ಬೆಂಗಳೂರು : ರಾಜ್ಯದಲ್ಲಿನ ಸಮ್ಮಿಶ್ರ ಸರಕಾರದ ಪಾಲುದಾರರಲ್ಲಿ ವಿಶ್ವಾಸದ ಕೊರತೆ ಇದೆ ಎಂಬುದಕ್ಕೆ ಸಾಕ್ಷಿಯಾಗಿ ಕರ್ನಾಟಕ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಪುತ್ರ ನಿಖೀಲ್ ಕುಮಾರಸ್ವಾಮಿ ಅವರು ‘ಜೆಡಿಎಸ್ ಕಾರ್ಯಕರ್ತರಿಗೆ ರಾಜ್ಯ ವಿಧಾನಸಭಾ ಚುನಾವಣೆಗೆ ಈಗಿಂದೀಗಲೇ ಸಿದ್ಧರಾಗುವಂತೆ ಕೋರಿರುವ’ ವಿಡಿಯೋ ವೈರಲ್ ಆಗಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ನಿಖೀಲ್ ಅವರು “ರಾಜ್ಯ ವಿಧಾನಸಭೆಗೆ ಯಾವುದೇ ಹೊತ್ತಲ್ಲಿ ಚುನಾವಣೆ ಎದುರಾಗಬಹುದು; ಅದು ಮುಂದಿನ ವರ್ಷವೇ ಇರಲಿ ಅಥವಾ ಇನ್ನು ಎರಡು – ಮೂರು ವರ್ಷಗಳಲ್ಲೇ ಇರಲಿ” ಎಂದು ಹೇಳುವುದು ಕೇಳಿ ಬರುತ್ತದೆ.
“ಚುನಾವಣೆ ಸಿದ್ಧತೆಯನ್ನು ನಾವು ಈಗಲೇ ಆರಂಭಿಸಬೇಕಾಗುತ್ತದೆ; ನಾವದನ್ನು ಆಮೇಲೆ ಮಾಡುತ್ತೇವೆ ಎಂದು ಹೇಳಲೇಬಾರದು; ಮುಂದಿನ ತಿಂಗಳಿಂದಲೇ ನಾವು ಚುನಾವಣೆ ಸಿದ್ಧತೆಯನ್ನು ಆರಂಭಿಸಬೇಕು; ಅದು ಯಾವಾಗ ಬರುತ್ತದೆ ಎಂಬುದು ನಮಗೆ ಗೊತ್ತಿಲ್ಲ; ಮುಂದಿನ ವರ್ಷ, ಅಥವಾ ಇನ್ನು ಎರಡು ಮೂರು ವರ್ಷಗಳಲ್ಲಿ ಬರಬಹುದು; ನಾವು ಈಗಲೇ ಆದಕ್ಕೆ ಸಿದ್ಧರಾಗಬೇಕು” ಎಂದು ನಿಖೀಲ್ ವಿಡಿಯೋ ದಲ್ಲಿ ಹೇಳುವುದು ಕೇಳಿ ಬರುತ್ತದೆ.
ನಿಖೀಲ್ ಅವರು ಈಚಿನ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಸ್ಪರ್ಧಿಸಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಎದುರು ಪರಾಜಿತರಾಗಿದ್ದರು.
‘ರಾಜ್ಯದಲ್ಲಿನ ಮೈತ್ರಿ ಸರಕಾರದ ಭದ್ರತೆಗೆ ಯಾವುದೇ ಬೆದರಿಕೆ ಇಲ್ಲ; ನಮ್ಮ ತಂದೆ ಸಿಎಂ ಆಗಿ ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಲಿದ್ದಾರೆ’ ಎಂದು ನಿಖೀಲ್ ಹೇಳಿದ್ದಾರೆ.
ಮಂಡ್ಯದಲ್ಲಿ ಎರಡು ದಿನಗಳ ಹಿಂದೆ ಜೆಡಿಎಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದ ನಿಖೀಲ್ ಅವರ ವೈರಲ್ ಆಗಿರುವ ಈ ವಿಡಿಯೋವನ್ನು ಮೊದಲು ಶೇರ್ ಮಾಡಿದವರು ಪಕ್ಷದ ಕಾರ್ಯಕರ್ತ ಸುನಿಲ್ ಗೌಡ ದಂಡಿಗನಹಳ್ಳಿ.