Advertisement

ಶಾಲೆಗಳಲ್ಲಿ ಸಂಗೀತ ಕಾರ್ಯಕ್ರಮ ಆರಂಭ

12:42 PM Feb 07, 2017 | |

ಮೈಸೂರು: ಶಾಲಾ ವಿದ್ಯಾರ್ಥಿಗಳಲ್ಲಿ ಸಂಗೀತದ ಅಭಿರುಚಿ ಮೂಡಿಸುವ ಜತೆಗೆ ಪಠ್ಯದಲ್ಲಿರುವ ಜಾನಪದ, ದಾಸರ ಪದ, ತತ್ವಪದಗಳ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಇದೇ ಮೊದಲ ಬಾರಿಗೆ ಹಮ್ಮಿಕೊಂಡಿರುವ ಶಾಲೆಗಳಲ್ಲಿ ಸಂಗೀತ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ದೊರೆಯಿತು.

Advertisement

ಮೈಸೂರಿನ ರಾಜೇಂದ್ರನಗರದಲ್ಲಿ ಇರುವ ಸರ್ಕಾರಿ ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್‌ ಚಾಲನೆ ನೀಡಿದರು. ಸಂಗೀತ ಕಾರ್ಯಕ್ರಮದ ಪ್ರಚಾರ ವಾಹನಕ್ಕೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ನಯಿಮಾ ಸುಲ್ತಾನ ಹಸಿರು ನಿಶಾನೆ ತೋರಿದರು. ಜಿಲ್ಲಾಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡಿರುವ ಶಾಲೆಗಳಲ್ಲಿ ಸಂಗೀತ ಕಾರ್ಯಕ್ರಮ ಫೆ.6ರಿಂದ ಫೆ.14ರವರೆಗೆ ಜಿಲ್ಲೆಯ ಎಲ್ಲಾ ತಾಲೂಕುಗಳ 48 ಶಾಲೆಗಳಲ್ಲಿ ಸಂಗೀತ ಕಾರ್ಯಕ್ರಮ ನಡೆಯಲಿದೆ.

ಪದ್ಯಗಳ ಗಾಯನ: ಕೇವಲ ಪಠ್ಯಕ್ಕೆ ಮಾತ್ರವೇ ಸೀಮಿತವಾಗಿ ಪಠ್ಯೇತರ ಚಟುವಟಿಕೆಗಳಿಂದ ವಂಚಿತರಾಗುವ ಸರ್ಕಾರಿ ಶಾಲೆ ಮಕ್ಕಳಿಗೆ ಪಠ್ಯದ ಜತೆಗೆ ಸಂಗೀತದ ಬಗ್ಗೆ ಅರಿವು ಮೂಡಿಸುವುದು ಶಾಲೆಗಳಲ್ಲಿ ಸಂಗೀತ ಕಾರ್ಯಕ್ರಮದ ಮುಖ್ಯ ಉದ್ದೇಶ. ಈ ಹಿನ್ನೆಲೆಯಲ್ಲಿ ರಾಜೇಂದ್ರನಗರದ ಸರ್ಕಾರಿ ಪ್ರಾಥಮಿಕ, ಪ್ರೌಢ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಶಾಲೆಗಳಲ್ಲಿ ಸಂಗೀತ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ನಾಡಿನ ಹೆಸರಾಂತ ಕವಿಗಳು ರಚಿಸಿರುವ ಕವಿತೆ, ದಾಸರ ಪದಗಳು, ವಚನಗಳ ಗಾಯನ ಕಾರ್ಯಕ್ರಮ ನಡೆಯಿತು.

ಪ್ರಮುಖವಾಗಿ ರಾಷ್ಟ್ರಕವಿಗಳಾದ ಕುವೆಂಪು, ಡಾ. ಜಿ.ಎಸ್‌ .ಶಿವರುದ್ರಪ್ಪ, ಎಂ.ಗೋವಿಂದ ಪೈ, ಕವಿಗಳಾದ ಕಯ್ನಾರ ಕಿಞ್ಞಣ್ಣ ರೈ, ಬಿ.ಆರ್‌.ಲಕ್ಷ್ಮಣರಾವ್‌, ದ.ರಾ.ಬೇಂದ್ರೆ, ಕೆ.ಎಸ್‌.ನರಸಿಂಹಸ್ವಾಮಿ, ಡಿಎಸ್‌.ಕರ್ಕಿ, ದಿನಕರ ದೇಸಾಯಿ ಇನ್ನಿತರರ ಕವಿಗಳು ರಚಿಸಿರುವ ಪದ್ಯಗಳು, ಪುರಂದರದಾಸರು, ಜೇಡರದಾಸಿಮಯ್ಯ, ಶಿಶುನಾಳ ಷರೀಫ್ ಅವರ ವಚನಗಳು, ಗೀತೆಗಳ ಗಾಯನ ಕಾರ್ಯಕ್ರಮವನ್ನು ಹಲವು ಗಾಯಕರು ನಡೆಸಿಕೊಟ್ಟರು.

ಉದ್ಘಾಟನಾ ಸಮಾರಂಭದಲ್ಲಿ ಪ್ರಗತಿಪರ ಹೋರಾಟಗಾರ ಪ.ಮಲ್ಲೇಶ್‌, ಮೈಲ್ಯಾಕ್‌ ಅಧ್ಯಕ್ಷ ಎಚ್‌.ಎ. ವೆಂಕಟೇಶ್‌, ಉಪಮೇಯರ್‌ ರತ್ನ ಲಕ್ಷ್ಮಣ್‌, ಡಿಡಿಪಿಐ ಎಚ್‌.ಆರ್‌.ಬಸಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಚ್‌.ಚೆನ್ನಪ್ಪ, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಬಿ.ಎಂ.ರಾಮಚಂದ್ರ, ಸರ್ವಜನಾಂಗ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವೇಣುಗೋಪಾಲ್‌, ಕನ್ನಡಪರ ಹೋರಾಟಗಾರ ತಾಯೂರು ವಿಠಲಮೂರ್ತಿ ಇನ್ನಿತರರು ಹಾಜರಿದ್ದರು.

Advertisement

30 ಸಾವಿರ ವಿದ್ಯಾರ್ಥಿಗಳು
ಶಾಲೆಗಳಲ್ಲಿ ಸಂಗೀತ ಕಾರ್ಯಕ್ರಮ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ನಡೆಯಲಿದ್ದು, ಏಳು ತಾಲೂಕುಗಳಿಂದ 30 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರ ಸವಿ ಅನುಭವಿಸ ಲಿದ್ದಾರೆ. ಕಾರ್ಯಕ್ರಮವನ್ನು ಯಶಸ್ವಿ ಗೊಳಿಸುವ ಉದ್ದೇಶದಿಂದ ಪ್ರತಿ ತಾಲೂಕಿನಲ್ಲಿ ಓರ್ವ ನೂಡಲ್‌ ಅಧಿಕಾರಿಯನ್ನು ನೇಮಿಸ ಲಾಗಿದ್ದು, ಕಾರ್ಯಕ್ರಮ ನಡೆಯುವ ಶಾಲೆಯ ಆವರಣಕ್ಕೆ ಸಮೀಪವಿರುವ ಇನ್ನಿತರ ಶಾಲೆಗಳ ವಿದ್ಯಾರ್ಥಿಗಳ ಜತೆಗೆ ಮುಖ್ಯವಾಗಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಪ್ರಮುಖ ಆದ್ಯತೆ ನೀಡಲಾಗಿದೆ.

ಎಲ್ಲೆಲ್ಲಿ ಸಂಚಾರ
ಸಂಗೀತ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕಪಿಲಾ ಯಾನ ಹಾಗೂ ಕಾವೇರಿ ಯಾನ ಎರಡು ಸಂಗೀತ ಸಂಜೆ ಕಾರ್ಯಕ್ರಮಕ್ಕೆ ವಾಹನವನ್ನು ಸಿದ್ಧಗೊಳಿಸಲಾಗಿದೆ. ಕಪಿಲಾ ಯಾನ ವಾಹನವು ಕಲಾವಿದರ ತಂಡ ದೊಂದಿಗೆ ಮೈಸೂರು ಗ್ರಾಮಾಂತರ, ತಿ.ನರಸೀಪುರ, ನಂಜನಗೂಡು ತಾಲೂಕು, ಎಚ್‌.ಡಿ ಕೋಟೆ ತಾಲೂಕಿನಲ್ಲಿ ಕಾರ್ಯಕ್ರಮ ನಡೆಸಕೊಡಲಿದೆ. ಕಾವೇರಿ ಯಾನ ವಾಹನವು ಕಲಾವಿದರೊಂದಿಗೆ ಕೆ.ಆರ್‌. ನಗರ ತಾಲೂಕು, ಹುಣಸೂರು ತಾಲೂಕು, ಪಿರಿಯಾಪಟ್ಟಣ ತಾಲೂಕು ಹಾಗೂ ಮೈಸೂರು ನಗರದ ಕೆಲ ಶಾಲೆಗಳಲ್ಲಿ ಕಾರ್ಯಕ್ರಮ ನೀಡಲಿದೆ.ಇನ್ನೂ ಕಾರ್ಯಕ್ರಮ ನಡೆಯುವ ತಾಲೂಕಿನಲ್ಲಿ ಸ್ಥಳೀಯ ಕಲಾವಿದರು ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next