Advertisement
ನಗರದಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ ರಸ್ತೆಗಳಲ್ಲಿ ಭಾರಿ ಗಾತ್ರದ ಗುಂಡಿಗಳು ಸೃಷ್ಟಿಯಾಗಿದ್ದು, ವಾಹನ ಸವಾರರು ಗುಂಡಿಗಳಿಂದ ತಪ್ಪಿಸಿಕೊಳ್ಳಲು ಹೋಗಿ ಮೂವರು ಪ್ರಾಣ ಕಳೆದುಕೊಂಡ ದುರ್ಘಟನೆಯೂ ನಡೆದಿತ್ತು. ಬಿಬಿಎಂಪಿ ಮೇಯರ್ ಹಾಗೂ ಆಯುಕ್ತರು ಸಹ ಗುಂಡಿ ಮುಚ್ಚಲು ಗಡುವು ನೀಡಿದರೂ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿರಲಿಲ್ಲ. ಇದೀಗ ಸಿಎಂ ಆದೇಶದ ನಂತರ ಗುಂಡಿ ಮುಚ್ಚುವ ಕಾರ್ಯ ಆರಂಭಿಸಿದ್ದಾರೆ.
Related Articles
Advertisement
ಗುಂಡಿ ದುರಸ್ತಿಗೆ ನಿರ್ದಿಷ್ಟ ಮಾನದಂಡಗಳಿವೆ. ಆದರೆ, ಅವುಗಳನ್ನು ಪಾಲಿಕೆಯ ಅಧಿಕಾರಿಗಳು ಪಾಲಿಸದ ಕಾರಣ, ಸಮಸ್ಯೆ ಗಂಭೀರ ಸ್ವರೂಪ ಪಡೆದಿದೆ. ಇನ್ನು ವಿದೇಶದಿಂದ ತರಿಸಿರುವ ಪೈತಾನ್ ಯಂತ್ರ ಬಳಿಸಿ ಗುಂಡಿ ದುರಸ್ತಿ ಕಾರ್ಯ ನಡೆಸುತ್ತಿದ್ದರೂ, ಅದು ಗುಣಮಟ್ಟದಿಂದ ಕೂಡಿಲ್ಲ ಎಂಬ ಆರೋಪವಿದೆ.
ಗುಂಡಿ ದುರಸ್ತಿಗೆ ಆದ್ಯತೆ: ನಗರದಲ್ಲಿ 13 ಸಾವಿರ ಕಿ.ಮೀ. ಉದ್ದ ರಸ್ತೆಗಳಿವೆ. ಅದರಲ್ಲಿ 1,180 ಕಿ.ಮೀ. ಉದ್ದ ಆರ್ಟಿರಿಯಲ್, ಸಬ್ ಆರ್ಟಿರಿಯಲ್ ರಸ್ತೆಗಳಿದ್ದು, ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ನಗರದ ಎಲ್ಲ ರಸ್ತೆಗಳಲ್ಲಿ 33 ಸಾವಿರ ಗುಂಡಿಗಳು ಸೃಷ್ಟಿಯಾಗಿವೆ. ಈ ಪೈಕಿ 16 ಸಾವಿರ ಗುಂಡಿಗಳನ್ನು ಮುಚ್ಚಿರುವುದಾಗಿ ಅಧಿಕಾರಿಗಳು ತಿಳಿಸಿದ್ದು, ಉಳಿದ 16 ಸಾವಿರ ಗುಂಡಿಗಳನ್ನು ಶೀಘ್ರವೇ ಮುಚ್ಚಲಾಗುವುದು ಎಂದು ಪಾಲಿಕೆಯ ಅಧಿಕಾರಿಗಳು ಭರವಸೆ ನೀಡಿದ್ದಾರೆ.
