿ ತೆರವುಗೊಳಿಸುವ ಮತ್ತು ಕೆರೆ ಸೌಂದರ್ಯೀಕರಣಗೊಳಿಸಿ ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಳಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಜಿಪಂ ಅಧ್ಯಕ್ಷೆ ವಿಜಯಲಕ್ಷ್ಮೀ ಪಾಟೀಲ, ಡಿಸಿ ದೀಪಾ ಚೋಳನ, ಜಿಪಂ ಸಿಇಒ ಡಾ| ಬಿ.ಸಿ. ಸತೀಶ, ಅಪರ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ಉಪವಿಭಾಗಾಧಿಕಾರಿ ಮಹಮ್ಮದ ಜುಬೇರ, ಕಲಘಟಗಿ ತಹಶೀಲ್ದಾರ್ ಅಶೋಕ ಶಿಗ್ಗಾವಿ, ಜಲ ಮಂಡಳಿ ಕಾರ್ಯಪಾಲಕ ಅಭಿಯಂತ ವೆಂಕಟರಾವ್, ಸಹಾಯಕ ಕಾರ್ಯಪಾಲಕ ಅಭಿಯಂತ ಆರ್.ಕೆ. ಉಮೇಶ ಇನ್ನಿತರರಿದ್ದರು.