Advertisement

ಡಿಜಿಟಲ್‌ ನರ್ವ್‌ ಸೆಂಟರ್‌ ಯೋಜನೆ ಆರಂಭ?

05:15 PM Oct 18, 2019 | Suhan S |

ತುಮಕೂರು: ಆರೋಗ್ಯ ಸೇವೆ ಜನಸಾಮಾನ್ಯರಿಗೆ ತಕ್ಷಣ ಸಿಗಬೇಕು ಎಂದು ಸರ್ಕಾರ ಹಲವಾರು ಯೋಜನೆಗಳನ್ನು ಮಾಡುತ್ತಿದೆ. ಗಂಭೀರ ಪರಿಸ್ಥಿತಿಯಲ್ಲಿ ತೊಂದರೆ ಅನುಭವಿಸುತ್ತಿರುವ ನಗರ ವ್ಯಾಪ್ತಿಯ ರೋಗಿಗಳಿಗೆ ಸ್ಥಳೀಯ ಆರೋಗ್ಯ ಕೇಂದ್ರಗಳಲ್ಲಿ ತಜ್ಞ ವೈದ್ಯರ ಸಲಹೆ ಯೊಂದಿಗೆ ಚಿಕಿತ್ಸೆ ನೀಡಲು ಡಿಜಿಟಲ್‌ ನರ್ವ್‌ ಸೆಂಟರ್‌ ಯೋಜನೆ ಆರಂಭಗೊಳ್ಳುತ್ತಿದೆ.

Advertisement

ತುಮಕೂರು ಸ್ಮಾರ್ಟ್‌ ಸಿಟಿ ಲಿಮಿಟೆಡ್‌ ವತಿಯಿಂದ ನಗರದ ರೋಗಿಗಳ ತ್ವರಿತ ಸೇವೆಗಾಗಿ ಡಿಜಿಟಲ್‌ ನರ್ವ್‌ ಸೆಂಟರ್‌ 2.27 ಕೋಟಿ ವೆಚ್ಚದಲ್ಲಿ ಆರಂಭಿಸಲು ಸಿದ್ಧತೆ ನಡೆಸಿದ್ದು ಇನ್ನು ಶೀಘ್ರದಲ್ಲೇ ಈ ಯೋಜನೆ ಲೋಕಾರ್ಪಣೆಗೊಳಿಸಲು ಸಜ್ಜಾಗಿದೆ. ಜನರು, ತಂತ್ರಜ್ಞಾನ ಹಾಗೂ ಪ್ರಕ್ರಿಯೆಗಳ ಸಂಯೋಜನೆ ಆಧಾರದಡಿ ಪರಸ್ಪರ ಸಂಕೀರ್ಣದಲ್ಲಿ ಕಾರ್ಯನಿರ್ವಹಿಸಲಿರುವ ಈ ಡಿಜಿಟಲ್‌ ನರ್ವ್‌ ಸೆಂಟರ್‌ ಯೋಜನೆಯನ್ನು 2.27 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲಾಗಿದ್ದು, ಕೆಲವೇ ದಿನಗಳಲ್ಲಿ ಚಾಲನೆಗೊಳ್ಳಲಿದೆ.

ಟೋಲ್‌ ಫ್ರೀ ವ್ಯವಸ್ಥೆ: ಗಂಭೀರ ಪರಿಸ್ಥಿತಿಯಲ್ಲಿರುವ ನಗರ ವ್ಯಾಪ್ತಿಯೊಳಗಿನ ರೋಗಿಗಳಿಗೆ ತ್ವರಿತವಾಗಿ ಆರೋಗ್ಯ ಸೇವೆ ಒದಗಿಸುವ ಯೋಜನೆ ಇದಾಗಿದೆ. ರೋಗಿಗಳು ಡಿಜಿಟಲ್‌ ನರ್ವ್‌ ಸೆಂಟರ್‌ ಟೋಲ್‌ ಫ್ರೀ ಸಂಖ್ಯೆ 1800-425-4325ಕ್ಕೆ ಕರೆ ಮಾಡಿ ತಮ್ಮ ರೋಗದ ಬಗ್ಗೆ ಮಾಹಿತಿ ನೀಡಿದಲ್ಲಿ ಸೆಂಟರ್‌ನಲ್ಲಿರುವ ಆರೋಗ್ಯ ಸೇವಾ ಕಾರ್ಯಕರ್ತರು ತ್ವರಿತವಾಗಿ ವೈದ್ಯಕೀಯ ಸಲಹೆ ನೀಡುವುದರೊಂದಿಗೆ ಹೆಚ್ಚಿನ ಚಿಕಿತ್ಸೆಗಾಗಿ ಸಮೀಪದ ಆರೋಗ್ಯ ಸೇವಾ ಕೇಂದ್ರ ಗಳಾದ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು ಸಾರ್ವಜನಿಕ ಆಸ್ಪತ್ರೆ ಹಾಗೂ ಜಿಲ್ಲಾಸ್ಪತ್ರೆಯನ್ನು ಸಂಪರ್ಕಿಸಬಹುದಾಗಿದೆ.

