ಹುಬ್ಬಳ್ಳಿ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಕಳೆದೆರಡು ತಿಂಗಳಿನಿಂದ ಸ್ಥಗಿತಗೊಂಡಿದ್ದ ವಿಮಾನ ಸೇವೆ ಸೋಮವಾರದಿಂದ ಪುನರಾರಂಭವಾಗಿದೆ. ಸೋಮವಾರ ಮಧ್ಯಾಹ್ನ 1:00 ಗಂಟೆಗೆ ಇಲ್ಲಿನ ವಿಮಾನ ನಿಲ್ದಾಣಕ್ಕೆ ಬೆಂಗಳೂರು-ದೆಹಲಿ(ಹಿಂಡನ್)ನಡುವೆ ಸ್ಟಾರ್‌ಏರ್ ಕಂಪೆನಿಯ ವಿಮಾನ ಆಗಮಿಸಿತು. ಬೆಂಗಳೂರಿನಿಂದ ನಾಲ್ವರು ಪ್ರಯಾಣಿಕರು ನಗರಕ್ಕೆ ಆಗಮಿಸಿದರು.ಕ್ವಾರಂಟೆನ್‌ಗೆ ಸೂಚಿಸಲಾಗಿದೆ. 1:30 ಗಂಟೆಗೆ ನಗರದಿಂದ 30 ಪ್ರಯಾಣಿಕರು ದೆಹಲಿಗೆ ಪ್ರಯಾಣ ಬೆಳೆಸಿದರು.
ನಗರಕ್ಕಾಗಮಿಸಿದ ಪ್ರಯಾಣಿಕರ ಆರೋಗ್ಯ ತಪಾಸಣೆಗೊಳಪಡಿಸಲಾಯಿತು. ಮೂವರು ಪ್ರಯಾಣಿಕರು ಬೆಂಗಳೂರಿನಿಂದ ಆಗಮಿಸಿದ್ದು, ಅವರ ಪ್ರಯಾಣ ಹಿಸ್ಟರಿ, ವೈದ್ಯಕೀಯ ಪ್ರಮಾಣ ಪತ್ರ ಪರಿಶೀಲಿಸಿ ಅವರಿಗೆ ಹೋಂ ಕ್ವಾರಂಟೈನ್ ಸೀಲ್ ಹಾಕಿ ಕಳುಹಿಸಿಕೊಡಲಾಯಿತು. ಇನ್ನೋರ್ವ ಪ್ರಯಾಣಿಕ ಚೆನ್ನೈನಿಂದ ಆಗಮಿಸಿದ ಹಿನ್ನೆಲೆಯಲ್ಲಿ ಅವರಿಗೆ ಸಾಂಸ್ಥಿಕ ಕ್ವಾರಂಟೈನ್ ಗೆ ಸೂಚಿಸಲಾಯಿತು. ಆದರೆ ಸಾಂಸ್ಥಿಕ ಕ್ವಾರಂಟೈನ್ ಬದಲು ಹೊಟೇಲ್‌ನಲ್ಲಿ ಉಳಿಯುವುದಾಗಿ ತಿಳಿಸಿದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಗುರುತಿಸಿದ ಹೊಟೇಲ್‌ಗೆ ಬಿಡಲಾಯಿತು.
ನಿಲ್ದಾಣ ಸಂಪೂರ್ಣ ಸ್ವಚ್ಛತೆ: ವಿಮಾನ ಪುನರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳಿಂದ ದ್ರಾವಣದ ಮೂಲಕ ನಿಲ್ದಾಣ ಸ್ವಚ್ಛಗೊಳಿಸಲಾಗಿದೆ. ವಿಮಾನ ಬರುವ 2 ಗಂಟೆ ಮೊದಲು ಮತ್ತೂಮ್ಮೆ ಸ್ವತ್ಛಗೊಳಿಸಲಾಯಿತು. ವಿಮಾನ ಬಂದು ದೆಹಲಿಗೆ ತೆರಳುತ್ತಿದ್ದಂತೆ ಪುನಃ ಸ್ವಚ್ಛಗೊಳಿಸಲಾಯಿತು. ಪ್ರವೇಶ ಹಾಗೂ ನಿರ್ಗಮನ ದ್ವಾರಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಗೆ ಒಳಪಡಿಸಲಾಗುತ್ತಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಟರ್ಮಿನಲ್ ಮುಂಭಾಗದಲ್ಲಿ ಗುರುತು ಹಾಕಲಾಗಿದೆ. ಕ್ವಾರಂಟೈನ್ ಸೇರಿದಂತೆ ಇನ್ನಿತರ ಮಾಹಿತಿ ಪ್ರದರ್ಶಿಸಲಾಗಿದೆ.
