ಬೆಂಗಳೂರು: ರಾಜ್ಯದಲ್ಲಿ ಒಂದು ವರ್ಷದಿಂದ ಹೆಚ್ಚುಕಡಿಮೆ ಸ್ಥಗಿತಗೊಂಡಿದ್ದ ಶೈಕ್ಷಣಿಕ ಚಟುವಟಿಕೆಗಳು ಸೋಮವಾರದಿಂದ ಗರಿಗೆದರಲಿದ್ದು, 9,10 ಮತ್ತು ಪದವಿ ಪೂರ್ವ ತರಗತಿಗಳು ಶುರುವಾಗಲಿವೆ. ಇದರ ಜತೆಗೆ ಕೇಂದ್ರ ಸರ್ಕಾರ ಪ್ರಕಟಿಸಿದ ಹೊಸ ಶಿಕ್ಷಣ ನೀತಿಯೂ ರಾಜ್ಯದಲ್ಲಿ ಜಾರಿಯಾಗಲಿದೆ.
ದ.ಕ, ಉಡುಪಿ, ಕೊಡಗು ಜಿಲ್ಲೆ ಹೊರತುಪಡಿಸಿ ಉಳಿದೆಲ್ಲೆಡೆ 9, 10 ಮತ್ತು ಪಿಯು ಕಾಲೇಜುಗಳು ಮುಂಜಾಗರೂಕತಾಕ್ರಮಗಳಸಹಿತಶುರುವಾಗಲಿದೆ. ವಿದ್ಯಾರ್ಥಿಗಳೂ ತರಗತಿಯಲ್ಲಿ ಪಾಠ ಕೇಳಲು ಕಾತುರರಾಗಿದ್ದಾರೆ.
2021-22ನೇ ಸಾಲಿನ ಶೈಕ್ಷಣಿಕ ವರ್ಷ ಜೂ.15ರಿಂದ ಆರಂಭವಾಗಿದ್ದರೂ 2ನೇ ಅಲೆಯ ಹಿನ್ನೆಲೆಯಲ್ಲಿ ಭೌತಿಕ ತರಗತಿಗಳು ಆರಂಭವಾಗಿರಲಿಲ್ಲ. ತರಗತಿಯ ಒಟ್ಟು ವಿದ್ಯಾರ್ಥಿಗಳ ಪೈಕಿ ಶೇ.50 ಮಂದಿಗೆ ಅವಕಾಶ ಕಲ್ಪಿಸಬೇಕು. ಆದರೆ ಸಿಬಿಎಸ್‌ಇ, ಐಸಿಎಸ್‌ಇ ಶಾಲೆಗಳ ಆರಂಭದ ಬಗ್ಗೆ ಖಚಿತ ಮಾಹಿತಿ ಇಲ್ಲ.
ಇಂದಿನಿಂದ ಎನ್‌ಇಪಿ: ಹೊಸ ಶಿಕ್ಷಣ ನೀತಿ ಆ.23ರಿಂದ ರಾಜ್ಯದಲ್ಲಿ ಜಾರಿಯಾಗಲಿದೆ. ಆನ್‌ಲೈನ್ ಮೂಲಕ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಚಾಲನೆ ನೀಡಲಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಜತೆಗೆ ವಿದ್ಯಾರ್ಥಿಗಳ ದಾಖಲಾತಿ ಆರಂಭವಾಗಲಿದೆ. ಅ.1ರಿಂದ ಕಾಲೇಜು: ಯುಜಿಸಿ ಮಾರ್ಗಸೂಚಿ ಪ್ರಕಾರ ಅ.1ರಿಂದಲೇ ಪದವಿ ತರಗತಿ ಆರಂಭಿಸಲು ಸರ್ಕಾರ ನಿರ್ಧರಿಸಿದೆ. ಎಲ್ಲಾ ವಿವಿಗಳಿಗೂ ಇದು ಅನ್ವಯವಾಗಲಿದೆ.