Advertisement

ಇಂದು ಶಾಲೆ ಆರಂಭ,ನಾಳೆ ಪ್ರಾರಂಭೋತ್ಸವ

06:00 AM May 28, 2018 | Team Udayavani |

ಉಡುಪಿ: ಶಾಲೆಗಳ ಪುನರಾರಂಭ ಮೇ 28ರಂದೇ ನಡೆಯಲಿದೆ. ಆದರೆ ತರಗತಿಗಳು ಮತ್ತು ಪ್ರಾರಂಭೋತ್ಸವ ಕಾರ್ಯಕ್ರಮಗಳು ಮೇ 29ರಂದು ಜರಗಲಿವೆ ಎಂದು ಡಿಡಿಪಿಐ ತಿಳಿಸಿದ್ದಾರೆ.

Advertisement

ಮೊದಲ ದಿನ ಸ್ವಚ್ಛತೆ ಆದ್ಯತೆ
ಮೊದಲ ದಿನ ಮಕ್ಕಳು ತರಗತಿಗೆ ಹೊಂದಿಕೊಳ್ಳುವ ವಾತಾವರಣ ನಿರ್ಮಿಸುವುದು, ಶಾಲೆಯ ಕೊಠಡಿಗಳು, ನೀರಿನ ತೊಟ್ಟಿಗಳು ಇತ್ಯಾದಿಗಳ ಸ್ವಚ್ಛತೆ ಕೆಲಸಗಳಲ್ಲಿ ಮಕ್ಕಳು ಪಾಲ್ಗೊಳ್ಳಲಿದ್ದಾರೆ. ಶಿಕ್ಷಕರು ಶಾಲಾ ಚಟುವಟಿಕೆಗಳ ಕ್ರಿಯಾ ಯೋಜನೆ, ಪಾಠಗಳ ಹಂಚಿಕೆ, ದಾಖಲಾತಿ, ಹಾಜರಾತಿ ಪ್ರಕ್ರಿಯೆ ಮೊದಲಾದವುಗಳನ್ನು ನಡೆಸಲಿದ್ದಾರೆ.

ಬ್ಯಾಂಡ್‌ಸೆಟ್ಟೂ , ಸಮವಸ್ತ್ರವೂ
ಮೇ 29ರಂದು ಪ್ರಾರಂಭೋತ್ಸವ ನಡೆಯಲಿದ್ದು ಅಂದು ಮಧ್ಯಾಹ್ನ ಅಕ್ಷರ ದಾಸೋಹದಲ್ಲಿ ಸಿಹಿ ಸಹಿತವಾದ ಊಟ ನೀಡಲು ಸೂಚನೆ ನೀಡಲಾಗಿದೆ. 

ಅಲ್ಲದೆ ಶಾಲೆಯ ಶಿಕ್ಷಕರು ಮತ್ತು ಎಸ್‌ಡಿಎಂಸಿಯವರು ಸೇರಿಕೊಂಡು ಹೆತ್ತವರು ಮತ್ತು ಮಕ್ಕಳನ್ನು ಆತ್ಮೀಯವಾಗಿ ಸ್ವಾಗತಿಸಲಿದ್ದಾರೆ.
 