ಮೊದಲೇ ಆಗಮಿಸಿದ ಪ್ರಯಾಣಿಕರು: ಈ ಹಿಂದೆ ವಿಮಾನ ಹೊರಡುವ ಎರಡು ಗಂಟೆ ಮೊದಲು ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದರು. ಆದರೆ ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಕೆಲ ಸುರಕ್ಷಿತ ಹಾಗೂ ಮುನ್ನೆಚ್ಚರಿಕೆ ಕ್ರಮ ಹಿನ್ನೆಲೆಯಲ್ಲಿ ಪ್ರಯಾಣಿಕರು ಮೂರು ಗಂಟೆ ಮೊದಲು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ದಾಖಲೆ, ಲಗೇಜ್‌ಗಳ ಪರಿಶೀಲನೆ ನಡೆಯಿತು. ಪ್ರಯಾಣಿಕರು ಮಾಸ್ಕ್ ಧರಿಸುವುದು, ಪ್ರವೇಶ ದ್ವಾರದಲ್ಲಿ ಸ್ಪರ್ಶ ರಹಿತ ಯಂತ್ರದ ಸ್ಯಾನಿಟೈಸರ್ ಬಳಕೆ ಕಡ್ಡಾಯಗೊಳಿಸಲಾಗಿದೆ.
ಸ್ಪರ್ಶ ರಹಿತಕ್ಕೆ ಆದ್ಯತೆ: ಪ್ರವೇಶದಿಂದ ಹಿಡಿದು ನಿರ್ಗಮನದವರೆಗೂ ವಿಮಾನ ನಿಲ್ದಾಣ ಎಲ್ಲಾ ಕಾರ್ಯಗಳು ಬಹುತೇಕ ಸ್ಪರ್ಶರಹಿತವಾಗಿದೆ. ಪ್ರಯಾಣಿಕರ ಹಾಗೂ ಸಿಬ್ಬಂದಿ ನಡುವೆ ಸಾಮಾಜಿಕ ಅಂತರಕ್ಕೆ ಹೆಚ್ಚು ಒತ್ತು ನೀಡಿದ್ದು, ಬ್ಯಾಗೇಜ್ ತಪಾಸಣೆ, ಬೋರ್ಡಿಂಗ್ ಪಾಸ್ ಪರಿಶೀಲನೆ ಸೇರಿದಂತೆ ಪ್ರತಿಯೊಂದು ಸ್ಪರ್ಶರಹಿತ. ಪ್ರಯಾಣಿಕರೇ ತಮ್ಮ ಸಾಮಗ್ರಿಗಳನ್ನು ನಿರ್ವಹಿಸುತ್ತಿದ್ದು, ಗುರುತಿನ ಚೀಟಿ ಸ್ಪಷ್ಟವಾಗಿರದಿದ್ದರೆ ಕೂಡಲೇ ಡಿಜಿಟೈಲಸ್ ಮೂಲಕ ಪರಿಶೀಲಿಸುವ ಕಾರ್ಯ ಮಾಡಲಾಗುತ್ತಿದೆ. ಯಾವುದೇ ಕಾರಣಕ್ಕೂ ಸಿಬ್ಬಂದಿ ಪ್ರಯಾಣಿಕರ ಗುರುತಿನ ಚೀಟಿ ಸೇರಿದಂತೆ ಯಾವುದನ್ನು ಸ್ಪರ್ಶಿಸದಿರುವುದು ಕಂಡು ಬಂತು. ವಿಮಾನ ಸೇವೆ ಆರಂಭಿಸಿರುವುದು ಅನುಕೂಲವಾಗಿದೆ. ಎರಡು ತಿಂಗಳ ನಂತರ ಕುಟುಂಬ ಸದಸ್ಯರನ್ನು ನೋಡುವ ಭಾಗ್ಯ ದೊರೆತಿದೆ ಎಂದು ದೆಹಲಿಗೆ ಪ್ರಯಾಣಿಸಲು ಬಂದಿದ್ದ ಪ್ರಯಾಣಿಕರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದರು.