Advertisement

ಕರಾವಳಿಯಲ್ಲಿ ಶೈಕ್ಷಣಿಕ ಚಟುವಟಿಕೆ ಆರಂಭ

08:54 AM Jan 02, 2021 | Team Udayavani |

ಮಂಗಳೂರು: ಸುದೀರ್ಘ‌ 9 ತಿಂಗಳ ರಜೆ ಬಳಿಕ ವಿದ್ಯಾರ್ಥಿಗಳು ಸಂಭ್ರಮದಿಂದ ಶಾಲೆ-ಕಾಲೇಜಿಗೆ ಗುರುವಾರ ಆಗಮಿಸಿದರು. ಮೊದಲ ದಿನದಂದು ದ್ವಿತೀಯ ಪಿಯುಸಿಯಲ್ಲಿ ಶೇ. 66, ವಿದ್ಯಾಗಮಕ್ಕಾಗಿ 6-10ನೇ ತರಗತಿಯಲ್ಲಿ ಅಂದಾಜು ಶೇ. 78 ಹಾಜರಾತಿ ಇತ್ತು.

Advertisement

ಕೊರೊನಾ ಲಾಕ್‌ಡೌನ್‌ ಜಾರಿಯಾದ ನಂತರ ಕಳೆದ 9 ತಿಂಗಳಿನಿಂದ ಶಾಲೆ-ಕಾಲೇಜುಗಳು ಬಾಗಿಲು ಹಾಕಿದ್ದವು. ಇದೀಗ ಕೊರೊನಾ ಆತಂಕ ತಗ್ಗಿದ ಹಿನ್ನೆಲೆಯಲ್ಲಿ ಸರಕಾರವು ಹೊಸ ವರ್ಷದಂದೇ ಶಾಲೆ-ಕಾಲೇಜುಗಳನ್ನು ತೆರೆಯಲು ಅನುಮತಿಸಿತ್ತು. ದ್ವಿತೀಯ ಪಿಯುಸಿ, 10ನೇ ತರಗತಿಗೆ ತರಗತಿಗಳು ಆರಂಭವಾದರೆ, 6-9ನೇ ತರಗತಿಗಳಿಗೆ ವಿದ್ಯಾಗಮ ಪುನರಾರಂಭವಾಗಿದೆ.

ಶಾಲಾರಂಭದ ಮೊದಲ ದಿನ ಸಂಭ್ರಮದಿಂದಲೇ ವಿದ್ಯಾರ್ಥಿಗಳು ಶಾಲೆಗಳತ್ತ ಹೆಜ್ಜೆ ಹಾಕಿದರು. ವಿದ್ಯಾರ್ಥಿಗಳು ಹೆತ್ತವರ ಅನುಮತಿ ಪತ್ರ ದೊಂದಿಗೆ ಹಾಜರಾಗಿದ್ದರು. ಆವರಣದಲ್ಲಿ ಥರ್ಮಲ್‌ ಸ್ಕಾÂನಿಂಗ್‌ ನಡೆಸಿಯೇ ತರಗತಿ ಕೋಣೆಗೆ ಬಿಡಲಾಯಿತು. ತರಗತಿ ಕೋಣೆಗಳನ್ನು ಸ್ಯಾನಿಟೈಸ್‌ ಮಾಡಿ, ಅಂತರದಲ್ಲಿ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಎಲ್ಲ ವಿದ್ಯಾರ್ಥಿಗಳು ಮಾಸ್ಕ್ ಧರಿಸಿಯೇ ಆಗಮಿಸಿದ್ದರು. ಎಲ್ಲ ಬೋಧಕ, ಬೋಧಕೇತರರೂ ಸರಕಾರಿ ನಿಯಮದಂತೆ ಕೊರೊನಾ ಪರೀಕ್ಷೆ ಮಾಡಿಸಿಕೊಂಡು ನೆಗೆಟಿವ್‌ ವರದಿಯೊಂದಿಗೆ ಶಾಲೆ-ಕಾಲೇಜಿಗೆ ಆಗಮಿಸಿದ್ದರು.

