ಉಡುಪಿ: ಉಡುಪಿ ಜಿಲ್ಲೆಯ ಸಿಆರ್‌ಝಡ್ ಪ್ರದೇಶದ ಐದು ಮರಳು ದಿಬ್ಬಗಳಲ್ಲಿ ಮರಳುಗಾರಿಕೆ ಮಂಗಳವಾರದಿಂದ ಆರಂಭ ವಾಗುವ ಸಾಧ್ಯತೆಗಳಿವೆ.
ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರು ಡಿ. 11ರಂದು ಸಭೆ ಕರೆದು ಮರಳುಗಾರಿಕೆಗೆ “ಪರವಾನಿಗೆ ಪಡೆದುಕೊಂಡ ವರು ಡಿ. 17ರೊಳಗೆ ಮರಳು ದಿಬ್ಬಗಳ ತೆರವು ಆರಂಭಿಸದಿದ್ದರೆ ಅಂತಹವರ ಪರವಾನಿಗೆ
ಯನ್ನು ಶಾಶ್ವತವಾಗಿ ರದ್ದುಪಡಿಸಲಾಗುವುದು’ ಎಂದು ಎಚ್ಚರಿಕೆ ನೀಡಿದ್ದರು.
“ಒಟ್ಟು 45 ಮಂದಿ ಅರ್ಹ ಪರವಾನಿಗೆದಾರ ಪೈಕಿ ಮೊದಲು 11 ಮಂದಿ ರಾಜಧನ ಪಾವತಿಸಿ ಪರವಾನಿಗೆ ಪಡೆದಿದ್ದರು. 5 ದಿಬ್ಬಗಳನ್ನು ಗುರುತಿಸಿಕೊಡಲಾಗಿತ್ತು. ಆದರೆ ಡಿ. 11ರ ವರೆಗೆ ಯಾರೊಬ್ಬರೂ ಮರಳು ದಿಬ್ಬ ತೆರವು ಆರಂಭಿಸಿರಲಿಲ್ಲ. ಸಭೆಯಲ್ಲಿ ಮರಳು ದಿಬ್ಬಗಳ ಸಂಖ್ಯೆ ಕಡಿಮೆಯಾಗಿರುವ ಬಗ್ಗೆ ಹಾಗೂ ಇತರ ಕೆಲವು ನಿಯಮಗಳ ಸಡಿಲಿಕೆ ಮಾಡುವ ಕುರಿತು ಹೇಳಿದ್ದರು. ಕೆಲವು ನಿಯಮಗಳಲ್ಲಿ ಸಡಿಲಿಕೆ ಮಾಡಿಕೊಡಲಾಗಿತ್ತು.
ಈವರೆಗೆ ಒಟ್ಟು 28 ಮಂದಿ ರಾಜಧನ ಪಾವತಿಸಿ ಪರವಾನಿಗೆ ಪಡೆದಿ ದ್ದಾರೆ. ಎರಡನೇ ಹಂತದ ಬೇಥಮೆಟ್ರಿಕ್ ಸರ್ವೆ
ಕೂಡ ಮುಗಿದಿದ್ದು, ವರದಿ ಸಿದ್ಧವಾದ ಬಳಿಕ ಮತ್ತಷ್ಟು ದಿಬ್ಬಗಳು ಲಭ್ಯವಾಗಲಿವೆ. ಈ ಹಿಂದೆ ಬೇಥಮೆಟ್ರಿಕ್ ಸರ್ವೆ ಬೇಡ ಎಂದು ಪರವಾನಿಗೆ ದಾರರು ಹೇಳಿದ್ದರಿಂದ ಸರ್ವೆ ವಿಳಂಬವಾಗಿದೆ. ಮಂಗಳವಾರದಿಂದ ಮರಳು ದಿಬ್ಬ ತೆರವು ಆರಂಭವಾಗಬಹುದು ಎಂಬ ಮಾಹಿತಿ ಇದೆ’ ಎಂದು ಜಿಲ್ಲಾಧಿಕಾರಿ ಸೋಮವಾರ “ಉದಯವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.
ಈ ಹಿಂದೆ ಗುರುತಿಸಿರುವ ಎಲ್ಲ 171 ಮಂದಿ ಸಾಂಪ್ರದಾಯಿಕ ಮರಳು ಪರವಾನಿಗೆದಾರರಿಗೂ ಪರವಾನಿಗೆ ನೀಡಬೇಕು ಎಂದು ಕೆಲವು ಮರಳು ಪರವಾನಿಗೆದಾರರು, ಲಾರಿ ಮಾಲಕರು, ಮರಳಿ ಗಾಗಿ ಹೋರಾಟ ಸಮಿತಿಯವರು ಮತ್ತು ಶಾಸಕ ರಘುಪತಿ ಭಟ್ ಆಗ್ರಹಿಸಿದ್ದರು. ಈ ನಡುವೆ ಓರ್ವ ಪರವಾನಿಗೆದಾರರು ಮರಳುಗಾರಿಕೆಗೆ ಜಿಲ್ಲಾಡಳಿತ ರಕ್ಷಣೆ ಕೊಡ ಬೇಕು ಎಂದು ಕೋರಿದ್ದರು.