Advertisement

ಭರದಿಂದ ಸಾಗಿದೆ ಹಿಂಗಾರು ಬಿತ್ತನೆ

10:19 AM Nov 19, 2021 | Team Udayavani |

ಆಳಂದ: ಪ್ರಸಕ್ತ ಸಾಲಿನಲ್ಲಿ ಅತಿಯಾದ ಮಳೆ ಆಗಿದ್ದಕ್ಕಾಗಿ ಬೆಳೆ ಕೈಗೆ ಬಾರದಂತಾಗಿದ್ದು, ಈಗ ಹಿಂಗಾರು ಹಂಗಾಮಿಗೆ ಕಾಯ್ದಿಟ್ಟ ಜಮೀನಿನಲ್ಲಿ ತಾಲೂಕಿನಾದ್ಯಂತ ಬಿತ್ತನೆ ಕಾರ್ಯ ಭರದಿಂದ ಸಾಗಿದೆ.

Advertisement

ಹಿಂಗಾರು ಹಂಗಾಮಿನಲ್ಲಿ ಪ್ರಮುಖವಾಗಿ ಖುಷ್ಕಿ ಪ್ರದೇಶದಲ್ಲಿ ಜೋಳ, ಕಡಲೆ, ಕುಸಬೆ ಸೇರಿದಂತೆ ಇನ್ನಿತರ ಬಿತ್ತನೆ ಕಾರ್ಯವನ್ನು ಕೆಲವು ರೈತರು ಕೈಗೊಂಡಿದ್ದಾರೆ. ಹಿಂಗಾರಿನ ನೀರಾವರಿ ಬೆಳೆ ಶೇಂಗಾ, ಕಡಲೆ, ಕುಸಬೆ, ಗೋಧಿ ಬಿತ್ತನೆಗೆ ರೈತರು ಮುಂದಾಗಿದ್ದಾರೆ.

ಈ ಬಾರಿಯಾದರೂ ಹಿಂಗಾರಿನ ಬೆಳೆ ಉತ್ತಮವಾಗಿ ಬೆಳೆದು, ಫಸಲು ಕೈಸೇರಲಿ ಎನ್ನುವ ಆಶಾಭಾವನೆಯೊಂದಿಗೆ ಕೃಷಿಕರು ಕಸರತ್ತು ಆರಂಭಿಸಿದ್ದಾರೆ. ಈಗಾಗಲೇ ಕೃಷಿ ಇಲಾಖೆ ಅಂದಾಜಿನಂತೆ ಅತಿಯಾದ ಮಳೆ ಹಾಗೂ ಆರಂಭದಲ್ಲಿ ಮಳೆ ಕೊರತೆಯಿಂದ ಸುಮಾರು 43 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿನ ತೊಗರಿ, ಉದ್ದು, ಹೆಸರು ಸೋಯಾಬಿನ್‌, ಕಬ್ಬು ಸೇರಿದಂತೆ ತೋಟಗಾರಿಕೆಯ ಬಾಳೆ, ಪಪ್ಪಾಯಿ, ಹಣ್ಣು, ತರಕಾರಿ ಬೆಳೆಗಳು ಹಾನಿಗೀಡಾಗಿವೆ.