21,993 ವಿದ್ಯಾರ್ಥಿಗಳು ಹಾಜರು
ದ್ವಿತೀಯ ಪಿಯುಸಿಗೆ ಒಟ್ಟು 33 ಸಾವಿರ ವಿದ್ಯಾರ್ಥಿಗಳ ಪೈಕಿ 21,993 (ಶೇ.66) ವಿದ್ಯಾರ್ಥಿಗಳು ಹಾಜರಾಗಿದ್ದು, ಈ ಪೈಕಿ 257 ಮಂದಿ ಕೇರಳದಿಂದ ಬಂದವರಾಗಿದ್ದಾರೆ. 2,781 ಮಂದಿ ವಿವಿಧ ಹಾಸ್ಟೆಲ್‌ಗ‌ಳಲ್ಲಿ ಇದ್ದಾರೆ. ಹೊರ ಜಿಲ್ಲೆಗಳಿಂದ ಬಂದವರು ಕೊರೊನಾ ಪರೀಕ್ಷೆ ಮಾಡಿಸಿ ನೆಗೆಟಿವ್‌ ವರದಿಯನ್ನು ತಂದಿದ್ದರು. ಹೊಸ ವರ್ಷ ಮತ್ತು ವಾರಾಂತ್ಯವಾಗಿರುವುದರಿಂದ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿತ್ತು. ಸೋಮವಾರದಿಂದ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ ಎಂದು ಡಿಡಿಪಿಯು ಮೊಹಮ್ಮದ್‌ ಇಮ್ತಿಯಾಜ್‌ ಮತ್ತು ಡಿಡಿಪಿಐ ಮಲ್ಲೇಸ್ವಾಮಿ ತಿಳಿಸಿದ್ದಾರೆ.

ಆರತಿ ಬೆಳಗಿ ಸ್ವಾಗತ
ಮೂಡುಬಿದಿರೆ/ಪುತ್ತೂರು: ಮೂಡುಬಿದಿರೆ ಗಾಂಧಿನಗರ ಶಾಲೆಗೆ ವಿದ್ಯಾಗಮ ಕಾರ್ಯಕ್ರಮದನ್ವಯ ಆಗಮಿಸಿದ ವಿದ್ಯಾರ್ಥಿಗಳನ್ನು ಶಿಕ್ಷಕಿ ಯೋಗಿತಾ ನವಾನಂದ ಆರತಿ ಬೆಳಗಿ ಸ್ವಾಗತಿಸಿದರು. ಪುತ್ತೂರಿನಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಲೋಕೇಶ್‌ ಅವರು ಕೊಂಬೆಟ್ಟು ಸರಕಾರಿ ಪ್ರೌಢ ಶಾಲೆಯಲ್ಲಿ ಮಕ್ಕಳ ಸ್ವಾಗತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶಾಲೆಯ ಪ್ರವೇಶ ದ್ವಾರದಲ್ಲಿ ಶಿಕ್ಷಕರು ಮಕ್ಕಳಿಗೆ ಆರತಿ ಬೆಳಗಿ, ಸಿಹಿ ನೀಡಿ ಬರಮಾಡಿಕೊಂಡರು. ಯಾವುದೇ ಸಮಸ್ಯೆಗಳು ಇದ್ದರೂ ಶಿಕ್ಷಕರ ಗಮನಕ್ಕೆ ತರುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿದ ಬಿಇಒ ಎಲ್ಲ ತರಗತಿ ಕೊಠಡಿ ಗಳಿಗೆ ತೆರಳಿ ಪರಿಶೀಲನೆ ನಡೆಸಿದರು.

Advertisement

ಜಿಲ್ಲೆಯಲ್ಲಿ ಶಾಲಾ- ಕಾಲೇಜುಗಳು ಶುಕ್ರವಾರ ಆರಂಭವಾಗಿದ್ದು ವಿದ್ಯಾರ್ಥಿಗಳ ಸಂಖ್ಯೆ ಶೇ.50ಕ್ಕಿಂತ ಅಧಿಕವಿತ್ತು. ಸೋಮವಾರದಿಂದ ಎಲ್ಲ ವಿದ್ಯಾರ್ಥಿಗಳು ಆಗಮಿಸುವ ಸಾಧ್ಯತೆಯಿದೆ. ಹಾಸ್ಟೆಲ್‌ನಲ್ಲಿ ವಾಸಿಸುವ ವಿದ್ಯಾರ್ಥಿಗಳು ಹಾಗೂ ಪರ ಊರಿಗೆ ತೆರಳಿರುವ ವಿದ್ಯಾರ್ಥಿಗಳು ಇನ್ನಷ್ಟೇ ಆಗಮಿಸಬೇಕಿದೆ. ಶಾಲಾ-ಕಾಲೇಜುಗಳಲ್ಲಿ ಎಲ್ಲ ರೀತಿಯ ವ್ಯವಸ್ಥೆ ಕಲ್ಪಿಸಲಾಗಿದೆ.
-ಎನ್‌. ಎಚ್‌. ನಾಗೂರ, ಡಿಡಿಪಿಐ -ಭಗವಂತ ಕಟ್ಟಿಮನಿ, ಡಿಡಿಪಿಯು

Advertisement

Udayavani is now on Telegram. Click here to join our channel and stay updated with the latest news.

Next