Advertisement

ಅಪಾಯಕಾರಿ ತಿರುವು ನೇರಗೊಳಿಸಲು ಚಾಲನೆ

12:15 PM Jul 21, 2019 | Suhan S |

ಬ್ಯಾಡಗಿ: ಇತ್ತೀಚೆಗೆ ಬೈಕ್‌ ಅಪಘಾತದಲ್ಲಿ ಯುವಕನೊಬ್ಬ ಪ್ರಾಣ ಕಳೆದುಕೊಂಡ ಪ್ರಕರಣದಿಂದ ಎಚ್ಚೆತ್ತ ಅಧಿಕಾರಿಗಳು ಅಪಾಯಕಾರಿ ತಿರುವುಗಳನ್ನು ನೇರಗೊಳಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.

Advertisement

ಲೋಕೋಪಯೋಗಿ ಇಲಾಖೆ ಸಹಕಾರದೊಂದಿಗೆ ಜೆಸಿಬಿ ಯಂತ್ರಗಳು ಕೆರೆ ವಡ್ಡನ್ನು ನೆಲಸಮಗೊಳಿಸುವ ಕಾರ್ಯ ಭರದಿಂದ ಸಾಗಿದ್ದು, ತಿರುವಿನಲ್ಲಿದ್ದ ಬೃಹತ್‌ ಮರವೊಂದನ್ನು ತೆರವುಗೊಳಿಸಿ, ಸುಮಾರು 150 ಮೀಟರ್‌ನಷ್ಟು ದೂರದಿಂದಲೇ ಎದುರಿಗೆ ಬರುವ ವಾಹನಗಳನ್ನು ಗುರುತಿಸುವಂತೆ ಮಾಡಲಾಗುತ್ತಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಸಿಪಿಐ ಭಾಗ್ಯವತಿ, ಹೆಲ್ಮೆಟ್ ರಹಿತ ಚಾಲನೆ, ಅತೀ ವೇಗದ ಚಾಲನೆ, ವಾಹನ ನಡೆಸುವಾಗ ಮೊಬೈಲ್ ಬಳಕೆ ಸೇರಿದಂತೆ ಇನ್ನಿತರ ಸಂಚಾರಿ ನಿಯಮಗಳನ್ನು ಪಾಲನೆ ಮಾಡದಿದ್ದರೆ ಅಪಘಾತಗಳನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

ಅಪಾಯಕಾರಿ ತಿರುವುಗಳಲ್ಲಿ ತಮ್ಮದಲ್ಲದ ತಪ್ಪಿಗೆ ಜೀವ ಕಳೆದುಕೊಳ್ಳುತ್ತಿರುವ ಅಮಾಯಕರ ಬಗ್ಗೆಯೂ ಇಲಾಖೆಗೆ ಕಳಕಳಿಯಿದೆ. ಹೀಗಾಗಿ ಇಂಥ ತಿರುವಿನಲ್ಲಿ ನಡೆದ ಅಪಘಾತಗಳಿಂದ ಸಾಕಷ್ಟು ಸಾವು-ನೋವುಗಳ ಸಂಭವಿಸಿದ್ದು, ಅವುಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಹೀಗಾಗಿ ವಿಳಂಬ ಮಾಡದೇ ಸಾರ್ವಜನಿಕರ ಅನುಕೂಲಕ್ಕಾಗಿ ತಿರುವಿನ ಪಕ್ಕದಲ್ಲಿರುವ ಕೆರೆಯ ದಡ ನೆಲಸಮಗೊಳಿಸಲಾಗಿದೆ ಎಂದರು.

ಪುರಸಭೆ ಸದಸ್ಯ ಈರಣ್ಣ ಬಣಕಾರ ಮಾತನಾಡಿ, ಈ ಸ್ಥಳದಲ್ಲಿ ಈಗಾಗಲೇ ಬಹಳಷ್ಟು ಅಪಘಾತ ನಡೆದಿದ್ದು, ಹಲವು ಸಾವು ನೋವುಗಳಾಗಿವೆ. ಸುಮಾರು 200 ಮೀ.ಗಳಷ್ಟು ದ್ವಿಪಥ ನಿರ್ಮಾಣ ಮಾಡಬೇಕು ಎಂದರು.

Advertisement

ಲೋಕೋಪಯೋಗಿ ಸಹಾಯಕ ಅಭಿಯಂತರ ಕೆ.ರಾಜಪ್ಪ ಮಾತನಾಡಿ, ಅಪಘಾತ ಪ್ರಕರಣ ವಿಷಾದಕರ. ಇಂತಹ ಒಟ್ಟು 20 ಕ್ಕೂ ಹೆಚ್ಚು ತಿರುವುಗಳನ್ನು ನೇರಗೊಳಿಸುವ ಕುರಿತು ಅಂದಾಜು ವೆಚ್ಚದೊಂದಿಗೆ ಅನುಮೋದನೆಗೆ ಕಡತವನ್ನು ಸರ್ಕಾರಕ್ಕೆ ಕಳಹಿಸಿಕೊಡಲಾಗಿದೆ. ಇದೀಗ ತಾತ್ಕಾಲಿಕವಾಗಿ ಕೆರೆಯ ಒಡ್ಡನ್ನು ನೆಲಸಮಗೊಳಿಸಲಾಗಿದ್ದು, ಎದುರಿನಿಂದ ಬರುವಂತಹ ವಾಹನಗಳನ್ನು ಗುರುತಿಸಲು ಸಹಕಾರಿಯಾಗಲಿದೆ. ಶೀಘ್ರದಲ್ಲೇ ದ್ವಿಪಥ ರಸ್ತೆ ನಿರ್ಮಿಸುವುದಾಗಿ ಭರವಸೆ ನೀಡಿದರು.

ಆರ್‌ಟಿಒ ಬಿ.ಕೆ. ಬಸವರಾಜಪ್ಪ, ಪೊಲೀಸ್‌ ಸಿಬ್ಬಂದಿಗಳಾದ ಗಡಿಯಪ್ಪಗೌಡ್ರ, ಮಂಜುನಾಥ, ಹನುಮಂತ ಸುಂಕದ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next