Advertisement

ಅಂಗನವಾಡಿಗಳಲ್ಲೇ ಎಲ್ಕೆಜಿ, ಯುಕೆಜಿ ಆರಂಭಿಸಿ

12:25 PM Jun 19, 2019 | Team Udayavani |

ಮಂಡ್ಯ: ಅಂಗನವಾಡಿಗಳಲ್ಲಿ ಎಲ್ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಆರಂಭಿಸುವಂತೆ ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತರು ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

Advertisement

ನಗರದ ಸಿಲ್ವರ್‌ ಜ್ಯೂಬಿಲಿ ಪಾರ್ಕಿನಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಹೆದ್ದಾರಿ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ಸರ್ಕಾರಿ ಶಾಲೆಗಳಲ್ಲಿ ಎಲ್ಕೆಜಿ, ಯುಕೆಜಿ ತರಗತಿ ಆರಂಭಿಸುವ ಆದೇಶ ಹೊರತರುವ ಪೂರ್ವದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ತಜ್ಞರು, ಸಂಘಟನೆಗಳೊಂದಿಗೆ ಸಂವಾದ ನಡೆಸದೆ ಏಕಮುಖವಾಗಿ ಆದೇಶ ಹೊರಡಿಸಲಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.

ಸರ್ಕಾರದ ಹುನ್ನಾರ: 1975ರಲ್ಲಿ ಜಾರಿಗೆ ಬಂದ ಐಸಿಡಿಎಸ್‌ ಯೋಜನೆಯಡಿ 3ರಿಂದ 6 ವರ್ಷದ ಮಕ್ಕಳಿಗಾಗಿಯೇ ಅಂಗವಾಡಿ ಕೇಂದ್ರಗಳು ಸ್ಥಾಪನೆಯಾದವು. ಈಗಾಗಲೇ 16,40,170 ಮಕ್ಕಳು ಅಂಗನವಾಡಿಗಳಲ್ಲಿ ದಾಖಲಾಗಿದ್ದಾರೆ. ಈ ಮಕ್ಕಳೇ ಈಗ ಸರ್ಕಾರಿ ಶಾಲೆಗಳಲ್ಲಿ ಹೊಸದಾಗಿ ಆರಂಭವಾಗುವ ಪಬ್ಲಿಕ್‌ ಶಾಲೆಗೆ ದಾಖಲಾಗುತ್ತಿದ್ದಾರೆ. ಈ ಮಕ್ಕಳು ಅಲ್ಲಿಗೆ ಹೋದರೆ ಅಂಗನವಾಡಿ ಕೇಂದ್ರಗಳ ಅಗತ್ಯವೇ ಬರುವುದಿಲ್ಲ. ಏಕೆಂದರೆ 3 ವರ್ಷದೊಳಗಿನ ಮಕ್ಕಳಿಗೆ ಮನೆಗೆ ಆಹಾರ ಕೊಡಲಾಗುತ್ತದೆ. ಅಂಗನವಾಡಿ ಕಾರ್ಯಕರ್ತರ ಅಗತ್ಯತೆಯನ್ನು ತಪ್ಪಿಸುವ ಹುನ್ನಾರ ಅಡಗಿದೆ ಎಂದು ಆರೋಪಿಸಿದರು.

ಪೂರ್ವ ಪ್ರಾಥಮಿಕ ಶಿಕ್ಷಣ: ಮಾನವ ಸಂಪನ್ಮೂಲ ಬೆಳವಣಿಗೆಗೆ ಇರುವ ಏಕೈಕ ಯೋಜನೆ ಐಸಿಡಿಎಸ್‌. 1975ರಲ್ಲಿ ಪ್ರಾರಂಭವಾಗಿ ಇಂದು ದೇಶದಲ್ಲಿ ಬೃಹತ್‌ ಯೋಜನೆಯಾಗಿ ಕಾರ್ಯನಿರ್ವಹಿಸುತ್ತಿದೆ. 6 ವರ್ಷದೊಳಗಿನ ಮಕ್ಕಳಲ್ಲಿ ಶೇ.40 ದೈಹಿಕ, ಶೇ.80 ಮಾನಸಿಕ ಬೆಳವಣಿಗೆ ನಡೆಯುತ್ತದೆ. ಈ ಸಂದರ್ಭದಲ್ಲಿ ಅಗತ್ಯ ಪೌಷ್ಟಿಕ ಆಹಾರ, ಪ್ರಾಥಮಿಕ ಆರೋಗ್ಯ ಸೌಲಭ್ಯಗಳು ಮತ್ತು ಪೂರ್ವ ಪ್ರಾಥಮಿಕ ಶಿಕ್ಷಣ ಜೊತೆಯಲ್ಲಿರಬೇಕು ಎಂಬ ಕಾರಣಕ್ಕೆ ಈಗಾಗಲೇ ಸರ್ಕಾರ 4200 ಕೋಟಿ ಖರ್ಚು ಮಾಡುತ್ತಿದೆ ಎಂದು ಹೇಳಿದರು.

