Advertisement

ಶಿರಸಿ-ತಡಸ ರಸ್ತೆ ಕಾಮಗಾರಿ ಆರಂಭಿಸಿ

05:13 PM Oct 25, 2018 | |

ಶಿರಸಿ: ಶಿರಸಿ-ತಡಸ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಅಭಿವೃದ್ಧಿಪಡಿಸುವ ವೇಳೆ ಅಗಲೀಕರಣಕ್ಕೆ ವಿರೋಧ ವ್ಯಕ್ತವಾದ ಬೆನ್ನಲ್ಲೇ ಇದನ್ನು ಶೀಘ್ರ ಆರಂಭಿಸುವಂತೆ ಇಲ್ಲಿನ ಶಿರಸಿ ಜಿಲ್ಲಾ ಹೋರಾಟ ಸಮಿತಿ ಸರಕಾರವನ್ನು ಒತ್ತಾಯಿಸಿದೆ. ಜಿಲ್ಲಾ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಸಮಿತಿ ಪ್ರಮುಖರು, ಈಗಾಗಲೇ ಮೊದಲ ಹಂತದ ಪ್ರಕ್ರಿಯೆ ಮುಗಿದಿದ್ದು, ಕಾಮಗಾರಿ ಪ್ರಾರಂಭಿಸುವ ಪ್ರಕ್ರಿಯೆಗೆ ಚಾಲನೆ ದೊರೆಯಬೇಕಿದೆ. ಈ ರಸ್ತೆ ಅಭಿವೃದ್ಧಿಯಾಗುವುದರಿಂದ ಹಲವಾರು ಅನುಕೂಲವಾಗಲಿವೆ ಎಂದು ಪ್ರತಿಪಾದಿಸಿದರು.

Advertisement

ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕಕ್ಕೆ ನೇರ ಸಂಪರ್ಕ ಕೊಂಡಿ ಇದಾಗಿದ್ದು, ಘಟ್ಟದ ಮೇಲ್ಭಾಗದ ತಾಲೂಕುಗಳ ಅಭಿವೃದ್ಧಿಗೂ ನೆರವಾಗಲಿದೆ. ಉತ್ತರ ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿ ಪ್ರದೇಶ (ಕೊಲ್ಲಾಪುರ, ಸಾಂಗ್ಲಿ)ದಿಂದ ದಕ್ಷಿಣ ಕನ್ನಡದ ಕೊಲ್ಲೂರು, ಧರ್ಮಸ್ಥಳ, ಸುಬ್ರಮಣ್ಯ ಮುಂತಾದ ಸುಪ್ರಸಿದ್ಧ ಯಾತ್ರಾ ಸ್ಥಳಗಳಿಗೆ, ದಿನನಿತ್ಯ ಸಾವಿರಾರು ಯಾತ್ರಾರ್ಥಿಗಳಿಗೆ ಅನುಕೂಲವಾಗಲಿದೆ. ಉತ್ತರ ಕರ್ನಾಟಕದಿಂದ ಸಾವಿರಾರು ಕೂಲಿ ಕಾರ್ಮಿಕರಿಗೆ ದಕ್ಷಿಣ ಕನ್ನಡ ಜಿಲ್ಲೆ (ಮಂಗಳೂರು)ಗೆ ನೇರ ಸಂಪರ್ಕಕ್ಕೆ ಅನುಕೂಲವಾಗಿದ್ದು, ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೂ ನೆರವಾಗಲಿದೆ. ಉತ್ತರ ಕರ್ನಾಟಕ, ಉತ್ತರ ಕನ್ನಡ ಜಿಲ್ಲೆಯಿಂದ ಸಾವಿರಾರು ರೋಗಿಗಳು ಉತ್ತಮ ಚಿಕಿತ್ಸೆಗಾಗಿ ದಕ್ಷಿಣ ಕನ್ನಡದ ಮಣಿಪಾಲ ಕೆ.ಎಸ್‌. ಹೆಗ್ಡೆ ಆಸ್ಪತ್ರೆ, ಎಜೆ ಹಾಸ್ಪಿಟಲ್‌ ಮುಂತಾದ ಆಸ್ಪತ್ರೆಗಳಿಗೆ ಭೇಟಿ ನೀಡಲು ಅನುಕೂಲವಾಗಲಿದೆ ಎಂದು ವಿವರಿಸಿದರು.