ಹಾನಿಯಾದ ಬೆಳೆಗಳಿಗೆ ಪರಿಹಾರದ ನಿರೀಕ್ಷೆಯಲ್ಲಿರುವ ರೈತರು, ಹಿಂಗಾರು ಬಿತ್ತನೆಗೆ ಬೀಜ, ಗೊಬ್ಬರ ಖರೀದಿಸಲು, ಕೂಲಿಯಾಳಿಗೆ ಕೂಲಿ ನೀಡಲು ಹಾಗೂ ಕುಟುಂಬ ನಿರ್ವಹಣೆಗಾಗಿ ರೈತರು ಸರ್ಕಾರಿ, ಸಾಹುಕಾರಿ, ಖಾಸಗಿ ಬ್ಯಾಂಕ್‌ಗಳಲ್ಲಿ ಸಾಲಕ್ಕಾಗಿ ಮೊರೆ ಹೋಗಿದ್ದಾರೆ. ಫಲವತ್ತಾಗಿ ತೊಗರಿ ಬೆಳೆ ಬರುವ ನಿರೀಕ್ಷೆಯಲ್ಲಿದ್ದ ರೈತರಿಗೀಗ ಮೋಡ ಕವಿದ ವಾತಾವರಣ, ಮಳೆ ಈ ನಿರೀಕ್ಷೆಯನ್ನು ಹುಸಿ ಮಾಡುವಂತೆ ಕಾಣತೊಡಗಿದೆ.

ಇದನ್ನೂ ಓದಿ:ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಪಿಸಿವಿ ಲಸಿಕೆ ವಿತರಣೆ

Advertisement

ಇದರಿಂದ ರೈತರು ಆತಂಕಕ್ಕೊಳಗಾಗಿದ್ದಾರೆ. ಅಲ್ಲದೇ ಶೇ. 40ರಷ್ಟು ರೈತರು ಕಳೆದ ಸಾಲಿನಲ್ಲಿ ಉತ್ಪಾದನೆಯಾದ ತೊಗರಿಗೆ ನಿರೀಕ್ಷಿತ ಬೆಲೆ ದೊರಕಿಲ್ಲವೆಂದು ತಮ್ಮ ಮನೆಯಲ್ಲೇ ಇಟ್ಟುಕೊಂಡಿದ್ದಾರೆ. ಜತೆಗೆ ಜೊತೆಗೆ ಈ ಬಾರಿ ಬೆಳೆದ ಸೋಯಾಬಿನ್‌ ಧಾನ್ಯಕ್ಕೂ ಸಮರ್ಪಕ ಬೆಲೆ ದೊರಕಿಲ್ಲ. ಈಗ ವಿಧಿಯಿಲ್ಲದೇ ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಕಾರ್ಯಕ್ಕೆ ಮುಂದಾಗಿದ್ದಾರೆ. ಅಲ್ಲದೇ ಕೃಷಿ ಚಟುವಟಿಕೆ ವೆಚ್ಚ ದುಬಾರಿಯಾದ ಹಿನ್ನೆಲೆಯಲ್ಲಿ ಎತ್ತುಗಳಿಗೆ ವಿದಾಯ ಹೇಳಿರುವ ರೈತರು ಟ್ರ್ಯಾಕ್ಟರ್‌ಗಳ ಮೂಲಕ ಬಿತ್ತನೆ ಹಾಗೂ ರಾಶಿಗೆ ಮುಂದಾಗಿದ್ದಾರೆ.

ಆಳಂದ ತಾಲೂಕಿನ ಐದು ಹೋಬಳಿ ಕೇಂದ್ರದಲ್ಲಿ ಒಟ್ಟು ಹಿಂಗಾರು 70913 ಹೆಕ್ಟೇರ್‌ ಗುರಿಯ ಪೈಕಿ 62156 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಇದುವರೆಗೂ ಶೇ. 88ರಷ್ಟು ಪ್ರಮುಖವಾಗಿ ಜೋಳ, ಮೆಕ್ಕೆಜೋಳ, ಗೋಧಿ, ಕಡಲೆ, ಸೂರ್ಯಕಾಂತಿ, ಕುಸಬೆ, ಶೇಂಗಾ ಬಿತ್ತನೆಯಾಗಿದೆ. ಖಜೂರಿ ವಲಯದಲ್ಲಿ 14521 ಹೆಕ್ಟೇರ್‌ ಪೈಕಿ 12823 ಹೆಕ್ಟೇರ್‌, ಆಳಂದ 13976 ಹೆಕ್ಟೇರ್‌ ಪೈಕಿ 12216 ಹೆಕ್ಟೇರ್‌, ನಿಂಬರ್ಗಾ 14218 ಹೆಕ್ಟೇರ್‌ ಪೈಕಿ 12381 ಹೆಕ್ಟೇರ್‌, ನರೋಣಾ 14506 ಹೆಕ್ಟೇರ್‌ ಪೈಕಿ 12733 ಹೆಕ್ಟೇರ್‌, ಮಾದನಹಿಪ್ಪರಗಾ ವಲಯ 13692 ಹೆಕ್ಟೇರ್‌ ಪೈಕಿ 12003 ಹೆಕ್ಟೇರ್‌ ಬಿತ್ತನೆ ಆಗಿದೆ. ಇನ್ನು ಶೇ. 12ರಷ್ಟು ಬಿತ್ತನೆ ನಡೆಯಲಿದೆ. -ಶರಣಗೌಡ ಪಾಟೀಲ, ಸಹಾಯಕ ಕೃಷಿ ನಿರ್ದೇಶಕ

