ಕಾಣೆಯಾದ ಹುಡುಗನೊಬ್ಬನ ಸತ್ಯಕಥೆ ಇಟ್ಟುಕೊಂಡು ನಿರ್ದೇಶಕ ರಘುರಾಮ್ ಅವರು ‘ಮಿಸ್ಸಿಂಗ್ ಬಾಯ್’ ಚಿತ್ರ ಮಾಡಿರುವುದು ಎಲ್ಲರಿಗೂ ಗೊತ್ತಿದೆ. ಆ ಚಿತ್ರ ಈಗಾಗಲೇ ಒಂದಷ್ಟು ಕುತೂಹಲವನ್ನೂ ಕೆರಳಿಸಿದೆ. ಆರಂಭದಿಂದಲೂ ಹೊಸ ವಿಷಯಗಳಿಗೆ ಸುದ್ದಿಯಾಗುತ್ತಿರುವ “ಮಿಸ್ಸಿಂಗ್ ಬಾಯ್’ ಈಗ ಮತ್ತೂಂದು ಹೊಸ ಸುದ್ದಿಗೆ ಕಾರಣವಾಗಿದೆ. ಅದು ಮಾರ್ಚ್ 22 ರಂದು ಚಿತ್ರ ಬಿಡುಗಡೆಯಾಗುತ್ತಿರುವುದು.
ಚಿತ್ರ ತೆರೆಗೆ ಬರುವುದು ಹೊಸ ಸುದ್ದಿಯಲ್ಲದಿದ್ದರೂ, ಮಾರ್ಚ್ 22 ರಂದು ತೆರೆಗೆ ಬರುತ್ತಿದೆ ಅಂತ ಡೇಟ್ ಅನೌನ್ಸ್ ಮಾಡಿರುವವರು ವಿಶೇಷ. ಹೌದು, ಇದೇ ಮೊದಲ ಬಾರಿಗೆ ನಿರ್ದೇಶಕ ರಘು ಅವರು, ಕಾಮನ್ ಆಡಿಯನ್ಸ್ ಮೂಲಕ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿಸಿದ್ದಾರೆ. ಸಾಮಾನ್ಯವಾಗಿ ಚಿತ್ರದ ಟೈಟಲ್ ಬಿಡುಗಡೆ, ಆಡಿಯೋ ಬಿಡುಗಡೆ, ಚಿತ್ರ ಬಿಡುಗಡೆಯ ದಿನಾಂಕವನ್ನು ಯಾರಾದರೂ ಸ್ಟಾರ್ ಅಥವಾ ಗಣ್ಯ ವ್ಯಕ್ತಿಗಳಿಂದ ಬಿಡುಗಡೆ ಮಾಡಿಸುವುದು, ಘೊಷಣೆ ಮಾಡಿಸುವುದು ಸಹಜ.
ಆದರೆ, ರಘುರಾಮ್, ಕೊಂಚ ಬದಲಾವಣೆ ಇರಲಿ ಎಂಬ ಕಾರಣಕ್ಕೆ ಕಾಮನ್ ಆಡಿಯನ್ಸ್ ಮೂಲಕ ಚಿತ್ರ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿಸಿದ್ದಾರೆ. ಈ ಬಗ್ಗೆ ಹೇಳಿಕೊಳ್ಳುವ ರಘುರಾಮ್, “ಚಿತ್ರವನ್ನು ನೋಡಿ, ಚೆನ್ನಾಗಿದೆ, ಚೆನ್ನಾಗಿಲ್ಲ ಅಂತ ಫಲಿತಾಂಶ ಕೊಡುವುದೇ ಜನರು. ಅವರ ಮೂಲಕ ಚಿತ್ರ ಬಿಡುಗಡೆ ದಿನಾಂಕ ಘೋಷಣೆ ಮಾಡಿಸುವುದರಿಂದ ಚಿತ್ರದ ಬಗ್ಗೆ ಒಂದಷ್ಟು ಮಾಹಿತಿ ತಿಳಿಸಿದಂತಾಗುತ್ತದೆ ಎಂಬ ಕಾರಣಕ್ಕೆ ಈ ಯೋಚನೆ ಮಾಡಲಾಗಿದೆ.
ಈಗಾಗಲೇ, ಎಲ್ಲೆಡೆಯಿಂದ ಜನರು ಪ್ರೀತಿಯಿಂದ ವಾಟ್ಸಾಪ್ ಮೂಲಕ “ಮಿಸ್ಸಿಂಗ್ ಬಾಯ್’ ಚಿತ್ರದ ಬಗ್ಗೆ ಒನ್‌ಲೈನ್ ಹೇಳುವುದಷ್ಟೇ ಅಲ್ಲ, ಚಿತ್ರ ಮಾರ್ಚ್.22 ರಂದು ಬಿಡುಗಡೆಯಾಗುತ್ತಿದೆ ಎಂದು ಅನೌನ್ಸ್ ಮಾಡುತ್ತಿದ್ದಾರೆ. ಆ ಮೂಲಕ ಸ್ವತಃ ಪ್ರಚಾರಕ್ಕೂ ಕಾರಣರಾಗಿದ್ದಾರೆ’ ಎಂಬುದು ರಘುರಾಮ್ ಮಾತು. ಇನ್ನು, ಈ ಚಿತ್ರವನ್ನು ಕಾರ್ತಿಕ್ ಗೌಡ ವಿತರಣೆ ಮಾಡುತ್ತಿದ್ದಾರೆ. ಪ್ರಮುಖ ಚಿತ್ರಮಂದಿರದ ಕಾನ್ಸೆಪ್ಟ್ನಿಂದ ಹೊರಬಂದಿರುವ ಚಿತ್ರತಂಡ, ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಸುಮಾರು 80 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.
