‘ಒಂದು ಟಾಸ್ಕ್. ಅದನ್ನು ಗೆಲ್ಲೋಕೆ ನಾಲ್ಕು ಜನರ ನಡುವೆ ಜಿದ್ದಾಜಿದ್ದಿಯ ಹೋರಾಟ…! ಹಾಗಾದರೆ ಆ ಟಾಸ್ಕ್ ಏನು, ಅದರಲ್ಲಿ ಗೆಲ್ಲೋದು ಯಾರು ಅದೇ ಸಸ್ಪೆನ್ಸ್…’
– ಹೀಗೆ ಹೇಳಿ ಹಾಗೊಮ್ಮೆ ಪಕ್ಕದಲ್ಲೇ ಕುಳಿತಿದ್ದ ಹಿರಿಯ ನಟ ಶ್ರೀನಿವಾಸ್ ಪ್ರಭು ಅವರನ್ನ ನೋಡಿದರು ನಿರ್ದೇಶಕ ಮಧುಸೂದನ್. ಅವರು ಹೇಳಿಕೊಂಡಿದ್ದು ‘ಆಪರೇಷನ್ ನಕ್ಷತ್ರ’ ಚಿತ್ರದ ಬಗ್ಗೆ. ಇದು ಅವರ ಮೊದಲ ನಿರ್ದೇಶನದ ಚಿತ್ರ. ಇಂದು (ಜು.12) ಬಿಡುಗಡೆಯಾಗುತ್ತಿದೆ. ಆ ಕುರಿತು ಹೇಳಿಕೊಳ್ಳಲು ತಮ್ಮ ಚಿತ್ರತಂಡದೊಂದಿಗೆ ಆಗಮಿಸಿದ್ದರು ನಿರ್ದೇಶಕರು.
ಮೊದಲು ಮಾತಿಗಿಳಿದ ಮಧುಸೂದನ್, ಹೇಳಿದ್ದಿಷ್ಟು. ‘ಹೊಸಬರೇ ಸೇರಿ ಮಾಡಿದ ಚಿತ್ರವಿದು. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟ್ರೇಲರ್ ಹಾಗು ಸಾಂಗ್‌ಗೆ ಎಲ್ಲಡೆಯಿಂದ ಮೆಚ್ಚುಗೆ ಸಿಕ್ಕಿದೆ. ಖುಷಿಯ ಸುದ್ದಿಯೆಂದರೆ, ಸಿನಿಮಾದ ಟ್ರೇಲರ್ ನೋಡಿ, ತೆಲುಗಿನ ಹೆಸರಾಂತ ನಿರ್ಮಾಪಕರು ಸಿನಿಮಾದ ರೀಮೇಕ್ ರೈಟ್ಸ್ ಕೇಳಿದ್ದಾರೆ. ಆ ಬಗ್ಗೆ ಇನ್ನಷ್ಟೇ ಮಾತುಕತೆ ನಡೆಯಬೇಕಿದೆ. ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ಇದಾಗಿದ್ದು, ಇಲ್ಲಿ ನಕ್ಷತ್ರ ಅನ್ನೋದು ಏನು ಅನ್ನೋದೇ ಸಸ್ಪೆನ್ಸ್. ಇಲ್ಲಿ ಕ್ಲೈಮ್ಯಾಕ್ಸ್ ಎಲ್ಲದ್ದಕ್ಕೂ ಉತ್ತರ ಕೊಡಲಿದೆ. ಈಗಾಗಲೇ ಕುತೂಹಲ ಕೆರಳಿಸಿರುವ ಸಿನಿಮಾ, ನೋಡುಗರ ನಂಬಿಕೆ ಉಳಿಸಿಕೊಳ್ಳುತ್ತೆ ಎಂಬ ಗ್ಯಾರಂಟಿ ಕೊಡುತ್ತೇನೆ ‘ ಎನ್ನುತ್ತಾರೆ ಮಧುಸೂದನ್.
