ಶರನ್ನವರಾತ್ರಿ ಸಡಗರ. ಪ್ರತಿ ಋತುಗಳಲ್ಲಿಯೂ ನವರಾತ್ರಿ ಸಂಭ್ರಮವಿದೆ- ವಸಂತ ನವರಾತ್ರಿ, ಶರದ್ ನವರಾತ್ರಿ ಹೀಗೆ. ಹಾಗಾಗಿ, ನವರಾತ್ರಿ ಎಂದರೆ ಪ್ರಕೃತಿಯದ್ದೇ ಪರ್ವ. ಪ್ರಕೃತಿ ಎಂದರೆ ಶಕ್ತಿ. ಶಕ್ತಿ ಎಂದರೆ ದುರ್ಗೆ. ದುರ್ಗೆಯೇ ಮಾತೆ. ಸಹಸ್ರ ನಾಮದಲ್ಲಿ ಸಂಸ್ತುತಿಸಬೇಕಾದ ಲಲಿತೆಯೂ ಅವಳೇ.
Advertisement
ನಮ್ಮ ಪೂಜಾಪರಂಪರೆಯಲ್ಲಿ ಹತ್ತಾರು ದೇವತೆಗಳನ್ನು ಸ್ತುತಿಸುವ ಹಲವು ಸಹಸ್ರನಾಮ ಸ್ತ್ರೋತ್ರಗಳಿವೆ. ಇವೆಲ್ಲ ಪುರಾಣಪ್ರಸಿದ್ಧವೂ ಹೌದು. ಇವುಗಳ ಪೈಕಿ ಶ್ರೀಲಲಿತಾದೇವಿಯನ್ನು ಕೊಂಡಾಡುವ ಸಹಸ್ರನಾಮವೇ ಅತ್ಯಂತ ಸುಂದರ ಮತ್ತು ಕಾವ್ಯಮಯ. ಇದು ವೇದ- ಆಗಮಗಳ ವಿದ್ಯಾರಹಸ್ಯಗಳನ್ನು ಕೂಡ ಒಳಗೊಂಡಿದೆ. ಹಯಗ್ರೀವ ಮತ್ತು ಅಗಸ್ತ್ಯರ ಸಂವಾದವಾಗಿ ಬ್ರಹ್ಮಾಂಡಪುರಾಣದಲ್ಲಿ ಈ ಸ್ತೋತ್ರವು ಕಾಣಸಿಗುತ್ತದೆ. ಇಲ್ಲಿಯ ಯಾವೊಂದು ಶ್ರೀನಾಮವೂ ಪುನರುಕ್ತವಾಗಿಲ್ಲವೆಂಬುದು ಇದರ ಮತ್ತೂಂದು ಹೆಗ್ಗಳಿಕೆ. ಈ ಸ್ತುತಿಯ ಮೊದಲ ಹದಿನೈದು-ಇಪ್ಪತ್ತು ಶ್ಲೋಕಗಳಲ್ಲಿ ಅದ್ಭುತವಾದ ಕಾವ್ಯವೇ ದೇವಿಯ ಸೌಂದರ್ಯದ ವರ್ಣನೆಯಾಗಿ ಮೈದಾಳಿದೆ. ಅನಂತರ ಅವಳು ಭಂಡಾಸುರನನ್ನು ಗೆದ್ದ ವರ್ಣನೆ ಕಥಾರೂಪವಾಗಿ ಅಡಕಗೊಂಡಿದೆ. ಆ ಬಳಿಕ ಶ್ರೀವಿದ್ಯಾರಹಸ್ಯಗಳಲ್ಲಿ ಮೂಲಭೂತವಾದ ಷಟ್‌ಚಕ್ರಭೇದನ ಮತ್ತು ಶ್ರೀಚಕ್ರದ ಆರಾಧನಗಳನ್ನು ಅರ್ಥಪೂರ್ಣವಾಗಿ ಸಂಗ್ರಹಿಸಲಾಗಿದೆ. ಕಡೆಯಲ್ಲಿ ದೇವಿಯ ಗುಣವಿಶೇಷಗಳನ್ನು ಪರಿಪರಿಯಾಗಿ ಕೊಂಡಾಡಲಾಗಿದೆ.