ಸದ್ಯ ಕೃಷಿ ಆದಾಯವಿಲ್ಲ. ತೊಗರಿ ಗೊಡ್ಡು ಬಿದ್ದು, ನೀರತ್ತಿ ಹೋಗಿದೆ. ಮುಂದಿನ ವರ್ಷಕ್ಕೆ ಮತ್ತೆ ಸಾಲಮಾಡಬೇಕು. ಹೀಗಾಗಿ ಸಾಲದಲ್ಲೇ ಮುಳುಗುವಂತೆ ಆಗಿದೆ. ಕಾರ್ಮಿಕರ ಕೂಲಿ ಹೆಚ್ಚಾಗಿದೆ. ಉದ್ಯೋಗ ಖಾತ್ರಿ ಕೂಲಿ ಹೆಚ್ಚಿದೆ. ಆದರೆ ರೈತರಿಗೆ ಈ ಕೂಲಿ ಕೊಡಲು ಆಗಲ್ಲ. ಬೆಳೆದ ಬೆಳೆಗೆ ಬೆಲೆ ಸಿಕ್ಕರೆ ಹೆಚ್ಚಿನ ಕೂಲಿ ಕೊಡಬಹುದು. ಕೇಂದ್ರದ ಕೃಷಿ ಕಾನೂನು ಒಳ್ಳೆಯದೇ ಆಗಿದೆ. ಪೂರ್ಣ ಓದಿದ್ದೇನೆ. ಆದರೆ ಕಾಂಗ್ರೆಸ್ಸಿಗರು ವಿನಾಹ ಕಾರಣ ವಿರೋ ಧಿಸುತ್ತಿದ್ದಾರೆ. ಅಡತಗಳಲ್ಲಿ ಹೇಗೆ ಧಾನ್ಯ ಬಿಸಾಡುತ್ತಾರೆ, ಕಡಿತ ಮಾಡುತ್ತಾರೆ ಎನ್ನುವುದನ್ನು ತೋರಿಸುತ್ತೇನೆ. ಹೊಲಗಳಿಗೆ ರಸ್ತೆ ಸಮಸ್ಯೆ ಆಗುತ್ತಿದೆ. ನನ್ನ ಬಾಳೆ ಬೆಳೆ ಹಾನಿಯಾಗಿದೆ. ಕಡಿಮೆ ಬೆಲೆಗೆ ಮಾರುತ್ತಿದ್ದೇನೆ. ಕಬ್ಬು ಪೂರೈಕೆಯಲ್ಲೂ ಗೊಂದಲವಿದೆ. ಕಟಾವಿಗೆ ಹಣಕೊಡಬೇಕು. -ಬಸವರಾಜ ಸಾಣಕ್‌, ರೈತ, ನಿಂಬಾಳ

-ಮಹಾದೇವ ವಡಗಾಂವ

Advertisement

Udayavani is now on Telegram. Click here to join our channel and stay updated with the latest news.

Next