Advertisement

ಶಿಕ್ಷಕರಿಗೆ ಆನ್‌ಲೈನ್‌ ತರಬೇತಿ ಆರಂಭ

08:45 AM Jun 02, 2020 | Suhan S |

ಧಾರವಾಡ: ಕೋವಿಡ್ ಸೋಂಕಿನ ಕಂಟಕದಿಂದ ಹಿನ್ನಡೆ ಕಂಡಿರುವ ಶೈಕ್ಷಣಿಕ ಚಟುವಟಿಕೆಗಳನ್ನು ಮತ್ತೆ ಚುರುಕುಗೊಳಿಸಲು ಆನ್‌ಲೈನ್‌ ತರಬೇತಿಯು ಶಿಕ್ಷಕರಿಗೆ ವಿಷಯದ ಪುನರ್‌ ಮನನ ಮಾಡಲು ಅತೀ ಅವಶ್ಯವಾಗಿದೆ ಎಂದು ಶಹರ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎ. ಖಾಜಿ ಹೇಳಿದರು. ಶಹರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಹಯೋಗದಲ್ಲಿ ಸೋಮವಾರದಿಂದ ಆರಂಭವಾಗಿರುವ ಧಾರವಾಡ ಶಹರ ವಲಯದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ಆನ್‌ ಲೈನ್‌ ತರಬೇತಿ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಧಾರವಾಡ ಶಹರ ವಲಯದ ವತಿಯಿಂದ ಜೂ. 1ರಿಂದ 30ರ ವರೆಗೆ 1ರಿಂದ 10ನೇ ತರಗತಿಯ 920 ಶಿಕ್ಷಕರಿಗೆ ಆನ್‌ಲೈನ್‌ ತರಬೇತಿ ನಡೆಯುತ್ತಿದೆ. ಪ್ರತಿ ವಿಷಯವಾರು 70 ಸಂಪನ್ಮೂಲ ಶಿಕ್ಷಕರನ್ನು ಗುರುತಿಸಿದ್ದು, ಏಕಕಾಲದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಕರಿಗೆ ತರಬೇತಿ ನಡೆಯುತ್ತಿದೆ. ಎಲ್ಲ ಬಿಆರ್‌ ಪಿಗಳನ್ನು ನೋಡಲ್‌ ಆಗಿ ನೇಮಕ ಮಾಡಿದ್ದು, ತರಬೇತಿಯ ಸಂಪೂರ್ಣ ಜವಾಬ್ದಾರಿಯನ್ನು ಸಮನ್ವಯಾಧಿಕಾರಿಗಳು ವಹಿಸಿಕೊಂಡಿದ್ದಾರೆ ಎಂದರು.

ಕ್ಷೇತ್ರ ಸಮನ್ವಯಾಧಿಕಾರಿ ಎಂ.ವಿ. ಅಡಿವೇರ ಮಾತನಾಡಿ, ಆನ್‌ಲೈನ್‌ ಮೂಲಕ ಬೋಧನಾ ತರಬೇತಿ ಪಡೆಯುತ್ತಿರುವುದು ಶಿಕ್ಷಕರಿಗೆ ಹೊಸ ಅನುಭವ ನೀಡಲಿದೆ. ವಿಷಯ ಪ್ರಾವೀಣ್ಯತೆ ಹೊಂದಲು ಸಹಕಾರಿಯಾಗಲಿದೆ. ತಾಲೂಕಿನಲ್ಲಿ ಮೊದಲ ಬಾರಿಗೆ ಆನ್‌ಲೈನ್‌ ಮೂಲಕ ತರಬೇತಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಸಂಪನ್ಮೂಲ ವ್ಯಕ್ತಿಗಳಾಗಿ ಮಲ್ಲನಗೌಡರ, ನೋಡಲ್‌ ಡಾ| ಗುರುನಾಥ ಹೂಗಾರ, ಡಯಟ್‌ ಉಪನ್ಯಾಸಕಿ ಸಾವಿತ್ರಿ ಕೋಳಿ ಸೇರಿದಂತೆ ಇಸಿಓ, ಬಿಆರ್‌ಸಿ, ಬಿಆರ್‌ಪಿ, ಬಿಐಇಆರ್‌ಟಿ ಹಾಗೂ 64 ಸಮಾಜ ವಿಜ್ಞಾನ ಶಿಕ್ಷಕರ ಭಾಗಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next