ಇನ್ನು, ಸತತ ನಾಲ್ಕು ವರ್ಷಗಳ ಕಾಲ ಯಾವುದೇ ಚಿತ್ರ ಮಾಡದೆ, “ಮಿಸ್ಸಿಂಗ್ ಬಾಯ್’ಗಾಗಿ ಕಾದು ಕುಳಿತಿದ್ದ ನಿರ್ದೇಶಕ ರಘುರಾಮ್ ಅವರಿಗೆ ಚಿತ್ರದ ಮೇಲೆ ಸಾಕಷ್ಟು ನಂಬಿಕೆ ಇದೆಯಂತೆ. ಇದೊಂದು ಎಮೋಷನಲ್ ಆಗಿಸುವಂತಹ ಚಿತ್ರವಾಗಿದ್ದು, ಎಲ್ಲಾ ವರ್ಗಕ್ಕೂ ಭಾವುಕತೆ ಹೆಚ್ಚಿಸುತ್ತೆ ಎಂಬ ಗ್ಯಾರಂಟಿ ಕೊಡ್ತೀನಿ’ ಎನ್ನುತ್ತಾರೆ. ಅದೇನೆ ಇರಲಿ, ಇದು ವಿದೇಶದಿಂದ ಸ್ವದೇಶಕ್ಕೆ ಅಪ್ಪ-ಅಮ್ಮನ ಹುಡುಕಿ ಬಂದವನ ಕಥೆ ಮತ್ತು ವ್ಯಥೆ. 27 ವರ್ಷದ ಹಿಂದೆ ನಡೆದ ಘಟನೆಯನ್ನು ಪೊಲೀಸ್ ಅಧಿಕಾರಿಯೊಬ್ಬ ಹೇಗೆ ಪತ್ತೆ ಹಚ್ಚುತ್ತಾನೆ ಎಂಬ ಥ್ರಿಲ್ಲರ್ ಅಂಶದೊಂದಿಗೆ ಕಥೆ ಸಾಗಲಿದೆ.
ಇದು ಉತ್ತರಕರ್ನಾಟಕದಲ್ಲಿ ನಡೆದ ನೈಜ ಘಟನೆ. ಕಥೆಯಲ್ಲಿ ಸುಮಾರು ಏಳು ವರ್ಷದ ಹುಡುಗನೊಬ್ಬ, ಆಟವಾಡುತ್ತಲೇ ರೈಲಿನಲ್ಲಿ ಪಯಣ ಬೆಳೆಸಿ ಕಾಣೆಯಾಗುತ್ತಾನೆ. ಹಾಗೆ ಕಾಣೆಯಾದವನು ದೂರದ ಸ್ವೀಡನ್ ದೇಶ ಸೇರಿಕೊಳ್ಳುತ್ತಾನೆ. ಇಪ್ಪತ್ತೇಳು ವರ್ಷದ ಬಳಿಕ ಸ್ವೀಡನ್‌ನಿಂದ ಬರುವ ಸುಮಾರು 35 ವರ್ಷದ ಯುವಕ, ತನ್ನ ಅಪ್ಪ-ಅಮ್ಮನನ್ನು ಹುಡುಕಿಕೊಡಿ ಎಂದು ಪೊಲೀಸ್ ಠಾಣೆಯ ಮೊರೆ ಹೋಗುತ್ತಾನೆ. ಕಳೆದು ಹೋಗಿದ್ದ ಹುಡುಗ ಪುನಃ ವಿದೇಶದಿಂದ ಸ್ವದೇಶಕ್ಕೆ ಬಂದು ಅಪ್ಪ-ಅಮ್ಮ ಬೇಕು ಅಂದಾಗ, ಪೊಲೀಸರು ಹೇಗೆಲ್ಲಾ ಅವನ ಹೆತ್ತವರನ್ನು ಹುಡುಕುತ್ತಾರೆ.
ಎಷ್ಟೆಲ್ಲಾ ಸಮಸ್ಯೆ ಎದುರಿಸುತ್ತಾರೆ ಎಂಬುದು ಚಿತ್ರದ ಕಥೆ’ ಗುರುನಂದನ್ ನಾಯಕರಾದರೆ, ಕೇರಳ ಮೂಲದ ಅರ್ಚನಾ ಜಯಕೃಷ್ಣ ನಾಯಕಿ, ರಂಗಾಯಣ ರಘು ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಮಾಸ್ಟರ್ ಅಭಿಜಯ್ ಬಾಲನಟರಾಗಿ ನಟಿಸಿದ್ದಾನೆ. ಚಿತ್ರಕ್ಕೆ ಹರಿಕೃಷ್ಣ ಸಂಗೀತವಿದೆ. ಜೋನಿ ಹರ್ಷ ಸಂಕಲನ, ಜಗದೀಶ್ ವಾಲಿ ಛಾಯಗ್ರಹಣವಿದೆ. ಕೊಲ್ಲ ಪ್ರವೀಣ್ ನಿರ್ಮಾಪಕರು.