Advertisement
ಈ ಮಾರ್ಗದಲ್ಲಿ ಮಂಗಳೂರು- ಕಾಸರಗೋಡು ಮಧ್ಯೆ 3 ನಿಮಿಷಕ್ಕೊಂದರಂತೆ ಸಂಚರಿಸುತ್ತಿದ್ದ ಕರ್ನಾಟಕ ಮತ್ತು ಕೇರಳ ರಸ್ತೆ ಸಾರಿಗೆ ಸಂಸ್ಥೆಗಳ ಬಸ್‌ಗಳು ಕರ್ನಾಟಕ ಸರಕಾರವು ಕರ್ನಾಟಕ-ಕೇರಳ ಮಧ್ಯೆ ಅಂತಾರಾಜ್ಯ ಬಸ್ ಸಂಚಾರಕ್ಕೆ ನಿರ್ಬಂಧ ಹೇರಿರುವುದರಿಂದ ಈಗ ಕಾರ್ಯಾಚರಣೆ ನಡೆಸುತ್ತಿಲ್ಲ. ಜೂನ್, ಜುಲೈ ತಿಂಗಳಲ್ಲಿ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಕೆಲವು ಬಸ್‌ಗಳನ್ನು ಮಂಗಳೂರು- ತಲಪಾಡಿ ಮಧ್ಯೆ ಕಾರ್ಯಾಚರಣೆಗೆ ಇಳಿಸಿದ್ದರೂ ಕೇರಳದಲ್ಲಿ ಕೊರೊನಾ ಜಾಸ್ತಿಯಾಗಿ ಕ್ರಮೇಣ ನಿಫಾ ಸೋಂಕಿನ ಭೀತಿ ಎದುರಾದಾಗ ದಕ್ಷಿಣ ಕನ್ನಡ ಜಿಲ್ಲಾಡಳಿತ ಈ ಬಸ್‌ಗಳ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಿದೆ. ಹಾಗಾಗಿ ಈಗ ಮಂಗಳೂರು- ತಲಪಾಡಿ ಮಧ್ಯೆ ಖಾಸಗಿ ಸಿಟಿ ಬಸ್‌ಗಳು ಮಾತ್ರ ಓಡಾಡುತ್ತಿವೆ.
Related Articles
Advertisement
ಅಂಕಿ ಅಂಶಗಳ ಪ್ರಕಾರ ಮಂಗಳೂರಿನಲ್ಲಿ 325 ಖಾಸಗಿ ಸಿಟಿ ಬಸ್‌ಗಳ ಪೈಕಿ 275 ಬಸ್‌ಗಳು (ಶೇ. 84) ಹಾಗೂ ಕೆಎಸ್‌ಆರ್‌ಟಿಸಿಯ 32 ನರ್ಮ್ ಬಸ್‌ಗಳ ಪೈಕಿ 20 ಬಸ್‌ಗಳು ಪ್ರಸ್ತುತ ಸಂಚಾರ ನಡೆಸುತ್ತಿವೆ. ಖಾಸಗಿ ಸಿಟಿ ಬಸ್‌ಗಳು ಮಂಗಳೂರಿನ ಬಹುತೇಕ ಎಲ್ಲ ಮಾರ್ಗಗಳಲ್ಲಿ ಓಡಾಟ ನಡೆಸುತ್ತಿವೆ. ಸರಕಾರದ ನರ್ಮ್ ಬಸ್‌ಗಳು ಕೆಲವೇ ಮಾರ್ಗಗಳಲ್ಲಿ ಸೀಮಿತ ಸಂಖ್ಯೆಯಲ್ಲಿ ಮಾತ್ರ ಇವೆ.
ಪ್ರಸ್ತುತ ಶೇ. 80- 84ರಷ್ಟು ಖಾಸಗಿ ಸಿಟಿ ಬಸ್‌ಗಳು ಕಾರ್ಯಾಚರಿಸುತ್ತಿವೆ. ಈಗ ಬಸ್‌ಗಳಿಗೆ ಆಗುತ್ತಿರುವ ಕಲೆಕ್ಷನ್ ನಿರೀಕ್ಷಿತ ಪ್ರಮಾಣದಲ್ಲಿ ಇಲ್ಲ. ನೈಟ್ ಕರ್ಫ್ಯೂ ಹಿಂಪಡೆದ ಬಳಿಕ ಹಾಗೂ ಶಾಲಾ, ಕಾಲೇಜುಗಳ ತರಗತಿಗಳು ಪೂರ್ಣ ಪ್ರಮಾಣದಲ್ಲಿ ಪುನರಾರಂಭಗೊಂಡ ಬಳಿಕ ಎಲ್ಲ ಬಸ್‌ಗಳನ್ನು ರಸ್ತೆಗಿಳಿಸಲು ಕ್ರಮ ವಹಿಸಲಾಗುವುದು.
-ಜಯಶೀಲ ಅಡ್ಯಂತಾಯ,ಅಧ್ಯಕ್ಷರು, ದ.ಕ. ಬಸ್ ಮಾಲಕರ ಸಂಘ
ಕೆ.ಎಸ್.ಆರ್.ಟಿ.ಸಿ. ಎಸಿ ಬಸ್‌ಗಳನ್ನು ಹಾಗೂ ಮಂಗಳೂರು- ಕಾಸರಗೋಡು ಮಾರ್ಗದ ಬಸ್‌ಗಳನ್ನು ಹೊರತು ಪಡಿಸಿ ಉಳಿದ ಎಲ್ಲ ಬಸ್‌ಗಳು ಈಗ ಕಾರ್ಯಾಚರಣೆ ನಡೆಸುತ್ತಿವೆ. ಮಂಗಳೂರು- ಕಾಸರಗೋಡು ಮಾರ್ಗದಲ್ಲಿ ಅಂತಾರಾಜ್ಯ ಸಂಚಾರಕ್ಕೆ ನಿರ್ಬಂಧ ಇದೆ. ಆದರೆ ಮಂಗಳೂರು- ತಲಪಾಡಿ ಮಧ್ಯೆ ಬಸ್ ಸಂಚಾರ ಪುನರಾಂಭಿಸುವ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಡಳಿತ ಕ್ರಮ ಕೈಗೊಳ್ಳ ಬೇಕಾಗಿದೆ. -ಅರುಣ್ ಕುಮಾರ್, ವಿಭಾಗ ನಿಯಂತ್ರಣ ಅಧಿಕಾರಿ,ಕೆಎಸ್‌ಆರ್‌ಟಿಸಿ, ಮಂಗಳೂರು.
-ಹಿಲರಿ ಕ್ರಾಸ್ತಾ