ಬೆಂಗಳೂರು: ಬಿಬಿಎಂಪಿ ಮೇಯರ್ ಹಾಗೂ ಉಪಮೇಯರ್ ಚುನಾವಣೆ ಮುಗಿದ ಬೆನ್ನಲ್ಲೇ ಇದೀಗ ಪಾಲಿಕೆಯ 12 ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಪಡೆಯಲು ಜೆಡಿಎಸ್, ಕಾಂಗ್ರೆಸ್ ಹಾಗೂ ಪಕ್ಷೇತರ ಸದಸ್ಯರಿಂದ ಲಾಬಿ ಆರಂಭವಾಗಿದೆ. ಅಕ್ಟೋಬರ್ 25ರಂದು ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ಚುನಾವಣೆ ನಿಗದಿಪಡಿಸಿರುವ ಹಿನ್ನೆಲೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷಗಿರಿ ಪಡೆಯಲು ಪೈಪೋಟಿ ಶುರುವಾಗಿದೆ.
ಕಾಂಗ್ರೆಸ್‌ನೊಂದಿಗೆ ಮೈತ್ರಿ ಮುಂದುವರಿಸಲು ಜೆಡಿಎಸ್ ಉಪಮೇಯರ್ ಹಾಗೂ 5 ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನಗಳಿಗೆ ಬೇಡಿಕೆಯಿಟ್ಟಿತ್ತು. ಆದರೆ ಕಾಂಗ್ರೆಸ್, ಜೆಡಿಎಸ್ ಹಾಗೂ ಪಕ್ಷೇತರರಿಗೆ ತಲಾ 4 ಸ್ಥಾಯಿ ಸಮಿತಿಗಳನ್ನು ನೀಡುವುದಾಗಿ ಹೇಳುತ್ತಿದೆ. ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಯನ್ನು ಕಾಂಗ್ರೆಸ್ ಇರಿಸಿಕೊಳ್ಳಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಜೆಡಿಎಸ್ ಪಕ್ಷ ಮಾತ್ರ ಐದು ಸ್ಥಾಯಿ ಸಮಿತಿಗಳನ್ನು ತಮಗೆ ನೀಡಲೇಬೇಕು ಎಂದು ಪಟ್ಟು ಹಿಡಿದಿದ್ದು, ಚುನಾವಣೆಗೆ ಮೊದಲು ನೀಡಿದ ಭರವಸೆಯಂತೆ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಬಿಟ್ಟುಕೊಡಬೇಕು ಎಂದು ಒತ್ತಾಯಿಸುತ್ತಿದೆ.
ಪ್ರಮುಖ ಆಕಾಂಕ್ಷಿಗಳು: ಕಾಂಗ್ರೆಸ್‌ನ ಹಿರಿಯ ಸದಸ್ಯರಾದ ಎ.ಆರ್.ಜಾಕೀರ್ , ಆರ್ಯ ಶ್ರೀನಿವಾಸ್, ರಾಜಣ್ಣ, ವೇಲುನಾಯಕರ್, ಆಂಜನಪ್ಪ ಅವರ ನಡುವೆ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಏರ್ಪಟ್ಟಿದೆ. ಇನ್ನು ಜೆಡಿಎಸ್‌ನಲ್ಲಿ ಕಳೆದ ಎರಡು ಅವಧಿಯಲ್ಲಿ ಅಧ್ಯಕ್ಷ ಸ್ಥಾನ ದೊರೆಯದ ಸದಸ್ಯರಿಗೆ ಈ ಬಾರಿ ಅಧ್ಯಕ್ಷ ಸ್ಥಾನ ನೀಡಲೇಬೇಕು ಎಂಬ ಒತ್ತಾಯಗಳು ಕೇಳಿಬಂದಿದೆ.
ಕಳೆದ ಎರಡು ಅವಧಿಯಲ್ಲಿ ಜೆಡಿಎಸ್‌ನ 14 ಪಾಲಿಕೆ ಸದಸ್ಯರ ಪೈಕಿ 8 ಮಂದಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದು, ಇಬ್ಬರು ಸದಸ್ಯರು ಉಪಮೇಯರ್ ಆಗಿದ್ದಾರೆ. ಹೀಗಾಗಿ ಈ ಬಾರಿ ಉಳಿದ ನಾಲ್ಕು ಸದಸ್ಯರಿಗೆ ಆದ್ಯತೆ ನೀಡಬೇಕು ಎಂಬ ಒತ್ತಾಯಗಳು ಕೇಳಿಬಂದಿದ್ದು, ಈ ಬಾರಿ ರಮೀಳಾ ಉಮಾಶಂಕರ್, ಗಂಗಮ್ಮ, ಮಹದೇವ್, ರಾಜಶೇಖರ್ ಅವರಿಗೆ ಸ್ಥಾಯಿ ಸಮಿತಿಗಳು ದೊರೆಯಲಿವೆ ಎನ್ನಲಾಗಿದೆ.
ಉಳಿದಂತೆ ಪಕ್ಷೇತರ ಸದಸ್ಯರಾದ ಲಕ್ಷ್ಮೀನಾರಾಯಣ, ರಮೇಶ್ ಹಾಗೂ ಮುಜಾಹಿದ್ ಪಾಷ ಅವರು ಸಹ ಮತ್ತೆ ಅಧ್ಯಕ್ಷ ಸ್ಥಾನ ಪಡೆಯಲು ಇನ್ನಿಲ್ಲದ ಪೈಪೋಟಿ ನಡೆಸಿದ್ದಾರೆ.