ಕೋಲಾರ: ಟೆಕ್ಸಾಸ್ ಕಂಪನಿ ಆರ್ಥಿಕ ನೆರವು,ಧಾನ್ ಫೌಂಡೇಷನ್ ಮತ್ತು ರೈತರ ಸಹಭಾಗಿತ್ವದಲ್ಲಿ ತಾಲೂಕಿನ 4 ಕೆರೆಗಳ ಪುನಶ್ಚೇತನ ಮಾಡುತ್ತಿದ್ದು, ಜನತೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಧಾನ್ ಫೌಂಡೇಷನ್‌ನ ಸಂಯೋಜಕ ರಮೇಶ್ ಮನವಿ ಮಾಡಿದರು.
ತಾಲೂಕಿನ ವಕ್ಕಲೇರಿ ಗ್ರಾಪಂ ವ್ಯಾಪ್ತಿಯ ಬೆಟ್ಟಬೆಣಜೇನಹಳ್ಳಿ ಕೆರೆ ಪುನಶ್ಚೇತನ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಅವರು, ಶೆಟ್ಟಿಕೊತ್ತನೂರು, ಚಿಕ್ಕನಹಳ್ಳಿ, ಗುಟ್ಟಹಳ್ಳಿ, ಬೆಟ್ಟಬೆಣಜೇನಹಳ್ಳಿ ಕೆರೆಗಳನ್ನು 20 ಲಕ್ಷ ರೂ. ವೆಚ್ಚದಲ್ಲಿ ಪುನಶ್ಚೇತನ ಮಾಡುತ್ತಿರುವುದಾಗಿ ತಿಳಿಸಿದರು.
ನಮ್ಮೂರ ಕೆರೆ, ಜೀವಜಲದ ಜೀವನಾಡಿ ಎಂಬ ಸತ್ಯವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು, ಕೆರೆ ಉಳಿದರೆ ಮಾತ್ರ ಗ್ರಾಮದಲ್ಲಿ ಅಂತರ್ಜಲ ವೃದ್ಧಿ ಸಾಧ್ಯ ಎಂಬುದನ್ನು ಅರಿತು ಕೆರೆ ಪುನಶ್ಚೇತನ ಕಾಮಗಾರಿಗೆ ಸಹಕಾರ ನೀಡಿ ಎಂದು ಕಿವಿಮಾತು ಹೇಳಿ, ಕೆರೆ ಪುನಶ್ಚೇತನದ ಜತೆ ಇದೀಗ ಕೆರೆಗಳಲ್ಲಿ ಜಾನುವಾರುಗಳು, ಪ್ರಾಣಿಗಳು ನೀರು ಕುಡಿಯಲು ತೊಟ್ಟಿಗಳ ನಿರ್ಮಾಣ ಮಾಡುತ್ತಿರುವುದಾಗಿ ವಿವರಿಸಿದರು.
ಟೆಕ್ಸಾಸ್ ಕಂಪನಿ ನೀಡುವ ಅನುದಾನವನ್ನು ನೀರು ನಿಲುಗಡೆಗಾಗಿ ಮತ್ತು ಅಂತರ್ಜಲ ವೃದ್ಧಿಗಾಗಿ ಬಳಸಿಕೊಂಡು ಹೂಳು ತೆಗೆಯುವ ಕಾರ್ಯ ಮಾಡಲಾಗುತ್ತದೆ. ರೈತರು ಕೆರೆಯ ಹೂಳನ್ನು ತಮ್ಮ ತೋಟಗಳಿಗೆ ಸಾಗಿಸಿಕೊಂಡರೆ ಫಲವತ್ತತೆ ಹೆಚ್ಚುವುದರಿಂದ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಕೆರೆ ಕಟ್ಟೆ ಬಲವರ್ಧನೆ, ಪೋಷಕ ಕಾಲುವೆಗಳ ದುರಸ್ತಿ, ಗಿಡಗಂಟಿ ತೆಗೆಯುವುದು, ಹೂಳನ್ನು ಹೊರ ಸಾಗಿಸುವುದು, ಗ್ರಾಮದ ದನಕರುಗಳಿಗೆ ನೀರಿನ ತೊಟ್ಟಿ ನಿರ್ಮಿಸುವುದು, ಗ್ರಾಮದ ಕುಂಟೆಗಳಲ್ಲಿ ಹೂಳು ತೆಗೆಯುವ ಕೆಲಸವನ್ನು ರೈತರ ಸಹಭಾಗಿತ್ವದಲ್ಲಿ ಮಾಡುವುದಾಗಿ ತಿಳಿಸಿದರು.
ಗ್ರಾಪಂ ಸದಸ್ಯ ಇಲಿಯಾಜ್‌ಖಾನ್, ಕೆರೆಗಳ ಪುನಶ್ಚೇತನದಿಂದಾಗಿ ಅಂತರ್ಜಲ ವೃದ್ಧಿಗೆ ಸಹಕಾರಿಯಾಗುತ್ತದೆ. ನೀರು ನಿಂತರೆ ಸುತ್ತಮುತ್ತ ಕೊಳವೆಬಾವಿಗಳು ರೀಚಾರ್ಜ್ ಆಗುತ್ತವೆ ಎಂದು ತಿಳಿಸಿದರು.
ವಕ್ಕಲೇರಿ ಪಿಡಿಒ ಯಾಜೀಜ್ ಖಾನ್, ಧಾನ್‌ಫೌಂಡೇಷನ್ ಸಂಸ್ಥೆ ನಮ್ಮ ಗ್ರಾಪಂ ವ್ಯಾಪ್ತಿಯಲ್ಲಿ ಇಂತಹ ಸಾಮಾಜಿಕ ಕಾಳಜಿಯ ಕೆಲಸ ಮಾಡುತ್ತಿದ್ದು, ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಪೂರ್ವಿಕರ ದೂರದೃಷ್ಟಿಯಿಂದ ಕೆರೆಗಳನ್ನು ನಿರ್ಮಿಸಲಾಗಿದ್ದು, ಉಳಿಸಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರದು ಎಂದ ಅವರು, ಕೆರೆಗಳ ಒತ್ತುವರಿ, ಫಿಲ್ಟರ್ ದಂಧೆಗೆ ಅವಕಾಶ ನೀಡುವುದಿಲ್ಲ ಎಂದು ಸ್ವಷ್ಟಪಡಿಸಿದರು. ಗ್ರಾಪಂ ಕಾರ್ಯದರ್ಶಿ ಸೀತಾರಾಮಪ್ಪ, ಲೆಕ್ಕ ಸಹಾಯಕ ವೆಂಕಟೇಶ್, ಮುಖಂಡ ರಾಮಚಂದ್ರಪ್ಪ, ಗ್ರಾಮಸ್ಥರು ಹಾಜರಿದ್ದರು.