ಲಲಿತಾಸಹಸ್ರನಾಮದ ಮೊದಲಿನ ಮತ್ತು ಕಡೆಯ ಹೆಸರುಗಳೇ ಈ ಸ್ತವರಾಜದ ಸಮಗ್ರಾರ್ಥವನ್ನು ಹಿಡಿದಿಟ್ಟಿವೆ. ಆ ಪ್ರಕಾರ ಇದು ಮಾತೃದೇವತೆಯ ಮಹಾಪೂಜೆ; ಆರಂಭವಾಗುವುದೇ “ಶ್ರೀಮಾತಾ’ ಎಂದು. ಮುಗಿತಾಯವಂತೂ “ಅಂಬಿಕಾ’ ಎಂಬುದಾಗಿ.ಎಲ್ಲರೂ ಮಾತೆಯರಾದರೆ ಲಲಿತೆಯು ಶ್ರೀಮಾತೆ. ಅಂದರೆ ಆಶ್ರಯಣೀಯಳಾದ, ವರಣೀಯಳಾದ ತಾಯಿಯೆಂದು ತಾತ್ಪರ್ಯ. ಅಂತೆಯೇ ಅವಳು ಅತ್ಯಂತ ಆತ್ಮೀಯಳಾದ ತಾಯಿ ಕೂಡ: ಬರಿಯ ಅಂಬೆಯಲ್ಲ, ಅಂಬಿಕಾ. ಇವಳ ಸೌಂದರ್ಯ ಶಂಕರಭಗವತ್ಪಾದರ ಸೌಂದರ್ಯಲಹರಿಯಂಥ ಸ್ತೋತ್ರಕಾವ್ಯಕ್ಕೂ ಸ್ಫೂರ್ತಿಯಗುವಂಥದ್ದು. ಇದನ್ನು ಸಹಸ್ರನಾಮಸ್ತುತಿಯು ಹತ್ತಾರು ಸ್ಮರಣೀಯ ಚಿತ್ರಗಳ ಮೂಲಕ ನಮ್ಮ ಮುಂದಿರಿಸಿದೆ.ಅವುಗಳಲ್ಲಿ ಕೆಲವೊಂದು ಸದ್ಯಕ್ಕೆ ಉಲ್ಲೇಖನೀಯ.
Related Articles
Advertisement
ಹೀಗೆ, ರೂಪಕಾಲಂಕಾರದ ಸಾರವತ್ತಾದ ರೂಪವಾಗಿ ಸಾಗುವ ಕವಿಸಹಜ ವರ್ಣನೆಯೊಡನೆ ದಾರ್ಶನಿಕ ದೀಪ್ತಿಯುಳ್ಳ ರೂಪವರ್ಣನೆಯೂ ಇಲ್ಲಿ ತುಂಬಿದೆ.
ಉದಾಹರಣೆಗೆ : ಅವಳ ಕೈಯಲ್ಲಿರುವ ಪಾಶವು ರಾಗದ ಸಂಕೇತವಾದರೆ, ಅಂಕುಶವು ಕ್ರೋಧದ ಸಂಕೇತ (ರಾ ಗಸ್ವರೂಪಪಾಶಾಡ್ರಾಕ್ರೋಧಾಕಾರಾಂಕುಶೋಜ್ಜಲಾ). ಅಂದರೆ, ದೇವಿಯು ಪರಪ್ರಕೃತಿಯಾದ ಕಾರಣ, ಪ್ರಕೃತಿಯು ಜೀವರೂಪದ ಪುರುಷಪ್ರಪಂಚದ ಮೇಲೆ ಹೊಂದಿರುವ ಹತೋಟಿಯೆಂಬಂತೆ ರಾಗ-ದ್ವೇಷಗಳು ಪಾಶ-ಅಂಕುಶಗಳ ಪ್ರತೀಕವಾಗಿ ಅವಳಿಗೆ ಅಲಂಕಾರವೆನಿಸಿರುವುದು ಅರ್ಥಪೂರ್ಣ. ಇದು ಸಾಂಖ್ಯದರ್ಶನವೂ ಹೌದು.