ಆಯಾ ಶಾಲೆಗಳು ವಿಶಿಷ್ಟ ರೀತಿಯಲ್ಲಿ ಸ್ವಾಗತಿಸಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ. ಕೆಲವು ಶಾಲೆಗಳಲ್ಲಿ ಬ್ಯಾಂಡ್‌ಸೆಟ್‌ ಮೂಲಕವೂ ಸ್ವಾಗತ ನಡೆಯಲಿದೆ. ಪಠ್ಯಪುಸ್ತಕಗಳ ವಿತರಣೆ ಅದೇ ದಿನ ನಡೆಯಲಿದೆ. ಸಮವಸ್ತ್ರ ಇದುವರೆಗೆ ಉಡುಪಿ ಜಿಲ್ಲೆಗೆ ಬಂದಿಲ್ಲ. ಬಂದಲ್ಲಿ ಅದನ್ನು ಕೂಡ ಅದೇ ದಿನ ವಿತರಿಸಲಾಗುವುದು ಎಂದು ಡಿಡಿಪಿಐ 
“ಉದಯವಾಣಿ’ಗೆ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ  100ಕ್ಕೂ ಅಧಿಕ ಶಿಕ್ಷಕರ ಕೊರತೆ
ಜಿಲ್ಲೆಯ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಸುಮಾರು 88 ಹಾಗೂ ಪ್ರೌಢಶಾಲೆಗಳಲ್ಲಿ 22ರಷ್ಟು ಶಿಕ್ಷಕರ ಕೊರತೆ ಕಳೆದ ಬಾರಿ ಇತ್ತು. ಈ ಸ್ಥಾನಗಳಿಗೆ ಅತಿಥಿ ಶಿಕ್ಷಕರನ್ನು ನೇಮಿಸಲಾಗಿತ್ತು. ಈ ಬಾರಿಯೂ ಬಹುತೇಕ ಇಷ್ಟೇ ಶಿಕ್ಷಕರ ಕೊರತೆಯಾಗಲಿದೆ. ಅತಿಥಿ ಶಿಕ್ಷಕರ ನೇಮಕವಾಗಲಿದೆ. ಕೆಲವೆಡೆ ಅನುದಾನಿತ ಶಾಲೆಗಳಲ್ಲಿಯೂ ಶಿಕ್ಷಕರ ಕೊರತೆ ಹೆಚ್ಚಾಗಿದೆ.

Advertisement

ಶಾಲೆ ಉಳಿಸಲು ಗರಿಷ್ಠ ಪ್ರಯತ್ನ
ಈ ಹಿಂದೊಮ್ಮೆ 10ಕ್ಕಿಂತ ಕಡಿಮೆ ಮಕ್ಕಳಿದ್ದರೆ ಅಂತಹ ಶಾಲೆಗಳ ಮಕ್ಕಳನ್ನು ಪಕ್ಕದ ಶಾಲೆಗಳಿಗೆ ಸೇರಿಸಿ ಆ ಶಾಲೆಯನ್ನು ಮುಚ್ಚುವ ನಿಯಮವಿತ್ತು. ಆದರೆ ಈಗ 10ಕ್ಕಿಂತ ಕಡಿಮೆ ಇದ್ದರೂ ಅಂತಹ ಶಾಲೆಗಳನ್ನು ಮುಚ್ಚುವುದಿಲ್ಲ. ಮಕ್ಕಳ ಸಂಖ್ಯೆ ಹೆಚ್ಚಳವಾಗುವ ನಿರೀಕ್ಷೆಯಲ್ಲಿ ಮುಂದುವರಿಸಲಾಗುವುದು. ಮಕ್ಕಳ ದಾಖಲಾತಿಗಾಗಿ ಶಾಲಾ ಪ್ರಾರಂಭೋತ್ಸವದಂದು ಜಾಥಾ ಕೂಡ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಉಡುಪಿ ಕ್ಷೇತ್ರ ಶಿಕ್ಷಣ ಅಧಿಕಾರಿಯವರ ವ್ಯಾಪ್ತಿಯಲ್ಲಿ  ಒಂದು ಶಾಲೆಯಲ್ಲಿ 4 ವಿದ್ಯಾರ್ಥಿಗಳು ಮಾತ್ರ ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಶಾಲೆಗಳಲ್ಲಿ ದಾಖಲಾತಿ ಆರಂಭವಾಗಿ 10-15 ದಿನಗಳು ಕಳೆದ ಅನಂತರವಷ್ಟೇ ವಿದ್ಯಾರ್ಥಿಗಳ ಸಂಖ್ಯೆಯ ಸ್ಪಷ್ಟ ಚಿತ್ರಣ ದೊರೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next