ಹಿರಿಯ ಕಲಾವಿದ ಶ್ರೀನಿವಾಸ ಪ್ರಭು ಅವರಿಗೆ ಹೊಸಬರ ಜೊತೆ ಕೆಲಸ ಮಾಡಿದ್ದು ಖುಷಿ ಕೊಟ್ಟಿದೆಯಂತೆ. ‘ಹೊಸಬರ ಪರ್ವಕಾಲವಿದು. ಈಗಂತೂ ಸಾಕಷ್ಟು ಹೊಸ ಪ್ರಯೋಗ ನಡೆಯುತ್ತಿವೆ. ಆ ಪ್ರಯೋಗದಲ್ಲಿ ‘ಆಪರೇಷನ್ ನಕ್ಷತ್ರ’ ಕೂಡ ಸೇರಿದೆ. ಇಡೀ ತಂಡ ಉತ್ಸಾಹದಿಂದ ಕೆಲಸ ಮಾಡಿದೆ. ಇಲ್ಲಿ ಅನೇಕ ತಿರುವುಗಳಿವೆ. ಅವುಗಳೇ ಸಿನಿಮಾದ ಕುತೂಹಲವನ್ನು ಹೆಚ್ಚಿಸುತ್ತವೆ. ಒಂದೊಳ್ಳೆಯ ತಂಡದ ಜೊತೆ ಒಳ್ಳೆಯ ಸಿನಿಮಾದಲ್ಲಿ ನಾನಿದ್ದೇನೆ ಎಂದು ಹೇಳಲು ಹೆಮ್ಮೆ ಎನಿಸುತ್ತದೆ’ ಎಂದರು ಶ್ರೀನಿವಾಸ್ ಪ್ರಭು. ನಾಯಕ ನಿರಂಜನ್ ಒಡೆಯರ್‌ಗೆ ಇದು ಮೊದಲ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ಅವರಿಗಿಲ್ಲಿ ಎರಡು ಶೇಡ್ ಪಾತ್ರವಿದ್ದು, ಅದು ಹೇಗಿದೆ ಎಂಬುದನ್ನು ಚಿತ್ರದಲ್ಲೇ ನೋಡಬೇಕು ಎಂಬುದು ಅವರ ಮಾತು.
ಮತ್ತೂಬ್ಬ ನಾಯಕ ಲಿಖೀತ್‌ಸೂರ್ಯ ಅವರಿಗೆ ಇಲ್ಲಿ ಪೊಲೀಸ್ ಅಧಿಕಾರಿ ಪಾತ್ರ ಸಿಕ್ಕಿದ್ದು, ಚಿತ್ರಕ್ಕೆ ಅದೊಂದು ತಿರುವು ಕೊಡುವ ಪಾತ್ರವಂತೆ. ಆ ಪೊಲೀಸ್ ಪಾತ್ರ ಕಳ್ಳರನ್ನು ಹಿಡಿಯುವಂಥದ್ದಾ ಅಥವಾ, ಕಳ್ಳರ ಜೊತೆ ಸೇರಿಕೊಳ್ಳುವುದಾ ಎಂಬ ಪ್ರಶ್ನೆಗೆ ಚಿತ್ರ ನೋಡಬೇಕು ಎಂದರು ಲಿಖೀತ್ ಸೂರ್ಯ.
ಅದಿತಿ ಪ್ರಭುದೇವ ಅವರಿಗೆ ಇದು ಲಕ್ಕಿ ಸಿನಿಮಾವಂತೆ. ಈ ಚಿತ್ರ ಒಪ್ಪಿಕೊಂಡ ಬಳಿಕ ಅವರಿಗೆ ಸಾಲು ಸಾಲು ಚಿತ್ರಗಳಲ್ಲಿ ನಟಿಸುವ ಅವಕಾಶ ಸಿಕ್ಕಿದೆಯಂತೆ. ಅವರಿಲ್ಲಿ ಎರಡು ಬಗೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಚಿತ್ರದಲ್ಲಿ ಯಾರು ಯಾರನ್ನ ಆಪರೇಷನ್ ಮಾಡ್ತಾರೆ ಅನ್ನೋದನ್ನು ತಿಳಿಯಬೇಕಾದರೆ, ಚಿತ್ರವನ್ನು ನೋಡಲೇಬೇಕು ಎಂದರು.
ಸಂಗೀತ ನಿರ್ದೇಶಕ ವೀರ್‌ಸಮರ್ಥ್ ಅವರಿಲ್ಲಿ ಎರಡು ಹಾಡುಗಳಿಗೆ ಸಂಗೀತ ನೀಡಿದ್ದು, ಹಿನ್ನೆಲೆ ಸಂಗೀತವನ್ನು ಕೊಟ್ಟಿದ್ದಾರಂತೆ. ಚಿತ್ರದಲ್ಲಿ ಹಿನ್ನೆಲೆ ಸಂಗೀತ ವಿಶೇಷವಾಗಿದ್ದು, ಇಲ್ಲಿ ಐದು ಥೀಮ್ ಮ್ಯೂಸಿಕ್ ಬಳಕೆ ಮಾಡಲಾಗಿದೆ, ಇಡೀ ಚಿತ್ರದುದ್ದಕ್ಕೂ ಅದು ಹೈಲೈಟ್ ಎಂದರು ವೀರ್‌ಸಮರ್ಥ್.
ನಿರ್ಮಾಪಕರಾದ ನಂದಕುಮಾರ್, ಅರವಿಂದಮೂರ್ತಿ, ಕಿಶೋರ್ ಮೇಗಳಮನೆ, ರಾಧಾಕೃಷ್ಣ ಈ ವೇಳೆ ಚಿತ್ರದ ಅನುಭವ ಹಂಚಿಕೊಂಡರು. ವಿಜಯ್ ಸಿನಿಮಾಸ್‌ನ ವಿಜಯ್ ಸುಮಾರು 80 ಪ್ಲಸ್ ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲು ತಯಾರಿ ನಡೆಸಿದ್ದಾಗಿ ಹೇಳಿಕೊಂಡರು.