10 ಇಂಚಿಗಿಂತ ಕಡಿಮೆ ಆಳದ ಗುಂಡಿ ದುರಸ್ತಿ ಹೇಗೆ?-ಮೊದಲಿಗೆ ಗುಂಡಿ ಸ್ವತ್ಛಗೊಳಿಸಿ ಜಲ್ಲಿ ಮಿಶ್ರಣ ಹಾಕಬೇಕು
-ಗುಂಡಿಯನ್ನು ಚೌಕ ಇಲ್ಲವೇ ಆಯಾತಾಕಾರದಲ್ಲಿ ದುರಸ್ತಿಪಡಿಸಬೇಕು
-12 ಎಂ.ಎಂ. ಗಾತ್ರದ ಬಿಟುಮಿನಸ್ ಕಾಂಕ್ರಿಟ್ ಹಾಕಬೇಕು
-ರೋಲರ್‌ನಿಂದ ಏಳೆಂಟು ಬಾರಿ ರೋಲ್ ಮಾಡಬೇಕು
-ಮಿಶ್ರಣ ಕೂಡಿಕೊಳ್ಳಲು ಕಾಲಾವಕಾಶ ನೀಡಬೇಕು
-ಗುಂಡಿ ದುರಸ್ತಿಯಾದ ಕಡೆ ನೀರು ನಿಲ್ಲದಂತೆ ಕ್ರಮವಹಿಸಬೇಕು 10 ಇಂಚಿಗಿಂತ ಹೆಚ್ಚು ಆಳದ ಗುಂಡಿ ದುರಸ್ತಿ ಹೇಗೆ?
-ಮೊದಲು ಗುಂಡಿ ಸ್ವತ್ಛಗೊಳಿಸಿ ವೆಟ್‌ಮಿಕ್ಸ್ ಹಾಕಬೇಕು
-ನಂತರ ಪ್ರೈಮರ್ ಕೋಟ್ ಮಾಡಬೇಕು
-ಆನಂತರ 24 ಗಂಟೆ ಹಾಗೇ ಬಿಡಬೇಕು
-ಬಳಿಕ 20 ಎಂ.ಎಂ. ಜಲ್ಲಿಯ “ಡೆನ್ಸ್ ಬಿಟುಮಿನ್ ಮಿಕ್ಸ್’ ಹಾಕಬೇಕು
-ಜತೆಗೆ ಮಿಶ್ರಣ ಕೂಡಿಕೊಳ್ಳಲು ಕಾಲಾವಕಾಶ ನೀಡಬೇಕು
-ಉಷ್ಣಾಂಶ ಕಡಿಮೆಯಾಗುವವರೆಗೆ ವಾಹನ ಸಂಚಾರಕ್ಕೆ ಅವಕಾಶ ನೀಡಬಾರದು ರಸ್ತೆಗುಂಡಿ ದುರಸ್ತಿ ವೇಳೆ ಗಮನಿಸಬೇಕಾದ ಪ್ರಮುಖ ಅಂಶಗಳು
-ಡಾಂಬರು ಮಿಶ್ರಣ ನಿಗದಿತ ಅವಧಿ ಹಾಗೂ ಉಷ್ಣಾಂಶದಲ್ಲಿ ಬಳಸಿದರಷ್ಟೇ ಪರಿಣಾಮಕಾರಿ
-ಲೇಯಿಂಗ್ ಟೆಂಪರೇಚರ್, ರೋಲರ್ ಟೆಂಪರೇಚರ್ ಕಾಯ್ದುಕೊಳ್ಳಬೇಕು
-ಮಿಶ್ರಣ ಹಾಕುವ ಪ್ರಕ್ರಿಯೆ ವಿಳಂಬವಾದರೆ, ತಾಳಿಕೆ ಗುಣವೂ ಕಡಿಮೆಯಾಗುತ್ತದೆ
-ಗುಂಡಿ ದುರಸ್ತಿಯಾದ ತಕ್ಷಣ ವಾಹನ ಸಂಚಾರಕ್ಕೆ ಅವಕಾಶ ನೀಡಬಾರದು