ನಗರದಲ್ಲಿ 7 ಕೇಂದ್ರ: ರೋಗಿಯನ್ನು ಆಸ್ಪತ್ರೆಗೆ ದಾಖಲಿಸುವುದು, ವೈದ್ಯಕೀಯ ಚಿಕಿತ್ಸೆ ಕೊಡಿಸುವುದು, ಚಿಕಿತ್ಸೆಯ ಅವಧಿ ಪೂರ್ಣಗೊಂಡು ಗುಣ ಮುಖರಾಗುವವರೆಗೂ ಈ ಆರೋಗ್ಯ ಸೇವಾ ಕಾರ್ಯಕರ್ತರು ರೋಗಿಯ ಮೇಲೆ ನಿಗಾವಹಿಸಲಿದ್ದಾರೆ. ಮೊದಲ ಹಂತದಲ್ಲಿ ತುಮಕೂರು ನಗರದ ಆಯ್ದ 7 ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಜಿಲ್ಲಾಸ್ಪತ್ರೆ ಮೂಲಕ ಒಂದೇ ಸಂಕೀರ್ಣದಡಿ ನರ್ವ್‌ ಸೆಂಟರ್‌ ಕಾರ್ಯನಿರ್ವಹಿಸಲಿದೆ. ವಿಶೇಷವೆಂದರೆ ನರ್ವ್‌ ಸೆಂಟರ್‌ ಮೂಲಕ ದಾಖಲಾದ ರೋಗಿಗಳ ವೈದ್ಯಕೀಯ ದತ್ತಾಂಶ ವನ್ನು ಸಂಪೂರ್ಣವಾಗಿ ಡಿಜಿಟಲೀಕರಣ ಗೊಳಿಸಲಾಗುವುದು. ಈ ಸೆಂಟರ್‌ನ ಎಲ್ಲ ಸೇವೆಗಳು ಉಚಿತವಾಗಿರುತ್ತವೆ.

ಇದಕ್ಕಾಗಿ ಸ್ಮಾರ್ಟ್‌ ಸಿಟಿ ಸಂಸ್ಥೆಯು ಆಶಾ ಸಿಬ್ಬಂದಿಗಳಿಗೆ ತರಬೇತಿ ನೀಡುವುದರೊಂದಿಗೆ 29 ಟ್ಯಾಬ್‌ಗಳನ್ನು ಪೂರೈಕೆ ಮಾಡಲಿದ್ದು, ಸೆಂಟರ್‌ ನಿರ್ವಹಣೆಗೆ ಅಗತ್ಯವಿರುವ ತಾಂತ್ರಿಕ ಮಾನವ ಶಕ್ತಿ, ಮೂಲಸೌಕರ್ಯಕ್ಕೆ ತಗಲುವ ವೆಚ್ಚವನ್ನು ಸಂಪೂರ್ಣವಾಗಿ ತಾನೇ ಭರಿಸಲಿದೆ. ಉಳಿದಂತೆ ಅಗತ್ಯ ಆರೋಗ್ಯ ಸೇವೆಯನ್ನು ಜಿಲ್ಲಾಸ್ಪತ್ರೆಯಿಂದ ಒದಗಿಸಲಾಗುವುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next