ಪರಿಸರ ವಿಷಯದಿಂದ ಈಗಾಗಲೇ ಅಂಕೋಲಾ, ಹುಬ್ಬಳ್ಳಿ ರೈಲ್ವೆ ಯೋಜನೆ ಮತ್ತು ನಾಗರಿಕ ವಿಮಾನ ನಿಲ್ದಾಣ ನೆನೆಗುದಿಗೆ ಬಿದ್ದಿದೆ. ಜಲ್ಲಿ, ಮರಳು ಬಂದ್‌ನಿಂದಾಗಿ ಸಾವಿರಾರು ಕೂಲಿ ಕಾರ್ಮಿಕರ ಕುಟುಂಬದವರ ಸ್ಥಿತಿ ಶೋಚನೀಯವಾಗಿದೆ. ಸರ್ಕಾರದ ಅರೆ ಸರ್ಕಾರಿ, ಸಹಕಾರಿ ಸಂಘ ಸಂಸ್ಥೆಗಳ ಅಭಿವೃದ್ಧಿ ಕಾಮಗಾರಿಗಳ (ಕಟ್ಟಡ ರಸ್ತೆ) ತ್ರಿಶಂಕು ಸ್ಥಿತಿಯಾಗಿದೆ. ಸರ್ಕಾರ ದೊಡ್ಡ ಮೊತ್ತದ ಅನುದಾನ ಸುಮಾರು 378 ಕೋಟಿ ಮಂಜೂರಿ ಮಾಡಿರುವುದನ್ನು ಸದುಪಯೋಗ ಪಡಿಸಿಕೊಳ್ಳದೇ ಇದ್ದರೆ ಮೂರ್ಖತನವಾದೀತು ಎಂದೂ ಹೇಳಿದ ಸಮಿತಿ ಪ್ರಮುಖರು, ಕುಮಟಾ ತಡಸ ರಸ್ತೆ ಅಭಿವೃದ್ಧಿ ಕಾಮಗಾರಿ ಕೂಡಲೇ ಪ್ರಾರಂಭಿಸುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಮಸ್ತ ಅಭಿವೃದ್ಧಿಪರ ನಾಗರಿಕರ ಪರವಾಗಿ ವಿನಂತಿಸಿಕೊಳ್ಳುತ್ತಿದ್ದೇವೆ ಎಂದೂ ಮನವಿ ಮಾಡಿಕೊಂಡರು.

ಸಮಿತಿ ಅಧ್ಯಕ್ಷ ಉಪೇಂದ್ರ ಪೈ, ಗೌರವ ಕಾರ್ಯದರ್ಶಿ ಎಂ.ಎಂ. ಭಟ್ಟ ಕಾರೇಕೊಪ್ಪ, ಗೌರವ ಅಧ್ಯಕ್ಷ ಶ್ರೀನಿವಾಸ ಹೆಬ್ಟಾರ, ಮಂಜು ಮೊಗೇರ, ಪರಮಾನಂದ ಹೆಗಡೆ, ಗಣಪತಿ ನಾಯ್ಕ, ಸುಭಾಸ ಮಂಡೂರು ಇತರರು ಇದ್ದರು.

ಇದು ಯಾರ ವಿರುದ್ಧವಲ್ಲ. ಅಭಿವೃದ್ಧಿಗೆ ಒತ್ತಾಯಿಸಿ ಮನವಿ. ಈಗಾಗಲೇ ಸಾಕಷ್ಟು ಅಗಲೀಕರಣ ಇರುವುದರಿಂದ ಅಭಿವೃದ್ಧಿಗೆ ಸಮಸ್ಯೆಯಿಲ್ಲ. ಸಮಿತಿಯಂತೂ ಎರಡು ಕಿಮೀ ರಸ್ತೆ ಇಕ್ಕೆಲದಲ್ಲಿ ಗಿಡ ನೆಡಲಿದೆ. ಉಳಿದ ಸ್ವಯಂ ಸೇವಾ ಸಂಸ್ಥೆಗಳನ್ನೂ ಇದಕ್ಕೆ ಪ್ರೇರೇಪಿಸಲಿದೆ.
. ಎಂ.ಎಂ. ಭಟ್ಟ ಕಾರೇಕೊಪ್ಪ,
   ಸಮಿತಿ ಪ್ರಮುಖ

Advertisement

ಶಿರಸಿ ಪ್ರತ್ಯೇಕ ಜಿಲ್ಲಾ ಹೋರಾಟ ಸಮಿತಿ ಇನ್ನಷ್ಟು ಕ್ರಿಯಾಶೀಲಗೊಳಿಸಲಾಗುತ್ತದೆ. ನಮಗೂ ಶಿರಸಿ ಪ್ರತ್ಯೇಕ ಜಿಲ್ಲೆ ಶೀಘ್ರ ಘೋಷಣೆ ಆಗುವ ವಿಶ್ವಾಸವಿದೆ.
. ಶ್ರೀನಿವಾಸ ಹೆಬ್ಬಾರ, ಗೌರವಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next