ಕುಂದಾಪುರ: ಕುಂದಾಪುರ ವಿಧಾನಸಭೆ ಕ್ಷೇತ್ರದ ಕ್ವಾರಂಟೈನ್ ಮಾಹಿತಿಗೆ ಶಾಸಕರ ಸೂಚನೆಯಂತೆ ಇಲ್ಲಿನ ಪುರಸಭೆ ಕಟ್ಟಡದ ಮೊದಲ ಮಹಡಿಯಲ್ಲಿ ಬುಧವಾರದಿಂದ ಕಂಟ್ರೋಲ್ ರೂಂ ಆರಂಭವಾಗಿದೆ.
ಕ್ವಾರಂಟೈನ್ ಕೇಂದ್ರಗಳಿಗೆ ಸಂಬಂಧಿಸಿದ ಮಾಹಿತಿ, ದೂರು ಇತ್ಯಾದಿಗಳನ್ನು ಇಲ್ಲಿಗೆ ಕರೆ ಮಾಡುವ ಮೂಲಕ ಪಡೆಯಬಹುದು. ದೂರು ನೀಡಿದಾಗ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಸರಿಪಡಿಸಲಾಗುತ್ತದೆ.
ಹೊರರಾಜ್ಯಗಳಿಂದ ಬರುವವರಿಗೆ ಕ್ವಾರಂಟೈನ್ ಕೇಂದ್ರದಲ್ಲಿ ಅನೇಕ ಸಮಸ್ಯೆಗಳಾಗುತ್ತಿದ್ದವು. ಆಹಾರ ತಡವಾಗಿ ತಲುಪುತ್ತಿತ್ತು. ನೀರಿನ ವ್ಯವಸ್ಥೆ, ವಿದ್ಯುತ್, ಊಟ ಶುಚಿತ್ವದ ವ್ಯವಸ್ಥೆ ಕುರಿತು ದೂರುಗಳಿದ್ದವು. ಇದಕ್ಕಾಗಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಈ ಕೇಂದ್ರ ತೆರೆಯಲು ಸೂಚಿಸಿದ್ದು ಅದರಂತೆ ಪುರಸಭೆ ಕೊಠಡಿಯೊಂದನ್ನು ಸಜ್ಜುಗೊಳಿಸಿ ನೀಡಿದೆ. ಇಲ್ಲಿ ಶಾಸಕರೇ ಸಿಬಂದಿನೇಮಿಸಿ ಇರಿಸಿದ್ದಾರೆ. ಶಾಸಕರು ಬುಧವಾರ ಇಲ್ಲಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಹೊರರಾಜ್ಯಗಳಿಂದ ಬರುವವರು ಮಾಹಿತಿಗೆ, ಕ್ವಾರಂಟೈನ್ ಕೇಂದ್ರಗಳಲ್ಲಿ ಇರುವವರು ದೂರುಗಳಿಗೆ ಈ ಕೇಂದ್ರವನ್ನು ಸಂಪರ್ಕಿಸಬಹುದು. ಪ್ರಸ್ತುತ ಸೇವಾಸಿಂಧು ಆ್ಯಪ್ ಮೂಲಕ ಹೊರರಾಜ್ಯಗಳಿಂದ ಬರುವ ಪ್ರಕ್ರಿಯೆ ತಡೆ ಹಿಡಿಯಲಾಗಿದೆ. ಕೆಲವು ದಿನಗಳಲ್ಲಿ ಮತ್ತೆ ಚಾಲನೆ ದೊರೆಯಲಿದೆ. ಈಗಾಗಲೇ ತಾಲೂಕಿನಲ್ಲಿ 44 ಕ್ವಾರಂಟೈನ್ ಕೇಂದ್ರಗಳಿವೆ. ಕ್ವಾರಂಟೈನ್ ಮಾಹಿತಿಗೆ ಸಂಪರ್ಕಿಸ ಬೇಕಾದ ಸಂಖ್ಯೆಗಳು: 7204018041, 7204018071,7619568072.