ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಾಲೇಜುಗಳಿಗೆ ತೆರಳುವ ಮಕ್ಕಳಿಗೆ ಅನುಕೂಲವಾಗುವಂತೆ ಬಸ್ ಸೌಕರ್ಯ ಕಲ್ಪಿಸುವ ಸಂಬಂಧ ಸೋಮವಾರ ನೆಂಪುವಿನಲ್ಲಿ ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಕೆಎಸ್‌ಆರ್‌ಟಿಸಿ ಅಧಿಕಾರಿಗಳ ಸಭೆ ನಡೆಯಿತು.
ಶಾಸಕರು ಮಾತನಾಡಿ, ಬೈಂದೂರು ಕ್ಷೇತ್ರ ವ್ಯಾಪ್ತಿಯ ಶಂಕರನಾರಾಯಣ, ನೆಂಪು, ಬೈಂದೂರು, ಕೊಲ್ಲೂರು ಕಾಲೇಜುಗಳಿಗೆ ಬೇರೆ ಬೇರೆ ಕಡೆಗಳಿಂದ ಕಲಿಯಲು ಬರುವ ಮಕ್ಕಳಿಗೆ ಸರಿಯಾದ ಸಮಯದಲ್ಲಿ ಬಸ್‌ಗಳು ಇಲ್ಲದೆ ಬೆಳಗ್ಗೆ ಕಾಲೇಜಿಗೆ ಬರಲು ಹಾಗೂ ಮನೆಗೆ ವಾಪಾಸು ತೆರಳಲು ಸಮಸ್ಯೆಯಾಗುತ್ತದೆ. ಗ್ರಾಮೀಣ ಭಾಗದ ಮಕ್ಕಳಿಗೆ ಅನುಕೂಲವಾಗುವಂತೆ ಬೆಳಗ್ಗಿನ ಹಾಗೂ ಸಂಜೆಯ ಅವಧಿಯಲ್ಲಿ ಬಸ್ ಸೌಕರ್ಯ ಕಲ್ಪಿಸಲು ಆದ್ಯತೆ ಮೇರೆಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಉದಯವಾಣಿ ವರದಿ
ಗ್ರಾಮೀಣ ಭಾಗಗಳಲ್ಲಿ ಬಸ್ ಸೌಕರ್ಯವಿಲ್ಲದೆ ಶಾಲಾ – ಕಾಲೇಜು ಮಕ್ಕಳಿಗೆ ತೊಂದರೆಯಾಗುತ್ತಿರುವ ಬಗ್ಗೆ ‘ಉದಯವಾಣಿ’ ಪತ್ರಿಕೆಯು ನಿರಂತರ ವಾಗಿ ವಿಶೇಷ ವರದಿ ಮಾಡುವ ಮೂಲಕ ಬಸ್ ಸಮಸ್ಯೆ ಬಗ್ಗೆ ಬೆಳಕು ಚೆಲ್ಲಿತ್ತು. ಸಭೆಯಲ್ಲಿ ಭಾಗಿಯಾಗಿದ್ದ ಸ್ಥಳೀಯ ಮುಖಂಡರು, ಹೊಸಾಡು, ಕಾಲ್ತೋಡು, ಹೇರೂರು ಭಾಗದ ಬಸ್ ಸಮಸ್ಯೆ ಕುರಿತು ಅಧಿಕಾರಿಗಳ ಗಮನಕ್ಕೆ ತಂದರು.
ಈ ಸಭೆಯಲ್ಲಿ ಉಡುಪಿ ಪ್ರಾದೇಶಿಕ ಸಾರಿಗೆ ವಿಭಾಗದ ಆಯುಕ್ತ ರಾಮಕೃಷ್ಣ, ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗದ ನಿಯಂತ್ರಣಾಧಿಕಾರಿ ಅಶ್ರಫ್ ಕೆ.ಎಂ., ಡಿಟಿಒ ಜೈಶಾಂತ್, ಕುಂದಾಪುರ ಡಿಪೋ ಮೆನೇಜರ್ ರಾಜೇಶ್ ಮೊಗವೀರ, ದೀಪಕ್ ಕುಮಾರ್ ಶೆಟ್ಟಿ, ಅಶೋಕ್ ಶೆಟ್ಟಿ ಹೇರೂರು, ಶ್ರೀನಿವಾಸ ಪೂಜಾರಿ, ಸುರೇಶ್ ನಾಯ್ಕ, ರಮೇಶ್ ಆಚಾರ್ ಉಪಸ್ಥಿತರಿದ್ದರು.