ಇನ್ನು ಅವಳ ಕೈಯಲ್ಲಿರುವ ಕಬ್ಬಿನ ಬಿಲ್ಲು ಮನಸ್ಸಿನ ಪ್ರತೀಕ; ಪಂಚಬಾಣಗಳು ಶಬ್ದ-ಸ್ಪರ್ಶ- ರೂಪ-ರಸ-ಗಂಧಗಳೆಂಬ ಐದು ತನ್ಮಾತ್ರಗಳ ಸಂಕೇತ (ಮನೋರೂಪೇಕ್ಷು-ಕೋದಂಡಾ ಪಂಚತನ್ಮಾತ್ರ-ಸಾಯಕಾ). ಕಣ್ಣು, ಕಿವಿ, ಮೂಗು, ನಾಲಗೆ ಮೊದಲಾದ ಜ್ಞಾನೇಂದ್ರಿಯಗಳ ಮೂಲಕ ನಮ್ಮ ಮನಸ್ಸು ಗ್ರಹಿಸುವ ಪಂಚಭೂತಾತ್ಮಕವಾದ ಜಗತ್ತಿನ ಮೂಲಸಾಮಗ್ರಿಗಳ ಸಂಕೇತವೇ ಇಲ್ಲಿದೆ. ಹೀಗೆ ದೇವಿಯು ನಮ್ಮನ್ನು ಲೋಕಕ್ಕೆ ಕಟ್ಟಿಹಾಕುವ ಶಕ್ತಿಯಾದರೂ ಅವಳನ್ನು ಆಶ್ರಯಿಸುವ ಮೂಲಕ ಆಕೆಯೇ ನಮಗೆ ಇವುಗಳಿಂದ ಬಿಡುಗಡೆಯನ್ನೂ ಕರುಣಿಸುತ್ತಾಳೆ. ಹೀಗಾಗಿಯೇ ಅವಳು ಸಾಪೇಕ್ಷವಾದ ಈ ಜಗತ್ತಿನ ಮೂಲಸತ್ಯ, ಮುಕ್ತಿಗೆ ಕಾರಣೀಭೂತವಾದ ಶಕ್ತಿ ಮತ್ತು ಮೋಕ್ಷದ ಸ್ವರೂಪವಾದ ಆನಂದವೇ ಆಗಿದ್ದಾಳೆ (ಮಿಥ್ಯಾಜಗದಧಿಷ್ಠಾನಾ ಮುಕ್ತಿದಾ ಮುಕ್ತಿರೂಪಿಣೀ). ಇದು ವೇದಾಂತದರ್ಶನ. ಹೀಗೆ ದೇವಿಯು ದ್ವೆ„ತಮೂಲವಾದ ಸಾಂಖ್ಯ ಮತ್ತು ಅದ್ವೆ„ ತಮೂಲವಾದ ವೇದಾಂತಗಳೆರಡನ್ನೂ ವ್ಯಾಪಿಸಿಕೊಂಡ ತಣ್ತೀ.
ಈ ಕಾರಣದಿಂದಲೇ ಆಕೆ ಸಾಮರಸ್ಯದ ಜೀವನಾಡಿ (ಸಾಮರಸ್ಯ-ಪರಾಯಣಾ); ಜ್ಞಾನದ ಸೌಂದರ್ಯ, ಆನಂದದ ಮುಗುಳು (ಚಿತ್ಕಲಾನಂದಕಲಿಕಾ). ಈಕೆ ಜನಿಸಿದ್ದು ಜ್ಞಾನಾಗ್ನಿಯಲ್ಲಿ (ಚಿದಗ್ನಿಕುಂಡ-ಸಂಭೂತಾ); ಇವಳ ಹುಟ್ಟಿನ ಉದ್ದೇಶ ದೇವಕಾರ್ಯದ ಸಾಧನೆ (ದೇವಕಾರ್ಯ-ಸಮುದ್ಯತಾ). ಅಂದರೆ, ನಾವು ಜ್ಞಾನಾಗ್ನಿಯಲ್ಲಿ ನಮ್ಮ ಕರ್ಮಬೀಜಗಳನ್ನು ದಹಿಸಿಕೊಳ್ಳದೆ ದೇವಕಾರ್ಯವನ್ನು ಸಾಧಿಸಲು ಸಾಧ್ಯವಿಲ್ಲ. ದೇವಕಾರ್ಯವೆಂದರೆ ಸ್ವಾರ್ಥವನ್ನು ಮೀರಿದ ಸರ್ವಾರ್ಥವೆಂದು ತಾತ್ಪರ್ಯ. ಇದೇ ಕರ್ಮಯೋಗ. ಇದರ ಮೂಲಕವಾಗಿಯೇ ಭಗವಾನ್ ಶ್ರೀಕೃಷ್ಣ ತಿಳಿಸಿದ ಲೋಕಸಂಗ್ರಹ ಸಾಧ್ಯ. ಹೀಗೆ ಜ್ಞಾನಕ್ಕೆ ನಿಷ್ಠವಾದ ಕರ್ಮವೇ ಭಕ್ತಿ ಎನಿಸುತ್ತದೆ. ಇದನ್ನು ಶಂಕರಭಗವತ್ಪಾದರು ಭಕ್ತಿರ್ನಾಮಜ್ಞಾನನಿಷ್ಠಾ ಕ್ರಿಯಾ ಎಂದು ವಿವರಿಸಿ¨ªಾರೆ. ಈ ಕಾರಣದಿಂದಲೇ ಶ್ರೀಲಲಿತೆಯಲ್ಲಿ ಭಕ್ತಿಯನ್ನಿಡಬೇಕೆಂದರೆ ಅದು ಜ್ಞಾನದಲ್ಲಿ ನೆಲೆನಿಂತ ಕರ್ಮಯೋಗವೆಂದು ತಾತ್ಪರ್ಯ. ಜ್ಞಾನವಾದರೋ ಜಗತ್ತು ಕೇವಲ ನಾಮ-ರೂಪಾತ್ಮಕ; ಅಂದರೆ ಅನೇಕರೂಪಗಳಿಂದ, ಅನೇಕ ನಾಮಗಳಿಂದ ಕೂಡಿದ ತೋರಿಕೆಯ ಅಸ್ತಿತ್ವ ಮತ್ತು ಇದರ ಅಂತರಂಗವಾದ ಬ್ರಹ್ಮತಣ್ತೀವು ಕೇವಲ ಸತ್-ಚಿತ್-ಆನಂದಗಳ ಸಾಕಾರ ಎಂಬ ಅರಿವು. ಈ ಸತ್ಯವನ್ನು ಅಂತರಂಗದಲ್ಲಿ ಗಟ್ಟಿಯಾಗಿಸಿಕೊಂಡ ಬಳಿಕ ಮಾಡಿದ್ದೆಲ್ಲ ಪೂಜೆ, ಪಡೆದದ್ದೆಲ್ಲ ಪ್ರಸಾದ. ಹೀಗೆ ನಿಲೇìಪ ಕರ್ಮ ಸಾಧ್ಯ, ಜೀವನ್ಮುಕ್ತಿ ಸಿದ್ಧ.
ಇಂಥ ದಿವ್ಯತ್ವವನ್ನು ದಕ್ಕಿಸಬಲ್ಲ ದೇವಿಯು ಈ ಕಾರಣದಿಂದಲೇ ಪರಮ ಕರುಣಾಮಯಿ. ಆಕೆ ಅಧಿಭೂತ (ಭೌತಿಕ ಜಗತ್ತು), ಅಧಿದೈವ (ನಂಬಿಕೆಯ ಜಗತ್ತು) ಮತ್ತು ಅಧ್ಯಾತ್ಮ (ಭಾವನೆಗಳ ಜಗತ್ತು) ಎಂಬ ಮೂರು ಬಗೆಯ ಬೇಗೆಗಳಿಂದ ತೊಳಲುವ ಜಗತ್ತಿಗೆ ಬೆಳ್ದಿಂಗಳು (ತಾಪತ್ರಯಾಗ್ನಿ-ಸಂತಪ್ತ-ಸಮಾಹ್ಲಾದನ-ಚಂದ್ರಿಕಾ). ಅಷ್ಟೇ ಅಲ್ಲ, ಇವಳು ರೋಗ-ರುಜಿನಗಳೆಂಬ ಪರ್ವತಗಳನ್ನು ಪುಡಿಮಾಡುವ ವಜ್ರಾಯುಧ (ರೋಗಪರ್ವತ-ದಂಭೋಲಿಃ); ಸಾವೆಂಬ ಮರವನ್ನು ಸೀಳುವ ಕೊಡಲಿ (ಮೃತ್ಯುದಾರು-ಕುಠಾರಿಕಾ). ಜೀವಿಗಳಿಗೆಲ್ಲ ಹುಟ್ಟಿನ ಬಳಿಕ ತುಂಬ ತೊಂದರೆ ಕೊಡುವವು ರೋಗ ಮತ್ತು ಸಾವುಗಳೇ ತಾನೆ? ಅವನ್ನೇ ನುಂಗಿ ನೊಣೆದು ಅಜರಾಮರತೆಯನ್ನು ಅನುಗ್ರಹಿಸಬಲ್ಲವಳು ಶ್ರೀದೇವಿ.
ಹೀಗೆ, ಆಕೆಯ ಉಪಾಸನೆಯ ಅವಧಿಯಾದ ಶರನ್ನವರಾತ್ರ ನಮಗೆ ಯೋಗಕ್ಷೇಮಕಾರಿ.
ಶತಾವಧಾನಿ ಆರ್. ಗಣೇಶ್