Advertisement

ಅಂಗನವಾಡಿಯಲ್ಲೇ ಎಲ್‌ಕೆಜಿ-ಯುಕೆಜಿ ಆರಂಭಿಸಿ

01:02 PM Jan 11, 2022 | Team Udayavani |

ರಾಯಚೂರು: ಅಂಗನವಾಡಿ ಕೇಂದ್ರಗಳನ್ನು ಎಲ್‌ಕೆಜಿ, ಯುಕೆಜಿ ಕೇಂದ್ರಗಳಾಗಿ ಪರಿವರ್ತಿಸಿ, ನೌಕರರಿಗೆ ಸೇವಾ ಜ್ಯೇಷ್ಠತಾ ಆಧಾರದ ಮೇಲೆ ವೇತನ ಪದ್ಧತಿ ಜಾರಿಗೊಳಿಸುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದಿಂದ ಡಿಸಿ ಕಚೇರಿ ಎದುರಿನ ಉದ್ಯಾನದಲ್ಲಿ ಪ್ರತಿಭಟಿಸಿದರು.

Advertisement

ಬಳಿಕ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು, ಕಾರ್ಯಕರ್ತೆಯರು ಎಸ್ಸೆಸ್ಸೆಲ್ಸಿ, ಪದವೀಧರರಾಗಿದ್ದು, ಅವರಿಗೆ ತರಬೇತಿಯನ್ನು ಕೊಟ್ಟು, ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್‌ಕೆಜಿ, ಯುಕೆಜಿ ಆರಂಭಿಸಬೇಕು. ಹೊಸ ಶಿಕ್ಷಣ ನೀತಿ ಕೈಬಿಡಬೇಕು. ಅಂಗನವಾಡಿ ಕೇಂದ್ರಗಳನ್ನು ಗ್ರಾಪಂಗಳ ಸುಪರ್ದಿಗೆ ವಹಿಸಬಾರದು, ಅಂಗನವಾಡಿ ಕೇಂದ್ರಗಳು ಮಕ್ಕಳನ್ನು ಆಕರ್ಷಿಸುವ ಕೇಂದ್ರಗಳಾಗಬೇಕು. ಆದ್ದರಿಂದ ಅಂಗನವಾಡಿ ಕೇಂದ್ರಗಳನ್ನು ಪಾಲನಾ ಮತ್ತು ಕಲಿಕೆಯ ಕೇಂದ್ರಗಳನ್ನಾಗಿಸಬೇಕು. ವೇಳಾ ಪಟ್ಟಿಯಲ್ಲಿ 3 ಗಂಟೆ ಶಾಲಾಪೂರ್ವ ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

ಅಂಗನವಾಡಿ ನೌಕರರನ್ನು ಐಸಿಡಿಎಸ್‌ನ ಉದ್ದೇಶಗಳಿಗೆ ಬಿಟ್ಟು ಉಳಿದ ಹೆಚ್ಚುವರಿ ಕೆಲಸ ನಿರ್ಬಂಧಿಸಿ ಶಾಲಾ ಪೂರ್ವ ಶಿಕ್ಷಣಕ್ಕೆ ಒತ್ತು ನೀಡಬೇಕು. ಹೊಸ ಶಿಕ್ಷಣ ನೀತಿಯ ಶಿಫಾರಸ್ಸಿನಲ್ಲಿರುವ 3-8 ವರ್ಷದ ವರ್ಗೀಕರಣ ಕೈ ಬಿಡಬೇಕು. ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ಶಿಫಾರಸ್ಸು ಮಾಡಿರುವ 339.48 ಲಕ್ಷ ಅನುದಾನ ಬಿಡುಗಡೆ ಮಾಡಬೇಕು. ಕೊರೊನಾ ವೇಳೆ ನಿಧನರಾದ ಕುಟುಂಬದವರಿಗೆ ಮಗಳು ಇಲ್ಲದಿದ್ದಾಗ ಸೊಸೆಗೆ ಅವರ ಹುದ್ದೆ ಕೊಡಬೇಕು. ಅನುಕಂಪದ ಆಧಾರದಲ್ಲಿ ಕೆಲಸ ಕೊಡುವಾಗ ಮಗಳು ಬದಲಿಗೆ ಸೊಸೆ ಎಂದು ಬದಲಿಸಬೇಕು. ಕೋಳಿ ಮೊಟ್ಟೆಯನ್ನು ಆಹಾರ ಪದಾರ್ಥಗಳ ಜೊತೆಯಲ್ಲಿ ಸರಬರಾಜು ಮಾಡಬೇಕು ಎಂಬಿತ್ಯಾದಿ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿದರು.

ಸಂಘಟನೆ ಮುಖಂಡರಾದ ಪದ್ಮಾ, ಪಾರ್ವತಿ, ಕೆ.ಜಿ. ವೀರೇಶ್‌, ಡಿ.ಎಸ್‌. ಶರಣಬಸವ, ಗೋಕರಮ್ಮ, ಗಂಗಮ್ಮ, ಈಶ್ವರಮ್ಮ ಸೇರಿ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next