ಚಿಕ್ಕೋಡಿ: ಪರಿಸರ ರಕ್ಷಣೆಯ ಮಹತ್ವದ ಅರಿವು ಮೂಡಿಸುವ ಕಾರ್ಯ ಮನೆಯಿಂದಲೇ ಆರಂಭವಾದಾಗ ಮಾತ್ರ ಪರಿಸರ ಸಮತೋಲನ ಕಾಯ್ದುಕೊಳ್ಳಬಹುದು. ಮನೆಯ ಯಜಮಾನ ತನ್ನ ಕುಟುಂಬಕ್ಕೆ ಪರಿಸರದ ಸ್ವಚ್ಚತೆ ಬಗ್ಗೆ ಅರಿವು ಮೂಡಿಸಿದ ಮೇಲೆ ಉಳಿದ ಸಂಘ-ಸಂಸ್ಥೆಗಳು ಅದನ್ನು ನಿಭಾಯಿಸಿಕೊಂಡು ಹೋಗಲು ಸಾಧ್ಯ ಎಂದು ಏಳನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧಿಧೀಶ ಮಹಾಂತಪ್ಪ ಎ.ಡಿ.ಹೇಳಿದರು.
ಇಲ್ಲಿನ ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ತಾಲೂಕಾ ಅರಣ್ಯ ಇಲಾಖೆ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಪುರಸಭೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಪರಿಸರ ದಿನಾಚರಣೆ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಮಕ್ಕಳಿಗೆ ಸಸಿ ವಿತರಿಸಿ ಅವರು ಮಾತನಾಡಿದರು.
ಇಂದು ಅತಿಯಾದ ಪ್ಲಾಸ್ಟಿಕ್ ಬಳಕೆಯಿಂದ ಮಳೆ ಕಡಿಮೆ ಆಗುತ್ತಿದೆ. ಸರ್ಕಾರ ದಿಟ್ಟ ನಿರ್ಧಾರ ತೆಗೆದುಕೊಂಡು ಪ್ಲಾಸ್ಟಿಕ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧ ಮಾಡಬೇಕು. ಇದರಿಂದ ನೀರಿನ ಸದ್ಬಳಕೆ ಸಾಧ್ಯವಾಗುತ್ತದೆ. ನೀರಿನ ಸೆಲೆಗಳು ಇಂದು ಮಂಗಮಾಯವಾಗುತ್ತಿವೆ. ಗ್ರಾಮಗಳಲ್ಲಿರುವ ಕೆರೆ ಕಟ್ಟೆಗಳು ನೋಡಲು ಹೋದರೆ ಸಿಗುವುದಿಲ್ಲ, ನೀರಿನ ಸೆಲೆಗಳು ಇದ್ದರೆ ಮಾತ್ರ ನೀರಿನ ಜಲಮೂಲಗಳು ಸಿಗಲು ಸಾಧ್ಯ. ಸರ್ಕಾರ ಅನವಶ್ಯಕವಾಗಿ ಕೋಟ್ಯಂತರ ರೂ. ಖರ್ಚು ಮಾಡುತ್ತಿದೆ. ಅದನ್ನೆಲ್ಲ ಬಿಟ್ಟು ಹಳ್ಳಿಯಲ್ಲಿರುವ ಕೆರೆಗಳನ್ನು ಪುನಶ್ಚೇತನಗೊಳಿಸಿದರೆ ರೈತರಿಗೆ ವರದಾನವಾಗುತ್ತದೆ ಎಂದರು.
ಕಾಲಕ್ಕೆ ತಕ್ಕಂತೆ ಮಳೆಯಾಗಲು ಸರ್ಕಾರ ಪ್ಲಾಸ್ಟಿಕ್ ಕಡ್ಡಾಯ ನಿಷೇಧ ಮಾಡಿದರೆ ವಾಯು ಮಾಲಿನ್ಯ, ಜಲಮಾಲಿನ್ಯ ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದ ಅವರು, ಸ್ವಚ್ಛ ಸುಂದರ ಮತ್ತು ಹಚ್ಚ ಹಸಿರಿನ ನಗರ ನಿರ್ಮಾಣ ಮಾಡಲು ಪ್ರತಿಯೊಬ್ಬ ನಾಗರಿಕನು ಮನೆ ಮುಂದೆ ಒಂದೊಂದು ಗಿಡ ನೆಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶ ಎಸ್.ಎಲ್.ಚವಾಣ ಮಾತನಾಡಿ, ಬೆಳೆದ ಗಿಡಗಳನ್ನು ಮಾನವ ಕಡಿದು ಹಾಕಿರುವುದರಿಂದ ಇಂದು ಸಮರ್ಪಕ ಮಳೆ ಆಗುತ್ತಿಲ್ಲ, ಭೂಮಿಯಲ್ಲಿ ಬೆಳೆ ಬರುತ್ತಿಲ್ಲ, ಆದ್ದರಿಂದ ಮಳೆ ಬೆಳೆ ಚೆನ್ನಾಗಿ ಆಗಬೇಕಾದರೆ ಮರಗಳನ್ನು ಬೆಳೆಸುವುದು ಅತೀ ಅವಶ್ಯಕ ಎಂದರು. ಇದೇ ಸಂದರ್ಭದಲ್ಲಿ ನ್ಯಾಯಾಲಯದಿಂದ ಸಿಎಲ್ಇ ಸಂಸ್ಥೆಯವರಿಗೆ ಪರಿಸರ ಕುರಿತು ಜಾಗೃತಿ ಜಾಥಾ ನಡೆಯಿತು. ನ್ಯಾಯಾಲಯದ ಮುಂಭಾಗದಲ್ಲಿ ಸಸಿ ನೆಡಲಾಯಿತು.
ವೇದಿಕೆ ಮೇಲೆ ಪ್ರಧಾನ ದಿವಾಣಿ ನ್ಯಾಯಾಧಿಧೀಶ ವಿಜಯಕುಮಾರ ಬಾಗಡೆ, ಒಂದನೆ ಹೆಚ್ಚುವರಿ ದಿವಾಣಿ ನ್ಯಾಯಾಧೀಶ, ಮಂಜುಳ ಬಿ. ಎರಡನೆ ಹೆಚ್ಚುವರಿ ದಿವಾಣಿ ನ್ಯಾಯಾಧೀಶ ಯೋಗೇಶ ಕೆ. ನ್ಯಾಯವಾದಿಗಳ ಸಂಘದ ಅಧ್ಯಕ್ಷ ನಾಗೇಶ ಕಿವಡ, ಪರಿಸರ ಅಧಿಕಾರಿ ಐ.ಎಚ್.ಜಗದೀಶ, ವಲಯ ಅರಣ್ಯಾಧಿಕಾರಿ ಎಂ.ಬಿ.ಗಣಾಚಾರಿ, ನ್ಯಾಯವಾದಿ ಎಂ.ಬಿ.ಪಾಟೀಲ, ಎಸ್.ಜಿ.ಹಿರೇಮಠ, ಪ್ರಿಯಂಕಾ ವಿನಾಯಕ ಮುಂತಾದವರು ಇದ್ದರು. ನ್ಯಾಯವಾದಿ ಕಲ್ಮೇಶ ಕಿವಡ ಸ್ವಾಗತಿಸಿದರು. ಪ್ರಾಚಾರ್ಯ ಸುರೇಶ ಉಕ್ಕಲಿ ನಿರೂಪಿಸಿದರು.