-ದುರಸ್ತಿಯಾದ ಕೆಲ ದಿನಗಳವರೆಗೆ ಭಾರಿ ವಾಹನಗಳು ಸಂಚರಿಸದಂತೆ ನೋಡಿಕೊಂಡರೆ ಉತ್ತಮ ಗುಂಡಿ ದುರಸ್ತಿ ಅಪ್‌ಡೇಟ್: ಹದಿನೈದು ದಿನಗಳಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿನ ರಸ್ತೆಗಳನ್ನು ಗುಂಡಿಮುಕ್ತಗೊಳಿಸುವಂತೆ ಮುಖ್ಯಮಂತ್ರಿಗಳು ಆದೇಶಿಸಿದ್ದಾರೆ. ಪಾಲಿಕೆಯ ಅಧಿಕಾರಿಗಳು ನಿತ್ಯ ಯಾವ ಭಾಗದಲ್ಲಿ ಗುಂಡಿ ದುರಸ್ತಿ ಕಾರ್ಯ ನಡೆಸುತ್ತಾರೆ? ಎಷ್ಟು ಗುಂಡಿ ಮುಚ್ಚಿದ್ದಾರೆ? ಎಂಬ ಮಾಹಿತಿಯನ್ನು “ಉದಯವಾಣಿ’ ಇಂದಿನಿಂದ ಪ್ರತ್ಯೇಕ ಕಾಲಂನಲ್ಲಿ ಪ್ರಕಟಿಸಲಿದೆ. ಇಲ್ಲಿ ಪ್ರಕಟವಾಗುವ ಸ್ಥಳಗಳಲ್ಲಿ ಗುಂಡಿ ಮುಚ್ಚುವ ಕೆಲಸ ಆಗದಿದ್ದರೆ ಅಥವಾ ಹೊಸದಾಗಿ ಮುಚ್ಚಿರುವ ಗುಂಡಿ ಕಿತ್ತುಬಂದಿದ್ದರೆ, ಅಂಥ ಸ್ಥಳದ ಫೋಟೋ ತೆಗೆದು ಅದನ್ನು ನಮಗೆ ವಾರ್ಟ್ಸ್ ಆ್ಯಪ್ ಮೂಲಕ ಕಳುಹಿಸಬಹುದಾಗಿದೆ. ಮಂಗಳವಾರ ಗುಂಡಿ ಮುಚ್ಚಿದ ಸ್ಥಳಗಳು: ಕಾಮಾಕ್ಯ ಜಂಕ್ಷನ್, ಜೀವನಭೀಮಾ ನಗರ, ಜ್ಞಾನಭಾರತಿ, ರಾಜರಾಜೇಶ್ವರಿ ರಸ್ತೆ, ಪುಟ್ಟೇನಹಳ್ಳಿ ಅಂಡರ್‌ಪಾಸ್ ರಸ್ತೆ ಎರಡು ಸರ್ವಿಸ್ ರಸ್ತೆಗಳು, ಶಾಂತಲಾ ನಗರ ವಾರ್ಡ್, ಕಮ್ಮನಹಳ್ಳಿ, ಹೊಸಕೆರೆಹಳ್ಳಿ ರಸ್ತೆ ಸೇರಿದಂತೆ ಪ್ರಮುಖ ಭಾಗಗಳಲ್ಲಿ ಅಧಿಕಾರಿಗಳು ವೈಜ್ಞಾನಿಕವಾಗಿ ಗುಂಡಿ ಮುಚ್ಚಿದ್ದಾರೆ. ಮಳೆ ಬಿಡುವು ನೀಡಿರುವ ಹಿನ್ನೆಲೆಯಲ್ಲಿ ನಗರದ ರಸ್ತೆಗಳಲ್ಲಿನ ಗುಂಡಿ ಮುಚ್ಚುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಮುಖ್ಯಮಂತ್ರಿಗಳು ನೀಡಿರುವ ಗಡುವಿನೊಳಗೆ ಎಲ್ಲ ಗುಂಡಿಗಳನ್ನು ವೈಜ್ಞಾನಿಕವಾಗಿ ಮುಚ್ಚುವಂತೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ.
-ಎನ್.ಮಂಜುನಾಥ್ ಪ್ರಸಾದ್, ಪಾಲಿಕೆ ಆಯುಕ್ತರು