Advertisement

ವಿಶೇಷ ತರಬೇತಿ: ಆರು ವರ್ಷದೊಳಗಿನ ಮಕ್ಕಳನ್ನು ನಡೆಸಿಕೊಳ್ಳುವ ವಿಧಾನದ ಬಗ್ಗೆ ಅಂಗನವಾಡಿ ನೌಕರರು ವಿಶೇಷ ತರಬೇತಿ ಪಡೆದಿದ್ದಾರೆ. ಈ ಮಕ್ಕಳಲ್ಲಿ ಜೀರ್ಣಕ್ರಿಯೆಯಲ್ಲೂ ವ್ಯತ್ಯಾಸವಿರುತ್ತದೆ. ಈಗಾಗಲೇ ಇರುವ ವ್ಯವಸ್ಥೆಯನ್ನು ಬಲಿಷ್ಠಗೊಳಿಸುವ ಬದಲಿಗೆ ಇದೇ ತರಹದ ಮತ್ತೂಂದು ವ್ಯವಸ್ಥೆಯನ್ನು ತರುವುದು ರಾಜ್ಯದ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದಂತಾ ಗುತ್ತದೆ ಎಂದು ಹೇಳಿದರು.

ಕೇಂದ್ರ ಯೋಜನಾ ಆಯೋಗ 9 ರಿಂದ 10ನೇ ಪಂಚವಾರ್ಷಿಕ ಯೋಜನೆಗಳು, 2011ರಲ್ಲಿ ಸುಪ್ರೀಂ ಕೋರ್ಟ್‌ನ ಮಧ್ಯಂತರ ತೀರ್ಪುಗಳ ಆಶಯಗಳು ಸಂಪೂರ್ಣವಾಗಿ ಮಣ್ಣಾಗುತ್ತದೆ. ಆದ್ದರಿಂದ ಈ ಆದೇಶವನ್ನು ರದ್ದು ಮಾಡಬೇಕು ಎಂದು ಒತ್ತಾಯಿಸಿದರು.

ಅನುಮತಿ ರದ್ದುಪಡಿಸಿ: ಖಾಸಗಿ ಕಾನ್ವೆಂಟ್ ಮತ್ತು ಶಾಲೆಗಳಿಗೆ ಕೊಡುವ ಅನುಮತಿ ರದ್ದು ಮಾಡಬೇಕು. ಎಲ್ಕೆಜಿ ಮತ್ತು ಯುಕೆಜಿಗಳಿಗೆ ಬೇಕಾಗುವ ಬೋಧನಾ ತರಬೇತಿಯನ್ನು ಕೊಟ್ಟರೆ ಅನುಭವಿಗಳೊಂದಿಗೆ ಅಂಗನವಾಡಿ ಕೇಂದ್ರಗಳಲ್ಲೇ ಪಾಲನೆ ಮತ್ತು ಕಲಿಕೆ ನಡೆಯುತ್ತದೆ. ಅಂಗನವಾಡಿಯಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣ ಪೂರೈಸಿದವರಿಗೆ ಟಿ.ಸಿ.ಯನ್ನು ಕೊಟ್ಟು 1ನೇ ತರಗತಿಗೆ ದಾಖಲಿಸುವ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಕುಮಾರಿ, ಪ್ರಮೀಳಾಕುಮಾರಿ, ಲತಾ, ಕಮಲಾ, ಗೀತಾ, ಸಾವಿತ್ರಮ್ಮ, ಸವಿತಾ, ಧನಲಕ್ಷ್ಮಿ, ಗಾಯತ್ರಿ, ಶಿಲ್ಪ, ಚಂಪಕುಮಾರಿ, ಶಶಿಕಲಾ, ಸೌಭಾಗ್ಯ, ಲತಾ, ಪ್ರಣೀತಾ, ರೋಹಿಣಿ, ಜಯಶೀಲಾ, ಶಿವಮ್ಮ, ಮಂಗಳ, ಮೀನಾಕ್ಷಿ, ರಂಗಲಕ್ಷ್ಮೀ, ಪುಷ್ಪಾವತಿ, ಶೋಭ, ನಾಗಮ್ಮ ಮೊದಲಾದವರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next