Advertisement

ಸಮಗ್ರ ಕೃಷಿ ಅಭಿಯಾನಕ್ಕೆ ಚಾಲನೆ

12:30 PM Jun 20, 2019 | Team Udayavani |

ಸಿದ್ದಾಪುರ: ನಮ್ಮ ದೇಶದಲ್ಲಿ ಕೃಷಿ ಎನ್ನುವುದು ವೃತ್ತಿಯಲ್ಲ. ಅದೊಂದು ಸಂಪ್ರದಾಯವಾಗಿದೆ. ಇಂದು ಯುವ ಪೀಳಿಗೆ ಕೃಷಿಯಿಂದ ವಿಮುಖರಾಗುತ್ತಿದ್ದಾರೆ ಎಂದು ಜಿಪಂ ಸದಸ್ಯ ಎಂ.ಜಿ. ಹೆಗಡೆ ಹೇಳಿದರು.

Advertisement

ಬುಧವಾರ ಪಟ್ಟಣದ ಕೃಷಿ ಇಲಾಖೆ ಆವರಣದಲ್ಲಿ ಕೃಷಿ ಇಲಾಖೆ ಹಾಗೂ ಇನ್ನಿತರ ಕೃಷಿ ಸಂಬಂಧಿತ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿರುವ ಸಮಗ್ರ ಕೃಷಿ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.

ಕೃಷಿಯನ್ನು ಒಂದು ವೃತ್ತಿ ಎಂದು ಪರಿಗಣಿಸುವವರೆಗೆ ನಿರುದ್ಯೋಗ ನಿವಾರಿಸಲು ಸಾಧ್ಯವಿಲ್ಲ. ಕಲಿತವರಿಗೆಲ್ಲ ಸರಕಾರಿ ಉದ್ಯೋಗ ಸಿಗಲು ಸಾಧ್ಯವಿಲ್ಲ. ಇದರಿಂದ ಕೃಷಿಯನ್ನು ಉದ್ಯೋಗವಾಗಿ ಸ್ವೀಕರಿಸುವಂತೆ ಯುವ ಪೀಳಿಗೆಯನ್ನು ಪ್ರೋತ್ಸಾಹಿಸಬೇಕು. ನಾವು ಮಕ್ಕಳಿಗೆ ಕೃಷಿ ಕೆಲಸಗಳ ಬಗ್ಗೆ ಹೇಳುತ್ತಿಲ್ಲ. ನಮ್ಮ ಮಕ್ಕಳು ಆಫೀಸರ್‌ ಆಗಬೇಕು ಎಂದು ಬಯಸುತ್ತೇವೆ. ಪದವಿ ಪಡೆದವರು ಕೃಷಿ ಕೆಲಸ ಮಾಡಬಾರದು ಎಂಬುದನ್ನು ನಾವೇ ಹೇಳುತ್ತೇವೆ. ಕೃಷಿಯೇತರ ಚಟುವಟಿಕೆಗೆ ಸಿಗುವ ಗೌರವ ಕೃಷಿ ಮಾಡುವವರಿಗೆ ಸಿಗುವುದಿಲ್ಲ. ಇದರಿಂದ ಯುವ ಪೀಳಿಗೆ ಕೃಷಿಯಲ್ಲಿ ಆಸಕ್ತಿ ತೋರಿಸುತ್ತಿಲ್ಲ ಎಂದರು.

ಕೃಷಿ ಮಾಹಿತಿ ಕೈಪಿಡಿ ಬಿಡುಗಡೆಗೊಳಿಸಿ ಮಾತನಾಡಿದ ಜಿಪಂ ಸದಸ್ಯ ನಾಗರಾಜ ನಾಯ್ಕ ಬೇಡ್ಕಣಿ, ನಾವು ಮುಂದುವರಿದಂತೆ ಕೃಷಿಯನ್ನು ನಿರ್ಲಕ್ಷಿಸಲಾಗುತ್ತಿದೆ. ನಾವು ಇಂದು ಉದ್ಯಮದತ್ತ ವಾಲುತ್ತಿದ್ದೇವೆ. ಆದರೆ ಆಹಾರವಿಲ್ಲದೆ ನಾವು ಬದುಕಲು ಸಾಧ್ಯವಿಲ್ಲ. ಇದರಿಂದ ಕೃಷಿ ಕ್ಷೇತ್ರವನ್ನು ಆಕರ್ಷಣೀಯವಾಗಿ ಮಾಡಬೇಕು. ಕೇವಲ ಅಭಿಯಾನ ಮಾಡಿದರೆ ಸಾಲದು, ಇದರಲ್ಲಿ ಹೇಳುವ ಎಲ್ಲ ವಿಷಯಗಳು ಕಾರ್ಯರೂಪಕ್ಕೆ ಬರಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಪಂ ಅಧ್ಯಕ್ಷ ಸುಧೀರ್‌ ಗೌಡರ್‌ ವಹಿಸಿದ್ದರು. ಜಿಪಂ ಸದಸ್ಯೆ ಸುಮಂಗಲಾ ನಾಯ್ಕ, ತಾಪಂ ಸದಸ್ಯ ವಿವೇಕ ಭಟ್ಟ, ತಹಶೀಲ್ದಾರ್‌ ಗೀತಾ ಸಿ.ಜಿ., ತೋಟಗಾರಿಕಾ ಅಧಿಕಾರಿ ಮಹಾಬಲೇಶ್ವರ, ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ| ನಂದಕುಮಾರ ಪೈ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ದೇವರಾಜ ಮುಂತಾದದ‌ರು ಉಪಸ್ಥಿತರಿದ್ದರು. ಕೃಷಿ ಅಧಿಕಾರಿ ಪ್ರಶಾಂತ ಸ್ವಾಗತಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next