ಆಷಾಢ ಶುದ್ಧ ಪೂರ್ಣಿಮೆಯ ದಿನವಾದ ಮಂಗಳವಾರ ನಾಡಿನ ವಿವಿಧ ಮಠಾಧೀಶರು ವ್ಯಾಸ ಪೂಜೆ ನೆರವೇರಿಸುವ ಮೂಲಕ ಚಾತುರ್ಮಾಸ್ಯ ವ್ರತ ಆರಂಭಿಸಿದರು. ದಕ್ಷಿಣಾಮ್ನಾಯ ಶಾರದಾ ಪೀಠದ ಜಗದ್ಗುರುಗಳಾದ ಶ್ರೀ ಭಾರತಿ ತೀರ್ಥ ಸ್ವಾಮೀಜಿ ಹಾಗೂ ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿ ಶೃಂಗೇರಿಯಲ್ಲಿ, ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾ ಸ್ವಾಮೀಜಿಯವರು ಸ್ವರ್ಣವಲ್ಲಿಯಲ್ಲಿ ವ್ರತ ಸಂಕಲ್ಪ ಕೈಗೊಂಡರು. ಯಾನಾಗುಂದಿ ಮಾಣಿಕ್ಯಗಿರಿ ಬೆಟ್ಟದಲ್ಲಿ ಮಾತಾ ಮಾಣಿಕೇಶ್ವರಿ ಅಮ್ಮನವರು ಸಾವಿರಾರು ಭಕ್ತರಿಗೆ ದರ್ಶನ ನೀಡಿದರು. ವಿವಿಧ ದೇಗುಲಗಳಲ್ಲೂ ವಿಶೇಷ ಪೂಜೆ ನೆರವೇರಿಸಲಾಯಿತು.
ಶೃಂಗೇರಿ ಜಗದ್ಗುರುಗಳ ಶ್ರೀಗಳಿಂದ ವ್ಯಾಸ ಪೂಜೆ
ಶೃಂಗೇರಿ: ಆದಿಶಂಕರರಿಂದ ಸ್ಥಾಪಿತವಾದ ದಕ್ಷಿಣಾಮ್ನಾಯ ಶಾರದಾ ಪೀಠದ ಜಗದ್ಗುರುಗಳಾದ ಶ್ರೀ ಭಾರತಿ ತೀರ್ಥ ಸ್ವಾಮೀಜಿ ಹಾಗೂ ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿಯವರು ಮಂಗಳವಾರ ಚಾತುರ್ಮಾಸ್ಯ ವ್ರತ ಆರಂಭಿಸಿದರು.
ಆಷಾಢ ಶುದ್ಧ ಗುರು ಪೂರ್ಣಿಮೆಯಂದು ಮಠದ ಗುರುಭವನದಲ್ಲಿ ಶ್ರೀ ಭಾರತೀ ತೀರ್ಥ ಸ್ವಾಮೀಜಿಯವರು 45ನೇ ಚಾತುರ್ಮಾಸ್ಯ ವ್ರತ ಹಾಗೂ ಕಿರಿಯ ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿಯವರು 4ನೇ ವರ್ಷದ ವ್ರತ ಸಂಕಲ್ಪ ಕೈಗೊಂಡರು.
ವ್ಯಾಸಪೂರ್ಣಿಮೆ ಅಂಗವಾಗಿ ಜಗದ್ಗುರುಗಳು ಸೋಮವಾರ ಬೆಳಗ್ಗೆ ಮಠದ ಎಲ್ಲಾ ದೇವಾಲಯಗಳಿಗೂ ಭೇಟಿ ನೀಡಿ ದೇವರ ದರ್ಶನ ಪಡೆದು, ಶಾರದಾಂಬೆಗೆ ಪೂಜೆ ಸಲ್ಲಿಸಿದರು. ಇದಕ್ಕೂ ಮುನ್ನ ಮಠದ ವಿದ್ಯಾಶಂಕರ ದೇಗುಲ, ಸುಬ್ರಹ್ಮಣ್ಯ, ಜನಾರ್ದನ ಸ್ವಾಮಿ, ಗರುಡ, ಆಂಜನೇಯ ಸ್ವಾಮಿ, ಶಕ್ತಿ ಗಣಪತಿ, ಶಂಕರಾಚಾರ್ಯ, ತೋರಣ ಗಣಪತಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.
ಮಂಗಳವಾರ ಬೆಳಗ್ಗೆ ಅಧಿ ಷ್ಠಾನ ಮಂದಿರಗಳಿಗೆ ತೆರಳಿ ಗುರು ಪೂಜೆ ಹಾಗೂ ಗುರುಭವನದಲ್ಲಿ ವ್ಯಾಸಪೂಜೆ ನೆರವೇರಿಸಿದರು. ವ್ಯಾಸ ಪೂಜೆ ಅಂಗವಾಗಿ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಭಕ್ತಾದಿಗಳು ಆಗಮಿಸಿ, ಗುರು ಕಾಣಿಕೆ ಸಮರ್ಪಿಸಿದರು. ಮೈಸೂರು, ಗ್ವಾಲಿಯರ್, ಸಂಡೂರು, ನೇಪಾಳ ಮುಂತಾದ ಮಹಾಸಂಸ್ಥಾನಗಳಿಂದ ಬಂದಿದ್ದ ಗುರು ಕಾಣಿಕೆಯನ್ನು ಶ್ರೀಗಳಿಗೆ ಸಮರ್ಪಿಸಲಾಯಿತು.