ರಾಯಚೂರು: ಜಿಲ್ಲೆಯಲ್ಲಿ ಭೀಕರ ಬರ ಎದುರಾಗಿದ್ದು, ತ್ವರಿತಗತಿಯಲ್ಲಿ ಪರಿಹಾರ ಕಾಮಗಾರಿ ಕೈಗೊಳ್ಳಬೇಕು. ಅಗತ್ಯವಿರುವ ಕಡೆ ಕಂಟ್ರೋಲ್ ರೂಂ ಆರಂಭಿಸಿ ಎಂದು ಜಿಪಂ ಸಿಇಒ ನಲಿನ್ ಅತುಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಮಾಸಿಕ ಸಾಮಾನ್ಯ ಸಭೆಯಲ್ಲಿ ಬರ ಪರಿಶೀಲನೆ ಪ್ರಗತಿ ಪರಿಶೀಲಿಸಿದರು. ಜಿಲ್ಲೆಯಲ್ಲಿ ಬರ ಆವರಿಸಿರುವುದರಿಂದ ಕುಡಿಯುವ ನೀರಿನ ಸಮಸ್ಯೆಯನ್ನು ಕಾಲಮಿತಿಯಲ್ಲಿ ಬಗೆಹರಿಸಬೇಕು ಎಂದು ಬಹುಗ್ರಾಮ ಕುಡಿಯುವ ನೀರಿನ ಕಾರ್ಯನಿರ್ವಾಹಕ ಇಂಜಿನಿಯರ್‌ಗೆ ತಿಳಿಸಿದರು.
ಸರ್ಕಾರ ಬರ ಪರಿಹಾರಕ್ಕೆ ಅನುದಾನ ಬಿಡುಗಡೆ ಮಾಡುತ್ತಿದ್ದು, ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಜನರಿಗೆ ಅನುಕೂಲ ಕಲ್ಪಿಸಬೇಕು. ಯಾವುದೇ ಹಿಂಜರಿಕೆ ಇಲ್ಲದೇ ಕೆಲಸ ಮಾಡಿ ಎಂದರು.
ಕೆಲವು ಅಧಿಕಾರಿಗಳು ಜಿಲ್ಲೆಯ ಶಾಸಕರಿಂದ ನಮಗೆ ತೊಂದರೆಯಾಗುತ್ತದೆ. ಅದರಿಂದ ನಮಗೆ ಹುದ್ದೆಗಳಿಂದ ಬಿಡುಗಡೆ ಮಾಡಬೇಕೆಂದು ಕೋರಿದರು. ಆದರೆ ಉಪ ಕಾರ್ಯದರ್ಶಿಗಳು ಈ ರೀತಿ ಸರ್ಕಾರಿ ಸೇವೆಯಲ್ಲಿ ಸರ್ವೇ ಸಾಮಾನ್ಯ. ಇಂಥ ಅನುಭವಗಳು ನಮಗೂ ಆಗಿದೆ. ಅದಕ್ಕೆಲ್ಲ ನೀವು ಹೆಚ್ಚು ಒತ್ತು ನೀಡಬೇಡಿ. ಏನಾದರೂ ಸಮಸ್ಯೆಗಳಿದ್ದರೆ ಮೇಲಧಿಕಾರಿಗಳ ಗಮನಕ್ಕೆ ತರುವಂತೆ ತಿಳಿಸಿದರು.
ಜಿಪಂ ಅಧ್ಯಕ್ಷೆ ಆದಿಮನಿ ವೀರಲಕ್ಷ್ಮಿ ಮಾನತಾಡಿ, ಸಭೆಗೆ ಪದೇ ಪದೇ ಗೈರಾದ ಅಧಿಕಾರಿಗಳ ವಿರುದ್ಧ ಬೇಸರ ವ್ಯಕ್ತಪಡಿಸಿದರು. ಎಷ್ಟು ಹೇಳಿದರೂ ಸುಧಾರಣೆ ಕಂಡುಕೊಳ್ಳದಿದ್ದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ. ಸಭೆಗೆ ಬರುವ ಅಧಿಕಾರಿಗಳು ಎಲ್ಲ ಮಾಹಿತಿಯೊಂದಿಗೆ ಬರಬೇಕು. ಗೈರಾದ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡುವಂತೆ ಸೂಚಿಸಿದರು.
ಕೃಷಿ ಇಲಾಖೆಗೆ ಸಂಬಂಧಿಸಿದಂತೆ ರೈತರಿಗೆ ತ್ವರಿತ ಗತಿಯಲ್ಲಿ ವಿಮಾ ಹಣ ಜಮಾ ಆಗಬೇಕು. ಶಾಲಾ ಮಕ್ಕಳಿಗೆ ಕಾಲಮಿತಿಯಲ್ಲಿ ಶೂ ಮತ್ತು ಸಾಕ್ಸ್ ವಿತರಿಸಬೇಕು. ವಿತರಿಸಿದ ಸೈಕಲ್‌ಗಳು ಒಳ್ಳೆಯ ಗುಣಮಟ್ಟ ಇಲ್ಲ. ಈ ಬಗ್ಗೆ ಸರ್ಕಾರದ ಗಮನಕ್ಕೆ ತರಬೇಕು ಎಂದು ಡಿಡಿಪಿಐಗೆ ಸೂಚಿಸಿದರು. ನಂತರ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.